ಥೈಲ್ಯಾಂಡ್‌ನಲ್ಲಿ ಇತ್ತೀಚೆಗೆ ನಡೆದ ಒಂದು ವಿವಾಹವು ಇಡೀ ವಿಶ್ವದ ಗಮನ ಸೆಳೆಯುತ್ತಿದ್ದು, ಸಂಬಂಧಗಳ ಹೊಸ ಆಯಾಮವನ್ನು ಪರಿಚಯಿಸಿದೆ. 37 ವರ್ಷದ ಡುವಾಂಗ್ಡುವಾನ್ ಕೆಟ್ಸಾರೊ ಎಂಬ ಮಹಿಳೆ ಒಂದೇ ಸಮಾರಂಭದಲ್ಲಿ ಆಸ್ಟ್ರಿಯಾದ ಇಬ್ಬರು ಪುರುಷರನ್ನು ಮದುವೆಯಾಗುವ ಮೂಲಕ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾರೆ. ಈ ಕಥೆ ಆರಂಭವಾಗಿದ್ದು ಥೈಲ್ಯಾಂಡ್‌ನ ಪ್ರವಾಸಿ ನಗರವಾದ ಪಟ್ಟಾಯದಲ್ಲಿ. ಅಲ್ಲಿ ಕೆಲಸ ಮಾಡುತ್ತಿದ್ದಾಗ ಡುವಾಂಗ್ಡುವಾನ್ ಅವರಿಗೆ ಆಸ್ಟ್ರಿಯಾದ ನಿವೃತ್ತ ಪೊಲೀಸ್ ಅಧಿಕಾರಿ ರೋಮನ್ ಅವರ ಪರಿಚಯವಾಗಿತ್ತು. ಇವರಿಬ್ಬರೂ ಸುಮಾರು ಐದು ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸುತ್ತಿದ್ದರು. ಈ ನಡುವೆ ಆಕೆಗೆ ಮ್ಯಾಕಿ ಎಂಬ ಮತ್ತೊಬ್ಬ ಆಸ್ಟ್ರಿಯನ್ ಪೊಲೀಸ್ ಅಧಿಕಾರಿಯ ಪರಿಚಯವಾಯಿತು. ವಿಶೇಷವೆಂದರೆ, ಈ ಮೂವರ ನಡುವೆ ಯಾವುದೇ ಜಗಳ ಅಥವಾ ಭಿನ್ನಾಭಿಪ್ರಾಯ ಮೂಡದೆ, ಪರಸ್ಪರ ಒಪ್ಪಿಗೆಯೊಂದಿಗೆ ಒಟ್ಟಿಗೇ ಜೀವನ ನಡೆಸಲು ನಿರ್ಧರಿಸಿದರು.
ಡುವಾಂಗ್ಡುವಾನ್ ಅವರು ಈ ಹಿಂದೆ ವಿವಾಹವಾಗಿ ಮೂವರು ಹೆಣ್ಣುಮಕ್ಕಳ ತಾಯಿಯಾಗಿದ್ದರು. ಮೊದಲ ಮದುವೆ ಮುರಿದುಬಿದ್ದ ನಂತರ ತಮ್ಮ ಪೋಷಕರು ಮತ್ತು ಮಕ್ಕಳನ್ನು ಸಾಕಿ ಸಲಹಲು ಅವರು ಪಟ್ಟಾಯದಲ್ಲಿ ಕೆಲಸ ಮಾಡುತ್ತಿದ್ದರು. ರೋಮನ್ ಮತ್ತು ಮ್ಯಾಕಿ ಇಬ್ಬರೂ ಕಳೆದ ಹಲವು ವರ್ಷಗಳಿಂದ ಆಕೆಯ ಕುಟುಂಬಕ್ಕೆ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ದೊಡ್ಡ ಬೆಂಬಲ ನೀಡುತ್ತಾ ಬಂದಿದ್ದಾರೆ. ಇಬ್ಬರು ಪುರುಷರು ತೋರಿದ ಈ ಬದ್ಧತೆ ಮತ್ತು ಕಾಳಜಿಯನ್ನು ಗಮನಿಸಿದ ಆಕೆಯ ಪೋಷಕರು ಮತ್ತು ಮಕ್ಕಳು ಅಂತಿಮವಾಗಿ ಈ ಅಸಾಮಾನ್ಯ ಸಂಬಂಧಕ್ಕೆ ಹಸಿರು ನಿಶಾನೆ ತೋರಿಸಿದರು. ಈ ವಿವಾಹವು ಥಾಯ್ ಸಂಪ್ರದಾಯದಂತೆ ಅತ್ಯಂತ ವಿಶಿಷ್ಟವಾಗಿ ನಡೆದಿದ್ದು, ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಿದ್ದರು.
ಈ ವಿವಾಹದ ಮತ್ತೊಂದು ವಿಶೇಷವೆಂದರೆ ವರರ ಕಡೆಯಿಂದ ಬಂದ ಭಾರಿ ಮೊತ್ತದ ವಧುದಕ್ಷಿಣೆ. ಥೈಲ್ಯಾಂಡ್‌ನ ವಿವಾಹ ಸಂಪ್ರದಾಯದಂತೆ ಇಬ್ಬರೂ ವರರು ತಲಾ ಒಂದು ಮಿಲಿಯನ್ ಥಾಯ್ ಬಹ್ತ್ ಹಣವನ್ನು ನೀಡಿದ್ದಾರೆ. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಒಟ್ಟು 29 ಲಕ್ಷ ರೂಪಾಯಿಯನ್ನು ವಧುದಕ್ಷಿಣೆಯಾಗಿ ನೀಡಲಾಗಿದೆ. ಈ ವಿವಾಹವು ಅಸಾಂಪ್ರದಾಯಿಕವಾಗಿ ಕಂಡರೂ, ಮದುವೆಯ ವಿಧಿವಿಧಾನಗಳು ಮಾತ್ರ ಸಾಂಪ್ರದಾಯಿಕ ಥಾಯ್ ಶೈಲಿಯಲ್ಲೇ ನಡೆದವು. ಸದ್ಯ ಈ ವಿಶಿಷ್ಟ ವಿವಾಹದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪರಸ್ಪರ ಅರ್ಥೈಸಿಕೊಳ್ಳುವಿಕೆ ಇದ್ದರೆ ಯಾವುದೇ ಸಂಬಂಧ ಸುಂದರವಾಗಿರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.