ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಟ್ರೂತ್ ಸೋಶಿಯಲ್' ಮೂಲಕ ಬಿಡುಗಡೆ ಮಾಡಿದ ಎಂಟು ನಿಮಿಷಗಳ ಸುದೀರ್ಘ ವೀಡಿಯೊ ಹೇಳಿಕೆಯು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಇರಾನ್‌ನ ರಾಜಧಾನಿ ಟೆಹ್ರಾನ್ ಆಕಾಶದಲ್ಲಿ ಬೆಂಕಿಯ ಹೊಗೆ ಆವರಿಸಿರುವಂತೆಯೇ ಮಾತನಾಡಿದ ಟ್ರಂಪ್, ಇರಾನ್ ಮಿಲಿಟರಿ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗೆ ನೇರ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಆಯುಧಗಳನ್ನು ಕೆಳಗಿಟ್ಟು ಶರಣಾಗಿ, ನಿಮಗೆ ಸಂಪೂರ್ಣ ರಕ್ಷಣೆ ನೀಡಲಾಗುವುದು. ಇಲ್ಲವಾದರೆ ನೀವು ಖಚಿತವಾದ ಸಾವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಗುಡುಗಿದ್ದಾರೆ ಎನ್ನಲಾಗುತ್ತಿದೆ.
ಈ ಮೊದಲು ಕೇವಲ ಮುನ್ನೆಚ್ಚರಿಕೆ ದಾಳಿ ನಡೆಸುತ್ತಿದ್ದ ಅಮೆರಿಕ, ಈಗ ಅಧಿಕೃತವಾಗಿ ಇರಾನ್‌ನ ಒಳಗೆ ಬೃಹತ್ ಯುದ್ಧ ಕಾರ್ಯಾಚರಣೆ ಆರಂಭಿಸಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಈ ಕಾರ್ಯಾಚರಣೆಗೆ ಅಮೆರಿಕ ಸೇನೆಯು ಆಪರೇಷನ್ ಶೀಲ್ಡ್ ಆಫ್ ಜುದಾ ಎಂದು ಹೆಸರಿಟ್ಟಿದೆ. ಇದರ ಮುಖ್ಯ ಉದ್ದೇಶ ಇರಾನ್‌ನ ಪರಮಾಣು ಯೋಜನೆಯನ್ನು ವಿಳಂಬ ಮಾಡುವುದಷ್ಟೇ ಅಲ್ಲ, ಬದಲಿಗೆ ಆ ದೇಶದ ಸೇನಾ ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿದೆ. ನಾವು ಇರಾನ್‌ನ ಕ್ಷಿಪಣಿ ಉದ್ಯಮ ಮತ್ತು ಅವರ ನೌಕಾಪಡೆಯನ್ನು ಭೂಮಿಯಿಂದ ಸಂಪೂರ್ಣವಾಗಿ ಅಳಿಸಿ ಹಾಕುತ್ತೇವೆ ಎಂದು ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ.
ತಮ್ಮ ಭಾಷಣದಲ್ಲಿ ಟ್ರಂಪ್ ಅವರು ಇರಾನ್‌ನ ಜನರನ್ನು ಉದ್ದೇಶಿಸಿಯೂ ಮಾತನಾಡಿದ್ದಾರೆ. 2025 ರ ಕೊನೆಯಿಂದ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಉಲ್ಲೇಖಿಸಿದ ಅವರು, ನಿಮ್ಮ ಸ್ವಾತಂತ್ರ್ಯದ ಸಮಯ ಹತ್ತಿರ ಬಂದಿದೆ. ನಾವು ಇರಾನ್‌ನ ಈ ದಬ್ಬಾಳಿಕೆಯ ಸರ್ಕಾರವನ್ನು ಕೊನೆಗೊಳಿಸುತ್ತೇವೆ. ನಂತರ ನೀವು ನಿಮ್ಮ ದೇಶದ ಆಡಳಿತವನ್ನು ವಹಿಸಿಕೊಳ್ಳಿ. ಇದು ನಿಮ್ಮ ತಲೆಮಾರಿಗೆ ಸಿಗುತ್ತಿರುವ ಏಕೈಕ ಅವಕಾಶ ಎಂದು ಕ್ರಾಂತಿಗೆ ಕರೆ ನೀಡಿದ್ದಾರೆ. ಬಾಂಬ್ ದಾಳಿಗಳು ನಡೆಯುತ್ತಿರುವ ಕಾರಣ ನಾಗರಿಕರು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಅವರು ವಿನಂತಿಸಿದ್ದಾರೆ.
ಇರಾನ್ ಜಿನೀವಾ ಮತ್ತು ಓಮನ್‌ನಲ್ಲಿ ನಡೆದ ಶಾಂತಿ ಮಾತುಕತೆಗಳನ್ನು ದುರುಪಯೋಗಪಡಿಸಿಕೊಂಡು ರಹಸ್ಯವಾಗಿ ಪರಮಾಣು ಬಾಂಬ್ ಮತ್ತು ಅಮೆರಿಕದ ಮೇಲೆ ದಾಳಿ ಮಾಡಬಲ್ಲ ಕ್ಷಿಪಣಿಗಳನ್ನು ತಯಾರಿಸುತ್ತಿದೆ ಎಂದು ಟ್ರಂಪ್ ಈ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಶೇಷವೆಂದರೆ, ಈ ದಾಳಿಯಲ್ಲಿ ಅಮೆರಿಕವು ಓಪನ್ ಎಐನ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಇದು ಇರಾನ್‌ನ ಉನ್ನತ ಅಧಿಕಾರಿಗಳ ಚಲನವಲನಗಳನ್ನು ನಿಖರವಾಗಿ ಪತ್ತೆಹಚ್ಚಲು ಮತ್ತು ನಾಗರಿಕರಿಗೆ ಹಾನಿಯಾಗದಂತೆ ಕೇವಲ ಸೇನಾ ಕೇಂದ್ರಗಳ ಮೇಲೆ ಮಾತ್ರ ನಿಖರ ದಾಳಿ ಮಾಡಲು ಅಮೆರಿಕಕ್ಕೆ ನೆರವಾಗುತ್ತಿದೆ.
— Donald J. Trump (@realDonaldTrump) February 28, 2026
ಈ ಬೆಳವಣಿಗೆಯ ಬೆನ್ನಲ್ಲೇ ಇಸ್ರೇಲ್ ದೇಶವು 48 ಗಂಟೆಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಿದೆ. ಇರಾನ್ ಬೆಂಬಲಿತ ಉಗ್ರಗಾಮಿ ಗುಂಪುಗಳು ಯಾವುದೇ ಕ್ಷಣದಲ್ಲಿ ಇಸ್ರೇಲ್ ಮೇಲೆ ದಾಳಿ ಮಾಡಬಹುದು ಎಂಬ ಆತಂಕವಿದೆ. ಈಗಾಗಲೇ ಇರಾಕ್ ಮತ್ತು ಜೋರ್ಡಾನ್ ದೇಶಗಳು ತಮ್ಮ ಆಕಾಶಮಾರ್ಗವನ್ನು ಮುಚ್ಚಿವೆ. 2003 ರ ಇರಾಕ್ ಆಕ್ರಮಣದ ನಂತರ ಮಧ್ಯಪ್ರಾಚ್ಯದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಯುದ್ಧ ಮತ್ತು ಆಡಳಿತ ಬದಲಾವಣೆಯ ಪ್ರಯತ್ನ ನಡೆಯುತ್ತಿರುವುದು ಇದೇ ಮೊದಲು ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.