ಮಧ್ಯಪ್ರಾಚ್ಯದ ಯುದ್ಧದ ಭೀತಿಯಿಂದಾಗಿ ಜಾಗತಿಕ ವಿಮಾನಯಾನ ಕ್ಷೇತ್ರಕ್ಕೆ ದೊಡ್ಡ ಆಘಾತ ಎದುರಾಗಿದೆ. ಪ್ರಮುಖ ವಿಮಾನಯಾನ ಸಂಸ್ಥೆ ಕತಾರ್ ಏರ್‌ವೇಸ್ ತನ್ನ ಕಾರ್ಯಾಚರಣೆಯನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಿದ್ದು, ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಶುಕ್ರವಾರ ಪ್ರಕಟಿಸಿದೆ.
ತನ್ನ ಅಧಿಕೃತ ಚಾನೆಲ್‌ಗಳ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವ ಕತಾರ್ ಏರ್‌ವೇಸ್ ಗ್ರೂಪ್ ಪ್ರಯಾಣಿಕರ ಮತ್ತು ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ, ಎಂದು ತಿಳಿಸಿದೆ. ಕತಾರ್ ಸರ್ಕಾರವು ತನ್ನ ದೇಶದ ಆಕಾಶಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿರುವುದರಿಂದ ವಿಮಾನಗಳ ಹಾರಾಟ ಅಸಾಧ್ಯವಾಗಿದೆ. ನಮ್ಮ ಮೊದಲ ಆದ್ಯತೆ ಜನರ ಪ್ರಾಣ ರಕ್ಷಣೆ. ಈ ಅನಿವಾರ್ಯ ಪರಿಸ್ಥಿತಿಯಿಂದ ಪ್ರಯಾಣಿಕರಿಗೆ ಉಂಟಾಗಿರುವ ತೊಂದರೆಗೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಸಂಸ್ಥೆ ಹೇಳಿದೆ. ಸದ್ಯ ಹಮದ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಸಾವಿರಾರು ಪ್ರಯಾಣಿಕರಿಗೆ ಸಹಾಯ ಮಾಡಲು ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗಿದೆ.
ಕತಾರ್ ಮಾತ್ರವಲ್ಲದೆ ಜೋರ್ಡಾನ್, ಇರಾಕ್ ಮತ್ತು ಲೆಬನಾನ್ ದೇಶಗಳು ಕೂಡ ಈಗಾಗಲೇ ತಮ್ಮ ಆಕಾಶಮಾರ್ಗವನ್ನು ತುರ್ತಾಗಿ ಮುಚ್ಚಿವೆ. ಇರಾನ್ ದೇಶವು ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ಆರಂಭಿಸಿರುವುದು ವಿಮಾನಗಳ ಸಂಚಾರಕ್ಕೆ ದೊಡ್ಡ ಅಪಾಯ ತಂದೊಡ್ಡಿದೆ. ಫ್ಲೈಟ್‌ರಾಡಾರ್ 24 ಅಂಕಿಅಂಶಗಳ ಪ್ರಕಾರ, ಈ ಘೋಷಣೆ ಹೊರಬೀಳುವ ಮೊದಲೇ ಗಲ್ಫ್ ಪ್ರದೇಶದಲ್ಲಿದ್ದ ನೂರಾರು ವಾಣಿಜ್ಯ ವಿಮಾನಗಳು ದಿಕ್ಕು ಬದಲಿಸಿ ಓಮನ್ ಮತ್ತು ಸೌದಿ ಅರೇಬಿಯಾದತ್ತ ತೆರಳಿವೆ. ವಿಮಾನಯಾನ ಸ್ಥಗಿತಗೊಂಡಿರುವುದರಿಂದ ಜಗತ್ತಿನಾದ್ಯಂತ ಸಂಚರಿಸುವ ಕತಾರ್ ಏರ್‌ವೇಸ್ ವೇಳಾಪಟ್ಟಿಯಲ್ಲಿ ದೊಡ್ಡ ವ್ಯತ್ಯಾಸವಾಗಲಿದೆ.
Temporary Suspension of Qatar Airways Flights due to Qatari Airspace Closure
— Qatar Airways (@qatarairways) February 28, 2026
Qatar Airways Group confirms the temporary suspension of its flights to, and from, Doha due to the closure of Qatari airspace.
The airline is working closely with government stakeholders and the…
ಬಾಧಿತ ಪ್ರಯಾಣಿಕರಿಗೆ ಸಂಸ್ಥೆಯು ಈ ಕೆಳಗಿನ ಸೂಚನೆಗಳನ್ನ ನೀಡಿದೆ
- ವಿಮಾನದ ಸ್ಥಿತಿ ಪರಿಶೀಲಿಸಿ - ಪ್ರಯಾಣಿಕರು ಕತಾರ್ ಏರ್‌ವೇಸ್ ವೆಬ್‌ಸೈಟ್ ಅಥವಾ ಆಪ್ ಮೂಲಕ ತಮ್ಮ ವಿಮಾನದ ಲೇಟೆಸ್ಟ್ ಅಪ್‌ಡೇಟ್ ಗಮನಿಸುತ್ತಿರಬೇಕು.
- ಸಿಬ್ಬಂದಿ ನೆರವು ಪಡೆಯಿರಿ - ಈಗಾಗಲೇ ವಿಮಾನ ನಿಲ್ದಾಣದಲ್ಲಿ ಇರುವವರು ಅಲ್ಲಿನ ಸಿಬ್ಬಂದಿಯನ್ನು ಸಂಪರ್ಕಿಸಿ ಹೋಟೆಲ್ ವ್ಯವಸ್ಥೆ ಅಥವಾ ಮರು-ಬುಕಿಂಗ್ ಬಗ್ಗೆ ಮಾಹಿತಿ ಪಡೆಯಬಹುದು.
- ಆಕಾಶಮಾರ್ಗ ತೆರೆಯುವವರೆಗೆ ಕಾಯುವುದು - ಸರ್ಕಾರವು ಆಕಾಶಮಾರ್ಗ ಸುರಕ್ಷಿತವಾಗಿದೆ ಎಂದು ಘೋಷಿಸುವವರೆಗೂ ವಿಮಾನಗಳು ಹಾರಾಟ ನಡೆಸುವುದಿಲ್ಲ.
ಜಾಗತಿಕ ವಿಮಾನಯಾನದ ಪ್ರಮುಖ ಕೊಂಡಿಯಾದ ದೋಹಾ ಈಗ ಯುದ್ಧದ ಕಾರಣದಿಂದ ಸ್ತಬ್ದವಾಗಿದೆ. ಕತಾರ್ ಏರ್‌ವೇಸ್‌ನ ಈ ಮಹತ್ವದ ನಿರ್ಧಾರವು ಕೊರೊನಾ ನಂತರದ ಅತಿದೊಡ್ಡ ವೈಮಾನಿಕ ಬಿಕ್ಕಟ್ಟು ಎಂದು ವಿಶ್ಲೇಷಿಸಲಾಗುತ್ತಿದೆ. ಮಧ್ಯಪ್ರಾಚ್ಯದ ಈ ಮಹಾಯುದ್ಧವು ವಿಶ್ವದ ವೈಮಾನಿಕ ಭೂಪಟವನ್ನು ಪ್ರತಿ ಗಂಟೆಗೂ ಮರುರೂಪಿಸುತ್ತಿದೆ. ಪರ್ಯಾಯ ಮಾರ್ಗಗಳ ಕೊರತೆಯಿಂದಾಗಿ ಅಂತರಾಷ್ಟ್ರೀಯ ಪ್ರಯಾಣಿಕರು ಮತ್ತು ಉದ್ಯಮಿಗಳು ದಿಕ್ಕು ತೋಚದಂತಾಗಿದ್ದಾರೆ.