Apr 26, 2026 Languages : ಕನ್ನಡ | English

ಇರಾನ್‌ನಲ್ಲಿ ಅಮೆರಿಕ-ಇಸ್ರೇಲ್ ದಾಳಿ - ಶಾಲೆಯ ಮೇಲೆ ಬಿದ್ದ ಬಾಂಬ್‌ಗೆ ವಿದ್ಯಾರ್ಥಿನಿಯರು ಬಲಿ!!

ಮಧ್ಯಪ್ರಾಚ್ಯದ ಸಂಘರ್ಷ ಈಗ ಅಮಾಯಕ ಮಕ್ಕಳ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ವಿರುದ್ಧ ನಡೆಸುತ್ತಿರುವ ಬೃಹತ್ ಯುದ್ಧ ಕಾರ್ಯಾಚರಣೆ ವೇಳೆ ದಕ್ಷಿಣ ಇರಾನ್‌ನ ಮಿನಾಬ್ ನಗರದಲ್ಲಿ ದೊಡ್ಡ ದುರಂತ ಸಂಭವಿಸಿದೆ. ಶನಿವಾರ ಮಧ್ಯಾಹ್ನ ನಡೆದ ಭೀಕರ ವೈಮಾನಿಕ ದಾಳಿಯಲ್ಲಿ ಪ್ರಾಥಮಿಕ ಶಾಲೆಯೊಂದು ಧ್ವಂಸವಾಗಿದ್ದು, ಐವರು ಪುಟ್ಟ ಹೆಣ್ಣುಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಇರಾನ್ ಅಧಿಕಾರಿಗಳು ಅಧಿಕೃತವಾಗಿ ಖಚಿತಪಡಿಸಿದ್ದಾರೆ.

ಮಿನಾಬ್ ಶಾಲೆಯ ಮೇಲೆ ದಾಳಿ – ಐದು ಪುಟ್ಟ ಮಕ್ಕಳು ಬಲಿ!!
ಮಿನಾಬ್ ಶಾಲೆಯ ಮೇಲೆ ದಾಳಿ – ಐದು ಪುಟ್ಟ ಮಕ್ಕಳು ಬಲಿ!!

ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ 'ಇರ್ನಾ' ವರದಿ ಮಾಡಿರುವಂತೆ, ಹೊರ್ಮೊಜ್ಗನ್ ಪ್ರಾಂತ್ಯದ ಮಿನಾಬ್ ನಗರದಲ್ಲಿರುವ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯ ಮೇಲೆ ಬಾಂಬ್ ನೇರವಾಗಿ ಬಿದ್ದಿದೆ. ಈ ನಗರವು ಆಯಕಟ್ಟಿನ 'ಹೋರ್ಮುಜ್ ಜಲಸಂಧಿ'ಗೆ ಹತ್ತಿರದಲ್ಲಿದ್ದು, ಇಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ಪ್ರಮುಖ ಸೇನಾ ನೆಲೆಯಿದೆ. ಬಹುಶಃ ಅಮೆರಿಕದ ವಿಮಾನಗಳು ಈ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವಾಗ, ತಾಂತ್ರಿಕ ತಪ್ಪಿನಿಂದಾಗಿ ಬಾಂಬ್ ಶಾಲೆಯ ಮೇಲೆ ಬಿದ್ದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಈ ದಾಳಿಯಲ್ಲಿ ಐವರು ವಿದ್ಯಾರ್ಥಿನಿಯರು ಸ್ಥಳದಲ್ಲೇ ಮೃತಪಟ್ಟಿದ್ದು, ಹತ್ತಾರು ಮಕ್ಕಳು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಡೊನಾಲ್ಡ್ ಟ್ರಂಪ್ ಮತ್ತು ನೆತನ್ಯಾಹು ಅವರ 'ಆಪರೇಷನ್ ರೋರಿಂಗ್ ಲಯನ್' ಕಾರ್ಯಾಚರಣೆ ಶುರುವಾದ ಮೇಲೆ ಇರಾನ್‌ನಲ್ಲಿ ನಾಗರಿಕರು ಸಾವನ್ನಪ್ಪಿರುವುದು ಇದೇ ಮೊದಲು. ಅಮೆರಿಕದ ಪೆಂಟಗನ್ ತನ್ನ ದಾಳಿಗಳು ಕೇವಲ ಸೇನಾ ನೆಲೆಗಳ ಮೇಲೆ ಮಾತ್ರ ನಡೆಯುತ್ತಿವೆ ಎಂದು ಹೇಳಿತ್ತು. ಆದರೆ, ಮಿನಾಬ್ ಶಾಲೆಯ ಮೇಲೆ ನಡೆದ ಈ ದಾಳಿಯು ಆಧುನಿಕ ಯುದ್ಧ ಕೂಡ ಅಮಾಯಕರನ್ನು ಹೇಗೆ ಬಲಿ ಪಡೆಯುತ್ತದೆ ಎಂಬುದನ್ನು ತೋರಿಸಿದೆ. ಶಾಲೆಯಲ್ಲೀಗ ಬರೀ ಕಟ್ಟಡದ ಅವಶೇಷಗಳು ಮತ್ತು ಜನರ ಕಣ್ಣೀರು ಮಾತ್ರ ಕಾಣಿಸುತ್ತಿದೆ.

ಈ ಘಟನೆಯನ್ನು ಇರಾನ್ ವಿದೇಶಾಂಗ ಸಚಿವಾಲಯವು ಯುದ್ಧಾಪರಾಧ ಎಂದು ಕರೆದಿದೆ ಟ್ರೂತ್‌ಫುಲ್ ಪ್ರಾಮಿಸ್ 4 ಹೆಸರಿನಲ್ಲಿ ಕ್ಷಿಪಣಿ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿದೆ. ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಯೂನಿಯನ್ ನಾಯಕರು ಈ ಘಟನೆಗೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಕೂಡಲೇ ಯುದ್ಧ ನಿಲ್ಲಿಸುವಂತೆ ಮತ್ತು ನಾಗರಿಕ ಆಸ್ತಿಪಾಸ್ತಿಗಳನ್ನ ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಕಲಿಯಲು ಹೋಗುವ ಮಕ್ಕಳು ಕೊ*ಲೆಯಾಗುವುದು ಅಸಹನೀಯ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಹೇಳಿದೆ.

ಮೃತಪಟ್ಟ ಐವರು ವಿದ್ಯಾರ್ಥಿನಿಯರ ಅಂತ್ಯಕ್ರಿಯೆಯು ಭಾನುವಾರ ನಡೆಯಲಿದ್ದು, ಇಡೀ ದಕ್ಷಿಣ ಇರಾನ್ ಈಗ ಶೋಕ ಸಾಗರದಲ್ಲಿ ಮುಳುಗಿದೆ. ಈ ದುರಂತವು ಇರಾನ್ ಜನರಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತೀವ್ರ ಆಕ್ರೋಶ ಮೂಡಿಸಿದೆ. ಆರಂಭದಲ್ಲಿ ಕೇವಲ ಸೇನಾ ಕೇಂದ್ರಗಳ ಮೇಲೆ ಮಾತ್ರ ನಡೆಯುತ್ತಿದ್ದ ಈ ಸರ್ಜಿಕಲ್ ಸ್ಟ್ರೈಕ್, ಈಗ ನಾಗರಿಕರನ್ನ ಬಲಿ ಪಡೆಯುವ ಭೀಕರ ಯುದ್ಧವಾಗಿ ಬದಲಾಗುತ್ತಿದೆ. ಯುದ್ಧದ ಕಿಚ್ಚಿನಲ್ಲಿ ಅತೀ ಹೆಚ್ಚು ತೊಂದರೆಗೊಳಗಾಗುತ್ತಿರುವುದು ಸಮಾಜದ ಅತ್ಯಂತ ದುರ್ಬಲ ವರ್ಗದವರಾದ ಮಕ್ಕಳು ಎಂಬುದು ಇಡೀ ವಿಶ್ವಕ್ಕೆ ಕಳವಳಕಾರಿ ಸಂಗತಿಯಾಗಿದೆ.  

Latest News