ಜಗತ್ತಿನಲ್ಲಿ ಎಂತೆಂತಹದ್ದೋ ವಿಚಿತ್ರ ಅಪಘಾತಗಳು ನಡೆಯುತ್ತಿರುತ್ತವೆ. ಕೆಲವು ಘಟನೆಗಳನ್ನು ಕೇಳಿದರೆ "ಇದು ನಿಜಕ್ಕೂ ಸಾಧ್ಯನಾ?" ಅಂತ ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ಇಂತಹುದೇ ಒಂದು ನಂಬಲು ಅಸಾಧ್ಯವಾದ, ಅಷ್ಟೇ ಆಶ್ಚರ್ಯ ಮೂಡಿಸುವ ಘಟನೆಯೊಂದು ಅಮೆರಿಕದ ನೆಬ್ರಸ್ಕಾ ರಾಜ್ಯದ ಸ್ಕಾಟ್ಸ್‌ಬ್ಲಫ್ ನಗರದಲ್ಲಿ ನಡೆದಿದೆ. ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಕಾರಿನೊಳಗಿದ್ದ ಸಾಕು ನಾಯಿಯೊಂದು ಅಕಸ್ಮಿಕವಾಗಿ ಬಂದೂಕಿನ (Shotgun) ಟ್ರಿಗರ್ ಒತ್ತಿದೆ!
ಅದರಿಂದ ಸಿಡಿದ ಗುಂ*ಡು ಕಾರಿನ ಬಾಗಿಲು ಸೀಳಿಕೊಂಡು ಹೋಗಿ, ದೂರದ ರಸ್ತೆಯಲ್ಲಿ ಸಿಗ್ನಲ್‌ಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರ ತೋಳಿಗೆ ತಗುಲಿ ಗಾಯಗೊಳಿಸಿದೆ!
ಮಾಲೀಕ ಅಂಗಡಿಗೆ ಹೋದಾಗ ನಡೆದ ಎಡವಟ್ಟು!
ಕಳೆದ ಶನಿವಾರ ಮಧ್ಯಾಹ್ನ ಈ ರೋಮಾಂಚಕ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ತಮ್ಮ ಸಾಕು ನಾಯಿ ಹಾಗೂ ಮತ್ತೊಬ್ಬ ಸ್ನೇಹಿತನ ಜೊತೆ ಪಿಕಪ್ ಟ್ರಕ್‌ನಲ್ಲಿ ಪೆಟ್ರೋಲ್ ಬಂಕ್ ಬಳಿಯಿರುವ ಸೂಪರ್ ಮಾರ್ಕೆಟ್‌ಗೆ ಬಂದಿದ್ದರು. ಟ್ರಕ್ ನಿಲ್ಲಿಸಿದ ಮಾಲೀಕರು ನಾಯಿ ಮತ್ತು ತನ್ನ ಸ್ನೇಹಿತನನ್ನು ಗಾಡಿಯಲ್ಲೇ ಕೂರಿಸಿ, ಕೆಲವು ಸಾಮಗ್ರಿಗಳನ್ನು ತರಲು ಅಂಗಡಿಯ ಒಳಗೆ ಹೋಗಿದ್ದಾರೆ.
ಈ ಸಮಯದಲ್ಲಿ ಟ್ರಕ್‌ನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಸಾಕು ನಾಯಿ ಆಟವಾಡಲು ಶುರು ಮಾಡಿದೆ. ಜಾಲಿಯಾಗಿ ಕಾಲು ಆಡಿಸುತ್ತಾ ಕೀಟಲೆ ಮಾಡುತ್ತಿದ್ದಾಗ, ಸೀಟಿನ ಕೆಳಗೆ ಇಟ್ಟಿದ್ದ ಲೋಡ್ ಆಗಿದ್ದ ಬಂದೂಕು ಅದರ ಕಾಲಿಗೆ ಸಿಕ್ಕಿದೆ. ನಾಯಿ ಆ ಬಂದೂಕಿನ ಮೇಲೆ ಕಾಲಿಟ್ಟು ತಿರುಗಾಡುವಾಗ ಆಕಸ್ಮಿಕವಾಗಿ ಅದರ ಕಾಲಿನ ಒತ್ತಡಕ್ಕೆ ಗನ್‌ನ ಟ್ರಿಗರ್ ಪ್ರೆಸ್ ಆಗಿದೆ.
ಕಾರಿನ ಬಾಗಿಲು ಸೀಳಿಕೊಂಡು ಹೋದ ಗುಂಡು!
ಟ್ರಿಗರ್ ಒತ್ತಲ್ಪಡುತ್ತಿದ್ದಂತೆ ಬಂದೂಕಿನಿಂದ ಸತತವಾಗಿ ಗುಂಡುಗಳು ಸಿಡಿದಿವೆ. ಲೋಡ್ ಆಗಿದ್ದ ಗನ್‌ನಿಂದ ಹೊರಬಂದ ಗುಂಡುಗಳು ಟ್ರಕ್‌ನ ಗಟ್ಟಿ ಮುಟ್ಟಾದ ಬಾಗಿಲನ್ನೇ ತೂತು ಮಾಡಿಕೊಂಡು ಹೊರಗೆ ಬಂದಿವೆ. ಅದರಲ್ಲಿ ಒಂದು ಗುಂಡು ಪೆಟ್ರೋಲ್ ಬಂಕ್‌ನ ಇಡೀ ಆವರಣವನ್ನೇ ದಾಟಿ, ಸಾಕಷ್ಟು ದೂರದಲ್ಲಿದ್ದ ರಸ್ತೆಯ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿದ್ದ ಮಹಿಳೆಯ ತೋಳಿಗೆ ನೇರವಾಗಿ ಹೋಗಿ ತಗುಲಿದೆ.
ಇದೇ ಸಮಯದಲ್ಲಿ ಟ್ರಕ್‌ನಿಂದ ಹೊರಗೆ ನಿಂತಿದ್ದ ಮತ್ತೊಬ್ಬ ಪ್ರಯಾಣಿಕ, ಕಾರಿನೊಳಗಿದ್ದ ನಾಯಿ ಗನ್ ಶೂಟ್ ಮಾಡಿದ್ದನ್ನು ಕಂಡು ಕಣ್ಣುಬಾಯಿ ಬಿಟ್ಟಿದ್ದಾನೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ದೂರದಲ್ಲಿ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ತಕ್ಷಣವೇ ಅಲರ್ಟ್ ಆದ ಸ್ಥಳೀಯರು ಗಾಯಾಳು ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸರನ್ನೇ ದಂಗಾಗಿಸಿದ ಸಾಕು ನಾಯಿ!
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಪಾಟ್‌ಗೆ ಧಾವಿಸಿದ್ದಾರೆ. ಆರಂಭದಲ್ಲಿ ಯಾರೋ ಸಣ್ಣ ಏರ್ ಗನ್ (BB Gun) ನಿಂದ ಶೂಟ್ ಮಾಡಿರಬಹುದು ಎಂದು ಪೊಲೀಸರು ಭಾವಿಸಿದ್ದರು. ಆದರೆ ತನಿಖೆ ನಡೆಸುತ್ತಾ ಪೆಟ್ರೋಲ್ ಬಂಕ್‌ನಲ್ಲಿದ್ದ ಪಿಕಪ್ ಟ್ರಕ್ ಹತ್ತಿರ ಹೋಗಿ ನೋಡಿದಾಗ ಪೊಲೀಸರೇ ಶಾಕ್ ಆಗಿದ್ದಾರೆ. ಟ್ರಕ್‌ನೊಳಗೆ ಅಷ್ಟ ತಾನೇ ಶೂಟ್ ಆಗಿದ್ದ ಬಂದೂಕಿನಿಂದ ಹೊಗೆ ಬರುತ್ತಿತ್ತು, ಅದರ ಪಕ್ಕದಲ್ಲೇ ಏನೂ ತಿಳಿಯದ ಮುಗ್ಧ ಮುಖ ಹೊತ್ತು ಸಾಕು ನಾಯಿ ಆರಾಮವಾಗಿ ಕುಳಿತಿತ್ತು!
ನೆಬ್ರಸ್ಕಾ ರಾಜ್ಯದ ಕಠಿಣ ಕಾನೂನಿನ ಪ್ರಕಾರ, ಹೆದ್ದಾರಿಯಲ್ಲಿ ಚಲಿಸುವ ವಾಹನಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಲೋಡ್ ಮಾಡಿದ ಬಂದೂಕುಗಳನ್ನು ಇಟ್ಟುಕೊಂಡು ತಿರುಗಾಡುವುದು ದೊಡ್ಡ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ವಹಿಸಿದ ಟ್ರಕ್ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಅಮೆರಿಕದಲ್ಲಿ ನಾಯಿಗಳು ಆಟವಾಡುತ್ತಾ ಗನ್ ಶೂಟ್ ಮಾಡಿದ ಇಂತಹ ಘಟನೆಗಳು ಈ ಹಿಂದೆಯೂ ಒಂದೆರಡು ಬಾರಿ ವರದಿಯಾಗಿದ್ದರೂ, ವಾಹನದ ಒಳಗಿದ್ದ ನಾಯಿ ಶೂಟ್ ಮಾಡಿದ ಗುಂಡು ಇಷ್ಟು ದೂರದಲ್ಲಿದ್ದ ಬೇರೆ ವ್ಯಕ್ತಿಗೆ ತಗುಲಿರುವುದು ಇದೇ ಮೊದಲು ಎಂದು ಅಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.