ಇರಾನ್ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವಿನ ಯುದ್ಧ ಅಷ್ಟು ಬೇಗ ಮುಗಿಯುವ ಲಕ್ಷಣವಿಲ್ಲ. ಈ ಹೋರಾಟವು 2026ರ ಸೆಪ್ಟೆಂಬರ್ ತಿಂಗಳವರೆಗೂ ನಡೆಯಬಹುದು ಎಂದು ಹೇಳಲಾಗುತ್ತಿದೆ. ಯುದ್ಧ ಹೀಗೆ ಮುಂದುವರಿಯುತ್ತಿರುವುದರಿಂದ, ನೊಸ್ಟ್ರಾಡಾಮಸ್ ಅವರು ನೂರಾರು ವರ್ಷಗಳ ಹಿಂದೆಯೇ ಹೇಳಿದ್ದ "ಏಳು ತಿಂಗಳ ಮಹಾಯುದ್ಧ"ದ ಭವಿಷ್ಯ ಈಗ ನಿಜವಾಗುತ್ತಿದೆಯೇ ಎಂಬ ಭಯ ಜನರಲ್ಲಿ ಶುರುವಾಗಿದೆ.
ಅಮೆರಿಕದ ರಕ್ಷಣಾ ಇಲಾಖೆಯ ಗುಪ್ತ ದಾಖಲೆಗಳ ಪ್ರಕಾರ, ಇರಾನ್ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಗುಪ್ತಚರ ಅಧಿಕಾರಿಗಳ ಅಗತ್ಯವಿದೆ ಎಂದು ಅಲ್ಲಿನ ಸೇನೆ ಕೇಳಿಕೊಂಡಿದೆ. ಈ ಅಧಿಕಾರಿಗಳ ಕೆಲಸವು ಕನಿಷ್ಠ 100 ದಿನಗಳ ಕಾಲ ನಡೆಯಲಿದ್ದು, 2026ರ ಸೆಪ್ಟೆಂಬರ್ ತಿಂಗಳವರೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಇರಾನ್ ವಿರುದ್ಧದ ಕಾರ್ಯಾಚರಣೆ ಕೇವಲ ನಾಲ್ಕೈದು ವಾರಗಳಲ್ಲಿ ಕೊನೆಗೊಳ್ಳಲಿದೆ ಎಂಬ ಅಮೆರಿಕ ಮತ್ತು ಇಸ್ರೇಲ್‌ನ ಅಂದಾಜುಗಳು ಈಗ ಬುಡಮೇಲಾಗುವಂತೆ ತೋರುತ್ತಿವೆ. ಯುದ್ಧದ ಸ್ವರೂಪ ಜಟಿಲಗೊಳ್ಳುತ್ತಿರುವುದರಿಂದ, ಇದು ದೀರ್ಘಕಾಲದ ಸಂಘರ್ಷವಾಗಿ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ. ವಿಶೇಷವಾಗಿ ಶತ್ರುಗಳ ರಹಸ್ಯ ನೆಲೆಗಳನ್ನು ಪತ್ತೆಹಚ್ಚಲು ಮತ್ತು ಅವರ ಸಂವಹನ ವ್ಯವಸ್ಥೆಯನ್ನು ಧ್ವಂಸಗೊಳಿಸಲು ಮಿಲಿಟರಿ ಪಡೆಗಳಿಗೆ ಹೆಚ್ಚಿನ ಸಮಯದ ಅಗತ್ಯವಿರುವುದು ಈ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಈ ಕಾರಣದಿಂದಾಗಿ, ಮಿಲಿಟರಿ ಯೋಜಕರು ಈಗ ಅಲ್ಪಾವಧಿಯ ಕಾರ್ಯಾಚರಣೆಯ ಬದಲು ದೀರ್ಘಾವಧಿಯ ಯುದ್ಧದತ್ತ ಗಮನ ಹರಿಸುತ್ತಿದ್ದಾರೆ.
ಇರಾನ್‌ನ ಕಡಿಮೆ ಬೆಲೆಯ ಡ್ರೋನ್ ತಂತ್ರಜ್ಞಾನವು ಪಾಶ್ಚಿಮಾತ್ಯರ ಅತ್ಯಾಧುನಿಕ ಮತ್ತು ದುಬಾರಿ ಕ್ಷಿಪಣಿ ನಿರೋಧಕ ವ್ಯವಸ್ಥೆಗಳಿಗೆ ಸವಾಲು ಹಾಕುತ್ತಿದೆ. ಅಲ್ಪ ವೆಚ್ಚದ ಈ ಆಯುಧಗಳು ಕೋಟ್ಯಂತರ ರೂಪಾಯಿ ಮೌಲ್ಯದ ರಕ್ಷಣಾ ಕವಚಗಳನ್ನು ಭೇದಿಸುತ್ತಿರುವುದು ಯುದ್ಧದ ಸಮತೋಲನವನ್ನೇ ಬದಲಿಸಿದೆ. ಈ ತಾಂತ್ರಿಕ ಸಂಘರ್ಷದಿಂದಾಗಿ ಯುದ್ಧವು ಬೇಗ ಮುಗಿಯುವ ಬದಲು, ಮುಂದುವರಿಯುತ್ತಲೇ ಹೋಗುವ ಪ್ರತೀಕಾರದ ಆಟವಾಗಿ ಮಾರ್ಪಟ್ಟಿದೆ.
ನೊಸ್ಟ್ರಾಡಾಮಸ್‌ನ 'ಏಳು ತಿಂಗಳ ಯುದ್ಧ'ದ ಭವಿಷ್ಯವಾಣಿ
ಇಂದಿನ ಯುದ್ಧದ ಭೀತಿಯ ನಡುವೆ, 1555ರಲ್ಲಿಯೇ ನೊಸ್ಟ್ರಾಡಾಮಸ್ ಬರೆದಿದ್ದ 'ಲೆಸ್ ಪ್ರೊಫೆಟಿಸ್' ಪುಸ್ತಕದ ಹಳೆಯ ಸಾಲುಗಳು ಈಗ ಜಗತ್ತಿನ ನಿದ್ದೆ ಗೆಡಿಸಿವೆ. ಏಳು ತಿಂಗಳ ಕಾಲ ನಡೆಯುವ ಮಹಾಯುದ್ಧವು ದುಷ್ಟತನದ ಕಾರಣದಿಂದ ಅಪಾರ ಜನಸಮೂಹದ ಸಾವಿಗೆ ಕಾರಣವಾಗಲಿದೆ ಎಂಬ ಅವರ ನಿಗೂಢ ನುಡಿಗಳು ಇಂದಿನ ಪರಿಸ್ಥಿತಿಗೆ ಸರಿಯಾಗಿ ಹೊಂದಿಕೆಯಾಗುತ್ತಿರುವಂತೆ ಕಾಣುತ್ತಿವೆ. ಈ ಕಾರಣಕ್ಕಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಈ ಭವಿಷ್ಯವಾಣಿ ಕಾಳ್ಗಿಚ್ಚಿನಂತೆ ಹರಡುತ್ತಿದೆ.
ನೊಸ್ಟ್ರಾಡಾಮಸ್ ಅವರ ಮಾತು ನಂಬುವ ಜನರು ಈ ವಾಕ್ಯವ ಇಂದಿನ ಇರಾನ್ ಪರಿಸ್ಥಿತಿಗೆ ಹೋಲಿಸುತ್ತಿದ್ದಾರೆ. 2026ರ ಆರಂಭದಲ್ಲಿ ಶುರುವಾದ ಈ ಗಲಾಟೆ ಯುದ್ಧ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಸರಿಯಾಗಿ ಏಳು ತಿಂಗಳು ಪೂರೈಸುತ್ತದೆ. ಇದು ನೊಸ್ಟ್ರಾಡಾಮಸ್ ಅಂದು ಹೇಳಿದ ಕಾಲಘಟ್ಟಕ್ಕೆ ತಾಳೆಯಾಗುತ್ತಿದೆ ಎಂದು ಅನೇಕರು ನಂಬುತ್ತಿದ್ದಾರೆ. ಆದರೆ, ಇತಿಹಾಸಕಾರರು ಇಂತಹ ಭವಿಷ್ಯವಾಣಿಗಳು ಸಾಂಕೇತಿಕವಾಗಿರುತ್ತವೆಯೇ ಹೊರತು ಅವುಗಳನ್ನು ಅಕ್ಷರಶಃ ಸತ್ಯ ಎಂದು ಪರಿಗಣಿಸಬಾರದು ಎಂದು ಎಚ್ಚರಿಸಿದ್ದಾರೆ.
ಅನಿಶ್ಚಿತ ಅಂತ್ಯ ಮತ್ತು ಜಾಗತಿಕ ಆತಂಕ
ಈ ಯುದ್ಧದ ಅತಿ ದೊಡ್ಡ ಸವಾಲೆಂದರೆ ಇದರ ಅಂತಿಮ ಗುರಿ ಏನು ಎಂಬುದು ಯಾರಿಗೂ ತಿಳಿದಿಲ್ಲ. ಇದು ಇರಾನ್ ಅನ್ನು ಕೇವಲ ನಿಯಂತ್ರಿಸುವುದಕ್ಕೋ ಅಥವಾ ಆಡಳಿತ ಬದಲಾವಣೆಗೋ ಎಂಬ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೇ ಗೊಂದಲವಿದೆ. ಯುದ್ಧವು ದೀರ್ಘಕಾಲದವರೆಗೆ ಮುಂದುವರಿದರೆ ಮಧ್ಯಪ್ರಾಚ್ಯದ ಭೌಗೋಳಿಕ ಸ್ಥಿತಿಯೇ ಬದಲಾಗಬಹುದು ಎಂದು ವಿಶ್ಲೇಷಕರು ಎಚ್ಚರಿಸುತ್ತಿದ್ದಾರೆ.
ಇರಾನ್ ಸಂಘರ್ಷವು ಕೇವಲ ಒಂದು ಮಿಲಿಟರಿ ಕಾರ್ಯಾಚರಣೆಯಾಗಿ ಉಳಿಯದೆ, ಜಾಗತಿಕ ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸುದೀರ್ಘ ಸಮರವಾಗಿ ಮಾರ್ಪಡುತ್ತಿದೆ.