Apr 3, 2026 Languages : ಕನ್ನಡ | English

ಹನಿ ಹನಿ ನೀರಿಗೂ ಪರದಾಡಲಿದೆ ಪಾಕಿಸ್ತಾನ - ಜಮ್ಮು-ಕಾಶ್ಮೀರದ ಅದೃಷ್ಟ ಬದಲಿಸಲಿದೆ ಶಹಪುರ ಕಂಡಿ ಬ್ಯಾರೇಜ್!!

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಈಗ ಮತ್ತೊಂದು ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿವೆ. ಈ ಬಾರಿ ಯುದ್ಧದ ಅಬ್ಬರವಿಲ್ಲದಿದ್ದರೂ, 'ಜಲ ರಾಜತಾಂತ್ರಿಕತೆ'ಯ ಮೂಲಕ ಭಾರತ ನೆರೆರಾಷ್ಟ್ರಕ್ಕೆ ಪ್ರಬಲ ಸಂದೇಶ ರವಾನಿಸಲು ಸಿದ್ಧವಾಗಿದೆ. ಕಳೆದ 46 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಾಹಪುರ್ ಕಂಡಿ ಅಣೆಕಟ್ಟು ಯೋಜನೆ ಈಗ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇದರಿಂದ ರವಿ ನದಿಯ ಒಂದು ಹನಿ ನೀರು ಕೂಡ ಪಾಕಿಸ್ತಾನಕ್ಕೆ ಹರಿಯದಂತೆ ತಡೆಯಲು ಭಾರತ ನಿರ್ಧರಿಸಿದೆ.

ಪಾಕಿಸ್ತಾನಕ್ಕೆ ರವಿ ನದಿ ನೀರು ನಿಲ್ಲಿಸಲು ಭಾರತ ಸಿದ್ಧ
ಪಾಕಿಸ್ತಾನಕ್ಕೆ ರವಿ ನದಿ ನೀರು ನಿಲ್ಲಿಸಲು ಭಾರತ ಸಿದ್ಧ

ಪಂಜಾಬ್ ಮತ್ತು ಜಮ್ಮು-ಕಾಶ್ಮೀರದ ಗಡಿಯಲ್ಲಿರುವ ಶಹಪುರ್ ಕಂಡಿ ಅಣೆಕಟ್ಟು ನಿರ್ಮಾಣವು ದಶಕಗಳ ಹಳೆಯ ಕನಸು. 1979ರಲ್ಲಿ ಈ ಯೋಜನೆಯನ್ನು ಮೊದಲು ರೂಪಿಸಲಾಗಿತ್ತು. ನಂತರ 1982ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಇದಕ್ಕೆ ಅಡಿಪಾಯ ಹಾಕಿದ್ದರು. ಆದರೆ, ರಾಜ್ಯಗಳ ನಡುವಿನ ಆಂತರಿಕ ವಿವಾದಗಳು ಮತ್ತು ರಾಜಕೀಯ ಕಾರಣಗಳಿಂದಾಗಿ ಈ ಯೋಜನೆ ದಶಕಗಳ ಕಾಲ ಸ್ಥಗಿತಗೊಂಡಿತ್ತು. 2018ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ ನಂತರ ಕಾಮಗಾರಿಗೆ ವೇಗ ದೊರೆಯಿತು. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಜಲಸಂಪನ್ಮೂಲ ಸಚಿವ ಜಾವೇದ್ ಅಹ್ಮದ್ ರಾಣಾ ಅವರು ನೀಡಿರುವ ಮಾಹಿತಿ ಪ್ರಕಾರ, ಮಾರ್ಚ್ 31ರೊಳಗೆ ಈ ಯೋಜನೆ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ.

ಸಿಂಧೂ ಜಲ ಒಪ್ಪಂದ ಮತ್ತು ಭಾರತದ ಹಕ್ಕು
1960ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ಜಲ ಒಪ್ಪಂದ ಏರ್ಪಟ್ಟಿತ್ತು. ಈ ಒಪ್ಪಂದದ ಪ್ರಕಾರ, ಪೂರ್ವ ಭಾಗದ ನದಿಗಳಾದ ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳ ನೀರಿನ ಮೇಲೆ ಭಾರತಕ್ಕೆ ಸಂಪೂರ್ಣ ಹಕ್ಕಿದೆ. ಆದಾಗ್ಯೂ, ಇಷ್ಟು ವರ್ಷಗಳ ಕಾಲ ಸಂಗ್ರಹಣಾ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಹೆಚ್ಚುವರಿ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿತ್ತು. ಈಗ ಶಾಹಪುರ್ ಕಂಡಿ ಅಣೆಕಟ್ಟು ಪೂರ್ಣಗೊಂಡ ನಂತರ, ನಮ್ಮ ಪಾಲಿನ ನೀರನ್ನು ನಾವು ಸಂಪೂರ್ಣವಾಗಿ ಬಳಸಿಕೊಳ್ಳಲಿದ್ದೇವೆ.

ಭಾರತಕ್ಕೆ ಇದರಿಂದ ಆಗುವ ಲಾಭಗಳೇನು?
ಈ ಅಣೆಕಟ್ಟು ಕೇವಲ ಪಾಕಿಸ್ತಾನಕ್ಕೆ ನೀರು ನಿಲ್ಲಿಸುವುದಷ್ಟೇ ಅಲ್ಲ, ಭಾರತದ ರೈತರಿಗೆ ಸಂಜೀವಿನಿಯಾಗಲಿದೆ. ಜಮ್ಮು-ಕಾಶ್ಮೀರದ ಬರಪೀಡಿತ ಕಥುವಾ ಮತ್ತು ಸಾಂಬಾ ಜಿಲ್ಲೆಗಳ ಸುಮಾರು 32,000 ಹೆಕ್ಟೇರ್ ಭೂಮಿಗೆ ಇದು ನೀರಾವರಿ ಒದಗಿಸಲಿದೆ. ಅಲ್ಲದೆ, ಪಂಜಾಬ್‌ನ 5,000 ಹೆಕ್ಟೇರ್ ಕೃಷಿ ಭೂಮಿಗೂ ಇದರಿಂದ ಲಾಭವಾಗಲಿದೆ. ಇದರಿಂದ ಈ ಭಾಗದ ಕೃಷಿ ಉತ್ಪಾದನೆ ಹೆಚ್ಚಾಗುವುದಲ್ಲದೆ, ರೈತರ ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಪಾಕಿಸ್ತಾನದ ಮೇಲೆ ಬೀರುವ ಪರಿಣಾಮ
ಪಾಕಿಸ್ತಾನವು ಕೃಷಿ ಪ್ರಧಾನ ದೇಶವಾಗಿದ್ದು, ಅದರ ಜಿಡಿಪಿಯಲ್ಲಿ ಶೇ. 25ರಷ್ಟು ಪಾಲನ್ನು ಕೃಷಿ ಹೊಂದಿದೆ. ಅದರಲ್ಲೂ ಅಲ್ಲಿನ ಶೇ. 80ರಷ್ಟು ನೀರಾವರಿ ವ್ಯವಸ್ಥೆಯು ಸಿಂಧೂ ನದಿ ವ್ಯವಸ್ಥೆಯನ್ನೇ ಅವಲಂಬಿಸಿದೆ. ಈಗ ರಾವಿ ನದಿಯ ನೀರು ಸ್ಥಗಿತಗೊಂಡರೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕೃಷಿ ಚಟುವಟಿಕೆಗಳು ಕುಂಠಿತಗೊಳ್ಳಲಿವೆ. ಲಾಹೋರ್ ಮತ್ತು ಮುಲ್ತಾನ್‌ನಂತಹ ಪ್ರಮುಖ ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಬಹುದು. ಈಗಾಗಲೇ ಹದಗೆಟ್ಟಿರುವ ಪಾಕಿಸ್ತಾನದ ಆರ್ಥಿಕತೆಗೆ ಇದು ಚೇತರಿಸಿಕೊಳ್ಳಲಾಗದ ಹೊಡೆತ ನೀಡಲಿದೆ.

ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತ 'ಶೂನ್ಯ ಸಹಿಷ್ಣುತೆ' ನೀತಿಯನ್ನು ಅನುಸರಿಸುತ್ತಿದೆ. ಪಹಲ್ಗಾಮ್ ದಾಳಿಯ ನಂತರ ಭಾರತವು ಸಿಂಧೂ ಜಲ ಒಪ್ಪಂದದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆರಂಭಿಸಿದೆ. ಚೆನಾಬ್ ಮತ್ತು ಝೀಲಂ ನದಿಗಳ ಮೇಲಿನ ವಿವಿಧ ಜಲವಿದ್ಯುತ್ ಯೋಜನೆಗಳನ್ನು ಭಾರತ ಚುರುಕುಗೊಳಿಸುತ್ತಿದೆ.

Latest News