Mar 30, 2026 Languages : ಕನ್ನಡ | English

ಇನ್ಮುಂದೆ ಪೇಪರ್ ಇಲ್ಲ, ಫೈಲ್ ಇಲ್ಲ - ಭಾರತದ ಮೊದಲ 'ಡಿಜಿಟಲ್' ಜನಗಣತಿಗೆ ಮುಹೂರ್ತ ಫಿಕ್ಸ್!!

ಭಾರತದಲ್ಲಿ ಜನಗಣತಿ (Census) ಎಂದರೆ ಅದು ಬರೀ ಅಂಕಿ-ಅಂಶಗಳ ಆಟವಲ್ಲ, ದೇಶದ ಭವಿಷ್ಯದ ಯೋಜನೆಗಳಿಗೆ ಅಡಿಪಾಯ. ಕೊನೆಯ ಬಾರಿ 2011ರಲ್ಲಿ ಜನಗಣತಿ ನಡೆದಿತ್ತು. ನಿಯಮದ ಪ್ರಕಾರ 2021ರಲ್ಲೇ ಇದು ನಡೆಯಬೇಕಿತ್ತಾದರೂ, ಕಾರಣಾಂತರಗಳಿಂದ ತಡವಾಗಿತ್ತು. ಈಗ ಫೈನಲಿ, 2027ರ ಜನಗಣತಿಗೆ ಮುಹೂರ್ತ ಫಿಕ್ಸ್ ಆಗಿದೆ. ವಿಶೇಷ ಅಂದ್ರೆ, ಈ ಬಾರಿ ಎಲ್ಲವೂ 'ಡಿಜಿಟಲ್' ಮಯ!

11,718 ಕೋಟಿ ರೂಪಾಯಿ ಯೋಜನೆ
11,718 ಕೋಟಿ ರೂಪಾಯಿ ಯೋಜನೆ

ಏನಿದು ಡಿಜಿಟಲ್ ಸೆನ್ಸಸ್? ಹಿಂದೆಲ್ಲಾ ಅಧಿಕಾರಿಗಳು ದೊಡ್ಡ ದೊಡ್ಡ ಫೈಲ್, ಪೇಪರ್ ಹಿಡಿದು ಮನೆಗೆ ಬರುತ್ತಿದ್ದರು. ಆದರೆ ಈ ಬಾರಿ ಹಾಗಿಲ್ಲ. 2027ರಲ್ಲಿ ನಡೆಯಲಿರುವುದು ಭಾರತದ 16ನೇ ಜನಗಣತಿ ಮತ್ತು ಇದು ಸಂಪೂರ್ಣವಾಗಿ ಡಿಜಿಟಲ್ ವೇದಿಕೆಯಲ್ಲಿ ನಡೆಯಲಿದೆ. ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಹೇಳುವಂತೆ, ಇದು ವಿಶ್ವದ ಅತಿದೊಡ್ಡ ಡಿಜಿಟಲ್ ಸರ್ವೆ ಎನಿಸಿಕೊಳ್ಳಲಿದೆ.

ಯಾವಾಗ ಶುರುವಾಗುತ್ತೆ? ಈ ಬೃಹತ್ ಕಾರ್ಯ ಎರಡು ಹಂತಗಳಲ್ಲಿ ನಡೆಯಲಿದೆ:

  1. ಮೊದಲ ಹಂತ (2026 ಏಪ್ರಿಲ್ 1 ರಿಂದ ಸೆಪ್ಟೆಂಬರ್ 30): ಇದರಲ್ಲಿ ಮನೆಗಳ ಪಟ್ಟಿ ಮಾಡಲಾಗುತ್ತದೆ. ನಿಮ್ಮ ಮನೆ ಹೇಗಿದೆ? ಏನೇನು ಸೌಲಭ್ಯಗಳಿವೆ? ಆಸ್ತಿಪಾಸ್ತಿ ವಿವರಗಳೇನು? ಎಂಬಿತ್ಯಾದಿ ಮಾಹಿತಿ ಕಲೆಹಾಕಲಾಗುತ್ತದೆ.

  2. ಎರಡನೇ ಹಂತ: ಇಲ್ಲಿ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಪಡೆಯಲಾಗುತ್ತದೆ. ಅಷ್ಟೇ ಅಲ್ಲ, ಈ ಬಾರಿ ಜಾತಿ ಮತ್ತು ಉಪಜಾತಿಗಳ ವಿವರವನ್ನೂ ಕೇಳಲಾಗುತ್ತದೆ.

ಗಣತಿ ಪ್ರಕ್ರಿಯೆ ಹೇಗೆ ನಡೆಯುತ್ತೆ? ಈ ಕೆಲಸಕ್ಕಾಗಿ ಬರೋಬ್ಬರಿ 30 ಲಕ್ಷಕ್ಕೂ ಅಧಿಕ ಅಧಿಕಾರಿಗಳು ಮತ್ತು ಗಣತಿದಾರರು ಫೀಲ್ಡ್‌ಗೆ ಇಳಿಯಲಿದ್ದಾರೆ. ಇವರೆಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಇರುತ್ತದೆ. ಗಣತಿಗಾಗಿ ವಿಶೇಷ 'ಮೊಬೈಲ್ ಆ್ಯಪ್' ಸಿದ್ಧಪಡಿಸಲಾಗಿದ್ದು, ಅಧಿಕಾರಿಗಳು ಅಲ್ಲೇ ಮಾಹಿತಿ ತುಂಬುತ್ತಾರೆ.

ನಿಮಗೆ ನೀವೇ ಮಾಹಿತಿ ತುಂಬಬಹುದು! ಈ ಬಾರಿಯ ಹೈಲೈಟ್ ಅಂದ್ರೆ 'ಸೆಲ್ಫ್ ಎನ್ಯೂಮರೇಷನ್' (Self-Enumeration). ಅಂದರೆ, ನೀವೇ ಆನ್‌ಲೈನ್ ಪೋರ್ಟಲ್ ಮೂಲಕ ನಿಮ್ಮ ಕುಟುಂಬದ ವಿವರಗಳನ್ನು ತುಂಬಬಹುದು. ಇದು ಕನ್ನಡ ಸೇರಿದಂತೆ 16 ಭಾಷೆಗಳಲ್ಲಿ ಲಭ್ಯವಿರುತ್ತದೆ. ಆನ್‌ಲೈನ್‌ನಲ್ಲಿ ಮಾಹಿತಿ ತುಂಬಿದ ತಕ್ಷಣ ನಿಮಗೊಂದು 'ಐಡಿ' ಸಿಗುತ್ತದೆ. ಗಣತಿದಾರರು ನಿಮ್ಮ ಮನೆಗೆ ಬಂದಾಗ ಆ ಐಡಿ ತೋರಿಸಿದರೆ ಸಾಕು, ನಿಮ್ಮ ಕೆಲಸ ಸುಲಭವಾಗುತ್ತದೆ.

ಕರ್ನಾಟಕದಲ್ಲಿ ಯಾವಾಗ? ನಮ್ಮ ಕರ್ನಾಟಕದ ಜನತೆಗೆ ಏಪ್ರಿಲ್ 1 ರಿಂದ ಮೇ 15ರವರೆಗೆ ಕಾಲಾವಕಾಶ ನೀಡಲಾಗಿದೆ.

  • ಏಪ್ರಿಲ್ 1 ರಿಂದ 15ರವರೆಗೆ ನೀವೇ ಆನ್‌ಲೈನ್‌ನಲ್ಲಿ ಮಾಹಿತಿ ತುಂಬಲು ಅವಕಾಶವಿರುತ್ತದೆ.

  • ಏಪ್ರಿಲ್ 16 ರಿಂದ ಮೇ 15ರವರೆಗೆ ಗಣತಿದಾರರು ಮನೆ ಮನೆಗೆ ಬಂದು ಮಾಹಿತಿ ದೃಢಪಡಿಸಿಕೊಳ್ಳುತ್ತಾರೆ.

ಸರ್ಕಾರದ ಬಜೆಟ್ ಎಷ್ಟು? ಈ ಇಡೀ ಯೋಜನೆಗಾಗಿ ಕೇಂದ್ರ ಸರ್ಕಾರ ಬರೋಬ್ಬರಿ 11,718.24 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿಯೊಂದು ಹಳ್ಳಿ, ಪಟ್ಟಣಗಳನ್ನೂ ಇದು ತಲುಪಲಿದೆ.

ಜನಗಣತಿ ಎಂಬುದು ದೇಶದ ಅಭಿವೃದ್ಧಿಗೆ ಬಹಳ ಮುಖ್ಯ. ಸರ್ಕಾರ ನೀಡುವ ಸೌಲಭ್ಯಗಳು ಸರಿಯಾದ ಜನರಿಗೆ ತಲುಪಬೇಕೆಂದರೆ ಈ ದತ್ತಾಂಶ ಸರಿಯಾಗಿರಬೇಕು. ಹಾಗಾಗಿ, ಅಧಿಕಾರಿಗಳು ಮನೆಗೆ ಬಂದಾಗ ಅಥವಾ ನೀವು ಆನ್‌ಲೈನ್‌ನಲ್ಲಿ ಮಾಹಿತಿ ತುಂಬುವಾಗ ಸರಿಯಾದ ವಿವರ ನೀಡಿ ಸಹಕರಿಸೋಣ.