ಮೆಕ್ಸಿಕೋದ ಅತ್ಯಂತ ಭಯಾನಕ ಡ್ರಗ್ ಮಾಫಿಯಾ ಡಾನ್, ಎಲ್ ಮೆಂಚೋ (Nemesio Oseguera Cervantes) ಹ*ತ್ಯೆಯ ನಂತರ ಇಡೀ ಮೆಕ್ಸಿಕೋ ದೇಶವೇ ಹಿಂಸಾಚಾರದ ಜ್ವಾಲೆಯಲ್ಲಿ ಬೆಂದು ಹೋಗುತ್ತಿದೆ. ಬಡತನದಲ್ಲಿ ಹುಟ್ಟಿ, ವಿಶ್ವದ ಅತ್ಯಂತ ಶ್ರೀಮಂತ ಮತ್ತು ಕ್ರೂರ ಅಪರಾಧ ಸಾಮ್ರಾಜ್ಯವನ್ನು ಕಟ್ಟಿದ ಈ ವ್ಯಕ್ತಿಯ ಅಂತ್ಯವು ಒಂದು ನಾಟಕೀಯ ತಿರುವನ್ನು ಪಡೆದುಕೊಂಡಿದೆ. ಮೆಕ್ಸಿಕನ್ ಸೈನ್ಯವು ನಡೆಸಿದ ಮಿಲಿಟರಿ ದಾಳಿಯಲ್ಲಿ ಅವನು ಸಾವನ್ನಪ್ಪಿದ ನಂತರ, ಅವನ ಬೆಂಬಲಿಗರು ಜಲಿಸ್ಕೋ ಸೇರಿದಂತೆ ಐದು ರಾಜ್ಯಗಳಲ್ಲಿ ಬೆಂಕಿ ಹಚ್ಚಿ ಆತಂಕ ಸೃಷ್ಟಿಸಿದ್ದಾರೆ.
ಬಡತನದಿಂದ ಭೂಗತ ಲೋಕದವರೆಗೆ
'ಎಲ್ ಮೆಂಚೋ' 1966 ರಲ್ಲಿ ಮೆಕ್ಸಿಕೋದ ಮೈಚೋವಾಕನ್ ಎಂಬ ಹಳ್ಳಿಯಲ್ಲಿ ಜನಿಸಿದನು. ಅವನ ಬಾಲ್ಯವು ತೀವ್ರ ಬಡತನದಲ್ಲಿ ಕಳೆಯಿತು. ಹೊಟ್ಟೆಪಾಡಿಗಾಗಿ ಅವನು ಚಿಕ್ಕ ವಯಸ್ಸಿನಲ್ಲೇ ಅಕ್ರಮವಾಗಿ ಅಮೆರಿಕಕ್ಕೆ ಹೋದನು. ಅಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಾಸಿಸುತ್ತಿದ್ದಾಗ, ಕಳ್ಳತನ ಮತ್ತು ಆಯುಧಗಳನ್ನು ಇಟ್ಟುಕೊಂಡಿದ್ದಕ್ಕಾಗಿ ಬಂಧನಕ್ಕೊಳಗಾಗಿ ಮೆಕ್ಸಿಕೋಗೆ ಮರಳಿ ಕಳುಹಿಸಲ್ಪಟ್ಟನು. ಆದರೆ ಅವನು ಸುಮ್ಮನಿರದೆ ಮತ್ತೆ ಅಮೆರಿಕಕ್ಕೆ ಹೋದನು. 1992 ರಲ್ಲಿ ಮಾದಕವಸ್ತು ಮಾರಾಟದ ಆರೋಪದ ಮೇಲೆ ಅಮೆರಿಕದ ಜೈಲಿನಲ್ಲಿ ಮೂರು ವರ್ಷ ಕಳೆದನು. ಜೈಲಿನಿಂದ ಬಿಡುಗಡೆಯಾದ ನಂತರ ಅವನನ್ನು ಮತ್ತೆ ಮೆಕ್ಸಿಕೋಗೆ ಕಳುಹಿಸಲಾಯಿತು.
ಮೆಕ್ಸಿಕೋಗೆ ಮರಳಿದ ನಂತರ 'ಎಲ್ ಮೆಂಚೋ' ಅಚ್ಚರಿಯ ರೀತಿಯಲ್ಲಿ ಸ್ಥಳೀಯ ಪೋಲೀಸ್ ಪಡೆಗೆ ಸೇರಿದನು. ಪೋಲೀಸ್ ಕೆಲಸದ ಜೊತೆಗೆ ಹಗಲಿನಲ್ಲಿ ಆವಕಾಡೊ (Avocado) ಹಣ್ಣಿನ ಕೃಷಿ ಮಾಡುತ್ತಿದ್ದನು. ಆದರೆ ಅವನ ಒಳಗಿದ್ದ ಅಪರಾಧ ಮನೋಭಾವವು ಅವನನ್ನು 'ಮಿಲೇನಿಯೊ ಕಾರ್ಟೆಲ್' ಎಂಬ ಗ್ಯಾಂಗ್ ಸೇರುವಂತೆ ಮಾಡಿತು. ಅಲ್ಲಿ ಡ್ರಗ್ ಲಾರ್ಡ್ 'ನಾಚೊ ಕೊರೊನೆಲ್' ಅಡಿಯಲ್ಲಿ ಕೆಲಸ ಮಾಡಿದನು. 2010 ರಲ್ಲಿ ಕೊರೊನೆಲ್ ಕೊ*ಲೆಯಾದಾಗ, ಎಲ್ ಮೆಂಚೋ ಇದನ್ನು ತನ್ನ ಬೆಳವಣಿಗೆಗೆ ಅವಕಾಶವಾಗಿ ಬಳಸಿಕೊಂಡನು. ಅವನು ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ (CJNG) ಎಂಬ ಹೊಸ ಗುಂಪನ್ನು ಕಟ್ಟಿದನು.
ಕ್ರೌರ್ಯದ ಸಾಮ್ರಾಜ್ಯ ಮತ್ತು ಅಂತ್ಯ
ಅಲ್ಪಕಾಲದಲ್ಲೇ ಎಲ್ ಮೆಂಚೋ CJNG ಅನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಭಯಾನಕ ಕ್ರಿಮಿನಲ್ ಗುಂಪಾಗಿ ಬೆಳೆಸಿದನು. ಇವನ ಕಾರ್ಟೆಲ್ ಮೆಕ್ಸಿಕೋ ಮಾತ್ರವಲ್ಲದೆ ಅಮೆರಿಕದ ಎಲ್ಲಾ 50 ರಾಜ್ಯಗಳಲ್ಲಿ ಹರಡಿತು. ಫೆಂಟಾನಿಲ್, ಕೋಕೇನ್ ಮತ್ತು ಹೆರಾಯಿನ್ ಅಂತಹ ಮಾದಕವಸ್ತುಗಳನ್ನು ಸಾಗಿಸುವ ಮೂಲಕ ಕೋಟ್ಯಂತರ ಡಾಲರ್ ಸಂಪಾದಿಸಿದನು. ಇವನು ಯುದ್ಧತಂತ್ರದಲ್ಲಿ ಡ್ರೋನ್ ಬಳಸಿ ಬಾಂಬ್ ಹಾಕುವುದು ಮತ್ತು ಸೈನಿಕರ ಮೇಲೆ ದಾಳಿ ಮಾಡುವುದರಲ್ಲಿ ನಿಪುಣನಾಗಿದ್ದನು. ಇವನನ್ನು ಹಿಡಿಯಲು ಅಮೆರಿಕ ಸರ್ಕಾರ 15 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು. ಆದರೆ ಇವನು ಬಹಳ ರಹಸ್ಯವಾಗಿ ತಲೆಮರೆಸಿಕೊಂಡಿದ್ದರಿಂದ ಇವನ ಇತ್ತೀಚಿನ ಫೋಟೋಗಳು ಕೂಡ ಯಾರಿಗೂ ಸಿಕ್ಕಿರಲಿಲ್ಲ.
ಫೆಬ್ರವರಿ 22, 2026 ರಂದು, ಮೆಕ್ಸಿಕನ್ ಸೈನ್ಯವು ಜಲಿಸ್ಕೊದ ತಪಲ್ಪಾದಲ್ಲಿ ಎಲ್ ಮೆಂಚೋ ಇರುವಿಕೆಯನ್ನು ಪತ್ತೆಹಚ್ಚಿತು. ಅಲ್ಲಿ ಭೀಕರ ಗುಂಡಿನ ಚಕಮಕಿ ನಡೆಯಿತು. ಈ ಕಾಳಗದಲ್ಲಿ ಹಲವು ಕಾರ್ಟೆಲ್ ಸದಸ್ಯರು ಸಾವನ್ನಪ್ಪಿದರು ಮತ್ತು ಎಲ್ ಮೆಂಚೋ ಗಾಯಗೊಂಡ ಸ್ಥಿತಿಯಲ್ಲಿ ಸೆರೆಸಿಕ್ಕನು. ಆದರೆ ಮೆಕ್ಸಿಕೋ ಸಿಟಿಗೆ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ಯುವಾಗ ದಾರಿಮಧ್ಯದಲ್ಲೇ ಇವನು ಮೃತಪಟ್ಟನು. ಎಲ್ ಮೆಂಚೋ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅವನ ಬೆಂಬಲಿಗರು ರಸ್ತೆಗಳಲ್ಲಿ ಬಸ್‌ಗಳಿಗೆ ಬೆಂಕಿ ಹಚ್ಚಿದರು, ವಿಮಾನ ನಿಲ್ದಾಣಗಳ ಮೇಲೆ ದಾಳಿ ಮಾಡಿದರು ಮತ್ತು ಜನರಲ್ಲಿ ಭಯ ಹುಟ್ಟಿಸಿದರು. ಬಡ ಕೃಷಿಕನಾಗಿ ಜೀವನ ಆರಂಭಿಸಿ, ಪೋಲೀಸ್ ಆಗಿ, ನಂತರ ವಿಶ್ವದ ಮೋಸ್ಟ್ ವಾಂಟೆಡ್ ಅಪರಾಧಿಯಾಗಿ ಬೆಳೆದ ಮೆಂಚೋನ ಅಧ್ಯಾಯ ಈಗ ಅಂತ್ಯವಾಗಿದೆ.