ಹಂಪಿ ಮೂಲದ ಯುವ ನಿರ್ದೇಶಕ ಹಾಗೂ ನಟ ಮುರಳೀಧರ್ ಗಿಡ್ಡಜಾಲ ಅವರ ನಿಧನ ಸುದ್ದಿ ಕಲಾ ಲೋಕವನ್ನು ಕಂಬನಿಗೊಳಿಸಿದೆ. ತಮ್ಮದೇ ನೈಜ ಜೀವನದ ಕಥೆಯನ್ನು ಆಧರಿಸಿ “ಇಂಡಿಯಾ ವೆಡ್ಸ್ ಲಂಡನ್” ಎಂಬ ಚಿತ್ರವನ್ನು ನಿರ್ಮಿಸಿದ್ದ ಈ ಪ್ರತಿಭಾವಂತ ಯುವಕ, ಚಿತ್ರ ಬಿಡುಗಡೆಯ ಮುನ್ನವೇ ಅಗಲಿರುವುದು ಅಭಿಮಾನಿಗಳಿಗೆ ಆಘಾತ ತಂದಿದೆ.
ಕನಸುಗಳೊಂದಿಗೆ ಬದುಕಿದ ಯುವ ಪ್ರತಿಭೆ ಇದು. ಹೌದು ಮುರಳೀಧರ್ ಅವರು ತಮ್ಮ ಜೀವನವನ್ನು ಕಲೆಗೂ, ಸಿನೆಮಾಕ್ಕೂ ಅರ್ಪಿಸಿದ್ದರು. ಲಂಡನ್ ಮೂಲದ ಚಾರ್ಲೋಟಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಅವರು, ತಮ್ಮ ಪ್ರೇಮಕಥೆಯನ್ನು “ಇಂಡಿಯಾ ವೆಡ್ಸ್ ಲಂಡನ್” ಎಂಬ ಚಿತ್ರವಾಗಿ ರೂಪಿಸಿದ್ದರು. ಈ ಸಿನಿಮಾ ಮೂಲಕ ತಮ್ಮ ಬದುಕಿನ ನಿಜವಾದ ಅನುಭವವನ್ನು ಪ್ರೇಕ್ಷಕರಿಗೆ ತಲುಪಿಸಲು ಬಯಸಿದ ಅವರು, ಇತ್ತೀಚೆಗೆ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ವಿಧಿಯ ಕ್ರೂರಿ ಆಟ, ಚಿತ್ರ ಬಿಡುಗಡೆಯ ಮುನ್ನವೇ ಅವರನ್ನು ಕಳೆದುಕೊಂಡಿದೆ.
ಅನಾರೋಗ್ಯದ ಹೋರಾಟ ಸಹ ನಡೆದಿತ್ತು ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮುರಳೀಧರ್, ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಅವರು ನಿಧನರಾದರು. ಕೇವಲ 30ರ ಹರೆಯದ ಈ ಯುವ ಪ್ರತಿಭೆಯ ಅಗಲಿಕೆಯಿಂದ ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳು ದುಃಖದಲ್ಲಿ ಮುಳುಗಿದ್ದಾರೆ.
ಮುರಳೀಧರ್ ತಮ್ಮ ನೈಜ ಜೀವನದ ಕಥೆಯನ್ನು ಚಿತ್ರವಾಗಿ ರೂಪಿಸಿದಷ್ಟೇ ಅಲ್ಲ, ತಮ್ಮ ಪತ್ನಿ ಚಾರ್ಲೋಟಿ ನಿರ್ದೇಶಿಸಿದ್ದ “ಡ್ರೀಮ್ ಸ್ಪೇಸ್” ಕಿರುಚಿತ್ರವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿತ್ತು. ಈ ದಂಪತಿಯ ಕಲಾತ್ಮಕ ಪ್ರಯತ್ನಗಳು ಸ್ಥಳೀಯರ ಮನ ಗೆದ್ದಿದ್ದವು. ಈಗ ಮುರಳೀಧರ್ ಅಗಲಿರುವುದರಿಂದ, ಚಾರ್ಲೋಟಿ ತಮ್ಮ ಜೀವನ ಸಂಗಾತಿಯನ್ನೇ ಕಳೆದುಕೊಂಡ ನೋವಿನಲ್ಲಿ ಮುಳುಗಿದ್ದಾರೆ.
“ಇಂಡಿಯಾ ವೆಡ್ಸ್ ಲಂಡನ್” ಚಿತ್ರದ ಚಿತ್ರೀಕರಣ ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗೂ ಹಂಪಿ ಭಾಗದಲ್ಲಿ ನಡೆದಿತ್ತು. ಸ್ಥಳೀಯರೊಂದಿಗೆ ಬೆರೆತು, ಅವರ ಹೃದಯ ಗೆದ್ದಿದ್ದ ಮುರಳೀಧರ್, ತಮ್ಮ ನೆಲದ ಸಂಸ್ಕೃತಿ ಮತ್ತು ಸೌಂದರ್ಯವನ್ನು ಚಿತ್ರದಲ್ಲಿ ಪ್ರತಿಬಿಂಬಿಸಲು ಪ್ರಯತ್ನಿಸಿದ್ದರು. ಅವರ ಅಗಲಿಕೆಯಿಂದ ಹಂಪಿ ಹಾಗೂ ಗಂಗಾವತಿ ಭಾಗದ ಜನರು ತಮ್ಮದೇ ಒಬ್ಬ ಪ್ರತಿಭಾವಂತ ಮಗನನ್ನು ಕಳೆದುಕೊಂಡ ದುಃಖದಲ್ಲಿ ಮುಳುಗಿದ್ದಾರೆ. ಹೌದು ಮುರಳೀಧರ್ ಅವರ ಅಂತಿಮ ಸಂಸ್ಕಾರ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆ ಬಳಿ ನಡೆಯಲಿದೆ. ಸ್ಥಳೀಯರು, ಅಭಿಮಾನಿಗಳು ಹಾಗೂ ಕಲಾ ಲೋಕದವರು ಅವರ ಅಂತಿಮ ದರ್ಶನಕ್ಕಾಗಿ ಆಗಮಿಸುವ ನಿರೀಕ್ಷೆಯಿದೆ.
ನಟ ನಿರ್ದೇಶಕ ಮುರಳೀಧರ್ ಅವರ ಬದುಕು, ಪ್ರೀತಿ ಮತ್ತು ಕಲೆ, ಜೀವನ ಅಸ್ಥಿರ, ಆದರೆ ಕನಸುಗಳನ್ನು ಬದುಕಿಸುವ ಶಕ್ತಿ ಮಾತ್ರ ಶಾಶ್ವತ. ಅವರ ಅಗಲಿಕೆ ಕಲಾ ಲೋಕಕ್ಕೆ ದೊಡ್ಡ ನಷ್ಟವಾದರೂ, ಅವರ ಕೃತಿಗಳು ಮತ್ತು ನೆನಪುಗಳು ಸದಾ ಜೀವಂತವಾಗಿರುತ್ತವೆ.