ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದೇ ಖ್ಯಾತಿ ಪಡೆದಿರುವ ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ಭಕ್ತರ ಕಷ್ಟಗಳಿಗೆ ತಕ್ಷಣವೇ ಸ್ಪಂದಿಸುವ ದಯಾಮಯಿಗಳು. ರಾಯರ ಆರಾಧನೆಯು ಮನುಷ್ಯನ ಜೀವನದಲ್ಲಿ ನೆಮ್ಮದಿ, ಶಾಂತಿ ಮತ್ತು ಸುಖವನ್ನು ತರುತ್ತದೆ ಎಂಬ ಬಲವಾದ ನಂಬಿಕೆ ಇದೆ. ವಿಶೇಷವಾಗಿ ಗುರುವಾರದಂದು ರಾಯರನ್ನು ಭಕ್ತಿಯಿಂದ ಪೂಜಿಸುವುದು ಅತ್ಯಂತ ಶ್ರೇಷ್ಠ. ಈ ದಿನ ಭಕ್ತರು ರಾಯರ ಮಠಗಳಿಗೆ ಭೇಟಿ ನೀಡಿ ತುಪ್ಪದ ದೀಪ ಹಚ್ಚಿ, ಪ್ರದಕ್ಷಿಣಿ ನಮಸ್ಕಾರಗಳನ್ನು ಹಾಕುವ ಮೂಲಕ ಧನ್ಯತೆ ಅನುಭವಿಸುತ್ತಾರೆ. ಪೂಜೆಯ ಸಂದರ್ಭದಲ್ಲಿ ರಾಯರಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವುದರಿಂದ ಅವರ ಅನುಗ್ರಹ ಶೀಘ್ರವಾಗಿ ದೊರೆಯುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.
ರಾಯರ ಪೂಜೆಯಲ್ಲಿ ಹೂವುಗಳ ಮಹತ್ವ
ಪೂಜೆ ಎಂದರೆ ಅರ್ಪಣೆ. ಈ ಅರ್ಪಣೆಯಲ್ಲಿ ಹೂವುಗಳಿಗೆ ವಿಶೇಷ ಸ್ಥಾನವಿದೆ. ಪ್ರತಿಯೊಬ್ಬ ದೇವರಿಗೂ ಒಂದೊಂದು ಬಣ್ಣದ ಅಥವಾ ಸುಗಂಧದ ಹೂವುಗಳು ಪ್ರಿಯವಾಗಿರುತ್ತವೆ. ಶ್ರೀ ರಾಘವೇಂದ್ರ ಸ್ವಾಮಿಗಳು ಸನ್ಯಾಸಿ ಶ್ರೇಷ್ಠರಾದ್ದರಿಂದ ಅವರು ಸರಳತೆ ಮತ್ತು ಸಾತ್ವಿಕತೆಯನ್ನು ಇಷ್ಟಪಡುತ್ತಾರೆ. ರಾಯರ ಪೂಜೆಯಲ್ಲಿ ಹೆಚ್ಚಾಗಿ ಬಿಳಿ ಮತ್ತು ಹಳದಿ ಬಣ್ಣದ ಹೂವುಗಳನ್ನು ಬಳಸಲಾಗುತ್ತದೆ. ಈ ಬಣ್ಣಗಳು ಜ್ಞಾನ ಮತ್ತು ಭಕ್ತಿಯ ಸಂಕೇತಗಳಾಗಿವೆ.
ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಪ್ರಿಯವಾದ ಹೂವುಗಳು
ರಾಯರ ಪೂಜೆಯನ್ನು ಮಾಡುವಾಗ ಈ ಕೆಳಗಿನ ಹೂವುಗಳನ್ನು ಬಳಸಲು ಪ್ರಯತ್ನಿಸಿ:
ತುಳಸಿ ದಳ: ರಾಯರು ಶ್ರೀಹರಿಯ ಪರಮ ಭಕ್ತರು. ಆದ್ದರಿಂದ ವಿಷ್ಣುವಿಗೆ ಪ್ರಿಯವಾದ ತುಳಸಿ ಎಂದರೆ ರಾಯರಿಗೂ ಅಪಾರ ಪ್ರೀತಿ. ತುಳಸಿ ಮಾಲೆಯನ್ನು ರಾಯರಿಗೆ ಅರ್ಪಿಸುವುದು ಅತ್ಯಂತ ಪುಣ್ಯದಾಯಕ.
ಮಲ್ಲಿಗೆ ಹೂವು: ಸುಗಂಧಭರಿತ ತಾಜಾ ಬಿಳಿ ಮಲ್ಲಿಗೆ ಹೂವುಗಳು ರಾಯರ ಪೂಜೆಯಲ್ಲಿ ಪ್ರಮುಖವಾಗಿ ಬಳಕೆಯಾಗುತ್ತವೆ. ಇವು ಮನಸ್ಸಿಗೆ ಶಾಂತಿ ನೀಡುತ್ತವೆ.
ಹಳದಿ ಸೇವಂತಿಗೆ: ಹಳದಿ ಬಣ್ಣ ರಾಯರಿಗೆ ಅತ್ಯಂತ ಪ್ರಿಯ. ಸೇವಂತಿಗೆ ಹೂವುಗಳ ಹಾರವನ್ನು ರಾಯರ ವಿಗ್ರಹಕ್ಕೆ ಅಥವಾ ಫೋಟೋಗೆ ಹಾಕುವುದರಿಂದ ಪೂಜೆಯ ಕಳೆ ಹೆಚ್ಚುತ್ತದೆ.
ಹಳದಿ ಗಂಟೆ ಹೂವು: ಹಳದಿ ಬಣ್ಣದ ಗಂಟೆ ಹೂವುಗಳನ್ನು ಸಹ ಪೂಜೆಯಲ್ಲಿ ಸಮರ್ಪಿಸಬಹುದು.
ಬಾಳೆ ಹಣ್ಣು ಮತ್ತು ಬಾಳೆ ಕಂಬ: ರಾಯರ ಆರಾಧನೆಯಲ್ಲಿ ಬಾಳೆ ಹಣ್ಣು ಕಡ್ಡಾಯವಾಗಿ ಬೇಕು. ಮಠಗಳಲ್ಲಿ ಅಥವಾ ಮನೆಯಲ್ಲಿ ಪೂಜಿಸುವಾಗ ಫೋಟೋದ ಅಕ್ಕಪಕ್ಕದಲ್ಲಿ ಬಾಳೆ ಕಂಬಗಳನ್ನು ಕಟ್ಟುವುದು ಪದ್ಧತಿ.
ಪೂಜೆಯ ನಂತರ ಹೂವುಗಳ ವಿಲೇವಾರಿ ಹೇಗೆ?
ಪೂಜೆಯಲ್ಲಿ ಬಳಸಿದ ಹೂವುಗಳನ್ನು ನಿರ್ಲಕ್ಷ್ಯ ಮಾಡಬಾರದು. ರಾಯರ ಪಾದಗಳಿಗೆ ಅರ್ಪಿಸಿದ ಹೂವುಗಳನ್ನು ಭಕ್ತರಿಗೆ ಪ್ರಸಾದವಾಗಿ ಹಂಚಬಹುದು ಅಥವಾ ನೀವೇ ಪ್ರಸಾದವೆಂದು ತಲೆಯಲ್ಲಿ ಧರಿಸಬಹುದು. ಇನ್ನುಳಿದ ನಿರ್ಮಾಲ್ಯವನ್ನು (ಹಳೆಯ ಹೂವುಗಳನ್ನು) ಹರಿಯುವ ನೀರಿನಲ್ಲಿ ತೇಲಿಬಿಡಬಹುದು ಅಥವಾ ಗಿಡಗಳ ಬುಡಕ್ಕೆ ಹಾಕಿ ಗೊಬ್ಬರವಾಗಿ ಬಳಸಬಹುದು. ಇವುಗಳನ್ನು ಹಸುಗಳಿಗೆ ತಿನ್ನಲು ನೀಡುವುದು ಕೂಡ ಪುಣ್ಯದ ಕೆಲಸವಾಗಿದೆ.
ಶ್ರೀ ರಾಘವೇಂದ್ರ ಸ್ವಾಮಿ ಗಾಯತ್ರಿ ಮಂತ್ರಗಳು
ಪೂಜೆಯ ಸಮಯದಲ್ಲಿ ರಾಯರ ಜಪ ಮಾಡುವುದು ಮನಸ್ಸನ್ನು ಏಕಾಗ್ರತೆಯಲ್ಲಿಡಲು ಸಹಾಯ ಮಾಡುತ್ತದೆ. ರಾಯರ ಆಶೀರ್ವಾದ ಪಡೆಯಲು ಈ ಮಂತ್ರಗಳನ್ನು ಪಠಿಸಿ:
- ''ಓಂ ವೆಂಕಟನಾಥಯ ವಿದ್ಮಹೇ ಸಚ್ಚಿದಾನಂದಾಯ ಧೀಮಹೀ ತನ್ನೋ ರಾಘವೇಂದ್ರಃ ಪ್ರಚೋದಯಾತ್''
- ''ಓಂ ವೆಂಕಟನಾಥಯ ವಿದ್ಮಹೇ ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್''
- ''ಓಂ ಪ್ರಹ್ಲಾದಾಯ ವಿದ್ಮಹೇ ವ್ಯಾಸರಾಜಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್''
ಶುದ್ಧ ಮನಸ್ಸಿನಿಂದ, ಭಕ್ತಿಯಿಂದ ರಾಯರನ್ನು ಆರಾಧಿಸಿದರೆ ಸಾಕು, ಅವರು ನಮ್ಮ ಬೆನ್ನಿಗೆ ಸದಾ ಇರುತ್ತಾರೆ. ಗುರುವಾರದಂದು ಮಡಿಯಿಂದ ರಾಯರನ್ನು ಪೂಜಿಸಿ, ಹಳದಿ ಹೂವುಗಳನ್ನು ಅರ್ಪಿಸಿ, ಮೇಲೆ ಹೇಳಿದ ಮಂತ್ರಗಳನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿನ ಕಷ್ಟಗಳು ದೂರವಾಗಿ ಅಭ್ಯುದಯ ಉಂಟಾಗುತ್ತದೆ. 'ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ' ಎಂಬ ಸ್ತೋತ್ರದೊಂದಿಗೆ ನಿಮ್ಮ ದಿನವನ್ನು ಶುಭವಾಗಿಸಿಕೊಳ್ಳಿ.