ಕರ್ನಾಟಕದ ಕರಾವಳಿ ಭಾಗದಲ್ಲಿ ನೀರ್ ದೋಸೆ ತುಂಬಾ ಫೇಮಸ್. ಈಗ ಕರ್ನಾಟಕ ಮಾತ್ರವಲ್ಲದೆ ಬೇರೆ ಕಡೆಗಳಲ್ಲೂ ಜನರು ಇದನ್ನು ಇಷ್ಟಪಟ್ಟು ಮಾಡುತ್ತಾರೆ. ತೆಳ್ಳಗೆ, ಮೃದುವಾಗಿ ಇರುವ ನೀರ್ ದೋಸೆಯನ್ನು ತೆಂಗಿನಕಾಯಿ ಚಟ್ನಿ, ಸಾಂಬಾರ್, ಕೋಳಿ ಸಾರು ಸೇರಿದಂತೆ ಹಲವು ಬಗೆಯ ಸೈಡ್ ಡಿಶ್‌ಗಳ ಜೊತೆ ತಿನ್ನಬಹುದು.
ಮನೆಯಲ್ಲೇ ನೀರ್ ದೋಸೆ ಮಾಡುವುದು ಕಷ್ಟದ ಕೆಲಸವಲ್ಲ. ಆದರೆ ಹಿಟ್ಟು ಸರಿಯಾಗಿ ಬರದಿದ್ದರೆ ದೋಸೆ ದಪ್ಪವಾಗಬಹುದು, ತವಾದ ಮೇಲೆ ಹರಿಯದೇ ಇರಬಹುದು ಅಥವಾ ತೆಗೆದುಕೊಳ್ಳುವಾಗ ಅಂಟಿಕೊಳ್ಳಬಹುದು. ಅಕ್ಕಿ ನೆನೆಸುವ ಸಮಯದಿಂದ ಹಿಡಿದು ತವಾದ ಮೇಲೆ ಹಿಟ್ಟು ಹಾಕುವ ವಿಧಾನವರೆಗೆ ಕೆಲವು ವಿಷಯಗಳನ್ನು ಸರಿಯಾಗಿ ಮಾಡಿದರೆ ನೀರ್ ದೋಸೆ ಚೆನ್ನಾಗಿ ಬರುತ್ತದೆ.
ಅಕ್ಕಿಯನ್ನು ಸಾಕಷ್ಟು ಹೊತ್ತು ನೆನೆಸಿಡಿ
ನೀರ್ ದೋಸೆ ಮಾಡುವಾಗ ಮೊದಲ ಕೆಲಸ ಅಕ್ಕಿಯನ್ನು ನೆನೆಸುವುದು. ಅಕ್ಕಿ ಸರಿಯಾಗಿ ನೆನೆಯದಿದ್ದರೆ ರುಬ್ಬುವಾಗ ಹಿಟ್ಟು ನುಣ್ಣಗೆ ಆಗುವುದಿಲ್ಲ.
ಅಕ್ಕಿಯನ್ನು ಕನಿಷ್ಠ 4ರಿಂದ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಸಮಯವಿದ್ದರೆ ಇನ್ನೂ ಸ್ವಲ್ಪ ಹೊತ್ತು ನೆನೆಸಿಟ್ಟುಕೊಳ್ಳಬಹುದು. ಚೆನ್ನಾಗಿ ನೆನೆದ ಅಕ್ಕಿಯನ್ನು ರುಬ್ಬಿದಾಗ ಹಿಟ್ಟು ಮೃದುವಾಗಿ ಬರುತ್ತದೆ.
ಅಕ್ಕಿ ರುಬ್ಬುವಾಗ ನೀರನ್ನು ಒಮ್ಮೆಲೆ ಹೆಚ್ಚು ಹಾಕಬೇಡಿ. ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತಾ ರುಬ್ಬಿ. ಅಕ್ಕಿ ನುಣ್ಣಗೆ ರುಬ್ಬಿದ ನಂತರ ಬೇಕಾದಷ್ಟು ನೀರು ಸೇರಿಸಿ ಹಿಟ್ಟನ್ನು ತೆಳ್ಳಗೆ ಮಾಡಬಹುದು.
ಹಿಟ್ಟು ದಪ್ಪವಾಗಿದ್ದರೆ ನೀರ್ ದೋಸೆ ತೆಳ್ಳಗೆ ಬರಲು ಕಷ್ಟ. ಅದೇ ರೀತಿ ನೀರು ತುಂಬಾ ಹೆಚ್ಚಾದರೆ ತವಾದ ಮೇಲೆ ಹಿಟ್ಟು ಸರಿಯಾಗಿ ನಿಲ್ಲುವುದಿಲ್ಲ. ಆದ್ದರಿಂದ ನೀರು ಸೇರಿಸುವಾಗ ಸ್ವಲ್ಪ ಗಮನ ಕೊಡಿ.
ನೀರ್ ದೋಸೆಗೆ ಸಣ್ಣ ಕಾಳಿನ ಅಕ್ಕಿ ಬಳಸಿ
ಅಕ್ಕಿಯ ಆಯ್ಕೆಯೂ ನೀರ್ ದೋಸೆಯ ಹದಕ್ಕೆ ಕಾರಣವಾಗುತ್ತದೆ. ಸಣ್ಣ ಕಾಳಿನ ಅಕ್ಕಿ ಬಳಸಿದರೆ ಹಿಟ್ಟು ಚೆನ್ನಾಗಿ ನುಣ್ಣಗೆ ಬರುತ್ತದೆ. ಸೋನಾ ಮಸೂರಿ ರೀತಿಯ ಸಣ್ಣ ಕಾಳಿನ ಅಕ್ಕಿಯನ್ನು ಬಳಸಬಹುದು.
ಅಕ್ಕಿ ರುಬ್ಬಿದ ನಂತರ ಹಿಟ್ಟಿನಲ್ಲಿ ಗಂಟುಗಳಿವೆಯೇ ಎಂದು ಒಮ್ಮೆ ನೋಡಿ. ಗಂಟುಗಳು ಇದ್ದರೆ ತವಾದ ಮೇಲೆ ಹಿಟ್ಟು ಹಾಕುವಾಗ ಸಮಸ್ಯೆಯಾಗಬಹುದು. ಬೇಕಿದ್ದರೆ ಹಿಟ್ಟನ್ನು ಜರಡಿಯಿಂದ ಸೋಸಿ ತೆಗೆದುಕೊಳ್ಳಬಹುದು.
ನೀರ್ ದೋಸೆಯ ಹಿಟ್ಟು ಸಾಮಾನ್ಯ ದೋಸೆಯ ಹಿಟ್ಟಿನಂತೆ ಗಟ್ಟಿಯಾಗಿರಬಾರದು. ಹಾಲಿನಂತೆ ತೆಳ್ಳಗೆ ಇರಬೇಕು. ರುಬ್ಬಿದ ಹಿಟ್ಟಿಗೆ ನೀರನ್ನು ನಿಧಾನವಾಗಿ ಸೇರಿಸುತ್ತಾ ಸರಿಯಾದ ಹದಕ್ಕೆ ತರಬಹುದು.
ಒಂದು ದೋಸೆ ಮಾಡಿದ ನಂತರ ಹಿಟ್ಟು ಸ್ವಲ್ಪ ಕೆಳಗೆ ಕುಳಿತಿದ್ದರೆ ಮತ್ತೊಮ್ಮೆ ಚೆನ್ನಾಗಿ ಕಲಸಿ. ಪ್ರತೀ ದೋಸೆ ಮಾಡುವ ಮೊದಲು ಹಿಟ್ಟನ್ನು ಒಮ್ಮೆ ಕಲಿಸುವುದರಿಂದ ಅಕ್ಕಿಯ ಹಿಟ್ಟು ಮತ್ತು ನೀರು ಬೇರೆಬೇರೆ ಆಗುವುದಿಲ್ಲ.
ಚಮಚದಿಂದ ಹಿಟ್ಟನ್ನು ಹರಡಬೇಡಿ
ಸಾಮಾನ್ಯ ದೋಸೆ ಮಾಡುವಾಗ ಚಮಚದಿಂದ ಹಿಟ್ಟನ್ನು ಮಧ್ಯದಿಂದ ಹೊರಗೆ ಹರಡುತ್ತೇವೆ. ನೀರ್ ದೋಸೆಗೆ ಈ ರೀತಿ ಮಾಡಬಾರದು.
ಮೊದಲು ತವಾವನ್ನು ಚೆನ್ನಾಗಿ ಬಿಸಿ ಮಾಡಿ. ನಂತರ ಹಿಟ್ಟನ್ನು ತೆಗೆದುಕೊಂಡು ತವಾದ ಅಂಚಿನಿಂದ ಒಳಭಾಗದ ಕಡೆಗೆ ವೃತ್ತಾಕಾರವಾಗಿ ಸುರಿಯಿರಿ. ಹಿಟ್ಟು ತಾನಾಗಿಯೇ ತವಾದ ಮೇಲೆ ಹರಡಿಕೊಳ್ಳುತ್ತದೆ.
ಚಮಚದಿಂದ ಹಿಟ್ಟನ್ನು ಒತ್ತಿ ಹರಡಲು ಹೋದರೆ ತೆಳ್ಳಗಿನ ಹಿಟ್ಟು ಸರಿಯಾಗಿ ಹರಡುವುದಿಲ್ಲ. ದೋಸೆ ಹರಿದುಹೋಗುವ ಸಾಧ್ಯತೆಯೂ ಇರುತ್ತದೆ.
ಮೊದಲ ದೋಸೆ ಸರಿಯಾಗಿ ಬರದಿದ್ದರೆ ತಕ್ಷಣ ಹಿಟ್ಟು ಬದಲಿಸುವ ಅಗತ್ಯವಿಲ್ಲ. ತವಾ ಹೆಚ್ಚು ಬಿಸಿಯಾಗಿದೆಯೇ, ಹಿಟ್ಟು ದಪ್ಪವಾಗಿದೆಯೇ ಎಂದು ನೋಡಿ. ಅದಕ್ಕೆ ತಕ್ಕಂತೆ ಮುಂದಿನ ದೋಸೆಗೆ ಸ್ವಲ್ಪ ನೀರು ಸೇರಿಸಬಹುದು ಅಥವಾ ತವಾದ ಬಿಸಿಯನ್ನು ಕಡಿಮೆ ಮಾಡಬಹುದು.
ಮುಚ್ಚಳ ಹಾಕಿ ಬೇಯಿಸಿದರೆ ದೋಸೆ ಮೃದುವಾಗುತ್ತದೆ
ತವಾದ ಮೇಲೆ ಹಿಟ್ಟು ಸುರಿಸಿದ ನಂತರ ತಕ್ಷಣ ಮುಚ್ಚಳ ಹಾಕಿ. ಒಳಗೆ ಸೆರೆಯಾಗುವ ಹಬೆಯಿಂದ ದೋಸೆ ಚೆನ್ನಾಗಿ ಬೇಯುತ್ತದೆ. ನೀರ್ ದೋಸೆ ಮೃದುವಾಗಿ ಉಳಿಯಲು ಇದು ಸಹಾಯ ಮಾಡುತ್ತದೆ.
ನೀರ್ ದೋಸೆಯನ್ನು ಸಾಮಾನ್ಯ ದೋಸೆಯಂತೆ ಎರಡೂ ಬದಿಗೆ ತಿರುಗಿಸಿ ಬೇಯಿಸುವ ಅಗತ್ಯವಿಲ್ಲ. ಒಂದು ಬದಿಯೇ ಚೆನ್ನಾಗಿ ಬೆಂದರೆ ಸಾಕು. ದೋಸೆಯ ಅಂಚು ತವಾದಿಂದ ಬಿಡಲು ಆರಂಭಿಸಿದಾಗ ನಿಧಾನವಾಗಿ ತೆಗೆದುಕೊಳ್ಳಬಹುದು.
ದೋಸೆಯನ್ನು ತುಂಬಾ ಹೊತ್ತು ತವಾದ ಮೇಲೆ ಇಟ್ಟರೆ ಅದು ಒಣಗಿ ಗಟ್ಟಿಯಾಗಬಹುದು. ಮೃದುವಾದ ನೀರ್ ದೋಸೆ ಬೇಕಿದ್ದರೆ ಬೆಂದ ತಕ್ಷಣ ತೆಗೆದು ಪ್ಲೇಟ್‌ಗೆ ಹಾಕಿ.
ಅಕ್ಕಿಯನ್ನು ಸರಿಯಾಗಿ ನೆನೆಸಿ, ನುಣ್ಣಗೆ ರುಬ್ಬಿ, ಹಿಟ್ಟನ್ನು ತೆಳ್ಳಗೆ ಮಾಡಿಕೊಂಡು ತವಾದ ಮೇಲೆ ಸರಿಯಾಗಿ ಸುರಿಸಿದರೆ ನೀರ್ ದೋಸೆ ಚೆನ್ನಾಗಿ ಬರುತ್ತದೆ. ಚಮಚದಿಂದ ಹಿಟ್ಟನ್ನು ಹರಡದೆ, ಮುಚ್ಚಳ ಹಾಕಿ ಬೇಯಿಸಿದರೆ ತೆಳ್ಳಗಿನ ಮತ್ತು ಮೃದುವಾದ ದೋಸೆ ಮನೆಯಲ್ಲೇ ಮಾಡಬಹುದು.