Jan 25, 2026 Languages : ಕನ್ನಡ | English

ಸಂಕ್ರಾಂತಿ ಹಬ್ಬ ಇನ್ನೇನು ಬಂದೆ ಬಿಡ್ತು - ವಿಶೇಷವಾಗಿ ಈ ಹಬ್ಬವನ್ನು ಬೇರೆ ರಾಜ್ಯದವರು ಹೇಗೆ ಆಚರಿಸುತ್ತಾರೆ ನೋಡಿ

ಹೊಸ ವರ್ಷ ಬಂತು, ಈಗ 2026ರ ಮೊದಲ ಹಬ್ಬ ಸ್ವಾಗತಿಸುವ ಸಮಯ ಹತ್ತಿರ ಬಂದಿದೆ. ಈ ಹಬ್ಬವನ್ನ ಏಕಕಾಲದಲ್ಲೇ ಭಾರತದ ಹಲವು ರಾಜ್ಯದಲ್ಲಿ ಆಚರಿಸಲಾಗುತ್ತದೆ. ಇದು ಬೇರಾವುದೂ ಅಲ್ಲ, ಮಕರ ಸಂಕ್ರಾಂತಿ ಹಬ್ಬ ಮಕರ ಸಂಕ್ರಾಂತಿ ವರ್ಷದ ಮೊದಲ ಹಿಂದೂಗಳ ಹಬ್ಬವಾಗಿ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ದೇಶದ ವಿವಿಧ ಭಾಗದಲ್ಲಿ ಏಕಕಾಲಕ್ಕೆ ಆಚರಿಸುವ ಕೆಲವು ಹಬ್ಬಗಳಲ್ಲಿ ಇದು ಕೂಡ ಒಂದಾಗಿದೆ. ಮಕರ ಸಂಕ್ರಾಂತಿಯಿಂದ ಉತ್ತಾರಾಯಣ ಪ್ರಾರಂಭ ಅನ್ನುವ ವಾಡಿಕೆ ಕೂಡ ಇದೆ. 

ಯಾವ ಯಾವ ರಾಜ್ಯದಲ್ಲಿ ಹೇಗೆಲ್ಲಾ ಸಂಕ್ರಾಂತಿ ಆಚರಿಸುತ್ತಾರೆ ನೋಡಿ!!
ಯಾವ ಯಾವ ರಾಜ್ಯದಲ್ಲಿ ಹೇಗೆಲ್ಲಾ ಸಂಕ್ರಾಂತಿ ಆಚರಿಸುತ್ತಾರೆ ನೋಡಿ!!

ಮಕರ ಸಂಕ್ರಾಂತಿ ಪ್ರಾರಂಭವಾದಾಗಿನಿಂದ 6 ತಿಂಗಳು ಉತ್ತಾರಾಯಣ ಸಮಯ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಮರಣವೊಂದಿದವರು ಸ್ವರ್ಗಕ್ಕೆ ಹೋಗುತ್ತಾರೆ ಎಂಬುದು ಹಿಂದೂ ಧರ್ಮದ ನಂಬಿಕೆಯಾಗಿದೆ. ಮಹಾಭಾರತದ ಭೀಷ್ಮ ಉತ್ತರಾಯಣ ಕಾಲದವರೆಗೆ ಕಾದು ನಂತರ ತನ್ನ ದೇಹ ತ್ಯಾಗ ಮಾಡಿದರು ಎಂಬ ಉಲ್ಲೇಖ ಕೂಡ ಇದೆ. ದೇಶದ ಪ್ರಮುಖ ಎಲ್ಲಾ ರಾಜ್ಯದಲ್ಲೂ ಈ ಮಕರ ಸಂಕ್ರಾಂತಿ ಆಚರಣೆ ನೋಡಬಹುದು. ಕರ್ನಾಟಕದಲ್ಲಿ ಹಾಗೆ ಈ ಸಂಕ್ರಾಂತಿಯನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ. ಹಾಗಾದ್ರೆ ಯಾವೆಲ್ಲಾ ರಾಜ್ಯದಲ್ಲಿ ಯಾವ ರೀತಿ ಸಂಕ್ರಾಂತಿ ಆಚರಣೆ ಮಾಡಲಾಗುತ್ತದೆ ಎಂದು ಈ ಲೇಖನದ ಮೂಲಕ ನೋಡೋಣ. 

ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯನ್ನು ರೈತರು ಮತ್ತು ಜಾನುವಾರುಗಳ ಹಬ್ಬವಾಗಿ ಆಚರಿಸುತ್ತಾರೆ. ಮುಂಜಾನೆ ಪವಿತ್ರ ಸ್ನಾನ, ಮನೆಗಳಲ್ಲಿ ರಂಗೋಲಿ ಮತ್ತು ಸೂರ್ಯ ಪೂಜೆ, ಎಳ್ಳು-ಬೆಲ್ಲ ಹಂಚುವುದು, ಹೊಸ ಬೆಳೆಗಳಿಂದ ಮಾಡಿದ ಅಡುಗೆಗಳ ನೈವೇದ್ಯ, ಮತ್ತು ಜಾನುವಾರುಗಳನ್ನು ಸಿಂಗರಿಸಿ 'ಕಿಚ್ಚು ಹಾಯಿಸುವ' ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸಂಭ್ರಮಿಸಲಾಗುತ್ತದೆ, ಇಲ್ಲಿ ಈ ಹಬ್ಬವನ್ನು ಸಮೃದ್ಧಿ ಮತ್ತು ಒಳಿತನ್ನು ಸಂಕೇತಿಸುವ ಹಬ್ಬವಾಗಿ ಆಚರಿಸುತ್ತಾರೆ. 

ಇನ್ನು ಅತ್ತ ಆಂಧ್ರ ಪ್ರದೇಶದ ಕಡೆ ನೋಡುವುದಾದರೆ, ಇಲ್ಲಿ ಆಂಧ್ರ ಹಾಗೂ ತೆಲಂಗಾಣದ ಹಲವು ಭಾಗದಲ್ಲಿ ಒಂದೊಂದು ರೀತಿಯಾಗಿ ಸಂಕ್ರಾಂತಿ ಆಚರಣೆ ನೋಡಬಹುದು. ಇಲ್ಲಿ ಭೋಗಿ, ಮುಕ್ಕನುಮ, ಕಣುಮ ಎಂಬ ಹೆಸರಿನಿಂದಲೂ ಆಚರಿಸುತ್ತಾರೆ. ಅವರು ಈ ಹಬ್ಬವನ್ನು ಹೊಸತನದ ಆರಂಭ ಎಂಬ ಸಂಕೇತದಲ್ಲಿ ಆಚರಿಸುತ್ತಾರೆ. ಈ ದಿನ ಮನೆಯನ್ನು ಸ್ವಚ್ಛಗೊಳಿಸಿ ಹಳೆಯ ವಸ್ತುಗಳನ್ನು, ಕಸವನ್ನು ಒಂದು ಕಡೆ ಹಾಕಿ ಅದಕ್ಕೆ ಬೆಂಕಿ ಹಾಕಿ ಸುಡಲಾಗುತ್ತದೆ. ಇಲ್ಲಿಯೂ ಕೆಲವು ಕಡೆ ಈ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸುತ್ತಾರೆ.

ಇನ್ನೂ ತಮಿಳುನಾಡಿನ ಪ್ರಮುಖ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದಾಗಿದೆ ಅಲ್ಲಿ ಪೊಂಗಲ್ ಎಂದು ಕರೆಯಲ್ಪಡುವ ಹಬ್ಬ ಇದಾಗಿದ್ದು, ಸತತ 4 ದಿನ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ಹಬ್ಬದಂದು ರೈತರು ತಮ್ಮ ಹೊಲದ ಪೂಜೆ ಮಾಡುತ್ತಾರೆ. ಎತ್ತುಗಳನ್ನ ಅಲಂಕರಿಸುತ್ತಾರೆ. ಹಾಗೆ ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಕೂಡ ಇದೆ ಎಂದು ಹೇಳಬಹುದು. 

ಕರ್ನಾಟಕದ ಪಕ್ಕದ ರಾಜ್ಯವಾದ ಕೇರಳದಲ್ಲಿ ಸಂಕ್ರಾಂತಿ ಅತ್ಯಂತ ಮಹತ್ವದ ಹಬ್ಬವಾಗಿದೆ. ಮಕರ ವಿಳಕ್ಕು ಎಂದು ಕರೆಯಲಾಗುತ್ತದೆ. ಈ ದಿನ ಶಬರಿಮಲೆಯಲ್ಲಿ ಮಕರ ಜ್ಯೋತಿ ಕಾಣಿಸುವುದರಿಂದ ಅಯ್ಯಪ್ಪನ ಸನ್ನಿಧಾನ ಭಕ್ತರಿಂದ ತುಂಬಿರುತ್ತದೆ. ಹಾಗೆ ಕೇರಳದಲ್ಲಿ ವಿಶೇಷ ಆಚರಣೆಗಳು ಈ ದಿನ ನಡೆಯಲಿವೆ.

ಜೊತೆಗೆ ಈ  ಗುಜರಾತ್ ನಲ್ಲಿ ಉತ್ತರಾಯಾಣ ಎಂದು ಈ ಹಬ್ಬವನ್ನು ಆಚರಿಸುತ್ತಾರೆ, ಇಲ್ಲಿ ಗಾಳಿಪಟ ಹಾರಿಸುವುದು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯವಾಗಿದೆ. ಹಾಗೆ ಹಬ್ಬದ ದಿನ ಮಾಡಲಾಗುವ ವಿಶೇಷ ಸಿಹಿ ತಿಂಡಿಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಕಿಚಡಿ ಮಾಡಿ ಸವಿಯುವ ಸಂಪ್ರದಾಯವಿದೆ. ಹಾಗೇ ಮಹಾರಾಷ್ಟ್ರ, ಪಂಜಾಬ್‌, ರಾಜಸ್ಥಾನ್‌ ಸೇರಿ ಹಲವು ರಾಜ್ಯಗಳಲ್ಲಿ ಕೂಡ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇನ್ನು ನಿಮ್ಮ ನಿಮ್ಮ ಮನೆಗಳಲ್ಲಿ ಈ ಹಬ್ಬವನ್ನು ಯಾವ ರೀತಿ ಆಚರಿಸುತ್ತಾರೆ ಎಂದು ನಮಗೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು. 

Latest News