Tuesday, Oct 20, 2026
|

‘ಎಸ್‌ಪಿಗೇ ನೋಟಿಸ್ ಕೊಟ್ಟ ಮೇಲೆ ನನಗೂ ಕೊಡಬಹುದು!’ ಹಾಸನ ಗಣಪತಿ ವಿವಾದದಲ್ಲಿ ರೇವಣ್ಣ ಹೇಳಿದ್ದೇನು?!!

ಪೆಂಡಾಲ್ ಗಣಪತಿ ವಿಸರ್ಜನೆ ವಿಚಾರವಾಗಿ ಹಾಸನ ಜಿಲ್ಲೆಯಲ್ಲಿ ಆಡಳಿತಾತ್ಮಕವಾಗಿ ಹಾಗೂ ರಾಜಕೀಯವಾಗಿ ಚರ್ಚೆ ತೀವ್ರಗೊಂಡಿದೆ. ಹಾಸನ ಎಸ್‌ಪಿ ಶುಭನ್ವಿತಾ ಅವರಿಗೆ ಜಿಲ್ಲಾಧಿಕಾರಿ ಲತಾಕುಮಾರಿ ನೋಟಿಸ್ ನೀಡಿರುವ ವಿಚಾರ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್‌.ಡಿ.ರೇವಣ್ಣ ಅವರು ಜಿಲ್ಲಾಡಳಿತದ ಕ್ರಮದ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ನೈಸ್ ಯೋಜನೆ ವಿಚಾರದಲ್ಲಿ ತಮ್ಮ ವಿರುದ್ಧ ಅಬಕಾರಿ ಸಚಿವ ಶಿವಲಿಂಗೇಗೌಡ ಮಾಡಿರುವ ಆರೋಪಗಳಿಗೂ ರೇವಣ್ಣ ತಿರುಗೇಟು ನೀಡಿದ್ದಾರೆ.

ಹಾಸನ ಗಣಪತಿ ವಿಸರ್ಜನೆಗೆ ಹೊಸ ತಿರುವು | Photo Credit: https://www.facebook.com/HDRevannaofficial?__tn__=-UC*F
ಹಾಸನ ಗಣಪತಿ ವಿಸರ್ಜನೆಗೆ ಹೊಸ ತಿರುವು | Photo Credit: https://www.facebook.com/HDRevannaofficial?__tn__=-UC*F

ಎಸ್‌ಪಿಗೆ ನೋಟಿಸ್ ನೀಡಿದ ವಿಚಾರಕ್ಕೆ ರೇವಣ್ಣ ಲೇವಡಿ

ಹಾಸನ ಎಸ್‌ಪಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಎಚ್‌.ಡಿ.ರೇವಣ್ಣ, ತನಗೆ ಈ ವಿಚಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. “ನನಗೆ ಅದೆಲ್ಲಾ ಗೊತ್ತಿಲ್ಲ ಸರ್. ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಮಗೆ ಯಾಕೆ ಬೇಕು? ಎಸ್‌ಪಿಗೇ ನೋಟಿಸ್ ಕೊಟ್ಟ ಮೇಲೆ ನನಗೂ ನೋಟಿಸ್ ಕೊಡಬಹುದು” ಎಂದು ವ್ಯಂಗ್ಯವಾಡಿದ್ದಾರೆ.

ಜಿಲ್ಲಾಧಿಕಾರಿ ಲತಾಕುಮಾರಿ ಹಾಗೂ ಎಸ್‌ಪಿ ಶುಭನ್ವಿತಾ ಅವರ ನಡುವಿನ ವಿಚಾರದ ಬಗ್ಗೆ ಹೆಚ್ಚಿನ ಹೇಳಿಕೆ ನೀಡಲು ನಿರಾಕರಿಸಿದ ರೇವಣ್ಣ, “ಪಾಪ ಅವರು ದೊಡ್ಡವರಿದ್ದಾರೆ, ಅವರ ಬಗ್ಗೆ ಮಾತನಾಡಲ್ಲ. ಎಸ್‌ಪಿಗೆ ಜಿಲ್ಲಾಧಿಕಾರಿ ಯಾಕೆ ನೋಟಿಸ್ ಕೊಟ್ಟಿದ್ದಾರೆಂದು ಗೊತ್ತಿಲ್ಲ” ಎಂದು ಹೇಳಿದ್ದಾರೆ.

72 ವರ್ಷಗಳಿಂದ ಗಣಪತಿ ಉತ್ಸವ ನಡೆಯುತ್ತಿದೆ ಎಂದ ರೇವಣ್ಣ

ಪೆಂಡಾಲ್ ಗಣಪತಿ ವಿಸರ್ಜನೆಗೆ ಸಂಬಂಧಿಸಿದಂತೆ ಮಾತನಾಡಿದ ರೇವಣ್ಣ, ಹಾಸನದಲ್ಲಿ ಹಲವು ವರ್ಷಗಳಿಂದ ಗಣಪತಿ ಉತ್ಸವ ನಡೆಯುತ್ತಾ ಬಂದಿದೆ ಎಂದು ಹೇಳಿದ್ದಾರೆ. ಸುಮಾರು 72 ವರ್ಷಗಳಿಂದ ಗಣಪತಿ ಉತ್ಸವ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಉಲ್ಲೇಖಿಸಿದ ಅವರು, ದೇವಿಗೆರೆಯಲ್ಲಿ ಗಣಪತಿ ವಿಸರ್ಜನೆಗೆ ಅನುಮತಿ ನೀಡುವಂತೆ ಮನವಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ಈ ಕುರಿತು ತಹಶೀಲ್ದಾರ್ ಅವರನ್ನು ವಿಚಾರಿಸಿದಾಗ, ಎಲ್ಲವೂ ಜಿಲ್ಲಾಧಿಕಾರಿಯವರ ನಿರ್ಧಾರ ಎಂದು ತಿಳಿಸಿದ್ದರು ಎಂದು ರೇವಣ್ಣ ಹೇಳಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಬೇರೆ ಕಡೆಗಳಿಗೆ ಅನುಮತಿ ನೀಡಿರುವುದಾದರೆ ಪೆಂಡಾಲ್ ಗಣಪತಿಗೆ ಮಾತ್ರ ಯಾವ ಕಾರಣಕ್ಕೆ ನಿರ್ಬಂಧ ಹೇರಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದ್ದಾರೆ.

‘ನಾನೇ ಹ್ಯಾಂಡಲ್ ಮಾಡ್ತೀನಿ ಎಂದ ಮೇಲೆ ನಾವೇಕೆ ಹೇಳಬೇಕು?’

ಜಿಲ್ಲೆಯ ಕಾನೂನು ಸುವ್ಯವಸ್ಥೆ ವಿಚಾರದಲ್ಲೂ ರೇವಣ್ಣ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಘಟನೆ ನಡೆದರೂ ಪೊಲೀಸರು ಅಗತ್ಯವಿಲ್ಲ, ನಾನೇ ಕ್ರಮ ಕೈಗೊಳ್ಳುತ್ತೇನೆ ಎಂಬ ರೀತಿಯಲ್ಲಿ ಅಧಿಕಾರಿಗಳು ಹೇಳಿದ್ದರೆ, ಅವರಿಗೆ ಸಂಪೂರ್ಣ ಬೆಂಬಲ ನೀಡೋಣ ಎಂದು ಅವರು ಹೇಳಿದ್ದಾರೆ.

“ನಾನೇ ಹ್ಯಾಂಡಲ್ ಮಾಡ್ತೀನಿ ಎಂದ ಮೇಲೆ ನಾವೇಕೆ ಹೇಳಬೇಕು?” ಎಂದು ಪ್ರಶ್ನಿಸಿರುವ ರೇವಣ್ಣ, ಹಾಸನ ಜಿಲ್ಲೆಯನ್ನು ಶಾಂತಿಯುತವಾಗಿ ನಡೆಸಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ. ಆಡಳಿತ ವ್ಯವಸ್ಥೆಯೊಳಗಿನ ನಿರ್ಧಾರಗಳು ಸ್ಪಷ್ಟವಾಗಿರಬೇಕು ಮತ್ತು ಎಲ್ಲರಿಗೂ ಒಂದೇ ರೀತಿಯ ನಿಯಮ ಅನ್ವಯವಾಗಬೇಕು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಶಾಸಕ ಸ್ವರೂಪ್‌ಪ್ರಕಾಶ್‌ಗೆ ರೇವಣ್ಣ ಸಲಹೆ

ಈ ನಡುವೆ ನಡೆದಿರುವ ಎಲ್ಲ ಬೆಳವಣಿಗೆಗಳ ಕುರಿತು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವಂತೆ ಶಾಸಕ ಸ್ವರೂಪ್‌ಪ್ರಕಾಶ್ ಅವರಿಗೂ ಎಚ್‌.ಡಿ.ರೇವಣ್ಣ ಸೂಚನೆ ನೀಡಿದ್ದಾರೆ. ಪರಿಸ್ಥಿತಿ ಗಂಭೀರವಾದರೆ ಕೋರ್ಟ್ ಮತ್ತು ಲೋಕಾಯುಕ್ತ ಸೇರಿದಂತೆ ಕಾನೂನುಬದ್ಧ ಮಾರ್ಗಗಳು ಲಭ್ಯವಿವೆ ಎಂದು ಅವರು ಹೇಳಿದ್ದಾರೆ.

“ಇನ್ನೂ ಕೆಲ ವಿಚಾರ ಇದೆ, ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ” ಎಂದು ಹೇಳುವ ಮೂಲಕ ರೇವಣ್ಣ, ಮುಂದಿನ ದಿನಗಳಲ್ಲಿ ಈ ವಿಚಾರ ಮತ್ತಷ್ಟು ರಾಜಕೀಯ ತಿರುವು ಪಡೆದುಕೊಳ್ಳುವ ಸುಳಿವು ನೀಡಿದ್ದಾರೆ.

ಶಿವಲಿಂಗೇಗೌಡ ಹೇಳಿಕೆಗೆ ರೇವಣ್ಣ ತಿರುಗೇಟು

ಇದೇ ವೇಳೆ ನೈಸ್ ಯೋಜನೆ ವಿಚಾರದಲ್ಲಿ ಅಬಕಾರಿ ಸಚಿವ ಶಿವಲಿಂಗೇಗೌಡ ಮಾಡಿರುವ ಹೇಳಿಕೆಗೂ ರೇವಣ್ಣ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೈಸ್ ಯೋಜನೆ ವಿಚಾರದಲ್ಲಿ ಮೌನವಾಗಿದ್ದರು ಎಂಬ ಆರೋಪಕ್ಕೆ ರೇವಣ್ಣ ತಿರುಗೇಟು ನೀಡಿದ್ದಾರೆ.

ನೈಸ್ ರಸ್ತೆ ಯೋಜನೆಗೆ ಸಂಬಂಧಿಸಿದ ತನಿಖೆಗಾಗಿ ರಚಿಸಲಾಗಿದ್ದ ಸದನ ಸಮಿತಿಯಲ್ಲಿ ಶಿವಲಿಂಗೇಗೌಡ ಅವರು ಜೆಡಿಎಸ್ ಪಕ್ಷದಿಂದ ಸದಸ್ಯರಾಗಿದ್ದರು ಎಂದು ರೇವಣ್ಣ ಹೇಳಿದ್ದಾರೆ. ಜಯಚಂದ್ರ ನೇತೃತ್ವದ ಸಮಿತಿಗೆ ಶಿವಲಿಂಗೇಗೌಡ ಅವರು ಸದಸ್ಯರಾಗಲು ಮುಂದಾಗಿದ್ದರು ಎಂದು ಉಲ್ಲೇಖಿಸಿದ ರೇವಣ್ಣ, ಆಗ ಅವರು ನೀಡಿದ್ದ ಹೇಳಿಕೆ ಹಾಗೂ ಬರೆದುಕೊಟ್ಟ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

‘ಯಾರು ದುಡ್ಡು ಹೊಡೆದಿದ್ದಾರೆಂದು ಪಾಯಿಂಟ್ ಮಾಡಿ ಇಟ್ಟಿದ್ದೇನೆ’

ನೈಸ್ ಯೋಜನೆ ವಿಚಾರದಲ್ಲಿ ಯಾರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ತಮಗೆ ಸಂಪೂರ್ಣ ಮಾಹಿತಿ ಇದೆ ಎಂದು ರೇವಣ್ಣ ಹೇಳಿದ್ದಾರೆ. “ನೈಸ್ ಯೋಜನೆ ವಿಚಾರದಲ್ಲಿ ಯಾರು ದುಡ್ಡು ಹೊಡೆದಿದ್ದಾರೆ ಎಂದು ಎಲ್ಲವನ್ನೂ ಪಾಯಿಂಟ್ ಮಾಡಿ ಇಟ್ಕೊಂಡಿದ್ದೀನಿ. ಬೆಂಡೆತ್ತಿ ಹಾಕ್ತೀನಿ” ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಅರಸೀಕೆರೆಯ ಜೇನುಕಲ್ ಸಿದ್ದೇಶ್ವರನ ಮೇಲೆ ಆಣೆ ಮಾಡಿ, ಸದನ ಸಮಿತಿಯ ಸಂದರ್ಭದಲ್ಲಿ ಶಿವಲಿಂಗೇಗೌಡ ಅವರು ಏನು ಬರೆದುಕೊಟ್ಟಿದ್ದರು ಎಂಬುದನ್ನು ಸಾರ್ವಜನಿಕವಾಗಿ ಹೇಳಲಿ ಎಂದು ರೇವಣ್ಣ ಸವಾಲು ಹಾಕಿದ್ದಾರೆ.

ಒಟ್ಟಿನಲ್ಲಿ ಗಣಪತಿ ವಿಸರ್ಜನೆ ವಿಚಾರದಲ್ಲಿ ಜಿಲ್ಲಾಡಳಿತದ ಕ್ರಮ ಹಾಗೂ ಎಸ್‌ಪಿಗೆ ನೀಡಿರುವ ನೋಟಿಸ್ ವಿಚಾರ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ರೇವಣ್ಣ ಅವರ ಹೇಳಿಕೆಗಳು ಮತ್ತಷ್ಟು ಕುತೂಹಲ ಮೂಡಿಸಿವೆ. ಇದೇ ವೇಳೆ ನೈಸ್ ಯೋಜನೆ ಕುರಿತ ಆರೋಪ-ಪ್ರತ್ಯಾರೋಪವೂ ಮತ್ತೆ ಮುನ್ನೆಲೆಗೆ ಬಂದಿದ್ದು, ರೇವಣ್ಣ ಹಾಗೂ ಶಿವಲಿಂಗೇಗೌಡ ನಡುವಿನ ರಾಜಕೀಯ ವಾಕ್ಸಮರ ಮುಂದುವರಿಯುವ ಸಾಧ್ಯತೆ ಇದೆ.

Comments

Leave a Comment

Latest News