ಚಿನ್ನ ಅಂದ್ರೆ ನಮ್ಮ ದೇಶದಲ್ಲಿ ಕೇವಲ ಒಂದು ಲೋಹ ಅಲ್ಲ. ಅದು ಭಾವನೆ, ಗೌರವ, ಭದ್ರತೆ ಮತ್ತು ಶುಭದ ಸಂಕೇತ. ಒಂದು ಚಿಕ್ಕ ಚಿನ್ನದ ತುಂಡನ್ನೇ ಖರೀದಿಸಿದರೂ ಜನ ಅದನ್ನು ಬಹಳ ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಚಿನ್ನ ಖರೀದಿಸಿದ ತಕ್ಷಣ, ಅಂಗಡಿಯಲ್ಲಿ ಅದನ್ನು ಗುಲಾಬಿ (ಪಿಂಕ್) ಬಣ್ಣದ ಪೇಪರ್ನಲ್ಲಿ ಸುತ್ತಿಕೊಡುವ ಪದ್ಧತಿ ಎಲ್ಲರಿಗೂ ಪರಿಚಿತ. ಆದರೆ ಇದಕ್ಕೆ ಏನು ಕಾರಣ?
ಇದಕ್ಕೆ ಒಂದೇ ಒಂದು ವೈಜ್ಞಾನಿಕ ಕಾರಣ ಇಲ್ಲ. ಸಂಪ್ರದಾಯ, ಮನೋವಿಜ್ಞಾನ ಮತ್ತು ವ್ಯಾಪಾರದ ಅಗತ್ಯತೆಗಳು ಸೇರಿ ಈ ಪದ್ಧತಿ ಹುಟ್ಟಿಕೊಂಡಿದೆ. ಪಿಂಕ್ ಬಣ್ಣವನ್ನು ನೋಡಿದಾಗ ಮನಸ್ಸಿಗೆ ಶಾಂತಿ, ಮೃದುತ್ವ ಮತ್ತು ಒಳ್ಳೆಯ ಭಾವನೆ ಮೂಡುತ್ತದೆ. ಅದೇ ಬಣ್ಣದ ಹಿನ್ನೆಲೆಯ ಮೇಲೆ ಹೊಳೆಯುವ ಚಿನ್ನ ಇಟ್ಟಾಗ, ಅದು ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಗ್ರಾಹಕರಿಗೆ “ನಾನು ನಿಜವಾಗಿಯೂ ಮೌಲ್ಯಯುತವಾದ ವಸ್ತುವನ್ನು ಖರೀದಿಸಿದ್ದೇನೆ” ಅನ್ನೋ ತೃಪ್ತಿ ಸಿಗುತ್ತದಂತೆ.
ಇನ್ನೊಂದು ಪ್ರಮುಖ ಕಾರಣ ಸಂಪ್ರದಾಯ. ಹಲವಾರು ದಶಕಗಳಿಂದ ಆಭರಣದ ಅಂಗಡಿಗಳು ಪಿಂಕ್ ಅಥವಾ ತಿಳಿ ಕೆಂಪು ಬಣ್ಣದ ಕಾಗದವನ್ನೇ ಬಳಸುತ್ತಾ ಬಂದಿವೆ. ಒಂದೇ ಬಣ್ಣ ಬಳಕೆ ಮಾಡೋದರಿಂದ ಅದು ಅಂಗಡಿಗಳ ಗುರುತಾಗಿ ಬದಲಾಗಿದೆ. ಇವತ್ತು ಚಿನ್ನ ಅಂದ್ರೆ ಪಿಂಕ್ ಪೇಪರ್ ಅನ್ನೋ ಭಾವನೆ ನಮ್ಮ ಮನಸ್ಸಿನಲ್ಲಿ ಸಹಜವಾಗಿಯೇ ಮೂಡಿದೆ.
ಪಿಂಕ್ ಪೇಪರ್ ಬಳಸುವುದರಿಂದ ಇನ್ನೊಂದು ಪ್ರಯೋಜನವೂ ಇದೆ. ಈ ಬಣ್ಣದ ಮೇಲೆ ಮಡಿಕೆಗಳು, ಕಲೆಗಳು ಬೇಗ ಕಾಣಿಸುವುದಿಲ್ಲ. ಖರ್ಚಿನ ದೃಷ್ಟಿಯಿಂದಲೂ ಇದು ದುಬಾರಿ ಅಲ್ಲ. ಗ್ರಾಹಕರಿಗೆ ಪ್ರೀಮಿಯಂ ಅನುಭವ ನೀಡೋದು ಕೂಡ ಇದರ ಒಂದು ಪ್ರಮುಖ ಕಾರಣ. ಚಿನ್ನದಂತಹ ಅಮೂಲ್ಯ ವಸ್ತುವನ್ನು ಪಿಂಕ್ ಪೇಪರ್ನಲ್ಲಿ ಸುತ್ತಿಕೊಟ್ಟಾಗ, ಅದು ಹೆಚ್ಚು ಗೌರವಯುತವಾಗಿ ಕಾಣುತ್ತದೆ.
ವ್ಯಾಪಾರ ದೃಷ್ಟಿಯಿಂದಲೂ ಇದು ಮಹತ್ವದ್ದಾಗಿದೆ. ಗ್ರಾಹಕರು ಅಂಗಡಿಯಲ್ಲಿ ಖರೀದಿಸಿದ ಚಿನ್ನವನ್ನು ಪಿಂಕ್ ಪೇಪರ್ನಲ್ಲಿ ಪಡೆದಾಗ, ಅವರ ಮನಸ್ಸಿನಲ್ಲಿ ಆ ಅಂಗಡಿಯ ಬಗ್ಗೆ ಒಳ್ಳೆಯ ಭಾವನೆ ಮೂಡುತ್ತದೆ. ಇದು ಬ್ರ್ಯಾಂಡ್ ಇಮೇಜ್ಗೂ ಸಹಾಯ ಮಾಡುತ್ತದೆ. ಪಿಂಕ್ ಪೇಪರ್ ಬಳಕೆ ಕೇವಲ ಒಂದು ಪ್ಯಾಕಿಂಗ್ ವಿಧಾನವಲ್ಲ. ಅದು ಸಂಪ್ರದಾಯ, ಮನೋವಿಜ್ಞಾನ ಮತ್ತು ವ್ಯಾಪಾರದ ಮಿಶ್ರಣ. ಚಿನ್ನದ ಜೊತೆ ಪಿಂಕ್ ಪೇಪರ್ ಬಳಕೆ ಇಂದಿಗೂ ಮುಂದುವರಿಯುತ್ತಿರುವುದು, ನಮ್ಮ ಸಮಾಜದಲ್ಲಿ ಚಿನ್ನಕ್ಕೆ ಇರುವ ಗೌರವ ಮತ್ತು ಭಾವನೆಗೆ ಸಾಕ್ಷಿಯಾಗಿದೆ ಎನ್ನಬಹದು.
Comments
Leave a Comment