Feb 16, 2026 Languages : ಕನ್ನಡ | English

ಗಿರಿನಗರ ಇಂಡಿಯನ್ ಬ್ಯಾಂಕ್‌ನಲ್ಲಿ 4 ಕೋಟಿ ಮೌಲ್ಯದ ಚಿನ್ನ ಕಳವು - ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಬಂಧನ!!

ಬೆಂಗಳೂರು ಗಿರಿನಗರದಲ್ಲಿರುವ ಇಂಡಿಯನ್ ಬ್ಯಾಂಕ್‌ ಶಾಖೆಯಲ್ಲಿ ಭಾರೀ ಚಿನ್ನ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಹಕರು ಅಡವಿಟ್ಟಿದ್ದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಬ್ಯಾಂಕ್‌ನ ಅಸಿಸ್ಟೆಂಟ್ ಮ್ಯಾನೇಜರ್‌ನೇ ಕದ್ದು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆ ಬಹಿರಂಗವಾದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬ್ಯಾಂಕ್ ಕೀ ಬಳಸಿ ಲಾಕರ್‌ನಿಂದ ಚಿನ್ನ ಎಗರಿಸುತ್ತಿದ್ದ ಮ್ಯಾನೇಜರ್ - 700 ಗ್ರಾಂ ಚಿನ್ನ ವಶಪಡಿಸಿಕೊಂಡ ಪೊಲೀಸರು.
ಬ್ಯಾಂಕ್ ಕೀ ಬಳಸಿ ಲಾಕರ್‌ನಿಂದ ಚಿನ್ನ ಎಗರಿಸುತ್ತಿದ್ದ ಮ್ಯಾನೇಜರ್ - 700 ಗ್ರಾಂ ಚಿನ್ನ ವಶಪಡಿಸಿಕೊಂಡ ಪೊಲೀಸರು.

ಕಿರಣ್ ಕುಮಾರ್ ಎಂಬವರು ಗಿರಿನಗರ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬ್ಯಾಂಕ್ ಲಾಕರ್‌ನ ಕೀ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಇಬ್ಬರ ಹತ್ತಿರ ಇರುತಿತ್ತು. ಮ್ಯಾನೇಜರ್ ಗೈರಾಗಿದ್ದ ಸಂದರ್ಭಗಳಲ್ಲಿ ಕಿರಣ್ ಕುಮಾರ್ ಸ್ವಲ್ಪಸ್ವಲ್ಪವಾಗಿ ಚಿನ್ನಾಭರಣ ಕದಿಯುತ್ತಿದ್ದಾನೆ ಎಂಬ ಆರೋಪ ಇದೆ. ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದ ಚಟದಿಂದ ಹಣದ ಅವಶ್ಯಕತೆ ಹೆಚ್ಚಾದ ಕಾರಣ ಈ ಕೃತ್ಯಕ್ಕೆ ಕೈ ಹಾಕಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಜನವರಿ 2ರಂದು ಕೆಲ ಗ್ರಾಹಕರು ತಮ್ಮ ಅಡವಿಟ್ಟ ಚಿನ್ನವನ್ನು ಪಡೆದುಕೊಳ್ಳಲು ಬ್ಯಾಂಕ್‌ಗೆ ಬಂದಾಗ ಲಾಕರ್ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಕೆಲವು ಪ್ಯಾಕೇಟ್‌ಗಳಲ್ಲಿ ಚಿನ್ನಾಭರಣ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಮುಂದಿನ ಪರಿಶೀಲನೆಯಲ್ಲಿ 21 ಪ್ಯಾಕೇಟ್‌ಗಳಲ್ಲಿ ಭಾಗಶಃ ಹಾಗೂ 3 ಪ್ಯಾಕೇಟ್‌ಗಳಲ್ಲಿ ಸಂಪೂರ್ಣ ಚಿನ್ನ ಕಾಣೆಯಾಗಿದೆ ಎಂಬುದು ಪತ್ತೆಯಾಗಿದೆ. ಒಟ್ಟು 2,783 ಗ್ರಾಂ ಚಿನ್ನ, ಅಂದಾಜು 4 ಕೋಟಿ ರೂಪಾಯಿ ಮೌಲ್ಯದ ಆಭರಣ ಕಳುವಾಗಿರುವುದು ತಿಳಿದುಬಂದಿದೆ.

ಆಂತರಿಕ ವಿಚಾರಣೆ ವೇಳೆ ಕಿರಣ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಕದ್ದ ಚಿನ್ನವನ್ನು ವಿವಿಧ ಅಂಗಡಿಗಳಲ್ಲಿ ಗಿರವಿ ಇಟ್ಟು ಹಣ ಪಡೆದು, ಆ ಹಣವನ್ನು ಆನ್‌ಲೈನ್ ಬೆಟ್ಟಿಂಗ್‌ಗೆ ಬಳಸಿದ್ದಾನೆ ಎನ್ನಲಾಗಿದೆ. ಪ್ರಕರಣದ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ.

ಪೊಲೀಸರು ಈಗಾಗಲೇ ಸುಮಾರು 700 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಚಿನ್ನವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಬ್ಯಾಂಕ್‌ನ ಆಂತರಿಕ ಭದ್ರತಾ ವ್ಯವಸ್ಥೆಯ ಮೇಲೂ ಪ್ರಶ್ನೆಗಳು ಉದ್ಭವಿಸಿವೆ. ಗ್ರಾಹಕರ ವಿಶ್ವಾಸಕ್ಕೆ ಧಕ್ಕೆಯಾಗುವಂತಹ ಈ ಘಟನೆ ಬ್ಯಾಂಕಿಂಗ್ ವಲಯದಲ್ಲಿ ಆತಂಕ ಮೂಡಿಸಿದೆ. ಬ್ಯಾಂಕ್‌ನಲ್ಲೇ ಕೆಲಸ ಮಾಡುತ್ತಿದ್ದ ಅಧಿಕಾರಿ ಗ್ರಾಹಕರ ನಂಬಿಕೆಗೆ ದ್ರೋಹ ಮಾಡಿರುವುದು ಗಂಭೀರ ವಿಚಾರವಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಉಳಿದ ಚಿನ್ನ ಪತ್ತೆ ಹಾಗೂ ಇತರ ಸಂಪರ್ಕಿತರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ.

Latest News