ಪಿಎಫ್ ಹಣ ಜಮಾ ಮಾಡಲು ಇಂದೇ ಲಾಸ್ಟ್ ಡೇಟ್ - ಮಿಸ್ ಮಾಡಿದ್ರೆ ಕಂಪನಿಗಳಿಗೆ ಬೀಳುತ್ತೆ ಭಾರಿ ದಂಡ!!

ನೀವು ಯಾವುದಾದರೂ ಕಂಪನಿ ನಡೆಸುತ್ತಿದ್ದರೆ ಅಥವಾ ಎಚ್‌ಆರ್ (HR) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆ ಈ ಸುದ್ದಿ ನಿಮಗಾಗಿ. ಪ್ರತಿ ತಿಂಗಳು ಉದ್ಯೋಗಿಗಳ ಸಂಬಳದಲ್ಲಿ ಕಟ್ ಆಗುವ ಪಿಎಫ್ (PF) ಹಣವನ್ನು ಸರ್ಕಾರದ ಖಾತೆಗೆ ಜಮಾ ಮಾಡಲು ಇಂದೇ ಕೊನೆಯ ದಿನ.

ಪಿಎಫ್ ಇಸಿಆರ್ ಫೈಲಿಂಗ್ ಮಾಡದಿದ್ದರೆ ಭಾರಿ ದಂಡ; | Photo Credit: AI
ಪಿಎಫ್ ಇಸಿಆರ್ ಫೈಲಿಂಗ್ ಮಾಡದಿದ್ದರೆ ಭಾರಿ ದಂಡ; | Photo Credit: AI

ಹೌದು, ಮೇ 15, 2026 ರೊಳಗೆ ಏಪ್ರಿಲ್ ತಿಂಗಳ ಇಸಿಆರ್ (ECR) ಸಲ್ಲಿಸಬೇಕು ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಕಟ್ಟುನಿಟ್ಟಿನ ಸೂಚನೆ ನೀಡಿದೆ. ಒಂದು ವೇಳೆ ಈ ಗಡುವು ಮಿಸ್ ಮಾಡಿದರೆ ಉದ್ಯೋಗದಾತರು ಭಾರಿ ದಂಡ ತೆರಬೇಕಾಗುತ್ತದೆ.

ಏನಿದು ಇಸಿಆರ್ (ECR)? ಯಾಕಿಷ್ಟು ಇಂಪಾರ್ಟೆಂಟ್?

ಇಸಿಆರ್ ಅಂದರೆ 'ಎಲೆಕ್ಟ್ರಾನಿಕ್ ಚಲನ್-ಕಮ್-ರಿಟರ್ನ್'. ಇದೊಂದು ಡಿಜಿಟಲ್ ರಿಪೋರ್ಟ್ ಆಗಿದ್ದು, ಇದರಲ್ಲಿ ಕಂಪನಿಯು ತನ್ನ ಉದ್ಯೋಗಿಗಳ ಸಂಬಳ ಎಷ್ಟು? ಅದರಲ್ಲಿ ಪಿಎಫ್‌ಗಾಗಿ ಎಷ್ಟು ಕಟ್ ಮಾಡಲಾಗಿದೆ? ಎಂಬ ಸಂಪೂರ್ಣ ವಿವರವನ್ನು ಇಪಿಎಫ್‌ಒಗೆ ನೀಡುತ್ತದೆ.

ಇದು ಕೇವಲ ಸರ್ಕಾರಿ ಕೆಲಸವಲ್ಲ, ಇದು ಉದ್ಯೋಗಿಗಳ ಹಕ್ಕು. ಕಂಪನಿಯು ಇದನ್ನು ಸಕಾಲಕ್ಕೆ ಮಾಡದಿದ್ದರೆ ನೌಕರರ ಪಿಎಫ್ ಖಾತೆಗೆ ಬಡ್ಡಿ ಬರುವುದು ನಿಲ್ಲುತ್ತದೆ, ಅವರ ವಿಮೆ (EDLI) ಮತ್ತು ಪಿಂಚಣಿ ಸೌಲಭ್ಯಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಡೇಟ್ ಮಿಸ್ ಆದ್ರೆ ಎಷ್ಟು ದಂಡ ಬೀಳುತ್ತೆ?

ಇಪಿಎಫ್‌ಒ ನಿಯಮಗಳ ಪ್ರಕಾರ ಪ್ರತಿ ತಿಂಗಳು 15ನೇ ತಾರೀಖಿನ ಒಳಗೆ ಕಳೆದ ತಿಂಗಳ ಪಿಎಫ್ ಹಣ ಪಾವತಿಸಬೇಕು. ಹಾಗೇನಾದರೂ ಇಂದೇ ಈ ಕೆಲಸ ಮುಗಿಸದಿದ್ದರೆ ಕಂಪನಿಗಳು ಈ ಕೆಳಗಿನ ಸಮಸ್ಯೆ ಎದುರಿಸಬೇಕಾಗುತ್ತದೆ:

ವಿಳಂಬ ಶುಲ್ಕ - ಬಾಕಿ ಇರುವ ಹಣದ ಮೇಲೆ ಶೇ. 12 ರಷ್ಟು ವಿಳಂಬ ಶುಲ್ಕ.

ದಂಡ (Penalty) - ಶೇ. 5 ರಿಂದ ಹಿಡಿದು ಶೇ. 25 ರಷ್ಟು ದಂಡ ವಿಧಿಸಬಹುದು.

ಕಾನೂನು ಕ್ರಮ - ಉದ್ಯೋಗಿಗಳ ಹಣ ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಕಾನೂನು ಕ್ರಮ ಕೂಡ ಜರುಗಿಸಬಹುದು.

ಇಸಿಆರ್ (ECR) ಫೈಲ್ ಮಾಡುವುದು ಹೇಗೆ? ಸ್ಟೆಪ್ ಬೈ ಸ್ಟೆಪ್ ಮಾಹಿತಿ

ಇನ್ನೂ ಫೈಲಿಂಗ್ ಮಾಡದಿದ್ದರೆ ಈ ಸಿಂಪಲ್ ಹಂತಗಳನ್ನು ಅನುಸರಿಸಿ:

ಡೇಟಾ ರೆಡಿ ಮಾಡಿ - ಮೊದಲು ಉದ್ಯೋಗಿಗಳ ವೇತನ ಮತ್ತು ಪಿಎಫ್ ಕಡಿತದ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ.

ಪೋರ್ಟಲ್ ಲಾಗಿನ್ - ಇಪಿಎಫ್‌ಒ ಉದ್ಯೋಗದಾತರ ಪೋರ್ಟಲ್‌ಗೆ ಹೋಗಿ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.

KYC ಚೆಕ್ - ಎಲ್ಲಾ ಉದ್ಯೋಗಿಗಳ ಯುಎಎನ್ (UAN) ಮತ್ತು ಆಧಾರ್ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಅಪ್‌ಲೋಡ್ - ಸಿದ್ಧಪಡಿಸಿದ ಇಸಿಆರ್ ಫೈಲ್ ಅನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ.

ಚಲನ್ ಜನೆರೇಟ್ - ಫೈಲ್ ಸರಿಯಾಗಿದ್ದರೆ ಚಲನ್ ಕ್ರಿಯೇಟ್ ಆಗುತ್ತದೆ.

ಪೇಮೆಂಟ್ - ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೂಲಕ ಪಾವತಿ ಮಾಡಿ ಪ್ರಕ್ರಿಯೆ ಮುಗಿಸಿ.

ನೌಕರರಿಗೊಂದು ಕಿವಿಮಾತು

ನಿಮ್ಮ ಕಂಪನಿಯು ಸಮಯಕ್ಕೆ ಸರಿಯಾಗಿ ಪಿಎಫ್ ಹಣ ಜಮಾ ಮಾಡಿದೆಯೇ ಎಂದು ಚೆಕ್ ಮಾಡಿಕೊಳ್ಳಲು ನಿಮ್ಮ 'EPFO Passbook' ಅನ್ನು ಲಾಗಿನ್ ಮಾಡಿ ನೋಡಿ. ಒಂದು ವೇಳೆ ನಿಮ್ಮ ಸಂಬಳದಲ್ಲಿ ಹಣ ಕಟ್ ಆಗಿ ನಿಮ್ಮ ಪಿಎಫ್ ಖಾತೆಗೆ ಜಮಾ ಆಗದಿದ್ದರೆ, ತಕ್ಷಣ ನಿಮ್ಮ ಕಚೇರಿಯ ಅಕೌಂಟ್ಸ್ ವಿಭಾಗವನ್ನು ಸಂಪರ್ಕಿಸಿ.

ನೆನಪಿರಲಿ, ಇಂದೇ (ಮೇ 15) ಕೊನೆಯ ದಿನ. ಕೊನೆ ಕ್ಷಣದ ಸರ್ವರ್ ಸಮಸ್ಯೆ ತಪ್ಪಿಸಲು ಕೂಡಲೇ ಫೈಲಿಂಗ್ ಪ್ರಕ್ರಿಯೆ ಮುಗಿಸುವುದು ಜಾಣತನ!  

Latest News