ಚಿನ್ನ, ಬೆಳ್ಳಿ ಬೆಲೆ ಏರಿಕೆಯ ನಂತರ ಈಗ ಅಡುಗೆ ಎಣ್ಣೆಯ ದರ ಏರಿಕೆ ಗ್ರಾಹಕರಿಗೆ ಹೊಸ ತಲೆನೋವು ತಂದಿದೆ. ಒಂದೇ ವಾರದಲ್ಲಿ ವಿವಿಧ ಬ್ರ್ಯಾಂಡ್‌ಗಳ ಎಣ್ಣೆ ಬೆಲೆ ಏರಿಕೆಯಾಗಿದ್ದು, ಗೃಹಿಣಿಯರು ಒಗ್ಗರಣೆ ಹಾಕುವುದಕ್ಕೂ ಮುನ್ನ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಹತ್ತು ಲೀಟರ್ ಸೂರ್ಯಕಾಂತಿ ಎಣ್ಣೆ ಈಗ 1600-1620 ರೂ.ಗೆ ಏರಿಕೆಯಾಗಿದೆ. ಪಾಮ್ ಎಣ್ಣೆ ಲೀಟರ್‌ಗೆ 20 ರೂ. ಹೆಚ್ಚಳ ಕಂಡು, ಗ್ರಾಹಕರು ಬೆಚ್ಚಿಬಿದ್ದಿದ್ದಾರೆ.
ಅಡುಗೆ ಎಣ್ಣೆ ಪೂರೈಕೆಯಲ್ಲಿ ಖಡಿತ ಉಂಟಾಗಿರುವುದರಿಂದ ದರ ದುಬಾರಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ, ಖಾದ್ಯ ತೈಲ ಪೂರೈಕೆ ಕಡಿಮೆ, ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿದ ದರ, ಇವೆಲ್ಲವೂ ಈಗಿನ ಪರಿಸ್ಥಿತಿಗೆ ಕಾರಣವಾಗಿದೆ. ಭಾರತವು ಎಣ್ಣೆಯ ಅತಿದೊಡ್ಡ ಆಮದುದಾರರಲ್ಲಿ ಒಂದಾಗಿರುವುದರಿಂದ, ರೂಪಾಯಿ ಮೌಲ್ಯ ಕುಸಿತವು ಆಮದು ಮಾಡಿದ ತೈಲವನ್ನು ಇನ್ನಷ್ಟು ದುಬಾರಿಗೊಳಿಸಿದೆ.
ಗ್ರಾಹಕರಿಗೆ ದಿನನಿತ್ಯದ ಖರ್ಚು ಹೆಚ್ಚಾಗುತ್ತಿರುವುದು ಸ್ಪಷ್ಟ. ಸೂರ್ಯಕಾಂತಿ ಎಣ್ಣೆ ಹಿಂದಿನ 140 ರೂ.ನಿಂದ 160 ರೂ.ಗೆ ಏರಿಕೆಯಾಗಿದೆ. ಕಡಲೆಕಾಯಿ ಎಣ್ಣೆ 210 ರೂ.ನಿಂದ 220 ರೂ.ಗೆ, ಪಾಮ್ ಆಯಿಲ್ 116 ರೂ.ನಿಂದ 122 ರೂ.ಗೆ, ಸೋಯಾ 130 ರೂ.ನಿಂದ 140 ರೂ.ಗೆ, ರೈಸ್ ಆಯಿಲ್ 136 ರೂ.ನಿಂದ 140 ರೂ.ಗೆ, ಸಾಸುವೆ ಎಣ್ಣೆ 175 ರೂ.ನಿಂದ 180 ರೂ.ಗೆ, ದೀಪದ ಎಣ್ಣೆ 126 ರೂ.ನಿಂದ 130 ರೂ.ಗೆ ಏರಿಕೆಯಾಗಿದೆ.
ಈ ಏರಿಕೆ ಗೃಹಿಣಿಯರ ಬಜೆಟ್‌ಗೆ ನೇರ ಹೊಡೆತ ನೀಡಿದ್ದು, ಸಾಮಾನ್ಯ ಜನರ ಜೀವನದಲ್ಲಿ ಹೆಚ್ಚುವರಿ ಒತ್ತಡವನ್ನು ತಂದಿದೆ. ಅಡುಗೆ ಎಣ್ಣೆ ಬೆಲೆ ಏರಿಕೆಯಿಂದಾಗಿ ಆಹಾರದ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಜನರು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾದ ಪರಿಸ್ಥಿತಿ ಎದುರಾಗಬಹುದು. ಒಟ್ಟಾರೆ, ಅಡುಗೆ ಎಣ್ಣೆ ಬೆಲೆ ಏರಿಕೆ ಗ್ರಾಹಕರಿಗೆ ಶಾಕ್ ನೀಡಿದರೂ, ಜಾಗತಿಕ ಮಾರುಕಟ್ಟೆಯ ಪರಿಸ್ಥಿತಿ ಮತ್ತು ಆಮದು ವೆಚ್ಚದ ಏರಿಕೆ ಇದಕ್ಕೆ ಕಾರಣವಾಗಿರುವುದರಿಂದ ತಾತ್ಕಾಲಿಕವಾಗಿ ಜನರು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.