ಕೇಂದ್ರ ಸರ್ಕಾರಿ ನೌಕರರ ವಲಯದಲ್ಲಿ ಈಗ ಕೇವಲ ಸಂಬಳ ಹೆಚ್ಚಳ, ಫಿಟ್‌ಮೆಂಟ್ ಫ್ಯಾಕ್ಟರ್ ಅಥವಾ ತುಟ್ಟಿಭತ್ಯೆ (DA) ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿಲ್ಲ. ಬದಲಿಗೆ ಹಾಲು, ತರಕಾರಿ, ಬೇಳೆಕಾಳುಗಳು ಮತ್ತು ದಿನಸಿ ಸಾಮಗ್ರಿಗಳಿಗೆ ಎಷ್ಟು ಖರ್ಚಾಗುತ್ತದೆ ಎಂಬ ವಿಷಯ ಈಗ 8ನೇ ವೇತನ ಆಯೋಗದ (8th Pay Commission) ಚರ್ಚೆಯ ಕೇಂದ್ರಬಿಂದುವಾಗಿದೆ. ಹೌದು, ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರ ಮುಂದಿನ ಸಂಬಳವನ್ನು ನಿರ್ಧರಿಸಲು, ಇನ್ಮುಂದೆ ಒಂದು ಕುಟುಂಬಕ್ಕೆ ಪ್ರತಿ ತಿಂಗಳು ಎಷ್ಟು ಪೌಷ್ಟಿಕ ಆಹಾರದ ಅಗತ್ಯವಿದೆ ಎಂಬುದನ್ನು ಲೆಕ್ಕ ಹಾಕಲಾಗುತ್ತಿದೆ.
ನೌಕರರ ಸಂಘಟನೆಗಳು ವೇತನ ಆಯೋಗದ ಮುಂದೆ ಒಂದು ಬಲವಾದ ವಾದವನ್ನು ಮಂಡಿಸಿವೆ. "ಹಳೆಯ ಸಂಬಳದ ಲೆಕ್ಕಾಚಾರದ ಪದ್ಧತಿ ಈಗಿನ ಭೀಕರ ಹಣದುಬ್ಬರ ಮತ್ತು ಜೀವನ ವೆಚ್ಚಕ್ಕೆ ಹೊಂದಾಣಿಕೆಯಾಗುತ್ತಿಲ್ಲ" ಎಂದು ಅವರು ಹೇಳಿದ್ದಾರೆ. ಇದೇ ಕಾರಣಕ್ಕೆ ಈಗ '3490 ಕ್ಯಾಲೊರಿ' (3490 Calories) ಎಂಬ ಹೊಸ ಫಾರ್ಮುಲಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆ ಇಂಟರೆಸ್ಟಿಂಗ್ ವಿವರ ಇಲ್ಲಿದೆ:
ಸಂಬಳದ ಲೆಕ್ಕಾಚಾರಕ್ಕೆ ರೇಷನ್ ಖರ್ಚು ಯಾಕೆ ಮುಖ್ಯ?
ಯಾವುದೇ ವೇತನ ಆಯೋಗವು ಮೊದಲು ಮಾಡುವ ಕೆಲಸವೆಂದರೆ, ಒಬ್ಬ ಸರ್ಕಾರಿ ನೌಕರ ಮತ್ತು ಆತನ ಕುಟುಂಬ ಗೌರವಾನ್ವಿತ ಜೀವನ ನಡೆಸಲು ಕನಿಷ್ಠ ಎಷ್ಟು ಆದಾಯದ ಅಗತ್ಯವಿದೆ ಎಂಬುದನ್ನು ಪತ್ತೆ ಹಚ್ಚುವುದು. ಇದಕ್ಕಾಗಿ ಆಹಾರ, ಮನೆ ಬಾಡಿಗೆ, ಶಿಕ್ಷಣ, ಆರೋಗ್ಯ, ಬಟ್ಟೆ ಮತ್ತು ಸಾರಿಗೆ ಖರ್ಚುಗಳನ್ನು ಆಧಾರವಾಗಿ ತೆಗೆದುಕೊಳ್ಳಲಾಗುತ್ತದೆ. ಇದರಲ್ಲಿ ಆಹಾರದ ವೆಚ್ಚ ಅತ್ಯಂತ ಪ್ರಮುಖವಾಗಿದೆ. ಏಕೆಂದರೆ ಪೌಷ್ಟಿಕ ಆಹಾರದ ಬೆಲೆಗಳು ಹೆಚ್ಚಾದಾಗ, ನೌಕರರ ಕನಿಷ್ಠ ಸಂಬಳವೂ ಹೆಚ್ಚಾಗಬೇಕು ಎನ್ನುವುದು ವೇತನ ಆಯೋಗದ ಮೂಲ ನಿಯಮವಾಗಿದೆ.
ಏನಿದು 3490 ಕ್ಯಾಲೊರಿ ಫಾರ್ಮುಲಾ?
ನ್ಯಾಷನಲ್ ಕೌನ್ಸಿಲ್-ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ (NC-JCM) ನೌಕರರ ಪರವಾಗಿ ವೇತನ ಆಯೋಗಕ್ಕೆ ಒಂದು ಪ್ರಮುಖ ಜ್ಞಾಪನಾ ಪತ್ರವನ್ನು ನೀಡಿದೆ. ಅದರಲ್ಲಿ, "ಹಳೆಯ ಸಂಬಳದ ಲೆಕ್ಕಾಚಾರವು ಕೇವಲ 2700 ಕ್ಯಾಲೊರಿ ಆಹಾರದ ಆಧಾರದ ಮೇಲಿತ್ತು, ಅದು ಇಂದಿನ ಕಾಲಕ್ಕೆ ಸರಿಹೊಂದುವುದಿಲ್ಲ" ಎಂದು ತಿಳಿಸಲಾಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ನೀಡಿರುವ ಹೊಸ ಮಾನದಂಡಗಳ ಪ್ರಕಾರ, ಕಠಿಣ ದೈಹಿಕ ಶ್ರಮ ವಹಿಸುವ ಒಬ್ಬ ವಯಸ್ಕ ವ್ಯಕ್ತಿಗೆ ಪ್ರತಿದಿನ ಸುಮಾರು 3490 ಕ್ಯಾಲೊರಿ ಶಕ್ತಿಯ ಅಗತ್ಯವಿರುತ್ತದೆ. ಇಂದಿನ ಸರ್ಕಾರಿ ಕೆಲಸಗಳಲ್ಲಿ ಸುದೀರ್ಘ ಡ್ಯೂಟಿ, ಸತತ ಪ್ರಯಾಣ ಮತ್ತು ಮಾನಸಿಕ ಒತ್ತಡ ಇರುವುದರಿಂದ, ಇದೇ ಗರಿಷ್ಠ ಕ್ಯಾಲೊರಿ ಮಾನದಂಡವನ್ನು ಸಂಬಳ ನಿಗದಿ ಮಾಡಲು ಬಳಸಬೇಕು ಎಂದು ನೌಕರರ ಸಂಘಟನೆಗಳು ಒತ್ತಾಯಿಸಿವೆ.
ಕನಿಷ್ಠ ₹69,000 ಸಂಬಳಕ್ಕೆ ಬೇಡಿಕೆ ಇಟ್ಟಿದ್ದು ಹೇಗೆ?
NC-JCM ಕೇವಲ ಕ್ಯಾಲೊರಿ ಬಗ್ಗೆ ಮಾತನಾಡದೆ, ಇಂದಿನ ಮಾರುಕಟ್ಟೆಯಲ್ಲಿ ಅಕ್ಕಿ, ಗೋಧಿ, ಬೇಳೆಕಾಳು, ಹಾಲು, ಹಣ್ಣು, ತರಕಾರಿ, ಎಣ್ಣೆ, ಮೊಟ್ಟೆ, ಮಸಾಲೆ ಮತ್ತು ಗ್ಯಾಸ್ ಸಿಲಿಂಡರ್ ದರಗಳ ಕಂಪ್ಲೀಟ್ ಪಟ್ಟಿಯನ್ನೇ ಆಯೋಗದ ಮುಂದೆ ಇಟ್ಟಿದೆ. ಇದರೊಂದಿಗೆ ಮನೆ ಬಾಡಿಗೆ, ಆರೋಗ್ಯ ಮತ್ತು ಮಕ್ಕಳ ಶಿಕ್ಷಣದ ವೆಚ್ಚವನ್ನು ಸೇರಿಸಿದರೆ ಇಂದಿನ ಸಂಬಳ ಯಾವುದಕ್ಕೂ ಸಾಲುತ್ತಿಲ್ಲ ಎಂದು ವಾದಿಸಿದೆ. ಇದೇ ಲೆಕ್ಕಾಚಾರದ ಆಧಾರದ ಮೇಲೆ, 3.833 ಫಿಟ್‌ಮೆಂಟ್ ಫ್ಯಾಕ್ಟರ್ ಜೊತೆಗೆ ಕನಿಷ್ಠ ವೇತನವನ್ನು ₹69,000 ಕ್ಕೆ ಏರಿಸಬೇಕು ಎಂದು ಬೇಡಿಕೆ ಇಡಲಾಗಿದೆ.
ಮತ್ತೊಂದೆಡೆ, ಆಲ್ ಇಂಡಿಯಾ ಎನ್‌ಪಿಎಸ್ ಎಂಪ್ಲಾಯೀಸ್ ಫೆಡರೇಶನ್ (AINPSEF) ಕೂಡ ಇಂತಹುದೇ ಬೇಡಿಕೆಯನ್ನು ಇಟ್ಟಿದೆ. ಅವರ ಲೆಕ್ಕಾಚಾರದ ಪ್ರಕಾರ 5 ಸದಸ್ಯರ ಕುಟುಂಬಕ್ಕೆ ಕನಿಷ್ಠ ₹30,000 ಮೂಲ ವೆಚ್ಚವಾಗುತ್ತದೆ. ಇದಕ್ಕೆ ಶೇಕಡಾ 58 ರಷ್ಟು ಡಿಎ (DA) ಮತ್ತು ಇತರೆ ಆಧುನಿಕ ಜೀವನದ ಖರ್ಚುಗಳನ್ನು ಸೇರಿಸಿ, ಕನಿಷ್ಠ ಸಂಬಳವನ್ನು ₹55,000 ದಿಂದ ₹60,000 ರ ನಡುವೆ ನಿಗದಿಪಡಿಸಬೇಕು ಎಂದು ಕೇಳಿಕೊಂಡಿದೆ.
ಕುಟುಂಬದ ಯೂನಿಟ್ ಹೆಚ್ಚಿಸಲು ಆಗ್ರಹ
ಹಳೆಯ ನಿಯಮದ ಪ್ರಕಾರ ಸಂಬಳ ಲೆಕ್ಕ ಹಾಕುವಾಗ 3 ಸದಸ್ಯರ ಕುಟುಂಬವನ್ನು (ಗಂಡ, ಹೆಂಡತಿ, ಒಬ್ಬ ಮಗು) ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ನೌಕರರು ತಮ್ಮ ಸಂಗಾತಿ, ಮಕ್ಕಳು ಮತ್ತು ವಯಸ್ಸಾದ ಪೋಷಕರ ಜವಾಬ್ದಾರಿಯನ್ನೂ ಹೊರಬೇಕಾಗಿದೆ. ಆದ್ದರಿಂದ ಕುಟುಂಬದ ಯೂನಿಟ್ ಅನ್ನು 3 ರಿಂದ 5 ಕ್ಕೆ ಹೆಚ್ಚಿಸಬೇಕು ಎಂದು ನೌಕರರು ಡಿಮ್ಯಾಂಡ್ ಮಾಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, 8ನೇ ವೇತನ ಆಯೋಗದ ಚರ್ಚೆಯು ಕೇವಲ ಸಂಬಳದ ಅಂಕಿ-ಅಂಶಗಳ ಹೆಚ್ಚಳಕ್ಕೆ ಸೀಮಿತವಾಗಿಲ್ಲ. ಬದಲಿಗೆ ಇಂದಿನ ಆಧುನಿಕ ಭಾರತದಲ್ಲಿ ಒಂದು ಮಧ್ಯಮ ವರ್ಗದ ಕುಟುಂಬ ನೆಮ್ಮದಿಯಿಂದ, ಗೌರವದಿಂದ ಬದುಕಲು ನಿಜವಾಗಿ ಎಷ್ಟು ಆದಾಯ ಬೇಕು ಎಂಬ ಗಂಭೀರ ಚಿಂತನೆಯತ್ತ ಸಾಗಿದೆ.