Apr 23, 2026 Languages : ಕನ್ನಡ | English

ಯಶ್ ಗಡ್ಡದ ಬಗ್ಗೆ ಹಾಲಿವುಡ್ ಮಾಸ್ಟರ್ ಹೀಗಂದಿದ್ದೇಕೆ? ಸೀಟ್ ಬೆಲ್ಟ್ ಧರಿಸಿ ಎಂಬ ಸುಳಿವು ನೀಡಿದ ಜೆಜೆ ಪೆರ್ರಿ ಹೇಳಿದ್ದಿಷ್ಟು!!

'ಕೆಜಿಎಫ್' ಮೂಲಕ ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್, ಈಗ 'ಟಾಕ್ಸಿಕ್' ಮೂಲಕ ಮತ್ತೊಂದು ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಜೂನ್ 4 ರಂದು ವಿಶ್ವದಾದ್ಯಂತ ತೆರೆಕಾಣಲಿರುವ ಈ ಚಿತ್ರದ ಹವಾ ಎಷ್ಟು ಜೋರಾಗಿದೆ ಅಂದ್ರೆ, ಸ್ವತಃ ಹಾಲಿವುಡ್‌ನ ಖ್ಯಾತ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಅವರು ಯಶ್ ಅವರ ವ್ಯಕ್ತಿತ್ವಕ್ಕೆ ಫಿದಾ ಆಗಿದ್ದಾರೆ!

ಯಶ್ ಗಡ್ಡಕ್ಕೆ ಹಾಲಿವುಡ್ ಪ್ರಶಂಸೆ ; | Photo Credit: instagram/jjlocoperry/https://kannada.timesnownews.com
ಯಶ್ ಗಡ್ಡಕ್ಕೆ ಹಾಲಿವುಡ್ ಪ್ರಶಂಸೆ ; | Photo Credit: instagram/jjlocoperry/https://kannada.timesnownews.com

ಹಾಲಿವುಡ್ ಮಾಸ್ಟರ್ ಕಣ್ಣಲ್ಲಿ ನಮ್ಮ 'ರಾಯ'!

'ಜಾನ್ ವಿಕ್' ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಕೆಲಸ ಮಾಡಿರುವ ಜೆಜೆ ಪೆರ್ರಿ ಅವರು 'ಟಾಕ್ಸಿಕ್' ಮೇಕಿಂಗ್ ಫೋಟೋಗಳನ್ನು ಹಂಚಿಕೊಂಡು ಯಶ್ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ. ಯಶ್ ಅವರ ಗಡ್ಡ ಮತ್ತು ಅವರ ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, "ಉದ್ಯಮದಲ್ಲಿ ಗಟ್ಟಿಯಾದ ಗಡ್ಡ (ಧೈರ್ಯದ ಸಂಕೇತ) ಹೊಂದಿರುವ ಅದ್ಭುತ ಪ್ರತಿಭೆ ಯಶ್. ಪ್ರೇಕ್ಷಕರೇ, ನಿಮ್ಮ ಸೀಟ್ ಬೆಲ್ಟ್ ಬಿಗಿಯಾಗಿ ಕಟ್ಟಿಕೊಳ್ಳಿ, ಆಕ್ಷನ್ ಆರ್ಭಟ ಶುರುವಾಗಲಿದೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಗೋವಾ ಟು ಹಾಲಿವುಡ್: ಏನಿದು ಕಥೆ?

ಲಾಸ್‌ವೇಗಾಸ್‌ನಲ್ಲಿ ನಡೆದ 'ಸಿನಿಮಾಕಾನ್' ಸಮಾವೇಶದಲ್ಲಿ ಯಶ್ ಅವರು ಚಿತ್ರದ ಕಥೆಯ ಬಗ್ಗೆ ಕೆಲವು ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ:

ಪೋರ್ಚುಗೀಸ್ ಕನೆಕ್ಷನ್: 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಗೋವಾದಲ್ಲಿ ಪೋರ್ಚುಗೀಸರು ಉಳಿದುಕೊಂಡಿದ್ದ ಕಾಲಘಟ್ಟದ ಕಥೆ ಇದು. ಅಂದಿನ ಭೂಗತ ಜಗತ್ತಿನ ಕರಾಳ ಮುಖಗಳನ್ನು ಈ ಸಿನಿಮಾ ಅನಾವರಣ ಮಾಡಲಿದೆ.

ತಂದೆ-ಮಗನ ಸಂಘರ್ಷ: ಈ ಗ್ಯಾಂಗ್‌ಸ್ಟರ್ ಡ್ರಾಮಾದಲ್ಲಿ ತಂದೆ ಮತ್ತು ಮಗನ ನಡುವಿನ ಭೀಕರ ಸಂಘರ್ಷ ಪ್ರಮುಖ ಆಕರ್ಷಣೆಯಂತೆ.

ಡಬಲ್ ರೋಲ್ ಧಮಾಕಾ: ಯಶ್ ಈ ಚಿತ್ರದಲ್ಲಿ 'ರಾಯ' ಮತ್ತು 'ಟಿಕೆಟ್' ಎಂಬ ಎರಡು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಅವರು ತಮ್ಮ ಐಕಾನಿಕ್ ಗಡ್ಡಕ್ಕೆ ಕತ್ತರಿ ಹಾಕಿ ಶಾರ್ಟ್ ಹೇರ್ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.

ಗ್ಲೋಬಲ್ ಮಟ್ಟದಲ್ಲಿ ಕನ್ನಡದ ಕೀರ್ತಿ

ಈ ಬಾರಿ ಯಶ್ ಕೇವಲ ಸೌತ್ ಸಿನಿಮಾ ಎಂಬ ಹಣೆಪಟ್ಟಿ ದಾಟಿ ಇಂಗ್ಲಿಷ್ ಭಾಷೆಯಲ್ಲೂ ನೇರವಾಗಿ ಚಿತ್ರೀಕರಣ ನಡೆಸುತ್ತಿದ್ದಾರೆ. ಬ್ರಿಟಿಷ್ ಕಲಾವಿದರು ಮತ್ತು ಅಂತರಾಷ್ಟ್ರೀಯ ತಾಂತ್ರಿಕ ತಂಡ ಚಿತ್ರದಲ್ಲಿರುವುದು ಇದರ ಮೆರುಗು ಹೆಚ್ಚಿಸಿದೆ. ನಯನತಾರಾ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್ ಅವರಂತಹ ಸ್ಟಾರ್ ನಟಿಯರ ದಂಡೇ ಚಿತ್ರದಲ್ಲಿದೆ. ಸಂಗೀತದಲ್ಲಿ ರವಿ ಬಸ್ರೂರು ಅವರ ಜೊತೆ ವಿದೇಶಿ ಸಂಗೀತಗಾರರು ಕೈಜೋಡಿಸಿರುವುದು ವಿಶೇಷ.

ಮಾರ್ಚ್‌ನಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾ ಇರಾನ್-ಇಸ್ರೇಲ್ ಯುದ್ಧದ ಅನಿಶ್ಚಿತತೆಯ ಕಾರಣದಿಂದ ಜೂನ್‌ಗೆ ಮುಂದೂಡಲ್ಪಟ್ಟಿದೆ. ಈಗ ಅಂತಿಮವಾಗಿ ಜೂನ್ 4 ಕ್ಕೆ ಮಾರುಕಟ್ಟೆಯಲ್ಲಿ ಯಶ್ ಅಬ್ಬರ ಶುರುವಾಗಲಿದೆ.

ಈಗಾಗಲೇ ರಿಲೀಸ್ ಆಗಿರುವ 3 ಟೀಸರ್‌ಗಳು ಮತ್ತು ಒಂದು ಹಾಡು ಸೋಶಿಯಲ್ ಮೀಡಿಯಾದಲ್ಲಿ ದಾಖಲೆ ಬರೆದಿವೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಹೇಳಿದಂತೆ, 'ಟಾಕ್ಸಿಕ್' ಸಿನಿಮಾ ಪ್ರೇಕ್ಷಕರಿಗೆ ಒಂದು ಅದ್ಭುತವಾದ "ರೋಲರ್ ಕೋಸ್ಟರ್ ರೈಡ್" ನೀಡೋದು ಖಚಿತ. ಯಶ್ ಅವರು ಕನ್ನಡ ಸಿನಿಮಾವನ್ನು ವಿಶ್ವದ ಉತ್ತುಂಗಕ್ಕೆ ಕೊಂಡೊಯ್ಯುವ ಈ ಪ್ರಯತ್ನಕ್ಕೆ ಆಲ್ ದಿ ಬೆಸ್ಟ್ ಹೇಳೋಣ!

Latest News