Mar 8, 2026 Languages : ಕನ್ನಡ | English

ವಿಜಯ್ ರಾಜಕೀಯ ಎಂಟ್ರಿ ಪಕ್ಕಾ 'ಬ್ಲಾಕ್ ಬಸ್ಟರ್' - ಮಹಿಳೆಯರಿಗಾಗಿ ಘೋಷಿಸಿದ ಈ 5 ಪ್ರಮುಖ ಯೋಜನೆಗಳು ಯಾವುವು ಗೊತ್ತಾ?

ತಮಿಳು ಚಿತ್ರರಂಗದ ದಳಪತಿ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ವಿಜಯ್, ರಾಜಕೀಯ ಅಖಾಡದಲ್ಲಿ ಸಂಚಲನ ಮೂಡಿಸಿದ್ದಾರೆ. ಇತ್ತೀಚೆಗೆ ಅವರ ವೈಯಕ್ತಿಕ ಬದುಕಿನ ಬಗ್ಗೆ ವದಂತಿಗಳು ಹಬ್ಬಿರುವ ಬೆನ್ನಲ್ಲೇ, ವಿಜಯ್ ತಮಿಳುನಾಡಿನ ಮಹಿಳೆಯರನ್ನು ಗುರಿಯಾಗಿಸಿಕೊಂಡು ಭರ್ಜರಿ ಚುನಾವಣಾ ಭರವಸೆಗಳ ಸರಣಿಯನ್ನೇ ಘೋಷಿಸಿದ್ದಾರೆ.

2,500 ರೂಪಾಯಿ ಹಕ್ಕುಧನ ಘೋಷಿಸಿ ತಮಿಳುನಾಡಿನಲ್ಲಿ ಹೊಸ ಅಲೆ ಎಬ್ಬಿಸಿದ TVK
2,500 ರೂಪಾಯಿ ಹಕ್ಕುಧನ ಘೋಷಿಸಿ ತಮಿಳುನಾಡಿನಲ್ಲಿ ಹೊಸ ಅಲೆ ಎಬ್ಬಿಸಿದ TVK

ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಮಲ್ಲಾಪುರಂನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಸಾಂಪ್ರದಾಯಿಕ ಉಚಿತ ಯೋಜನೆಗಳ ತಂತ್ರವನ್ನೇ ಮೀರಿಸುವಂತಹ ಯೋಜನೆಗಳನ್ನು ಪ್ರಕಟಿಸಿದ್ದಾರೆ. ವಿಜಯ್ ಅವರ ಈ ನಡೆ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಸೆಳೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ.

ವಿಜಯ್ ಅವರ ಪ್ರಮುಖ ಭರವಸೆ ಎಂದರೆ 'ಮಧಿಪ್ಪುಮಿಗು ಮಗಳಿರ್ ತಿಟ್ಟಮ್'. ಈ ಯೋಜನೆಯಡಿ 60 ವರ್ಷದವರೆಗಿನ ಎಲ್ಲಾ ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ಭತ್ಯೆ ನೀಡುವ ವಾಗ್ದಾನ ಮಾಡಿದ್ದಾರೆ. ಇದು ಸದ್ಯದ ಡಿಎಂಕೆ ಸರ್ಕಾರದ 1,000 ರೂಪಾಯಿ ಹಕ್ಕುಧನಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಎಂಬುದು ಗಮನಾರ್ಹ.

"ಮಹಿಳೆಯರಿಗೆ 1,000 ರೂಪಾಯಿ ನೀಡಿದರೆ ಅವರ ಮೂಲಭೂತ ಅವಶ್ಯಕತೆಗಳೂ ಪೂರೈಕೆಯಾಗುವುದಿಲ್ಲ" ಎಂದು ಹೇಳುವ ಮೂಲಕ ಅವರು ನೇರವಾಗಿ ಸಿಎಂ ಸ್ಟಾಲಿನ್ ಸರ್ಕಾರವನ್ನು ಟೀಕಿಸಿದ್ದಾರೆ. ಇದರೊಂದಿಗೆ 'ಅನ್ನಪೂರಣಿ ಸೂಪರ್ ಸಿಕ್ಸ್' ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ.

ಬಡ ಕುಟುಂಬದ ಹೆಣ್ಣುಮಕ್ಕಳ ಮದುವೆಗಾಗಿ 'ಅಣ್ಣನ್ ಸೀರ್ ತಿಟ್ಟಮ್' ಎಂಬ ಆಕರ್ಷಕ ಯೋಜನೆಯನ್ನು ವಿಜಯ್ ಪರಿಚಯಿಸಿದ್ದಾರೆ. ಈ ಯೋಜನೆಯಡಿ ಮದುವೆಯಾಗುವ ಪ್ರತಿ ವಧುವಿಗೆ ಒಂದು ಪವನ್ ಚಿನ್ನ ಮತ್ತು ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ನೀಡಲಾಗುವುದು.

ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು 'ಕಾಮರಾಜರ್ ಕಲ್ವಿ ಉರುಧಿ ತಿಟ್ಟಮ್' ಜಾರಿಗೆ ತರುವುದಾಗಿ ಹೇಳಿರುವ ಅವರು, ಆರ್ಥಿಕ ಮುಗ್ಗಟ್ಟಿನಿಂದ ಮಕ್ಕಳು ಶಾಲೆ ಬಿಡುವುದನ್ನು ತಡೆಯಲು ತಾಯಿ ಅಥವಾ ಪಾಲಕರಿಗೆ ವರ್ಷಕ್ಕೆ 15,000 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮತ್ತು ಪ್ರತಿ ನವಜಾತ ಶಿಶುವಿಗೆ ಚಿನ್ನದ ಉಂಗುರ ಹಾಗೂ 'ಬೇಬಿ ವೆಲ್ಕಮ್ ಕಿಟ್' ನೀಡುವ 'ಥಾಯಿ ಮಾಮನ್' ಯೋಜನೆಯನ್ನೂ ಅವರು ಘೋಷಿಸಿದ್ದಾರೆ.

ಮಹಿಳೆಯರ ಆರ್ಥಿಕ ಸಬಲೀಕರಣದ ಜೊತೆಗೆ ಅವರ ಸುರಕ್ಷತೆಗೂ ವಿಜಯ್ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯಲು 'ರಾಣಿ ವೇಲುನಾಚಿಯಾರ್ ಪಡೆ' ಎಂಬ ವಿಶೇಷ ಪಡೆಯನ್ನು ರಚಿಸುವುದಾಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ 500 ಮಹಿಳಾ ಭದ್ರತಾ ತಂಡಗಳನ್ನು ನಿಯೋಜಿಸುವುದಾಗಿ ತಿಳಿಸಿದ್ದಾರೆ.

ಅಪರಾಧ ಪ್ರಕರಣಗಳ ಶೀಘ್ರ ವಿಲೇವಾರಿಗೆ 'ಅಂಜಲೈ ಅಮ್ಮಾಳ್ ಫಾಸ್ಟ್‌ಟ್ರ್ಯಾಕ್' ನ್ಯಾಯಾಲಯಗಳ ಸ್ಥಾಪನೆ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಸ್ಮಾರ್ಟ್ ಪ್ಯಾನಿಕ್ ಬಟನ್ ಅಳವಡಿಕೆಯ ಭರವಸೆ ನೀಡಿದ್ದಾರೆ. ಒಟ್ಟಾರೆಯಾಗಿ, ವಿಜಯ್ ತಮ್ಮ ಭಾಷಣದಲ್ಲಿ ಭ್ರಷ್ಟಾಚಾರದ ಆರೋಪಗಳನ್ನೂ ಮಾಡಿ, ಪ್ರಸ್ತುತ ಸರ್ಕಾರದ ಬಜೆಟ್‌ನಲ್ಲಿ ಶೇ. 30ರಷ್ಟು ಹಣ ದುರುಪಯೋಗವಾಗುತ್ತಿದೆ ಎಂದು ಗುಡುಗಿದ್ದಾರೆ. ಈ ಎಲ್ಲಾ ಘೋಷಣೆಗಳು ವಿಜಯ್ ಅವರ ರಾಜಕೀಯ ಮಹತ್ವಾಕಾಂಕ್ಷೆಯನ್ನು ಸ್ಪಷ್ಟಪಡಿಸಿದ್ದು, ತಮಿಳುನಾಡು ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿವೆ.