ಸಿನಿಮಾ ಹಿನ್ನೆಲೆ ಇಲ್ಲದೆ, ಗಾಡ್ ಫಾದರ್ ಇಲ್ಲದೆ ಬಣ್ಣದ ಲೋಕಕ್ಕೆ ಬಂದು, ಇಂದು ಇಡೀ ಭಾರತವೇ ತನ್ನತ್ತ ತಿರುಗಿ ನೋಡುವಂತೆ ಮಾಡುವುದು ಸಾಮಾನ್ಯ ಮಾತಲ್ಲ. ಆದರೆ, 'ದಿ ದೇವರಕೊಂಡ' ಅಲಿಯಾಸ್ ವಿಜಯ್ ದೇವರಕೊಂಡ ಪಾಲಿಗೆ ಇದು ಸಾಧ್ಯವಾಗಿದೆ. ಕೇವಲ ಹತ್ತು-ಹನ್ನೆರಡು ವರ್ಷಗಳಲ್ಲಿ ಒಬ್ಬ ಸಾಮಾನ್ಯ ಹುಡುಗ 'ನ್ಯಾಷನಲ್ ಬ್ರ್ಯಾಂಡ್' ಆಗಿ ಬೆಳೆದ ಹಾದಿ ನಿಜಕ್ಕೂ ಸ್ಫೂರ್ತಿದಾಯಕ.
ಆರಂಭದ ದಿನಗಳ ಸಂಘರ್ಷ
ಯಾವುದೇ ಹೊಸಬರಿಗೆ ಚಿತ್ರರಂಗ ಅಷ್ಟು ಸುಲಭವಾಗಿ ರೆಡ್ ಕಾರ್ಪೆಟ್ ಹಾಕಿ ವೆಲ್ಕಮ್ ಮಾಡಲ್ಲ. ವಿಜಯ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. 2011ರಲ್ಲಿ 'ನುವ್ವಿಲಾ' ಚಿತ್ರದ ಮೂಲಕ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಾಗ ಯಾರೂ ಅಂದುಕೊಂಡಿರಲಿಲ್ಲ, ಈ ಹುಡುಗ ಮುಂದೊಂದು ದಿನ ಬಾಕ್ಸ್ ಆಫೀಸ್ ಸುಲ್ತಾನನಾಗುತ್ತಾನೆ ಎಂದು. ಆಮೇಲೆ 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರದಲ್ಲಿ ಪೋಷಕ ನಟನಾಗಿ ಮಿಂಚಿದ ಇವರಿಗೆ, ನಾಯಕನಾಗಿ ಅದೃಷ್ಟ ಖುಲಾಯಿಸಿದ್ದು 2016ರ 'ಪೆಳ್ಳಿ ಚೂಪುಲು' ಸಿನಿಮಾ ಮೂಲಕ. ಈ ಸಿನಿಮಾ ರಾಷ್ಟ್ರ ಪ್ರಶಸ್ತಿ ಗೆಲ್ಲುವ ಮೂಲಕ ವಿಜಯ್ ಅವರ ಕೆರಿಯರ್‌ಗೆ ಹೊಸ ವೇಗ ನೀಡಿತು.
'ಅರ್ಜುನ್ ರೆಡ್ಡಿ' ಅಂದ್ರೆ ಅದೊಂದು ಎಮೋಷನ್!
ವಿಜಯ್ ದೇವರಕೊಂಡ ಅವರ ಇಡೀ ಜೀವನವನ್ನೇ ಬದಲಿಸಿದ್ದು 2017ರ 'ಅರ್ಜುನ್ ರೆಡ್ಡಿ'. ಈ ಚಿತ್ರ ತೆರೆಕಂಡ ಮೇಲೆ ವಿಜಯ್ ಕೇವಲ ನಟನಾಗಿ ಉಳಿಯಲಿಲ್ಲ, ಯುವಜನತೆಯ ಪಾಲಿಗೆ 'ರೌಡಿ ಸ್ಟಾರ್' ಆದರು. ಆ ಆ್ಯಟಿಟ್ಯೂಡ್, ಆ ಗಡ್ಡದ ಲುಕ್, ಆ ತೀವ್ರವಾದ ನಟನೆಗೆ ಇಡೀ ದೇಶವೇ ಫಿದಾ ಆಯಿತು. ಈ ಚಿತ್ರಕ್ಕಾಗಿ ಅವರು ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಬಾಚಿಕೊಂಡರು. ಅಲ್ಲಿಂದ ಶುರುವಾದ ಅವರ ಕ್ರೇಜ್, ಈಗ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಿದೆ.
ದಿ ದೇವರಕೊಂಡ ಫೌಂಡೇಶನ್: ಕಷ್ಟದಲ್ಲಿರುವ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಮತ್ತು ಉದ್ಯೋಗ ಸೃಷ್ಟಿಸುವ ಮೂಲಕ ವಿಜಯ್ ರಿಯಲ್ ಲೈಫ್‌ನಲ್ಲೂ ಹೀರೋ ಎನಿಸಿಕೊಂಡಿದ್ದಾರೆ.
ರಶ್ಮಿಕಾ ಜೊತೆ ಹೊಸ ಜೀವನದ ಇನ್ನಿಂಗ್ಸ್
ಸಿನಿಮಾ ಸುದ್ದಿಗಳ ನಡುವೆ ವಿಜಯ್ ಅವರ ವೈಯಕ್ತಿಕ ಜೀವನ ಕೂಡ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಕಳೆದ ಫೆಬ್ರವರಿ 2026ರಲ್ಲಿ, ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಜೊತೆ ವಿಜಯ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸುದೀರ್ಘ ಕಾಲದ ಸ್ನೇಹ ಮತ್ತು ಪ್ರೀತಿ ಕೊನೆಗೂ ಮದುವೆಯ ಬಂಧಕ್ಕೆ ಸಾಕ್ಷಿಯಾಯಿತು. ಈ ಸ್ಟಾರ್ ಜೋಡಿಯ ಮದುವೆ ಸಿನಿರಂಗದ ಅದ್ದೂರಿ ಸಮಾರಂಭಗಳಲ್ಲಿ ಒಂದಾಗಿ ಸಂಭ್ರಮ ತಂದಿದೆ. ಇಂದು ಹುಟ್ಟು ಹಬ್ಬ ಹಿನ್ನೆಲೆ ರಶ್ಮಿಕಾ ಮಂದಣ ಮತ್ತು ತಮ್ಮ ತಾಯಿ ಜೊತೆ ಸೇರಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಮುಂದೆ ಬರ್ತಿವೆ
Hero #VijayDeverakonda meets fans who came to see him outside residence. VD joins fans in cake cutting on his special day. #HBDVijayDeverakonda pic.twitter.com/vNT7WQfGeC
— Milagro Movies (@MilagroMovies) May 9, 2026
'ಮಾಸ್' ಸಿನಿಮಾಗಳು
ಸದ್ಯ ವಿಜಯ್ ಕೈಯಲ್ಲಿ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಿವೆ. ಪ್ರಮುಖವಾಗಿ 'ರೌಡಿ ಜನಾರ್ದನ' ಮತ್ತು 'ರಣಬಾಲಿ' ಚಿತ್ರಗಳ ಮೇಲೆ ಚಿತ್ರಪ್ರೇಮಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹೊಸ ಹವಾ ಸೃಷ್ಟಿಸುವುದರಲ್ಲಿ ಸಂಶಯವಿಲ್ಲ.
ಸೋಲಲಿ, ಗೆಲ್ಲಲಿ... ತಮ್ಮದೇ ಹಾದಿಯಲ್ಲಿ ಸಾಗುವ ವಿಜಯ್ ದೇವರಕೊಂಡ, ಪರಿಶ್ರಮ ಪಟ್ಟರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಲೈವ್ ಎಕ್ಸಾಂಪಲ್. ನಟನೆ, ಬ್ಯುಸಿನೆಸ್, ಸಂಸಾರ ಹೀಗೆ ಎಲ್ಲದರಲ್ಲೂ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ರೌಡಿ ಸ್ಟಾರ್‌ಗೆ ಒಳ್ಳೆಯದಾಗಲಿ ಎಂದು ಹಾರೈಸೋಣ.