Mar 17, 2026 Languages : ಕನ್ನಡ | English

ನನ್ನನ್ನು ಶ್ರೀಲೀಲಾ ಜೊತೆ ಒಂದೇ ಫ್ರೇಮ್‌ನಲ್ಲಿ ಹಾಕಬೇಡಿ - ಪವನ್ ಕಲ್ಯಾಣ್ ಹೀಗೆ ಹೇಳಿದ್ದೇಕೆ ಗೊತ್ತಾ..?

ತೆಲುಗು ಚಿತ್ರರಂಗದ ಪವರ್ ಸ್ಟಾರ್ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ಶೀಘ್ರದಲ್ಲೇ ತೆರೆಕಾಣಲಿದೆ. ಈ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಪವನ್ ಕಲ್ಯಾಣ್ ಅವರು ನಟಿ ಶ್ರೀಲೀಲಾ ಬಗ್ಗೆ ಆಡಿದ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

ಶ್ರೀಲೀಲಾ ಡ್ಯಾನ್ಸ್ ಬಗ್ಗೆ ಪವರ್ ಸ್ಟಾರ್ ಅಚ್ಚರಿಯ ಮಾತು
ಶ್ರೀಲೀಲಾ ಡ್ಯಾನ್ಸ್ ಬಗ್ಗೆ ಪವರ್ ಸ್ಟಾರ್ ಅಚ್ಚರಿಯ ಮಾತು

ಸಾಮಾನ್ಯವಾಗಿ ಸ್ಟಾರ್ ನಟರು ತಮ್ಮ ಸಿನಿಮಾದ ನಾಯಕಿಯ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡುವುದು ಸಹಜ, ಆದರೆ ಪವನ್ ಕಲ್ಯಾಣ್ ಅವರು "ನನ್ನನ್ನು ಶ್ರೀಲೀಲಾ ಜೊತೆ ಒಂದೇ ಫ್ರೇಮ್‌ನಲ್ಲಿ ತೋರಿಸಬೇಡಿ ಎಂದು ನಿರ್ದೇಶಕರಿಗೆ ಹೇಳಿದ್ದೆ" ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಇದರ ಹಿಂದಿರುವ ಅಸಲಿ ಕಾರಣವೇನು ಎಂಬುದು ಕುತೂಹಲಕಾರಿಯಾಗಿದೆ.

ಕಾರ್ಯಕ್ರಮದ ವೇಳೆ ನಿರೂಪಕಿ ಸುಮಾ ಅವರು ಚಿತ್ರದ ಡ್ಯಾನ್ಸ್ ಬಗ್ಗೆ ಪ್ರಶ್ನಿಸಿದಾಗ ಪವನ್ ಕಲ್ಯಾಣ್ ಈ ರಹಸ್ಯವನ್ನು ಬಿಚ್ಚಿಟ್ಟರು. "ನಾನು ನಿರ್ದೇಶಕ ಹರೀಶ್ ಶಂಕರ್ ಅವರಿಗೆ ಮೊದಲೇ ಒಂದು ಶರತ್ತು ಹಾಕಿದ್ದೆ. ಹಾಡುಗಳಲ್ಲಿ ಶ್ರೀಲೀಲಾ ಮತ್ತು ನನ್ನನ್ನು ಒಟ್ಟಿಗೆ ಡ್ಯಾನ್ಸ್ ಮಾಡಿಸಬೇಡಿ. ಬೇಕಿದ್ದರೆ ನಾನು ಒಬ್ಬನೇ ಡ್ಯಾನ್ಸ್ ಮಾಡುತ್ತೇನೆ ಅಥವಾ ಶ್ರೀಲೀಲಾ ಒಬ್ಬರೇ ಮಾಡಲಿ ಎಂದು ಹೇಳಿದ್ದೆ.

ಏಕೆಂದರೆ ಶ್ರೀಲೀಲಾ ಅಪ್ರತಿಮ ಪ್ರತಿಭಾವಂತ ನಟಿ ಮತ್ತು ಅದ್ಭುತವಾದ ಡ್ಯಾನ್ಸರ್. ಅವರು ಕುಣಿಯಲು ಆರಂಭಿಸಿದರೆ ಪಕ್ಕದಲ್ಲಿರುವವರು ಯಾರೂ ಕಾಣಿಸುವುದೇ ಇಲ್ಲ. ಡ್ಯಾನ್ಸ್ ವಿಷಯದಲ್ಲಿ ಅವರು ನನ್ನನ್ನು ಸುಲಭವಾಗಿ ಡಾಮಿನೇಟ್ ಮಾಡುತ್ತಾರೆ ಎಂಬ ಭಯ ನನಗಿತ್ತು" ಎಂದು ತಮಾಷೆಯಾಗಿ ತಮ್ಮ ಮನದ ಮಾತು ಹಂಚಿಕೊಂಡರು. ಪವನ್ ಕಲ್ಯಾಣ್ ಅವರಂತಹ ದೊಡ್ಡ ನಟರೊಬ್ಬರು ಯುವ ನಟಿಯ ಪ್ರತಿಭೆಯನ್ನು ಇಷ್ಟು ಮುಕ್ತವಾಗಿ ಹೊಗಳಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದೇ ವೇದಿಕೆಯಲ್ಲಿ ಮಾತನಾಡಿದ ಕನ್ನಡದ ಹುಡುಗಿ ಶ್ರೀಲೀಲಾ ಕೂಡ ಪವನ್ ಕಲ್ಯಾಣ್ ಅವರ ವ್ಯಕ್ತಿತ್ವದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಅವರನ್ನು 'ಅಜ್ಞಾತವಾಸಿ' ಎಂದು ಬಣ್ಣಿಸಿದ ಶ್ರೀಲೀಲಾ, ಶೂಟಿಂಗ್ ಸೆಟ್‌ನಲ್ಲಿ ಪವನ್ ಅವರ ಶಿಸ್ತು ಮತ್ತು ಸರಳತೆಯನ್ನು ಕೊಂಡಾಡಿದರು. "ನಾನು ಬೇರೆ ಭಾಷೆಯ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಅನೇಕರು ಪವನ್ ಕಲ್ಯಾಣ್ ಅವರ ಬಗ್ಗೆ ವಿಚಾರಿಸುತ್ತಿದ್ದರು. ಅವರಿಗೆ ನಾನು ಪವನ್ ಒಬ್ಬ ಅಜ್ಞಾತವಾಸಿ ಎಂದು ಹೇಳುತ್ತಿದ್ದೆ. ಅವರ ಬಳಿ ಇದ್ದು ನಾನು ಜೀವನದ ಬಗ್ಗೆ ಸಾಕಷ್ಟು ಧನಾತ್ಮಕ ಅಂಶಗಳನ್ನು ಕಲಿತಿದ್ದೇನೆ. ಪರಿಸರ ಪ್ರೇಮ ಮತ್ತು ಸಮಾಜದ ಬಗ್ಗೆ ಅವರಿಗೆ ಇರುವ ಕಾಳಜಿ ನನಗೆ ಸ್ಪೂರ್ತಿ ನೀಡಿದೆ. ಅವರು ಸಿನಿಮಾಗಳಲ್ಲಿ ಸಕ್ರಿಯರಾಗಿರುವುದು ಚಿತ್ರರಂಗಕ್ಕೆ ದೊಡ್ಡ ಶಕ್ತಿ" ಎಂದು ಶ್ರೀಲೀಲಾ ಭಾವುಕರಾಗಿ ನುಡಿದರು.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಹರೀಶ್ ಶಂಕರ್ ನಿರ್ದೇಶನ ಮಾಡಿದ್ದು, ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಶ್ರೀಲೀಲಾ ಅವರೊಂದಿಗೆ ರಾಶಿ ಖನ್ನಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಚ್ 19ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಭಿಮಾನಿಗಳು 'ವಿಂಟೇಜ್' ಪವನ್ ಕಲ್ಯಾಣ್ ಅವರನ್ನು ನೋಡಬಹುದು ಎಂದು ನಿರ್ದೇಶಕರು ಭರವಸೆ ನೀಡಿದ್ದಾರೆ. ಪವನ್ ಕಲ್ಯಾಣ್ ಅವರ ರಾಜಕೀಯ ಜವಾಬ್ದಾರಿಗಳ ನಡುವೆಯೂ ಈ ಸಿನಿಮಾ ಬಿಡುಗಡೆಯಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸಿದೆ. ಶ್ರೀಲೀಲಾ ಮತ್ತು ಪವನ್ ಕಲ್ಯಾಣ್ ಅವರ ಕೆಮಿಸ್ಟ್ರಿ ಪರದೆಯ ಮೇಲೆ ಹೇಗಿರಲಿದೆ ಎಂದು ನೋಡಲು ಸಿನಿಮಾ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

Latest News