ಕ್ಯಾಮೆರಾಮನ್‌ಗಳ ಮೇಲೆ ರೇಗಿದ್ದ ಸಲ್ಮಾನ್ ಖಾನ್ ದಿಢೀರ್ ಶಾಂತವಾಗಿದ್ದು ಹೇಗೆ? ಇಲ್ಲಿದೆ ಆ ಕಂಪ್ಲೀಟ್ ಸ್ಟೋರಿ!

ಬಾಲಿವುಡ್‌ನ ‘ಸುಲ್ತಾನ್’ ಸಲ್ಮಾನ್ ಖಾನ್ ಅಂದ್ರೆನೇ ಹಾಗೆ, ಕೋಪ ಬಂದ್ರೆ ತಡೆಯೋಕೆ ಆಗಲ್ಲ, ಅದೇ ಪ್ರೀತಿ ತೋರಿಸೋಕೆ ಶುರು ಮಾಡಿದ್ರೆ ಅವರನ್ನ ಮೀರಿಸೋರೇ ಇಲ್ಲ! ಮೊನ್ನೆ ತಾನೆ ಮುಂಬೈನ ಆಸ್ಪತ್ರೆಯೊಂದರ ಹೊರಗಡೆ ತಮ್ಮ ಖಾಸಗಿತನಕ್ಕೆ ಧಕ್ಕೆ ತಂದ ಪಾಪರಾಜಿಗಳ (ಸೆಲೆಬ್ರಿಟಿ ಫೋಟೋಗ್ರಾಫರ್‌ಗಳು) ಮೇಲೆ ಸಲ್ಲು ಭಾಯ್ ಫುಲ್ ಕೆಂಡಾಮಂಡಲ ಆಗಿದ್ರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡಿತ್ತು. ಆದ್ರೆ, ಈ ಜಗಳ ನಡೆದ ಕೇವಲ ಒಂದೇ ದಿನದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ತಮ್ಮ ದೊಡ್ಡ ಗುಣ ತೋರಿಸಿದ್ದಾರೆ. ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದ ಫೋಟೋಗ್ರಾಫರ್‌ಗಳನ್ನ ಅಪ್ಪಿಕೊಂಡು, ಹಳೇ ಮುನಿಸನ್ನೆಲ್ಲಾ ಮರೆತು ಎಂದಿನಂತೆ ನಗುತ್ತಾ ಪೋಸ್ ಕೊಟ್ಟಿದ್ದಾರೆ.

ಸಿಟ್ಟಿನಲ್ಲೂ ಸಲ್ಮಾನ್ ಮೆರೆದದ್ದು ದೊಡ್ಡ ಗುಣ
ಸಿಟ್ಟಿನಲ್ಲೂ ಸಲ್ಮಾನ್ ಮೆರೆದದ್ದು ದೊಡ್ಡ ಗುಣ

ಬುಧವಾರ ರಾತ್ರಿ ಮುಂಬೈನಲ್ಲಿ ನಡೆದ ಸಿನಿಮಾ ಇವೆಂಟ್ ಒಂದರಲ್ಲಿ ಸಲ್ಮಾನ್ ಖಾನ್ ಮತ್ತು ಪಾಪರಾಜಿಗಳ ನಡುವೆ ನಡೆದ ಈ ಸ್ವೀಟ್ ರಾಜಿ ಸದ್ಯಕ್ಕೆ ಬಿಟೌನ್‌ನಲ್ಲಿ ಸಖತ್ ಚರ್ಚೆಯಾಗ್ತಿದೆ.

ಅಸಲಿಗೆ ಆಸ್ಪತ್ರೆ ಎದುರು ಆಗಿದ್ದೇನು?

ಮಂಗಳವಾರ ರಾತ್ರಿ ಮುಂಬೈನ ಆಸ್ಪತ್ರೆಯೊಂದರಲ್ಲಿ ಸಲ್ಮಾನ್ ಖಾನ್ ಅವರ ಆಪ್ತರೊಬ್ಬರು ದಾಖಲಾಗಿದ್ದರು. ಅವರನ್ನ ಮಾತನಾಡಿಸೋಕೆ ಅಂತ ಸಲ್ಲು ಭಾಯ್ ಆಸ್ಪತ್ರೆಗೆ ಹೋಗಿದ್ರು. ಆಸ್ಪತ್ರೆ ಅಂದಮೇಲೆ ಅಲ್ಲಿ ರೋಗಿಗಳು ಇರ್ತಾರೆ, ಸೈಲೆನ್ಸ್ ಮೇಂಟೇನ್ ಮಾಡಬೇಕು ಅನ್ನೋ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಪಾಪರಾಜಿಗಳು ಸಲ್ಮಾನ್ ಕಂಡ ತಕ್ಷಣ ಕ್ಯಾಮೆರಾ ಹಿಡಿದು ಮುಗಿಬಿದ್ದಿದ್ದಾರೆ. ಅಷ್ಟೇ ಅಲ್ಲದೆ, ಸಲ್ಮಾನ್ ನಟಿಸುತ್ತಿರೋ ಮುಂಬರುವ ಹೊಸ ಸಿನಿಮಾ ‘ಮಾತೃಭೂಮಿ’ ಹೆಸರನ್ನ ಆಸ್ಪತ್ರೆಯ ಆವರಣದಲ್ಲೇ ಜೋರಾಗಿ ಕೂಗುತ್ತಾ ಫುಲ್ ಗದ್ದಲ ಸೃಷ್ಟಿ ಮಾಡಿದ್ರು.

ಇದರಿಂದ ಸಲ್ಮಾನ್ ಖಾನ್‌ಗೆ ಸಿಕ್ಕಾಪಟ್ಟೆ ಕೋಪ ಬಂದಿತ್ತು. ತಕ್ಷಣ ಫೋಟೋಗ್ರಾಫರ್‌ಗಳ ಕಡೆ ತಿರುಗಿ, "ನಿಮಗೇನಾದ್ರೂ ಹುಚ್ಚು ಹಿಡಿದಿದೆಯೇ?" ಅಂತ ತಲೆಗೆ ಕೈ ಮುಟ್ಟಿ ಖಾರವಾಗಿ ಪ್ರಶ್ನೆ ಮಾಡಿದ್ರು. "ನಿಮ್ಮ ಕುಟುಂಬದವರು ಯಾರಾದ್ರೂ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾಗ ಬೇರೆಯವರು ಬಂದು ಹೀಗೆ ಕಿರುಚಾಡಿದ್ರೆ ನಿಮಗೆ ಹೇಗನಿಸುತ್ತೆ?" ಅಂತ ಅಲ್ಲೇ ನಿಂತು ನೆರೆದಿದ್ದವರಿಗೆಲ್ಲಾ ಭರ್ಜರಿಯಾಗಿ ಕ್ಲಾಸ್ ತಗೊಂಡಿದ್ರು.

ಮರುದಿನವೇ ಸಕ್ಸಸ್ ಪಾರ್ಟಿಯಲ್ಲಿ ‘ಸಾರಿ’ ಡ್ರಾಮಾ!

ಆಸ್ಪತ್ರೆ ಘಟನೆ ನಡೆದ ಮರುದಿನವೇ ಅಂದ್ರೆ ಬುಧವಾರ ರಾತ್ರಿ ಮುಂಬೈನಲ್ಲಿ ‘ರಾಜಾ ಶಿವಾಜಿ’ ಸಿನಿಮಾದ ಸಕ್ಸಸ್ ಪಾರ್ಟಿ ಇತ್ತು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಸ್ಪೆಷಲ್ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹೀರೋ ಮತ್ತು ಡೈರೆಕ್ಟರ್ ಆಗಿರೋ ರಿತೇಶ್ ದೇಶ್‌ಮುಖ್ ಜೊತೆ ಸಲ್ಮಾನ್ ಖಾನ್ ಫೋಟೋಗೆ ಪೋಸ್ ಕೊಡೋಕೆ ಅಂತ ಹೊರಗೆ ಬರುತ್ತಿದ್ದಂತೆಯೇ, ಅಲ್ಲಿದ್ದ ಫೋಟೋಗ್ರಾಫರ್‌ಗಳೆಲ್ಲಾ ಅಲರ್ಟ್ ಆದ್ರು.

ತಮ್ಮ ತಪ್ಪಿನ ಅರಿವಾಗಿದ್ದ ಪಾಪರಾಜಿಗಳು ಸಲ್ಮಾನ್ ಹತ್ತಿರ ಬರುತ್ತಿದ್ದ ಹಾಗೆ, "ನಮ್ಮನ್ನ ಕ್ಷಮಿಸಿಬಿಡಿ ಭಾಯ್" ಅಂತ ಒಟ್ಟಿಗೆ ಗದ್ದಲ ಮಾಡೋಕೆ ಶುರು ಮಾಡಿದ್ರು. ಇದನ್ನ ನೋಡಿದ ಸಲ್ಮಾನ್, ಮೊದಲು ಫೋಟೋಗ್ರಾಫರ್ ಒಬ್ಬನನ್ನ ಹತ್ತಿರ ಬಿಡುವಂತೆ ತಮ್ಮ ಬಾಡಿಗಾರ್ಡ್ಸ್‌ಗೆ ಸನ್ನೆ ಮಾಡಿದ್ರು. ಆಮೇಲೆ ಮ್ಯಾಟರ್ ಏನೆಂದು ಕೇಳಿದಾಗ ಅವರೆಲ್ಲಾ ಸಾರಿ ಕೇಳ್ತಿರೋದು ಸಲ್ಲುಗೆ ಅರ್ಥ ಆಯ್ತು. ತಕ್ಷಣವೇ ಸಲ್ಮಾನ್ ನಗುತ್ತಾ, "ಓಕೆ, ಎಲ್ಲವೂ ಸರಿ ಹೋಗಿದೆ" ಅನ್ನೋ ತರಹ ಸಿಗ್ನಲ್ ಕೊಟ್ರು.

"ಇವತ್ತು ಯಾರೂ ಕಿರುಚಬೇಡಿ!" ಸಲ್ಲು ಭಾಯ್ ಕಾಲೆಳೆದ ವಿಡಿಯೋ ವೈರಲ್!

ಸದ್ಯಕ್ಕೆ ಈ ರಾಜಿ ಪಂಚಾಯಿತಿಯ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗ್ತಿದೆ. ವಿಡಿಯೋದಲ್ಲಿ ಫೋಟೋಗ್ರಾಫರ್ ಒಬ್ಬ, "ಇವತ್ತು ಯಾರೂ ಜೋರಾಗಿ ಕಿರುಚಾಡಬೇಡಿ ಪ್ರೆಂಡ್ಸ್, ಲವ್ ಯೂ ಭಾಯ್" ಅಂತ ಕೂಗೋದು ಕೇಳಿಸುತ್ತೆ. ಅದಕ್ಕೆ ಸಲ್ಮಾನ್ ಖಾನ್ ನಗುತ್ತಾ, "ಹಾ, ಈ ಜಾಗ ಓಕೆ, ಇಲ್ಲಿ ನೀವು ಬೇಕಿದ್ರೆ ಕಿರುಚಾಡಬಹುದು" ಅಂತ ಟಾಂಗ್ ಕೊಟ್ಟಿದ್ದಾರೆ.

ಅಷ್ಟಕ್ಕೇ ಬಿಡದ ಪಾಪರಾಜಿಗಳು ಮಂಗಳವಾರ ರಾತ್ರಿ ತಾವು ಮಾಡಿದ ಗಲಾಟೆಗೆ ಮತ್ತೊಮ್ಮೆ ಸಾರಿ ಕೇಳಿದಾಗ, ಸಲ್ಮಾನ್ ಖಾನ್ ಫುಲ್ ಕಾಮಿಡಿ ಮೂಡ್‌ಗೆ ಜಾರಿದ್ರು. "ಸ್ವಲ್ಪ ಜೋರಾಗಿ ಹೇಳಿ, ನಿಮ್ಮ ಧ್ವನಿ ನನಗೆ ಸರಿಯಾಗಿ ಕೇಳಿಸುತ್ತಿಲ್ಲ" ಅಂತ ತಮಾಷೆಯಾಗಿ ಕಾಲೆಳೆದಿದ್ದಾರೆ. ಸಲ್ಮಾನ್ ಅವರ ಈ ಹ್ಯೂಮರ್ ಸೆನ್ಸ್ ನೋಡಿ ಪಕ್ಕದಲ್ಲೇ ನಿಂತಿದ್ದ ನಟ ರಿತೇಶ್ ದೇಶ್‌ಮುಖ್ ಕೂಡ ತಡೆಯಲಾರದೆ ಜೋರಾಗಿ ನಕ್ಕಿದ್ದಾರೆ.

Latest News