ಬೆಂಗಳೂರು: ಸಿನಿಮಾ ಜಗತ್ತಿನಲ್ಲಿ ರಜನಿಕಾಂತ್ ಅವರಿಗೆ ಇರುವ ಕ್ರೇಜ್ ಬಗ್ಗೆ ನಾವು ಹೇಳಬೇಕಿಲ್ಲ. ಆದ್ರೆ, ಬೆಂಗಳೂರಿನ ಕನಕಪುರ ರಸ್ತೆಯಲ್ಲಿರೋ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 'ಆರ್ಟ್ ಆಫ್ ಲಿವಿಂಗ್' ಆಶ್ರಮಕ್ಕೆ ಹೋದಾಗ ರಜನಿ ಅವರಿಗೆ ಒಂದು ಅಚ್ಚರಿಯ ಅನುಭವ ಕಾದಿತ್ತು. ಆರ್ಟ್ ಆಫ್ ಲಿವಿಂಗ್‌ನ 45ನೇ ವರ್ಷಾಚರಣೆ ಮತ್ತು ಗುರೂಜಿಯವರ 70ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಜನಿ, ತಮ್ಮ ಅಹಂಕಾರ ಹೇಗೆ ಮಣ್ಣುಪಾಲಾಯ್ತು ಅನ್ನೋದನ್ನ ಹರಟೆ ಹೊಡೆಯುವ ಶೈಲಿಯಲ್ಲಿ ಹಂಚಿಕೊಂಡಿದ್ದಾರೆ.
2 ದಿನಕ್ಕೆ ಬಂದವರು 15 ದಿನ ಅಲ್ಲೇ ಇದ್ರು!
ರಜನಿಕಾಂತ್ ಅವರಿಗೆ ಅಧ್ಯಾತ್ಮ ಅಂದ್ರೆ ಪಂಚಪ್ರಾಣ. ಒಮ್ಮೆ ಆಶ್ರಮಕ್ಕೆ ಹೋದಾಗ ಕೇವಲ ಎರಡು ದಿನ ಇರೋಣ ಅಂದುಕೊಂಡಿದ್ದರಂತೆ. ಆದ್ರೆ ಅಲ್ಲಿನ ಕೆರೆ, ಹಸಿರು, ಶಾಂತ ಪರಿಸರ ಮತ್ತು ನಗುಮುಖದ ಜನರನ್ನು ಕಂಡು ಮಾರುಹೋದ ರಜನಿ, ಬರೋಬ್ಬರಿ 15 ದಿನಗಳ ಕಾಲ ಅಲ್ಲೇ ಠಿಕಾಣಿ ಹೂಡಿದ್ರು. "ಅಲ್ಲಿ ನೂರಾರು ಹಸುಗಳು, ಆನೆಗಳು ಇದ್ದವು. ವಿಶೇಷ ಅಂದ್ರೆ ಅಲ್ಲಿದ್ದ ಒಂದು ಕುದುರೆ ಹೆಸರೂ 'ರಜಿನಿ' ಎಂದಿತ್ತು!" ಎಂದು ಅವರು ಹೇಳಿದಾಗ ವೇದಿಕೆ ಮುಂದೆ ಇದ್ದವರೆಲ್ಲಾ ಗಹಗಹಿಸಿ ನಕ್ಕರು.
"ನನ್ನನ್ನ ಯಾರಾದ್ರೂ ನೋಡ್ತಾರೆ ಅಂತ ಕಾದಿದ್ದೆ..."
ಅಸಲಿ ಕಥೆ ಶುರುವಾಗಿದ್ದೇ ಇಲ್ಲಿ. ರಜನಿಕಾಂತ್ ಅವರು ಕೆರಿಯರ್‌ನ ಉತ್ತುಂಗದಲ್ಲಿದ್ದಾಗ ಗುರೂಜಿ ಅವರ ಜೊತೆ ಆಶ್ರಮದ ಒಳಗೆ ಒಂದು ರೌಂಡ್ ಹೋಗಿದ್ದರಂತೆ. ಆಗ ರಜನಿ ಮನಸ್ಸಿನಲ್ಲಿ ಒಂದು ಆತಂಕ ಇತ್ತು. "ನಾನು ಇಷ್ಟು ದೊಡ್ಡ ನಟ, ಅದರಲ್ಲೂ ಅಲ್ಲಿ ತಮಿಳುನಾಡಿನ ನೂರಾರು ಜನರು ಇದ್ದಾರೆ. ನಾನು ಹೊರಗೆ ಬಂದ್ರೆ ಜನ ಮುತ್ತಿಕೊಳ್ಳಬಹುದು, ಆಟೋಗ್ರಾಫ್‌ಗಾಗಿ ಮುಗಿಬೀಳಬಹುದು, ಸೆಕ್ಯೂರಿಟಿ ಸಮಸ್ಯೆ ಆಗಬಹುದು ಅಂತ ಅಂದುಕೊಂಡಿದ್ದೆ."
ಆದ್ರೆ ಆಗಿದ್ದೇ ಬೇರೆ! ರಜನಿ ಅವರು ಗುರೂಜಿ ಜೊತೆ ನಡ್ಕೊಂಡು ಹೋಗ್ತಿದ್ರು, ಪಕ್ಕದಲ್ಲೇ ಜನ ಇದ್ರು. ರಜನಿ ಅವರು ಯಾರಾದ್ರೂ ಗುರುತಿಸ್ತಾರೆ ಅಂತ ಅವ್ರ ಕಡೆ ನೋಡಿದ್ರೂ, ಅಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಕೂಡ ಅವರನ್ನ ಕಣ್ಣೆತ್ತಿ ನೋಡಲಿಲ್ಲವಂತೆ!
"ಅಹಂಕಾರ ಮುರಿದು ಬಿತ್ತು"
ಈ ಘಟನೆ ಬಗ್ಗೆ ರಜನಿ ಬಹಳ ಅರ್ಥಗರ್ಭಿತವಾಗಿ ಮಾತನಾಡಿದ್ದಾರೆ. "ನಾನು ಸುಮ್ಮನೆ ಜನರಿಗೆ ಕೈಬೀಸುತ್ತಿದ್ದೆ, ಆದ್ರೆ ಯಾರೂ ನನ್ನ ಕಡೆ ಗಮನ ಹರಿಸಲಿಲ್ಲ. ಫೋಟೋ, ಆಟೋಗ್ರಾಫ್ ಬಿಡಿ, ಯಾರೂ ನನ್ನ ಹತ್ತಿರ ಮಾತನಾಡಲೂ ಬರಲಿಲ್ಲ. ನಾನು ಅನೇಕ ದೊಡ್ಡ ರಾಜಕಾರಣಿಗಳು, ಉದ್ಯಮಿಗಳನ್ನು ನೋಡಿದ್ದೇನೆ. ಆದ್ರೆ ಆ ದಿನ ನನ್ನ ಅಹಂಕಾರ ಸಂಪೂರ್ಣವಾಗಿ ನುಚ್ಚುನೂರಾಯಿತು. ಅಧ್ಯಾತ್ಮದ ಶಕ್ತಿಯ ಮುಂದೆ ನನ್ನ ಸ್ಟಾರ್‌ಡಮ್ ಏನೂ ಅಲ್ಲ ಅನ್ನೋದು ಅಂದು ನನಗೆ ಅರ್ಥವಾಯಿತು" ಎಂದು ರಜನಿ ಮನಬಿಚ್ಚಿ ಹೇಳಿದರು.
VIDEO | Recalling his earlier visit to the Art of Living, actor Rajinikanth (@rajinikanth) brought the house down with his humorous take, said, 'nobody even looked at me'.#Rajinikanth pic.twitter.com/JPZGgxtLMv
— Press Trust of India (@PTI_News) May 12, 2026
ಸ್ಟಾರ್‌ಡಮ್ ಶಾಶ್ವತವಲ್ಲ
ಸಿನಿಮಾದಲ್ಲಿ ಸಿಗುವ ಪ್ರಸಿದ್ಧಿ ತಾತ್ಕಾಲಿಕ, ಅದು ಬರುತ್ತೆ ಹೋಗುತ್ತೆ. ಆದ್ರೆ ಅಧ್ಯಾತ್ಮದಲ್ಲಿ ಸಿಗುವ ಶಾಂತಿ ಮತ್ತು ಶಕ್ತಿ ಮಾತ್ರ ಶಾಶ್ವತ. "ಸಿನಿಮಾ ಸ್ಟಾರ್‌ಡಮ್ ಕಣ್ಮರೆಯಾಗಬಹುದು, ಆದ್ರೆ ಆಧ್ಯಾತ್ಮಿಕ ಶಕ್ತಿ ಸಾವಿನ ನಂತರವೂ ನಮ್ಮ ಜೊತೆ ಉಳಿಯುತ್ತದೆ" ಎನ್ನುವ ಮೂಲಕ ರಜನಿಕಾಂತ್ ಅವರು ಬದುಕಿನ ದೊಡ್ಡ ಪಾಠವೊಂದನ್ನು ತಮ್ಮ ಅಭಿಮಾನಿಗಳಿಗೆ ಸರಳವಾಗಿ ತಿಳಿಸಿಕೊಟ್ಟಿದ್ದಾರೆ.