ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ಮತ್ತು ಸಿನಿಮಾಗಳ ವ್ಯಾಕರಣವನ್ನೇ ಬದಲಿಸಿದ ಮಹಾನ್ ನಿರ್ದೇಶಕ ಭಾರತಿರಾಜ (83) ಇಂದು (ಜೂನ್ 10) ನಿಧನರಾಗಿದ್ದಾರೆ. ಅವರ ಅಗಲಿಕೆಗೆ ತಮಿಳುನಾಡು ಸಿಎಂ ವಿಜಯ್ ಸೇರಿದಂತೆ ಸೌತ್ ಸಿನಿಪ್ರಪಂಚದ ಮತ್ತು ರಾಜಕೀಯ ರಂಗದ ಹತ್ತಾರು ಗಣ್ಯರು ಕಣ್ಣೀರಿಡುತ್ತಾ ಅಂತಿಮ ನಮನ ಸಲ್ಲಿಸಿದ್ದಾರೆ.
ಇವತ್ತು ನಾವು ತಮಿಳು ಹಾಗೂ ಸೌತ್ ಸಿನಿಮಾಗಳಲ್ಲಿ ಏನು ರಿಯಲಿಸ್ಟಿಕ್ ಮತ್ತು ಹಳ್ಳಿ ಸೊಗಡಿನ ಕಥೆಗಳನ್ನು ನೋಡ್ತಾ ಇದ್ದೀವೋ, ಅದಕ್ಕೆಲ್ಲಾ ಮೊದಲ ಬಾರಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದೇ ಈ ಭಾರತಿರಾಜ. ಆದರೆ, ಇಷ್ಟೊಂದು ದೊಡ್ಡ ಹೆಸರು ಮಾಡಿದ ಈ ಲೆಜೆಂಡ್ ಬೆಳೆದು ಬಂದ ಹಾದಿ ಮಾತ್ರ ಅಷ್ಟು ಸುಲಭವಾಗಿರಲಿಲ್ಲ. ಅವರೊಬ್ಬ ಸಾಧಾರಣ ಪೆಟ್ರೋಲ್ ಬಂಕ್ ನೌಕರನಾಗಿ ಜೀವನ ಆರಂಭಿಸಿ, ನಂತರ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದವರು. ದಿವಂಗತ ಗಾನಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಇವರ ನಡುವಿನ ದಶಕಗಳ ಸ್ನೇಹ ಹಾಗೂ ಇವರ ಸಿನಿಮಾ ಜರ್ನಿಯ ಆ ರೋಚಕ ಕಥೆ ಇಲ್ಲಿದೆ.
ಪೆಟ್ರೋಲ್ ಬಂಕ್ ಕೆಲಸದಿಂದ ನಾಟಕದ ವೇದಿಕೆಗೆ
ಭಾರತಿರಾಜ ಅವರಿಗೆ ಮೊದಲಿನಿಂದಲೂ ಕಲೆ, ನಾಟಕ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಆದರೆ ಹೊಟ್ಟೆಪಾಡಿಗಾಗಿ ಅವರು ಚೆನ್ನೈನಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಬೇಕಾಯಿತು. ಅದರಲ್ಲಿ ಪೆಟ್ರೋಲ್ ಬಂಕ್ ಒಂದರಲ್ಲಿ ಗಾಡಿಗಳಿಗೆ ಪೆಟ್ರೋಲ್ ಹಾಕುವ ಕೆಲಸವೂ ಒಂದಾಗಿತ್ತು. ಕೆಲಸದ ಜೊತೆ ಜೊತೆಗೆ ಸಿಕ್ಕ ಬಿಡುವಿನಲ್ಲಿ ನಾಟಕಗಳಲ್ಲಿ ನಟಿಸುತ್ತಿದ್ದರು. ಅತ್ತ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಕೂಡ ಆಗಿನ್ನೂ ಸಿನಿಮಾಗಳಲ್ಲಿ ದೊಡ್ಡ ಗಾಯಕರಾಗಿರಲಿಲ್ಲ, ಕೇವಲ ಸ್ಟೇಜ್ ಶೋಗಳಲ್ಲಿ ಹಾಡುತ್ತಿದ್ದರು. ಆಗಾಗ ಭಾರತಿರಾಜ ಅವರ ನಾಟಕಗಳಿಗೂ ಎಸ್ಪಿಬಿ ಹಾಡುತ್ತಿದ್ದರು. ಹಾಗೆ ಶುರುವಾದ ಇವರ ಸ್ನೇಹ ಕೊನೆಯವರೆಗೂ ಗಟ್ಟಿಯಾಗಿ ಉಳಿದುಕೊಂಡಿತ್ತು.
ಇಳಯರಾಜಾ ಅವರ ಪ್ರತಿಭೆ ಗುರುತಿಸಿದ್ದೇ ಭಾರತಿರಾಜ
ಇವತ್ತು ಜಗತ್ತೇ ಕೊಂಡಾಡುವ 'ಮ್ಯೂಸಿಕ್ ಮಾಂತ್ರಿಕ' ಇಳಯರಾಜ ಅವರು ಚಿತ್ರರಂಗಕ್ಕೆ ಬರಲು ಮುಖ್ಯ ಕಾರಣವಾಗಿದ್ದೇ ಭಾರತಿರಾಜ ಅನ್ನೋದು ಬಹಳ ಜನರಿಗೆ ಗೊತ್ತಿಲ್ಲ. ಒಂದು ದಿನ ಭಾರತಿರಾಜ ಅವರು ಎಸ್ಪಿಬಿ ಬಳಿ ಬಂದು, "ನಮ್ಮ ಪಕ್ಕದ ಊರಿನ ಮೂರು ಜನ ಮ್ಯೂಸಿಷಿಯನ್ಸ್ ಚೆನ್ನೈಗೆ ಬಂದಿದ್ದಾರೆ, ತುಂಬಾ ಚೆನ್ನಾಗಿ ಪ್ಲೇ ಮಾಡ್ತಾರೆ. ಅವರನ್ನ ನಿನ್ನ ಟ್ರೂಪ್‌ಗೆ ಸೇರಿಸಿಕೊ" ಅಂತ ರೆಕಮೆಂಡ್ ಮಾಡಿದ್ರು.
ಗೆಳೆಯನ ಮಾತು ಕೇಳಿ ಎಸ್ಪಿಬಿ ಆ ಮೂವರನ್ನು ರಿಹರ್ಸಲ್ ಜಾಗಕ್ಕೆ ಕರೆಸಿಕೊಂಡರು. ಅವರೇ ಇಳಯರಾಜ ಮತ್ತು ಅವರ ಇಬ್ಬರು ಸಹೋದರರು! ಇಳಯರಾಜ ಅವರ ಹಾರ್ಮೊನಿಯಂ ನುಡಿಸುವ ಸ್ಟೈಲ್ ನೋಡಿ ಎಸ್ಪಿಬಿ ಫಿದಾ ಆಗಿಬಿಟ್ಟರು. ಆದರೆ ಆ ಟ್ರೂಪ್ ಲೀಡರ್‌ಗೆ ಇವರನ್ನು ಸೇರಿಸಿಕೊಳ್ಳಲು ಇಷ್ಟವಿರಲಿಲ್ಲ, ಯಾಕಂದ್ರೆ ಅದಾಗಲೇ ಅಲ್ಲಿ ಬೇರೆ ಹಾರ್ಮೊನಿಯಂ ವಾದಕರು ಇದ್ದರು. ವಿಷಯ ಗೊತ್ತಾದಾಗ ಇಳಯರಾಜ ಅವರು "ನನಗೆ ಗಿಟಾರ್ ಕೂಡ ನುಡಿಸೋಕೆ ಬರುತ್ತೆ" ಅಂದಾಗ, ಎಸ್ಪಿಬಿ ಅವರನ್ನು ಗಿಟಾರ್ ವಾದಕರಾಗಿ ತಂಡಕ್ಕೆ ಸೇರಿಸಿಕೊಂಡರು. ಅಲ್ಲಿಂದ ಇಳಯರಾಜ ಬೆಳೆದ ಎತ್ತರ ಇಡೀ ಜಗತ್ತಿಗೆ ಗೊತ್ತು! ಇಂಥದ್ದೊಂದು ಅದ್ಭುತ ಪ್ರತಿಭೆಯನ್ನು ಮುಖ್ಯವಾಹಿನಿಗೆ ತಂದ ಕ್ರೆಡಿಟ್ ಭಾರತಿರಾಜ ಅವರಿಗೆ ಸಲ್ಲಬೇಕು.
ಮಾರುತಿ 800 ಕಾರು ಮತ್ತು ಹುಟ್ಟಿಕೊಂಡ ಕಥೆಗಳು
ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಗಾಯಕರಾಗಿ ಸ್ವಲ್ಪ ಫೇಮಸ್ ಆದ ತಕ್ಷಣ ಮೊದಲ ಬಾರಿಗೆ ಒಂದು ಮಾರುತಿ 800 ಕಾರು ಕೊಂಡುಕೊಂಡರಂತೆ. ಸಾಂಗ್ ರೆಕಾರ್ಡಿಂಗ್ ಮತ್ತು ಸ್ಟೇಜ್ ಪ್ರೋಗ್ರಾಂಗಳಿಗೆ ಹೋಗುವಾಗಲೆಲ್ಲಾ ಅವರು ಭಾರತಿರಾಜ ಅವರನ್ನು ಜೊತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದರು. ಹಾಗೆ ಕಾರ್‌ನಲ್ಲಿ ಜರ್ನಿ ಮಾಡುವಾಗಲೆಲ್ಲಾ ಭಾರತಿರಾಜ ಅವರು ತಾವೇ ಸ್ವತಃ ರೆಡಿ ಮಾಡಿಟ್ಟುಕೊಂಡಿದ್ದ ಕಥೆಗಳನ್ನು ಎಸ್ಪಿಬಿ ಎದುರು ಹೇಳ್ತಾ ಹೋಗ್ತಾ ಇದ್ರು.
ಅವರು ಹೇಳುತ್ತಿದ್ದ ಕಥೆಗಳು ಆ ಕಾಲದ ಸಿನಿಮಾಗಳಿಗಿಂತ ಸಂಪೂರ್ಣ ಭಿನ್ನವಾಗಿರುತ್ತಿದ್ದವು. ಯಾರು ಕೂಡ ಊಹಿಸದ ರೀತಿಯಲ್ಲಿ ಇರುತ್ತಿದ್ದವಂತೆ. ಕಥೆ ಕೇಳಿ ಎಸ್ಪಿಬಿಗೆ ಒಂದು ಸಣ್ಣ ಡೌಟ್ ಇತ್ತಂತೆ... "ಇಷ್ಟೊಂದು ರಿಯಲಿಸ್ಟಿಕ್ ಆಗಿರೋ, ಹಳ್ಳಿ ಬ್ಯಾಕ್‌ಡ್ರಾಪ್ ಇರೋ ಕಥೆಗಳನ್ನ ಸಿನಿಮಾ ಮಾಡಿದ್ರೆ ಜನ ಥಿಯೇಟರ್‌ಗೆ ಬಂದು ನೋಡ್ತಾರಾ?" ಅಂತ.
ಸ್ಟುಡಿಯೋ ಸಂಸ್ಕೃತಿ ಮುರಿದು ಇತಿಹಾಸ ಬರೆದ '16 ವಯತಿನಿಲೆ'
ಆದರೆ ಭಾರತಿರಾಜ ಸಿನಿಮಾವನ್ನು ತೆರೆಗೆ ತಂದಾಗ ಎಸ್ಪಿಬಿ ಅವರ ಅನುಮಾನ ಸುಳ್ಳಾಯಿತು. ಭಾರತಿರಾಜ ಅವರ ನಿರ್ದೇಶನದ ಮೊದಲ ಸಿನಿಮಾ ‘16 ವಯತಿನಿಲೆ’ (16 வயதினிலே) ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತು. ತಮಿಳು ಚಿತ್ರರಂಗದಲ್ಲಿ ಗ್ಲಾಮರ್ ಇಲ್ಲದ, ನೈಜ ಹಳ್ಳಿಗಳನ್ನು ಮತ್ತು ಹಳ್ಳಿಯ ಜನರ ಅಸಲಿ ಕ್ಯಾರೆಕ್ಟರ್‌ಗಳನ್ನು ತೋರಿಸಿ ಇಡೀ ಸೌತ್ ಇಂಡಸ್ಟ್ರಿ ತಿರುಗಿ ನೋಡುವಂತೆ ಮಾಡಿದರು.
ಅಷ್ಟೇ ಅಲ್ಲ, ಆ ಕಾಲದಲ್ಲಿ ಸಿನಿಮಾಗಳು ಅಂದ್ರೆ ಕೇವಲ ಸ್ಟುಡಿಯೋ ಸೆಟ್‌ಗಳ ಒಳಗಷ್ಟೇ ಶೂಟಿಂಗ್ ಆಗುತ್ತಿದ್ದವು. ಆ ಸ್ಟುಡಿಯೋಗಳ ಏಕಸ್ವಾಮ್ಯವನ್ನು ಮುರಿದು, ಕ್ಯಾಮೆರಾವನ್ನು ನಿಜವಾದ ಹಳ್ಳಿಗಳ ಲೊಕೇಶನ್‌ಗೆ ಕೊಂಡೊಯ್ದ ಮೊದಲ ನಿರ್ದೇಶಕ ಭಾರತಿರಾಜ!
ಇವತ್ತು ಅಂತಹ ಮಹಾನ್ ಚೇತನ ನಮ್ಮನ್ನಗಲಿ ಹೋಗಿದ್ದಾರೆ. ಕೆಲವು ವರ್ಷಗಳ ಹಿಂದೆ ಆಪ್ತ ಗೆಳೆಯ ಎಸ್ಪಿಬಿ ಕಾಲವಾದಾಗಲೇ ಭಾರತಿರಾಜ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇವತ್ತು ತಮ್ಮ ಆಪ್ತ ಗೆಳೆಯನ ಬಳಿಗೇ ಭಾರತಿರಾಜ ಪಯಣ ಬೆಳೆಸಿದ್ದಾರೆ. ತಮಿಳು ಚಿತ್ರರಂಗದ ಒಂದು ಸುವರ್ಣ ಯುಗ ಇವತ್ತಿಗೆ ಅಂತ್ಯವಾದಂತಾಗಿದೆ.