Feb 16, 2026 Languages : ಕನ್ನಡ | English

ವೈವಾಹಿಕ ಜೀವನಕ್ಕೆ ನಾಂದಿ ಹಾಡಿದ ‘ನಂದಗೋಕುಲ’ ನಟಿ - ಕೃಷ್ಣಪ್ರಿಯಾ ಭಟ್

ಕಿರುತೆರೆಯ ಜನಪ್ರಿಯ ಧಾರಾವಾಹಿ 'ನಂದಗೋಕುಲ'ದಲ್ಲಿ ರಕ್ಷಾ ಪಾತ್ರದ ಮೂಲಕ ಜನರ ಮನಗೆದ್ದಿರುವ ನಟಿ ಕೃಷ್ಣಪ್ರಿಯಾ ಭಟ್ ಈಗ ನಿಜ ಜೀವನದಲ್ಲಿ ಗೃಹಿಣಿಯಾಗಿದ್ದಾರೆ. ತಮ್ಮ ದೀರ್ಘಕಾಲದ ಗೆಳೆಯ ಅಮೋಘ ಅವರೊಂದಿಗೆ ಸಪ್ತಪದಿ ತುಳಿಯುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಅದ್ಧೂರಿ ಮದುವೆ – ನಟಿ ಕೃಷ್ಣಪ್ರಿಯಾ
ಬೆಳ್ತಂಗಡಿಯಲ್ಲಿ ಅದ್ಧೂರಿ ಮದುವೆ – ನಟಿ ಕೃಷ್ಣಪ್ರಿಯಾ

ದೇವಸ್ಥಾನದಲ್ಲಿ ನಡೆದ ಅದ್ಧೂರಿ ಕಲ್ಯಾಣ
ಫೆಬ್ರವರಿ 6 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿರುವ ಶ್ರೀ ಸೂರ್ಯನಾರಾಯಣ ದೇಗುಲದಲ್ಲಿ ಈ ಸುಂದರ ವಿವಾಹ ಮಹೋತ್ಸವ ನೆರವೇರಿದ್ದು. ಪವಿತ್ರ ಸನ್ನಿಧಿಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಕೃಷ್ಣಪ್ರಿಯಾ ಹಾಗೂ ಅಮೋಘ ಮದುವೆಯಾದರು. ಇವರಿಬ್ಬರದ್ದು 'ಲವ್ ಕಮ್ ಅರೇಂಜ್ಡ್' ಮ್ಯಾರೇಜ್ ಆಗಿದ್ದು, ಪ್ರೀತಿಗೆ ಮನೆಯವರ ಒಪ್ಪಿಗೆ ಪಡೆದು ಶಾಸ್ತ್ರೋಕ್ತವಾಗಿ ಒಂದಾಗಿದ್ದಾರೆ.

ನಟಿ ಕೃಷ್ಣಪ್ರಿಯಾ ಅವರ ಕೈಹಿಡಿದ ಅಮೋಘ ಅವರು ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿಷ್ಠಿತ ಟಾಟಾ EKXSI ಕಂಪನಿಯಲ್ಲಿ ಉದ್ಯೋಗಿಯಾಗಿರುವ ಇವರಿಗೆ ಕಲೆ ಎಂದರೆ ಅಪಾರ ಪ್ರೀತಿ. ಕೇವಲ ಎಂಜಿನಿಯರ್ ಮಾತ್ರವಲ್ಲದೆ, ಅಮೋಘ ಅವರು ದಕ್ಷಿಣ ಕನ್ನಡದ ಹೆಮ್ಮೆಯ ಕಲೆ ಯಕ್ಷಗಾನದಲ್ಲಿ ಚಂಡೆ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಕಲೆ ಮತ್ತು ತಂತ್ರಜ್ಞಾನದ ಅಪರೂಪದ ಸಂಗಮ ಇವರ ಜೋಡಿಯಲ್ಲಿದೆ.

ಧಾರಾವಾಹಿಯಲ್ಲಿ ನಂದಕುಮಾರ್ ಮಗಳು ರಕ್ಷಾ ಆಗಿ ಅಚ್ಚುಕಟ್ಟಾಗಿ ನಟಿಸುತ್ತಿರುವ ಕೃಷ್ಣಪ್ರಿಯಾ ಅವರಿಗೆ ಕಿರುತೆರೆಯ ಹಲವು ಗಣ್ಯರು ಶುಭ ಹಾರೈಸಿದ್ದಾರೆ. ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು "ನಂದಗೋಕುಲದ ರಕ್ಷಾ ಬಾಳಲ್ಲಿ ನಂದಾದೀಪ ಬೆಳಗಲಿ" ಎಂದು ಹಾರೈಸುತ್ತಿದ್ದಾರೆ. ಸುಂದರ ರೇಷ್ಮೆ ಸೀರೆಯಲ್ಲಿ ಕೃಷ್ಣಪ್ರಿಯಾ ಮಿಂಚುತ್ತಿದ್ದರೆ, ಸಾಂಪ್ರದಾಯಿಕ ಉಡುಗೆಯಲ್ಲಿ ಅಮೋಘ ಅವರು ಮಿಂಚುತ್ತಿದ್ದರು.

Latest News