ಕೇರಳದ ನಟ ದಿಲೀಪ್ ವಿರುದ್ಧ 2017ರಲ್ಲಿ ದಾಖಲಾಗಿದ್ದ ಕಿಡ್ನ್ಯಾಪ್ ಮತ್ತು ಕಿರುಕುಳ ಪ್ರಕರಣದಲ್ಲಿ ಇಂದು ಮಹತ್ವದ ತೀರ್ಪು ಹೊರಬಂದಿದೆ. ಎರ್ನಾಕುಲಂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ ವರ್ಗೀಸ್ ಅವರು ನೀಡಿದ ತೀರ್ಪಿನಲ್ಲಿ, ದಿಲೀಪ್ ಅವರನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ. 2017ರ ಫೆಬ್ರವರಿ 17ರಂದು ನಟಿಯೊಬ್ಬರನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಕಿರುಕುಳ ನೀಡಿದ ಪ್ರಕರಣದಲ್ಲಿ ಒಟ್ಟು ಹತ್ತು ಮಂದಿಯ ವಿರುದ್ಧ ಕಿರುಕುಳ ಸೇರಿದಂತೆ ಹಲವು ಸೆಕ್ಷನ್‌ಗಳಡಿ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ದಿಲೀಪ್ ಎಂಟನೇ ಆರೋಪಿಯಾಗಿದ್ದರು. ಆದರೆ, ಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯಿಂದ ಅವರನ್ನು ಖುಲಾಸೆಗೊಳಿಸಿದೆ.
ಆದರೆ, ಪ್ರಕರಣದ 1ರಿಂದ 6ರವರೆಗಿನ ಆರೋಪಿಗಳು ತಪ್ಪಿತಸ್ಥರೆಂದು ಕೋರ್ಟ್ ತೀರ್ಪು ನೀಡಿದೆ. ಪಲ್ಸರ್ ಸುನೀ, ಮಾರ್ಟಿನ್ ಅಂಟೋನಿ, ಮಣಿಕಂದನ್, ವಿಜೇಶ್, ಸಲೀಂ ಅಲಿಯಾಸ್ ವಡಿವಾಲ್ ಸಲೀಂ, ಪ್ರದೀಪ್ ಎಂಬ ಆರೋಪಿ ಗಳು ಕಿಡ್ನ್ಯಾಪ್ ಮತ್ತು ಕಿರುಕುಳ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಗಿದೆ. ದಿಲೀಪ್ ವಿರುದ್ಧ ಸಾಕ್ಷ್ಯನಾಶದ ಆರೋಪವೂ ದಾಖಲಾಗಿತ್ತು. ನಟಿಯೊಬ್ಬರು ದಿಲೀಪ್ ಮತ್ತೊಬ್ಬ ಮಹಿಳೆಯ ಜೊತೆ ಪ್ರೇಮದ ಸಂಬಂಧ ಹೊಂದಿದ್ದಾರೆ ಎಂಬ ಮಾಹಿತಿಯನ್ನು ದಿಲೀಪ್ ಅವರ ಮೊದಲ ಪತ್ನಿ ಮಂಜು ವಾರೀಯರ್ ಅವರಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದಿಲೀಪ್ ನಟಿಯನ್ನು ಕಿಡ್ನ್ಯಾಪ್ ಮಾಡಲು ಗ್ಯಾಂಗ್‌ಗೆ ಸಹಕರಿಸಿದ್ದಾರೆಯೆಂಬ ಆರೋಪವೂ ಕೇಳಿಬಂದಿತ್ತು. ಆದರೆ, ಕೋರ್ಟ್ ಈ ಆರೋಪಗಳನ್ನು ತಳ್ಳಿಹಾಕಿದೆ.
ತೀರ್ಪಿನ ನಂತರ ದಿಲೀಪ್ ಪ್ರತಿಕ್ರಿಯೆ ನೀಡಿದ್ದು, “ನಾನು ಈಗ ಸಂಪೂರ್ಣವಾಗಿ ರೀಲೀಫ್ ಆಗಿದ್ದೇನೆ. ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ. ಈ ತೀರ್ಪು ಕೇರಳದ ರಾಜಕೀಯ, ಸಿನಿರಂಗ ಹಾಗೂ ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.