'ಕರಾವಳಿ' ಚಿತ್ರದಲ್ಲಿ ಹೈಡ್ರಾಮಾ - 1 ಕೋಟಿ ಸಂಭಾವನೆ ಪಡೆದೂ ಟ್ರೈಲರ್ ಲಾಂಚ್‌ಗೆ ಪ್ರಜ್ವಲ್ ಗೈರು! ಅಸಲಿ ಕಾರಣವೇನು!!

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಒಟ್ಟಿಗೆ ನಟಿಸಿರುವ 'ಕರಾವಳಿ' ಸಿನಿಮಾ ಮುಹೂರ್ತದ ದಿನದಿಂದಲೂ ಗಾಂಧಿನಗರದಲ್ಲಿ ಭಾರಿ ಸದ್ದು ಮಾಡುತ್ತಿದೆ. ವಿಭಿನ್ನ ಪೋಸ್ಟರ್, ಟೀಸರ್ ಮತ್ತು ಹಾಡುಗಳ ಮೂಲಕ ಸಿನಿರಸಿಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ, ಸದ್ಯ ಟ್ರೈಲರ್ ಬಿಡುಗಡೆಯ ಬೆನ್ನಲ್ಲೇ ದೊಡ್ಡ ವಿವಾದದ ಕೇಂದ್ರಬಿಂದುವಾಗಿದೆ. ಸಿನಿಮಾದ ಪ್ರಚಾರದ ಪ್ರಮುಖ ಘಟ್ಟವಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲೇ ಹೈಡ್ರಾಮಾ ನಡೆದಿದ್ದು, ಇಡೀ ಚಿತ್ರತಂಡದ ಒಗ್ಗಟ್ಟನ್ನು ಪ್ರಶ್ನಿಸುವಂತೆ ಮಾಡಿದೆ.

'ಕರಾವಳಿ' ಕದನ | Photo Credit: https://x.com/KA_Talkies
'ಕರಾವಳಿ' ಕದನ | Photo Credit: https://x.com/KA_Talkies

ಟ್ರೈಲರ್ ಲಾಂಚ್‌ನಲ್ಲಿ ನಡೆದಿದ್ದೇನು

ಇತ್ತೀಚೆಗೆ ಅದ್ಧೂರಿಯಾಗಿ ಆಯೋಜಿಸಲಾಗಿದ್ದ 'ಕರಾವಳಿ' ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಿತ್ರದ ನಾಯಕ ನಟ ಪ್ರಜ್ವಲ್ ದೇವರಾಜ್ ಅವರೇ ಗೈರಾಗಿದ್ದರು. ಹೀರೊ ಇಲ್ಲದೆಯೇ ಟ್ರೈಲರ್ ಲಾಂಚ್ ಮಾಡಲು ಮುಂದಾದ ಚಿತ್ರತಂಡದ ನಡೆಗೆ ಪ್ರಜ್ವಲ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದ ಅಭಿಮಾನಿಗಳು, ಚಿತ್ರತಂಡದ ವಿರುದ್ಧ ತಳ್ಳಾಟ-ನೂಕಾಟ ನಡೆಸಿ ಜಗಳಕ್ಕೆ ನಿಂತಿದ್ದಾರೆ. "ನಮ್ಮ ನೆಚ್ಚಿನ ನಟನನ್ನು ಕಡೆಗಣಿಸಲಾಗುತ್ತಿದೆ" ಎಂದು ಆರೋಪಿಸಿ ಕಾರ್ಯಕ್ರಮದಲ್ಲಿ ದೊಡ್ಡ ಹಂಗಾಮಾವನ್ನೇ ಸೃಷ್ಟಿಸಿದರು. ಚಿತ್ರದ ಪ್ರಮುಖ ಆಕರ್ಷಣೆಯಾಗಬೇಕಿದ್ದ ಕಾರ್ಯಕ್ರಮ, ಕೊನೆಗೆ ರಂಪಾಟ ಮತ್ತು ಗೊಂದಲದ ಗೂಡಾಗಿ ಪರಿಣಮಿಸಿತು.

ಪ್ರಜ್ವಲ್ ದೇವರಾಜ್ ಸೈಡ್‌ಲೈನ್ ಆದರಾ

ಈ ವಿವಾದದ ಆಳಕ್ಕೆ ಇಳಿದರೆ ಕೇಳಿಬರುತ್ತಿರುವ ಮೊದಲ ಪ್ರಮುಖ ಆರೋಪ 'ಸೈಡ್‌ಲೈನ್' ರಾಜಕೀಯ. 'ಕರಾವಳಿ' ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಅವರೇ ಕಥಾನಾಯಕ. ಆದರೆ, ಚಿತ್ರದ ಕಥೆಗೆ ಒಂದು ದೊಡ್ಡ ತಿರುವು ನೀಡುವ ಸಲುವಾಗಿ ಚಿತ್ರತಂಡ ಕರಾವಳಿ ಭಾಗದ ಖ್ಯಾತ ನಟ ರಾಜ್ ಬಿ. ಶೆಟ್ಟಿ ಅವರನ್ನು ಪ್ರಮುಖ ಅತಿಥಿ ಪಾತ್ರಕ್ಕೆ (Guest Appearance) ಕರೆತಂದಿದೆ.

ಗಾಂಧಿನಗರದ ಗಾಸಿಪ್: ರಾಜ್ ಬಿ. ಶೆಟ್ಟಿ ಅವರ ಎಂಟ್ರಿಯಾದ ನಂತರ ಚಿತ್ರದ ತೂಕ ಮತ್ತು ಪ್ರಚಾರದ ದಿಕ್ಕು ಬದಲಾಯಿತು. ಶೆಟ್ರು ಬಂದ ಮೇಲೆ ತಮ್ಮ ಪಾತ್ರದ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ ಮತ್ತು ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಬೇಸರ ಪ್ರಜ್ವಲ್ ಅವರಿಗೆ ಕಾಡಿರಬಹುದು ಎನ್ನಲಾಗುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ, ಕಳೆದ ಎರಡು ತಿಂಗಳಿಂದ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಅವರ ಫೋನ್ ಸಂಪರ್ಕಕ್ಕೂ ಪ್ರಜ್ವಲ್ ದೇವರಾಜ್ ಸಿಗುತ್ತಿಲ್ಲ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ನಿರ್ದೇಶಕರು ಮತ್ತು ನಾಯಕ ನಟನ ನಡುವಿನ ಈ ಕಮ್ಯುನಿಕೇಶನ್ ಗ್ಯಾಪ್, ಚಿತ್ರರಂಗದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

1 ಕೋಟಿ ಪೇಮೆಂಟ್ ವಿವಾದ

ಈ ವಿವಾದದಲ್ಲಿ ಕೇವಲ ಪಾತ್ರದ ಪ್ರಾಮುಖ್ಯತೆ ಮಾತ್ರವಲ್ಲದೆ, ಹಣಕಾಸಿನ ವ್ಯವಹಾರವೂ ಕೇಳಿಬರುತ್ತಿದೆ. ಚಿತ್ರರಂಗದ ಒಳಗಿನ ಮಾಹಿತಿ ಪ್ರಕಾರ, 'ಕರಾವಳಿ' ಚಿತ್ರದ ನಿರ್ಮಾಪಕರು ನಟ ಪ್ರಜ್ವಲ್ ದೇವರಾಜ್ ಅವರಿಗೆ ಕೇಳಿದಷ್ಟು, ಅಂದರೆ ಬರೊಬ್ಬರಿ 1 ಕೋಟಿ ರೂಪಾಯಿ ಸಂಭಾವನೆಯನ್ನು ಪಾವತಿಸಿದ್ದಾರೆ ಎನ್ನಲಾಗಿದೆ.

ಸಾಮಾನ್ಯವಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದ ನಟರು ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಚಿತ್ರರಂಗದ ನಿಯಮ. ಆದರೆ, ಕೋಟಿ ಸಂಭಾವನೆ ಜೇಬಿಗೆ ಬಿದ್ದರೂ ಪ್ರಜ್ವಲ್ ಟ್ರೈಲರ್ ಲಾಂಚ್‌ಗೆ ಬಾರದೇ ಇರಲು ಕೇವಲ ಮುನಿಸು ಕಾರಣವೇ ಅಥವಾ ನಿರ್ಮಾಪಕರೊಂದಿಗೆ ಬೇರೆನಾದರೂ ಭಿನ್ನಾಭಿಪ್ರಾಯವಿದೆಯೇ ಎಂಬ ಪ್ರಶ್ನೆ ಮೂಡಿದೆ. ಸಿನಿಮಾ ಬಿಡುಗಡೆಗೆ ಸಜ್ಜಾಗಿರುವಾಗ ನಾಯಕ ನಟನೇ ಹೀಗೆ ದೂರ ಸರಿದರೆ ಹೂಡಿದ ಬಂಡವಾಳದ ಕಥೆ ಏನು ಎಂಬ ಆತಂಕ ನಿರ್ಮಾಪಕರನ್ನು ಕಾಡುತ್ತಿದೆ.

'ಇದಕ್ಕೆ ನಮ್ಮ ಚಿತ್ರರಂಗ ಉದ್ದಾರ ಆಗಿಲ್ಲ' ರಾಜ್ ಶೆಟ್ಟಿ ಬೇಸರ

ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ಮತ್ತು ಪ್ರಜ್ವಲ್ ಅವರ ಗೈರುಹಾಜರಿಯಿಂದ ನಟ ರಾಜ್ ಬಿ. ಶೆಟ್ಟಿ ತೀವ್ರ ಅಸಮಾಧಾನಗೊಂಡಿದ್ದಾರೆ. ವೇದಿಕೆಯ ಮೇಲೆಯೇ ತಮ್ಮ ನೋವನ್ನು ಹೊರಹಾಕಿದ ಅವರು, ಚಿತ್ರರಂಗದ ಇಂದಿನ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಅಭಿಮಾನಿಗಳ ವರ್ತನೆಗೆ ಆಕ್ಷೇಪ: ಸಿನಿಮಾ ಗೆಲ್ಲಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾದ ಸಮಯದಲ್ಲಿ ಇಂತಹ ಗಲಾಟೆಗಳು ಚಿತ್ರದ ಮೇಲೆಯೇ ನೆಗೆಟಿವ್ ಪರಿಣಾಮ ಬೀರುತ್ತವೆ ಎಂದಿದ್ದಾರೆ.

ರಾಜ್ ಶೆಟ್ಟಿ ಖಾರವಾದ ನುಡಿ: "ಒಂದು ಒಳ್ಳೆಯ ಸಿನಿಮಾ ಮಾಡುವಾಗ ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿಡಬೇಕು. ಇಂತಹ ಇಗೊ ಮತ್ತು ವಿವಾದಗಳಿಂದಾಗಿಯೇ ನಮ್ಮ ಚಿತ್ರರಂಗ ಇನ್ನು ಉದ್ದಾರ ಆಗಿಲ್ಲ" ಎಂದು ರಾಜ್ ಬಿ. ಶೆಟ್ಟಿ ಬೇಸರದಿಂದ ನೇರವಾಗಿಯೇ ನುಡಿದಿದ್ದಾರೆ.

ವಿವಾದ ಮುಕ್ತ ನಟನ ಸುತ್ತ ಈ ವಿವಾದ ಯಾಕೆ

ಪ್ರಜ್ವಲ್ ದೇವರಾಜ್ ಅವರು ಸ್ಯಾಂಡಲ್‌ವುಡ್‌ಗೆ ಬಂದು ಒಂದೂವರೆ ದಶಕಕ್ಕೂ ಹೆಚ್ಚಾಗಿದೆ. ಇಷ್ಟು ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಅವರು ಎಲ್ಲೂ ವಿವಾದ ಮಾಡಿಕೊಂಡವರಲ್ಲ. ಚಿತ್ರರಂಗದಲ್ಲಿ 'ಸಭ್ಯ ನಟ' ಎಂದೇ ಹೆಸರಾದವರು. ಅಂಥದ್ದರಲ್ಲಿ, 'ಕರಾವಳಿ' ಸಿನಿಮಾದ ವಿಚಾರದಲ್ಲಿ ಅವರು ಇಷ್ಟೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲು ಅಥವಾ ಚಿತ್ರತಂಡದಿಂದ ದೂರ ಉಳಿಯಲು ಬಲವಾದ ಕಾರಣವೇ ಇರಬೇಕು ಎಂಬುದು ಚಿತ್ರಪ್ರೇಮಿಗಳ ವಾದ.

ಒಂದು ಕಡೆ ಚಿತ್ರತಂಡದ ನಿರ್ಲಕ್ಷ್ಯ ಕಾರಣವಿರಬಹುದು ಎನ್ನಲಾಗುತ್ತಿದ್ದರೆ, ಇನ್ನೊಂದು ಕಡೆ ಪ್ರಜ್ವಲ್ ನಡೆ ಕೂಡ ಚಿತ್ರದ ಭವಿಷ್ಯಕ್ಕೆ ಧಕ್ಕೆ ತರುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

Latest News

Related News