ಬಾಲಿವುಡ್ ಅಂದಮೇಲೆ ಅಲ್ಲಿ ದಿನಕ್ಕೊಂದು ವಿವಾದ ಹುಟ್ಟಿಕೊಳ್ಳೋದು ಕಾಮನ್. ಆದ್ರೆ ಈ ಸಲ ನಿರ್ಮಾಪಕ ಕರಣ್ ಜೋಹರ್ ಸ್ವಲ್ಪ ಸೀರಿಯಸ್ ಆಗಿಯೇ ಒಂದು ವಿಷಯದ ಬಗ್ಗೆ ಮಾತನಾಡಿದ್ದಾರೆ. ಅದೇನಪ್ಪಾ ಅಂದ್ರೆ, ಈ 'ಕ್ಲಿಕ್‌ಬೈಟ್' ಹೆಡ್‌ಲೈನ್‌ಗಳು ಮತ್ತು ಸಂದರ್ಶನದ ಮಾತುಗಳನ್ನ ತಿರುಚೋದರ ಬಗ್ಗೆ ದ್ವನಿ ಎತ್ತಿದ್ದಾರೆ ಎನ್ನಲಾಗುತ್ತಿದೆ.
ಏನಿದು ಹೊಸ ಕಿರಿಕ್?
ವಿಷಯ ಇಷ್ಟೇ, ಇತ್ತೀಚೆಗೆ ನಟಿ ಜಾನ್ವಿ ಕಪೂರ್ ಅವರು ಕರಣ್ ಜೋಹರ್ ಅವರ ಟ್ಯಾಲೆಂಟ್ ಏಜೆನ್ಸಿಯಿಂದ (Dharma Cornerstone Agency) ಹೊರಬಂದಿದ್ದಾರೆ ಅನ್ನೋ ಸುದ್ದಿ ಜೋರಾಗಿ ಸೌಂಡ್ ಮಾಡ್ತಾ ಇತ್ತು. ಇದರ ಬಗ್ಗೆ ಒಂದು ಇಂಟರ್ವ್ಯೂನಲ್ಲಿ ಕರಣ್ ಜೋಹರ್ ಮಾತನಾಡಿದ್ರು. ಆದ್ರೆ ಅವರು ಹೇಳಿದ್ದ ಒಂದು ಸಾಲನ್ನ ಹಿಡಿದುಕೊಂಡು ಕೆಲವು ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಅದನ್ನ ಮಸಾಲೆ ಹಚ್ಚಿ ಪ್ರಕಟಿಸಿದವು. ಇದರಿಂದ ಬೇಸರಗೊಂಡ ಕರಣ್, ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ದೊಡ್ಡ ಪೋಸ್ಟ್ ಹಾಕಿದ್ದಾರೆ.
ಕರಣ್ ಜೋಹರ್ ಮನವಿ ಏನು?
ಕರಣ್ ಅವರು ತುಂಬಾ ವಿನಯದಿಂದಲೇ ಒಂದು ರಿಕ್ವೆಸ್ಟ್ ಮಾಡಿದ್ದಾರೆ. "ನಾವೆಲ್ಲಾ ತುಂಬಾ ಖುಷಿಯಿಂದ ಪಾಡ್‌ಕಾಸ್ಟ್ ಮತ್ತು ಇಂಟರ್ವ್ಯೂಗಳನ್ನು ಕೊಡ್ತೀವಿ. ಆದ್ರೆ ನಾವು ಹೇಳಿರೋ ಇಡೀ ವಿಷಯವನ್ನ ಬಿಟ್ಟು, ಅದರಲ್ಲಿರೋ ಯಾವುದೋ ಒಂದು ಲೈನ್ ಮಾತ್ರ ತಗೊಂಡು ಅದನ್ನ 'ಕ್ಲಿಕ್‌ಬೈಟ್' ಹೆಡ್‌ಲೈನ್ ಮಾಡೋದು ಸರಿಯಲ್ಲ. ಇದು ನಾವು ಆಡಿದ ಮಾತಿನ ಅರ್ಥವನ್ನೇ ಬದಲಿಸಿಬಿಡುತ್ತೆ. ಹೀಗಾದ್ರೆ ನಾವು ಮುಂದೆ ಮಾತಾಡೋಕೆ ಯೋಚನೆ ಮಾಡಬೇಕಾಗುತ್ತೆ" ಅಂತ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಯಾವುದೇ ಒಂದು ವಿಷಯವನ್ನ ಸೆನ್ಸೇಷನಲ್ ಮಾಡೋಕೆ ಹೋಗಿ ಅದನ್ನ ವೈಯಕ್ತಿಕವಾಗಿ ಅಥವಾ ಅವಹೇಳನಕಾರಿಯಾಗಿ ಬಿಂಬಿಸಬೇಡಿ ಅನ್ನೋದು ಅವರ ಕಳಕಳಿಯ ವಿನಂತಿ.
ಜಾನ್ವಿ ಕಪೂರ್ ಬಗ್ಗೆ ಕರಣ್ ಹೇಳಿದ್ದೇನು?
ಅಸಲಿಗೆ ಆ ಇಂಟರ್ವ್ಯೂನಲ್ಲಿ ಕರಣ್ ಹೇಳಿದ್ದೇನು ಗೊತ್ತಾ? "ಬಾಲಿವುಡ್‌ನಲ್ಲಿ ಮೂರ್ನಾಲ್ಕು ದೊಡ್ಡ ಏಜೆನ್ಸಿಗಳಿವೆ. ಒಬ್ಬರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗೋದು ಸಹಜ. ಇದು 'ಪಾಸಿಂಗ್ ದಿ ಪಾರ್ಸಲ್' ಇದ್ದ ಹಾಗೆ. ನನ್ನ ಏಜೆನ್ಸಿ ಬಿಟ್ಟು ಹೋದವರಿಗೂ ನಾನು ಒಳ್ಳೆಯದನ್ನೇ ಬಯಸ್ತೀನಿ ಮತ್ತು ಅವರ ಜೊತೆ ಕೆಲಸ ಮಾಡ್ತೀನಿ. ಆದ್ರೆ, ನನ್ನ ಏಜೆನ್ಸಿಯಲ್ಲಿ ಇರೋ ಕಲಾವಿದರಿಗೆ ನಾನು ಮೊದಲ ಆದ್ಯತೆ ಕೊಡ್ತೀನಿ, ಯಾಕಂದ್ರೆ ಅವರೆಲ್ಲಾ ನನ್ನ ಫ್ಯಾಮಿಲಿ ಮೆಂಬರ್ಸ್ ಇದ್ದ ಹಾಗೆ" ಅಂತ ಕರಣ್ ಹೇಳಿದ್ರು.
ಇಲ್ಲಿ ಜಾನ್ವಿ ಮೇಲೆ ಕರಣ್‌ಗೆ ಸಿಟ್ಟಿದೆ ಅನ್ನೋ ತರಹ ಸುದ್ದಿಗಳು ಹಬ್ಬಿದ್ದವು. ಆದ್ರೆ ಕರಣ್ ಉದ್ದೇಶ ಅದಾಗಿರಲಿಲ್ಲ. ತಮಗೆ ಸೇರಿದ ಕಲಾವಿದರನ್ನ ಪ್ರೋತ್ಸಾಹಿಸೋದು ಅವರ ಉದ್ದೇಶವಾಗಿತ್ತು ಅಷ್ಟೇ.
ಜಾನ್ವಿ ಮತ್ತು ಕರಣ್ ಬಾಂಡಿಂಗ್
ನಿಮಗೆ ಗೊತ್ತಿರಲಿ, ಜಾನ್ವಿ ಕಪೂರ್ ಅವರನ್ನ ಬಾಲಿವುಡ್‌ಗೆ ಪರಿಚಯಿಸಿದ್ದೇ ಕರಣ್ ಜೋಹರ್. 2018ರಲ್ಲಿ ಬಂದ 'ಧಡಕ್' ಸಿನೆಮಾದ ಮೂಲಕ ಜಾನ್ವಿ ಹೀರೋಯಿನ್ ಆಗಿ ಎಂಟ್ರಿ ಕೊಟ್ಟಿದ್ರು. ಇದು ಮರಾಠಿಯ ಸೂಪರ್ ಹಿಟ್ ಸಿನೆಮಾ 'ಸೈರಾತ್'ನ ರಿಮೇಕ್ ಆಗಿತ್ತು. ಅಂದಿನಿಂದ ಇಂದಿನವರೆಗೆ ಕರಣ್ ಮತ್ತು ಜಾನ್ವಿ ನಡುವೆ ಒಳ್ಳೆ ಗುರು-ಶಿಷ್ಯೆಯ ಸಂಬಂಧ ಇದೆ.
ಇವತ್ತಿನ ಡಿಜಿಟಲ್ ಕಾಲದಲ್ಲಿ ವೀವ್ಸ್ ಬರಲಿ ಅಂತ ಹೆಡ್‌ಲೈನ್‌ಗಳನ್ನ ತುಂಬಾ ಮಸಾಲೆ ಹಚ್ಚಿ ಹಾಕ್ತಾರೆ. ಇದರಿಂದ ಸೆಲೆಬ್ರಿಟಿಗಳ ವೈಯಕ್ತಿಕ ಜೀವನ ಮತ್ತು ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅನ್ನೋದನ್ನ ಕರಣ್ ಜೋಹರ್ ಎತ್ತಿ ತೋರಿಸಿದ್ದಾರೆ. ಸತ್ಯವನ್ನ ಸತ್ಯವಾಗಿ ಹೇಳೋದು ಇವತ್ತಿನ ಕಾಲದಲ್ಲಿ ತುಂಬಾ ಮುಖ್ಯ ಅಲ್ವಾ?