ವಿಜಯ್ ಅಭಿಮಾನಿಗಳೇ ಎಚ್ಚರ - 'ಜನ ನಾಯಗನ್' ವಿಡಿಯೋ ಕ್ಲಿಪ್ ಶೇರ್ ಮಾಡಿದ್ರೆ ಬೀಳುತ್ತೆ ಕೇಸ್!!

ತಲಪತಿ ವಿಜಯ್ ಅವರ ಕೊನೆಯ ಸಿನಿಮಾ ಜನ ನಾಯಗನ್ ಬಗ್ಗೆ ದಿನಕ್ಕೊಂದು ಅಪ್‌ಡೇಟ್ ಬರ್ತಾನೆ ಇದೆ. ವಿಜಯ್ ಅವರು ರಾಜಕೀಯಕ್ಕೆ ಹೋಗುವ ಮುನ್ನ ನಟಿಸುತ್ತಿರುವ ಕೊನೆಯ ಚಿತ್ರ ಇದಾಗಿರೋದ್ರಿಂದ, ಫ್ಯಾನ್ಸ್ ಎಲ್ಲಿಲ್ಲದ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ, ಇದೇ ಹೊತ್ತಲ್ಲಿ ಚಿತ್ರತಂಡಕ್ಕೆ ಪೈರಸಿ ಕಾಟ ಶುರುವಾಗಿದೆ. ಸಿನಿಮಾದ ಕೆಲವು ದೃಶ್ಯಗಳು ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದರಿಂದ ಕೆಂಡಾಮಂಡಲವಾಗಿರುವ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಈಗ ಲೀಕ್ ಮಾಡಿದವರಿಗೆ ಭರ್ಜರಿ ವಾರ್ನಿಂಗ್ ಕೊಟ್ಟಿದೆ.

ಜನ ನಾಯಗನ್ ಪೈರಸಿ ಕಾಟ – KVN ಪ್ರೊಡಕ್ಷನ್ಸ್ ಖಡಕ್ ಎಚ್ಚರಿಕೆ!! | Photo Credit: KVN Productions
ಜನ ನಾಯಗನ್ ಪೈರಸಿ ಕಾಟ – KVN ಪ್ರೊಡಕ್ಷನ್ಸ್ ಖಡಕ್ ಎಚ್ಚರಿಕೆ!! | Photo Credit: KVN Productions

ನಿರ್ಮಾಣ ಸಂಸ್ಥೆ ನೀಡಿರುವ ಖಡಕ್ ಎಚ್ಚರಿಕೆ ಪ್ರಕಾರ, 'ನಮ್ಮ ಸಿನಿಮಾದ ಯಾವುದೇ ದೃಶ್ಯ ಅಥವಾ ಕ್ಲಿಪ್‌ಗಳನ್ನು ಅನುಮತಿ ಇಲ್ಲದೆ ಎಕ್ಸ್ (ಟ್ವಿಟ್ಟರ್), ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಅಥವಾ ಟೆಲಿಗ್ರಾಮ್‌ನಲ್ಲಿ ಶೇರ್ ಮಾಡಿದ್ರೆ ಹುಷಾರ್. ಅಂತಹವರ ವಿರುದ್ಧ ನಾವು ಈಗಾಗಲೇ ಕಾನೂನು ಕ್ರಮ ಆರಂಭಿಸಿದ್ದೇವೆ. ಪೈರಸಿಯನ್ನು ಪ್ರೋತ್ಸಾಹಿಸುವವರ ಮೇಲೆ ಸಿವಿಲ್ ಮತ್ತು ಕ್ರಿಮಿನಲ್ ಕೇಸ್ ಹಾಕುವುದು ಗ್ಯಾರಂಟಿ,' ಅಂತ ಚಿತ್ರತಂಡ ತಿಳಿಸಿದೆ.

ಸಿನಿಮಾದ ಇಂಟರೆಸ್ಟಿಂಗ್ ಸೀನ್ಸ್‌ಗಳೆಲ್ಲಾ ಮೊದಲೇ ಲೀಕ್ ಆದ್ರೆ ಆಮೇಲೆ ಥಿಯೇಟರ್‌ನಲ್ಲಿ ಸಿನಿಮಾ ನೋಡೋ ಮಜಾನೇ ಹೊರಟು ಹೋಗುತ್ತೆ ಅನ್ನೋ ಭಯ ವಿಜಯ್ ಫ್ಯಾನ್ಸ್‌ಗೆ ಇತ್ತು. ಆದರೆ ಈಗ ಪ್ರೊಡಕ್ಷನ್ ಹೌಸ್ ತಳೆದಿರುವ ಈ ಕಠಿಣ ನಿಲುವು ನೋಡಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ನಮ್ಮ ಅಣ್ಣನ ಕೊನೆಯ ಸಿನಿಮಾ ಕ್ರೇಜ್ ಒಂದು ಚೂರು ಕಮ್ಮಿ ಆಗಬಾರದು ಅನ್ನೋದು ಫ್ಯಾನ್ಸ್ ಆಶಯ.

ನಿಜ ಹೇಳ್ಬೇಕಂದ್ರೆ, ಜನ ನಾಯಗನ್ ಹಾದಿ ಅಷ್ಟು ಸುಲಭವಾಗಿಲ್ಲ. 2026ರ ಸಂಕ್ರಾಂತಿಗೇ ಸಿನಿಮಾ ಬರುತ್ತೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಸೆನ್ಸಾರ್ ಮಂಡಳಿಯಿಂದ ಕ್ಲಿಯರೆನ್ಸ್ ಸಿಗೋದ್ರಲ್ಲಿ ವಿಳಂಬ ಆಗ್ತಿದೆ. ಈ ಸರ್ಟಿಫಿಕೇಟ್ ಸಮಸ್ಯೆಯಿಂದಾಗಿ ಪ್ರೊಡ್ಯೂಸರ್ಸ್‌ಗೆ ದೊಡ್ಡ ಮಟ್ಟದ ನಷ್ಟ ಆಗ್ತಿದೆ ಅಂತಲೂ ವರದಿಯಾಗಿದೆ. ಆದರೂ ಹೆಚ್. ವಿನೋತ್ ನಿರ್ದೇಶನದಲ್ಲಿ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಅನ್ನೋ ಸುದ್ದಿ ಹರಿದಾಡ್ತಿದೆ.

ಇದು ಒಂದು ಪಕ್ಕಾ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ. ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಅಂದ್ರೆ ಕೇಳಬೇಕಾ? ಅದಾಗಲೇ ಹಾಡುಗಳ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಬಾಬಿ ಡಿಯೋಲ್ ವಿಲನ್ ಆಗಿ ಕಾಣಿಸಿಕೊಂಡ್ರೆ, ಮಮಿತಾ ಬೈಜು ಮತ್ತು ಪೂಜಾ ಹೆಗ್ಡೆ ಲೀಡ್ ರೋಲ್‌ನಲ್ಲಿದ್ದಾರೆ. ಅಂದಹಾಗೆ, ಈ ಸಿನಿಮಾ ತೆಲುಗಿನ 'ಭಗವಂತ ಕೇಸರಿ' ಚಿತ್ರದ ತಮಿಳು ವರ್ಷನ್ ಅಂತಲೂ ಹೇಳಲಾಗ್ತಿದೆ.

ವಿಜಯ್ ಅವರನ್ನು ಕೊನೆಯ ಬಾರಿ ಸ್ಕ್ರೀನ್ ಮೇಲೆ ಕಣ್ತುಂಬಿಕೊಳ್ಳೋಕೆ ನಾವು ಕಾಯಲೇಬೇಕು. ಅಲ್ಲಿಯವರೆಗೆ ಇಂತಹ ಲೀಕ್ ವಿಡಿಯೋಗಳನ್ನು ಶೇರ್ ಮಾಡದೆ ಪೈರಸಿ ತಡೆಯೋಣ. ನಿಮ್ಮ ವಾಟ್ಸಾಪ್ ಅಥವಾ ಇನ್‌ಸ್ಟಾದಲ್ಲಿ ಇಂತಹ ಕ್ಲಿಪ್‌ಗಳು ಬಂದ್ರೆ ಡಿಲೀಟ್ ಮಾಡಿಬಿಡಿ, ಸುಮ್ಮನೆ ಲೀಗಲ್ ತೊಂದರೆಗೆ ಸಿಕ್ಕಿಹಾಕೋಬೇಡಿ.

Latest News