Mar 23, 2026 Languages : ಕನ್ನಡ | English

28 ವರ್ಷಗಳ ಹಿಂದಿನ ಪತ್ರ ವೈರಲ್ - 'ಧುರಂಧರ್ 2' ನಟನ ಕಣ್ಣೀರಿನ ಕಥೆ ಕೇಳಿದ್ರೆ ನೀವು ಭಾವುಕರಾಗ್ತೀರಾ! ಇದರಲ್ಲೇನಿದೆ?

ಬೆಳ್ಳಿತೆರೆಯ ಮೇಲೆ ಮಿಂಚುವ ನಟರ ಗ್ಲಾಮರ್ ನೋಡಿ ನಾವೆಲ್ಲಾ ಫಿದಾ ಆಗ್ತೀವಿ. ಆದ್ರೆ ಆ ಯಶಸ್ಸು ರಾತ್ರೋರಾತ್ರಿ ಬಂದಿರೋದಿಲ್ಲ. ಅದರ ಹಿಂದೆ ನಿದ್ದೆಯಿಲ್ಲದ ರಾತ್ರಿಗಳು, ಹಸಿವಿನ ನೋವು ಮತ್ತು ಎಣಿಸಲಾಗದಷ್ಟು ಅವಮಾನಗಳು ಇರುತ್ತವೆ. ಇತ್ತೀಚೆಗೆ 'ಧುರಂಧರ್: ದಿ ರಿವೆಂಜ್' ಚಿತ್ರದಲ್ಲಿ ಮೊಹಮ್ಮದ್ ಆಲಂ ಪಾತ್ರದ ಮೂಲಕ ಅಬ್ಬರಿಸುತ್ತಿರುವ ನಟ ಗೌರವ್ ಗೆರಾ ಅವರ ಜೀವನದ ಇಂತಹದ್ದೇ ಒಂದು ಭಾವನಾತ್ಮಕ ಕಥೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.

28 ವರ್ಷಗಳ ಹಳೆಯ ಪತ್ರದ ಕಥೆ!!
28 ವರ್ಷಗಳ ಹಳೆಯ ಪತ್ರದ ಕಥೆ!!

28 ವರ್ಷಗಳ ಹಳೆಯ ಆ ಪತ್ರದಲ್ಲಿ ಏನಿದೆ? 

ಗೌರವ್ ಗೆರಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಡಿಸೆಂಬರ್ 3, 1998 ರಂದು (ಸುಮಾರು 28 ವರ್ಷಗಳ ಹಿಂದೆ) ತಮ್ಮ ಹೆತ್ತವರಿಗೆ ಬರೆದಿದ್ದ ಒಂದು ಹಳೆಯ ಪತ್ರವನ್ನು ಹಂಚಿಕೊಂಡಿದ್ದಾರೆ. ಆಗ ಅವರಿಗೆ ಕೇವಲ 23 ವರ್ಷ. ದೆಹಲಿಯಿಂದ ಮುಂಬೈಗೆ ನಟನಾಗುವ ಕನಸು ಹೊತ್ತು ಬಂದಿದ್ದ ಆ ಹುಡುಗನ ಜೇಬಿನಲ್ಲಿ ಹಣವಿರಲಿಲ್ಲ, ಆದ್ರೆ ಕಣ್ಣಲ್ಲಿ ಗೆಲ್ಲಲೇಬೇಕೆಂಬ ಹಠವಿತ್ತು. ಆ ಪತ್ರದಲ್ಲಿ ಅವರು ತಮ್ಮ ಕಷ್ಟದ ದಿನಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಮುಂಬೈನ ಸಣ್ಣ ಕೋಣೆಯ ಹೋರಾಟ 

ಹೊಸ ನಗರದಲ್ಲಿ ಅವಕಾಶಗಳಿಲ್ಲದೆ, ಹಣದ ಕೊರತೆಯಿಂದ ಬಳಲುತ್ತಿದ್ದರೂ ಗೌರವ್ ಎದೆಗುಂದಿರಲಿಲ್ಲ. "ದಿಲ್ಲಿಗೆ ಹೋಲಿಸಿದರೆ ಮುಂಬೈನಲ್ಲಿ ಅವಕಾಶಗಳು ಹೆಚ್ಚಿವೆ" ಎಂದು ಪೋಷಕರಿಗೆ ಧೈರ್ಯ ತುಂಬಿದ್ದರು. ಬಾಡಿಗೆ ಕಟ್ಟಲು, ಗ್ಯಾಸ್, ಕರೆಂಟ್ ಮತ್ತು ಫೋನ್ ಬಿಲ್ ಪಾವತಿಸಲು ಹಣವಿಲ್ಲದೆ ಸ್ನೇಹಿತನ ಜೊತೆ ಒಂದು ಸಣ್ಣ ಕೋಣೆಯಲ್ಲಿ ವಾಸಿಸುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಕೆಲಸವಿಲ್ಲದ ಸಮಯದಲ್ಲಿ ಸುಮ್ಮನೆ ಕೂರದೆ, ಪ್ರತಿದಿನ ಸಂಜೆ ನಾಟಕಗಳ ಅಭ್ಯಾಸ ಮಾಡುತ್ತಾ ತಮ್ಮ ನಟನೆಯನ್ನು ತಿದ್ದಿಕೊಂಡರು. "ಅಮ್ಮಾ, ಭವಿಷ್ಯ ಉಜ್ವಲವಾಗಿದೆ, ಆದ್ರೆ ನಾನು ಕಲಿಯುವುದು ಇನ್ನೂ ಬಾಕಿ ಇದೆ" ಎಂದು ಅವರು ಅಂದು ಬರೆದಿದ್ದ ಮಾತುಗಳು ಅವರ ಸಮರ್ಪಣಾ ಮನೋಭಾವಕ್ಕೆ ಸಾಕ್ಷಿಯಾಗಿದೆ.

28 ವರ್ಷಗಳ ಸುದೀರ್ಘ ಪಯಣ

ಗೌರವ್ ಅವರ ಈ ಜರ್ನಿ ಸುಲಭದ್ದಾಗಿರಲಿಲ್ಲ. ಟಿವಿ ಶೋಗಳು, ಜಾಹೀರಾತುಗಳು, ರೇಡಿಯೋ, ಟಿಕ್‌ಟಾಕ್ ಮತ್ತು ಇನ್‌ಸ್ಟಾ ರೀಲ್ಸ್‌ಗಳ ಮೂಲಕ ಅವರು ಸದಾ ಜನರನ್ನ ರಂಜಿಸಲು ಪ್ರಯತ್ನಿಸುತ್ತಲೇ ಇದ್ದರು. "ನನ್ನ ಪ್ರಯಾಣದಲ್ಲಿ ಅನೇಕ ಏರಿಳಿತಗಳನ್ನು ನೋಡಿದ್ದೇನೆ, ಒಳ್ಳೆಯದು ಮತ್ತು ಕೆಟ್ಟದ್ದನ್ನು ಅನುಭವಿಸಿದ್ದೇನೆ. ಆದ್ರೆ ದೇವರು ಯಾವಾಗಲೂ ನನ್ನ ಕೈ ಹಿಡಿದಿದ್ದಾನೆ. ಆ ಕಷ್ಟದ ದಿನಗಳಲ್ಲಿ ನನ್ನ ಜೊತೆ ನಿಂತ ಹೆತ್ತವರಿಗೆ ನಾನು ಆಭಾರಿ" ಎಂದು ಗೌರವ್ ಭಾವುಕರಾಗಿ ಬರೆದುಕೊಂಡಿದ್ದಾರೆ.

ನೆಟ್ಟಿಗರು ಮತ್ತು ಸೆಲೆಬ್ರಿಟಿಗಳ ಪ್ರತಿಕ್ರಿಯೆ

ಗೌರವ್ ಪೋಸ್ಟ್ ಮಾಡಿದ ಈ ಪತ್ರವನ್ನು ನೋಡಿ ಅನೇಕ ಸಹನಟರು ಮತ್ತು ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ನಟ ನವೀನ್ ಕೌಶಿಕ್ "ನಿಮ್ಮ ಕಥೆ ತುಂಬಾ ಸುಂದರವಾಗಿದೆ ಸಹೋದರ" ಎಂದರೆ, ಆದಿತ್ಯ ಉಪ್ಪಲ್ ಅವರು "ಪತ್ರ ಓದಿ ನನ್ನ ಕಣ್ಣಲ್ಲಿ ನೀರು ಬಂತು" ಎಂದು ಕಾಮೆಂಟ್ ಮಾಡಿದ್ದಾರೆ. ಕರಣ್ ವಿ ಗ್ರೋವರ್ ಮತ್ತು ಗಾಯಕಿ ಹರ್ಷದೀಪ್ ಕೌರ್ ಕೂಡ ಗೌರವ್ ಅವರ ಈ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಪರಿಶ್ರಮ ಪಟ್ಟರೆ ಗೆಲುವು ಖಂಡಿತ ಸಿಗುತ್ತದೆ ಅನ್ನೋದಕ್ಕೆ ಗೌರವ್ ಗೆರಾ ಅವರೇ ಒಂದು ದೊಡ್ಡ ಉದಾಹರಣೆ. ಅಂದು 23 ವರ್ಷದ ಆ ಹುಡುಗ ಅಂದುಕೊಂಡಂತೆ ಇಂದು ಒಬ್ಬ ಯಶಸ್ವಿ ನಟನಾಗಿ ಹೊರಹೊಮ್ಮಿದ್ದಾರೆ.

Latest News