Mar 3, 2026 Languages : ಕನ್ನಡ | English

ಡಾಕ್ಟರ್ ಆದ್ರೂ ಡಾನ್ಸಿಂಗ್ ಕ್ವೀನ್ - ಪದವಿ ಪ್ರದಾನ ಸಮಾರಂಭದಲ್ಲಿ ಮಿಂಚಿದ ನಟಿ ಶ್ರೀಲೀಲಾ!!

ಸಿನಿಮಾ ರಂಗದಲ್ಲಿ ತಾರೆಯಾಗಿ ಮಿನುಗುತ್ತಿರುವ ನಟಿ ಡಾ. ಶ್ರೀಲೀಲಾ ಇದೀಗ ಅಧಿಕೃತವಾಗಿ ವೈದ್ಯೆಯಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಈ ನಟಿ, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿರುವುದರ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಗ್ಲಾಮರ್ ಲೋಕದ ತಾರೆ ಈಗ ವೈದ್ಯೆ – ಡಾ. ಶ್ರೀಲೀಲಾ | Photo Credit: Instagam - sreeleela14
ಗ್ಲಾಮರ್ ಲೋಕದ ತಾರೆ ಈಗ ವೈದ್ಯೆ – ಡಾ. ಶ್ರೀಲೀಲಾ | Photo Credit: Instagam - sreeleela14

ಚಿತ್ರರಂಗದಲ್ಲಿ ಬ್ಯುಸಿ ವೇಳಾಪಟ್ಟಿಯ ನಡುವೆಯೇ ಓದನ್ನು ಮುಂದುವರಿಸಿಕೊಂಡಿದ್ದ ಶ್ರೀಲೀಲಾ, ಮುಂಬೈನ DY Patil University ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಅಭ್ಯಾಸ ಮಾಡುತ್ತಿದ್ದರು. 2020ರಲ್ಲಿ ಎಂಬಿಬಿಎಸ್ ಆರಂಭಿಸಿದ್ದ ಅವರು ಇದೀಗ ಪದವಿ ಮುಗಿಸಿ ಅಧಿಕೃತವಾಗಿ “ಡಾ. ಶ್ರೀಲೀಲಾ” ಆಗಿದ್ದಾರೆ. ತಮ್ಮ ಘಟಿಕೋತ್ಸವದ ಸಂಭ್ರಮದ ಕ್ಷಣಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಶ್ರೀಲೀಲಾ ಕೇವಲ ಗ್ಲಾಮರ್ ಲೋಕದ ತಾರೆ ಮಾತ್ರವಲ್ಲ, ತಮ್ಮ ಜೀವನದಲ್ಲಿ ವಿದ್ಯೆಗೆ ನೀಡಿದ ಮಹತ್ವದಿಂದಲೂ ಮಾದರಿಯಾಗಿದ್ದಾರೆ. ಸಿನಿಮಾ ಶೂಟಿಂಗ್, ಪ್ರಯಾಣ ಮತ್ತು ಪರೀಕ್ಷೆಗಳ ನಡುವೆಯೂ ಅವರು ತಮ್ಮ ಓದನ್ನು ನಿರ್ಲಕ್ಷ್ಯ ಮಾಡಿಲ್ಲ. ಇದರಿಂದ ಅವರ ಪರಿಶ್ರಮ ಮತ್ತು ಶಿಸ್ತು ಅಭಿಮಾನಿಗಳ ಗಮನ ಸೆಳೆದಿದೆ.

ಘಟಿಕೋತ್ಸವದ ದಿನ ಸಹಪಾಠಿಗಳೊಂದಿಗೆ ತೆಗೆಸಿಕೊಂಡಿರುವ ಚಿತ್ರಗಳು ಈಗ ವೈರಲ್ ಆಗಿವೆ. ಕಾಲೇಜು ದಿನಗಳ ನೆನಪುಗಳನ್ನು ಹಂಚಿಕೊಂಡಿರುವ ನಟಿ, ತಮ್ಮ ಸಹಪಾಠಿಗಳು ಮತ್ತು ಅಧ್ಯಾಪಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ವೈದ್ಯಕೀಯ ವಿದ್ಯಾರ್ಥಿನಿಯಾಗಿ ಕಳೆದ ವರ್ಷಗಳು ತಮ್ಮ ಜೀವನದಲ್ಲಿ ವಿಶೇಷವಾದ ಅಧ್ಯಾಯ ಎಂದು ಅವರು ಹೇಳಿದ್ದಾರೆ. ತಮ್ಮ ಈ ಪ್ರಯಾಣದಲ್ಲಿ ತಾಯಿ ಹಾಗೂ ಕುಟುಂಬದ ಬೆಂಬಲ ಬಹಳ ಮುಖ್ಯವಾಗಿತ್ತು ಎಂದು ಶ್ರೀಲೀಲಾ ತಿಳಿಸಿದ್ದಾರೆ. “ನನ್ನ ಕನಸುಗಳಿಗೆ ಬೆನ್ನೆಲುಬಾಗಿ ನಿಂತ ನನ್ನ ತಾಯಿ, ಕುಟುಂಬದವರು ಮತ್ತು ಸ್ನೇಹಿತರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಅವರು ಬರೆದುಕೊಂಡಿದ್ದಾರೆ. ಕುಟುಂಬದ ಪ್ರೋತ್ಸಾಹವಿಲ್ಲದೆ ಇಷ್ಟು ದೂರ ಬರುವುದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಪ್ಯಾನ್ ಇಂಡಿಯಾ ನಟಿಯಾಗಿ ತೆಲುಗು, ಹಿಂದಿ ಹಾಗೂ ಇತರೆ ಭಾಷೆಗಳ ಸಿನಿಮಾಗಳಲ್ಲಿ ನಟಿಸುತ್ತಿರುವ ಶ್ರೀಲೀಲಾ, ಇದೀಗ ಡಾಕ್ಟರ್ ಪದವಿಯನ್ನೂ ಪಡೆದು ಮತ್ತೊಂದು ಹೆಮ್ಮೆ ತಂದಿದ್ದಾರೆ. ತಮ್ಮನ್ನು ಅಭಿಮಾನಿಗಳಿಗೆ “ಡಾ. ಶ್ರೀಲೀಲಾ” ಎಂದು ಮತ್ತೆ ಪರಿಚಯಿಸಿಕೊಂಡಿರುವುದು ವಿಶೇಷ ಗಮನಸೆಳೆದಿದೆ. ಗ್ಲಾಮರ್ ಮತ್ತು ವಿದ್ಯಾಭ್ಯಾಸವನ್ನು ಸಮತೋಲನದಲ್ಲಿ ಸಾಗಿಸಿದ ಶ್ರೀಲೀಲಾ ಯುವ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ. ಕನಸು ಕಂಡರೆ ಸಾಧಿಸಬಹುದು ಎಂಬುದಕ್ಕೆ ಅವರ ಜೀವನವೇ ಉದಾಹರಣೆ. ಸಿನಿಮಾ ತಾರೆಯಾಗಿ ಮಾತ್ರವಲ್ಲ, ವೈದ್ಯೆಯಾಗಿಯೂ ಸಮಾಜಕ್ಕೆ ಸೇವೆ ಸಲ್ಲಿಸಲು ಸಿದ್ಧರಾಗಿರುವ ಡಾ. ಶ್ರೀಲೀಲಾ ಅವರಿಗೆ ಅಭಿಮಾನಿಗಳು ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ.

Latest News