Mar 25, 2026 Languages : ಕನ್ನಡ | English

ಧರ್ಮ ವರ್ಸಸ್ ಸಿನಿಮಾ! ಪವಿತ್ರ ಶ್ಲೋಕ ಪಠಿಸುವಾಗ ಸಿಗರೇಟ್ ಸೇದಿದ್ರಾ ಮಾಧವನ್? ಅಸಲಿ ಸತ್ಯ ಬಿಚ್ಚಿಟ್ಟ ನಟ!

ಧುರಂಧರ್ 2 ಸಿನಿಮಾ ಬಿಡುಗಡೆಯಾದ ಬಳಿಕ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದರೂ, ಇದೀಗ ಒಂದು ಹೊಸ ವಿವಾದಕ್ಕೆ ಕಾರಣವಾಗಿದೆ. ನಿರ್ದೇಶಕ ಆದಿತ್ಯ ಧರ್ ಮತ್ತು ನಟ ರಣವೀರ್ ಸಿಂಗ್ ಅಭಿನಯದ ಈ ಚಿತ್ರದಲ್ಲಿ ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ದೃಶ್ಯವಿದೆ ಎಂಬ ಆರೋಪ ಕೇಳಿಬಂದಿದೆ.

ಸಿಗರೇಟ್ ಸೇದಿಲ್ಲ ಎಂದ ಮಾಧವನ್… ವೈರಲ್ ಸೀನ್ ಸತ್ಯ ಬಹಿರಂಗ! | Photo Credit: reel/DWQ9_EliL4p/?igsh=MWVkcG1ucW5rY285cw==
ಸಿಗರೇಟ್ ಸೇದಿಲ್ಲ ಎಂದ ಮಾಧವನ್… ವೈರಲ್ ಸೀನ್ ಸತ್ಯ ಬಹಿರಂಗ! | Photo Credit: reel/DWQ9_EliL4p/?igsh=MWVkcG1ucW5rY285cw==

ಈ ಆರೋಪವನ್ನು ಮಹಾರಾಷ್ಟ್ರದ ಸಿಖ್ ಸಂಘಟನೆ ಅಧ್ಯಕ್ಷ ಗುರ್ಜ್ಯೋತ್ ಸಿಂಗ್ ಕೀರ್ ಮಾಡಿದ್ದಾರೆ. ಅವರ ಪ್ರಕಾರ, ಚಿತ್ರದಲ್ಲಿ ಆರ್ ಮಾಧವನ್ ನಿರ್ವಹಿಸಿರುವ ಪಾತ್ರವು ಸಿಗರೇಟ್ ಸೇದುತ್ತಾ ದಸಮ್ ಗ್ರಂಥದ ಪವಿತ್ರ ಶ್ಲೋಕವನ್ನು ಪಠಿಸುತ್ತಿರುವಂತೆ ತೋರಿಸಲಾಗಿದೆ. ಇದು ಸಿಖ್ ಸಮುದಾಯಕ್ಕೆ ಅವಮಾನಕಾರಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ವಿಷಯದ ಹಿನ್ನೆಲೆ ಮುಲುಂಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. ದೂರುದಲ್ಲಿ ರಣವೀರ್ ಸಿಂಗ್, ಆರ್ ಮಾಧವನ್ ಹಾಗೂ ನಿರ್ದೇಶಕ ಆದಿತ್ಯ ಧರ್ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆ ತೀವ್ರಗೊಂಡಿದೆ.

ಗುರ್ಜ್ಯೋತ್ ಸಿಂಗ್ ಕೀರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡು, ಗುರ್ಬಾನಿ ಪವಿತ್ರವಾದದ್ದು, ಅದನ್ನು ಕೇವಲ ಸಂಭಾಷಣೆಯಂತೆ ಬಳಸುವುದು ತಪ್ಪು ಎಂದು ಹೇಳಿದ್ದಾರೆ. ಸಿಖ್ ಸಮುದಾಯದ ನಂಬಿಕೆಗಳಿಗೆ ಗೌರವ ತೋರಬೇಕು ಎಂಬುದು ಅವರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ವಿವಾದದ ನಡುವೆಯೇ ನಟ ಆರ್ ಮಾಧವನ್ ಸ್ಪಷ್ಟನೆ ನೀಡಿದ್ದಾರೆ. ಅವರು ವಿಡಿಯೋ ಶೇರ್ ಮಾಡಿ , “ನಾನು ಆ ಶ್ಲೋಕಗಳನ್ನು ಹೇಳುವಾಗ ಸಿಗರೇಟ್ ಸೇದುತ್ತಿರಲಿಲ್ಲ” ಎಂದು ತಿಳಿಸಿದ್ದಾರೆ. ಅವರ ಪ್ರಕಾರ, ದೃಶ್ಯವನ್ನು ಚಿತ್ರೀಕರಿಸುವ ಮೊದಲು ನಿರ್ದೇಶಕರು ಸಿಗರೇಟ್ ನಂದಿಸುವಂತೆ ಸೂಚಿಸಿದ್ದರು.

ಮಾಧವನ್ ಹೇಳುವಂತೆ, ಆ ದೃಶ್ಯದ ಪವಿತ್ರತೆಯನ್ನು ಕಾಪಾಡಲು ವಿಶೇಷ ಕಾಳಜಿ ವಹಿಸಲಾಗಿತ್ತು. ಆದ್ದರಿಂದ, ಶ್ಲೋಕಗಳನ್ನು ಹೇಳುವ ಸಮಯದಲ್ಲಿ ಯಾವುದೇ ಧೂಮಪಾನ ನಡೆದಿಲ್ಲ. ಈ ಬಗ್ಗೆ ಜನರಲ್ಲಿ ತಪ್ಪು ಅರ್ಥೈಸಿಕೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಮಾತನಾಡಿದ ಅವರು, ನಿರ್ದೇಶಕ ಆದಿತ್ಯ ಧರ್ ಯಾರ ಧಾರ್ಮಿಕ ಭಾವನೆಗೂ ನೋವುಂಟು ಮಾಡುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಸಿಖ್ ಸಮುದಾಯವನ್ನು ಗೌರವಿಸುತ್ತಾರೆ ಮತ್ತು ತಮ್ಮ ಸಿನಿಮಾಗಳ ಬಿಡುಗಡೆಗೆ ಮುನ್ನ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡುವುದು ಅವರ ಪದ್ಧತಿ ಎಂದು ಹೇಳಿದ್ದಾರೆ.

ಆದರೂ, ಈ ದೃಶ್ಯದಿಂದ ಯಾರಿಗಾದರೂ ನೋವಾಗಿದ್ದರೆ, ತಮ್ಮಿಂದ ಕ್ಷಮೆ ಕೇಳುವುದಾಗಿ ಮಾಧವನ್ ತಿಳಿಸಿದ್ದಾರೆ. ಈ ಘಟನೆ ಮುಂದೇನು ತಿರುವು ಪಡೆಯಲಿದೆ ಎಂಬ ಕುತೂಹಲ ಈಗ ಅಭಿಮಾನಿಗಳು ಮತ್ತು ಚಿತ್ರರಂಗದಲ್ಲಿ ಹೆಚ್ಚಾಗಿದೆ.

Latest News