Mar 14, 2026 Languages : ಕನ್ನಡ | English

ಕಷ್ಟ ಕಾಲದ ಸ್ನೇಹಕ್ಕೆ ಸಾಕ್ಷಿಯಾದ 'ಬಜಾರ್' ಹೀರೊ - ದರ್ಶನ್ ಅವರನ್ನ ಜೈಲಿನಲ್ಲಿ ಧನ್ವೀರ್ ಭೇಟಿಯಾಗಿದ್ದು ಯಾಕೆ?

ಚಿತ್ರರಂಗ ಅಂದ್ರೆ ಬಣ್ಣದ ಲೋಕ ಅಂತಾರೆ. ಇಲ್ಲಿ ಯಶಸ್ಸು ಇದ್ದಾಗ ನೂರಾರು ಜನ ಇರ್ತಾರೆ, ಕಷ್ಟ ಬಂದಾಗ ಬೆರಳೆಣಿಕೆಯಷ್ಟು ಮಂದಿ ಮಾತ್ರ ಜೊತೆ ನಿಲ್ತಾರೆ. ಈಗ ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ಥಿತಿಯೂ ಹಾಗೆಯೇ ಆಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಪಾಲಾದ ಮೇಲೆ ಅವರ ಆಪ್ತರೆಲ್ಲ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, ಒಬ್ಬ ವ್ಯಕ್ತಿ ಮಾತ್ರ "ನಾನು ದರ್ಶನ್ ಅವರ ಪರ" ಅಂತಾ ಗಟ್ಟಿಯಾಗಿ ನಿಂತಿದ್ದಾರೆ. ಅವರೇ ಸ್ಯಾಂಡಲ್‌ವುಡ್‌ನ ಯಂಗ್ ಹೀರೊ ಧನ್ವೀರ್.

ದರ್ಶನ್ ಸಂಕಷ್ಟದಲ್ಲಿ ಧನ್ವೀರ್ ಬೆಂಬಲ!!
ದರ್ಶನ್ ಸಂಕಷ್ಟದಲ್ಲಿ ಧನ್ವೀರ್ ಬೆಂಬಲ!!

ಹೌದು, ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಜೈಲಿಗೆ ಧನ್ವೀರ್ ಭೇಟಿ ನೀಡಿದ್ದಾರೆ. ದರ್ಶನ್ ಅವರನ್ನ ಭೇಟಿಯಾಗಲು ಯಾರಿಗೂ ಅವಕಾಶ ಸಿಗುತ್ತಿಲ್ಲದ ಈ ಸಮಯದಲ್ಲಿ, ಧನ್ವೀರ್ ಹೋಗಿ ಮಾತನಾಡಿಸಿ ಬಂದಿದ್ದಾರೆ. ಜೈಲಿನಲ್ಲಿ ದರ್ಶನ್ ಅವರನ್ನ ಕಂಡಾಗ ಧನ್ವೀರ್ ಭಾವುಕರಾದರಾ? ಅಲ್ಲಿ ನಡೆದ ಮಾತುಕತೆಯಾದರೂ ಏನು? ಇಡೀ ಗಾಂಧಿನಗರ ಈಗ ಇದರ ಬಗ್ಗೆಯೇ ಮಾತಾಡ್ತಿದೆ. ಎಲ್ಲದರ ಡೀಟೇಲ್ಸ್ ಇಲ್ಲಿದೆ.

ದರ್ಶನ್ ಜೈಲಿಗೆ ಹೋದ ಮೇಲೆ ದೊಡ್ಡ ದೊಡ್ಡ ನಟರು, ನಿರ್ಮಾಪಕರು ಮೌನಕ್ಕೆ ಶರಣಾಗಿದ್ದಾರೆ. ಕೆಲವರಂತೂ ದರ್ಶನ್ ಹೆಸರು ಹೇಳಲು ಹೆದರುತ್ತಿದ್ದಾರೆ. ಆದರೆ ಧನ್ವೀರ್ ಹಾಗಲ್ಲ. ಆರಂಭದಿಂದಲೂ "ದರ್ಶನ್ ಅಣ್ಣ ನನಗೆ ಗುರು, ಅವರು ಏನೇ ಆಗಿರಲಿ ನಾನು ಅವರ ಜೊತೆ ಇರುತ್ತೇನೆ" ಎಂದು ಬಹಿರಂಗವಾಗಿ ಘೋಷಿಸಿದವರು. ಇವತ್ತು ಆ ಮಾತನ್ನ ಧನ್ವೀರ್ ಉಳಿಸಿಕೊಂಡಿದ್ದಾರೆ.

ಅರೇ.. ಜೈಲಿನಲ್ಲಿರುವ ದರ್ಶನ್ ಈಗ ಸಿನಿಮಾಗಳ ಬಗ್ಗೆ ಯೋಚನೆ ಮಾಡ್ತಿದ್ದಾರಾ? ಹೌದು ಎನ್ನುತ್ತಿವೆ ಮೂಲಗಳು. ಧನ್ವೀರ್ ಜೊತೆಗಿನ ಮಾತುಕತೆ ವೇಳೆ ದರ್ಶನ್, ಧನ್ವೀರ್ ನಟನೆಯ 'ಹಯಗ್ರೀವ' ಸಿನಿಮಾದ ಬಗ್ಗೆ ವಿಚಾರಿಸಿದ್ದಾರಂತೆ. "ಶೂಟಿಂಗ್ ಹೇಗೆ ನಡೀತಿದೆ? ಸಿನಿಮಾ ಕೆಲಸಗಳು ಎಲ್ಲಿಗೆ ಬಂದಿವೆ?" ಅಂತ ದರ್ಶನ್ ಆಪ್ತವಾಗಿ ಕೇಳಿದ್ದಾರೆ ಎನ್ನಲಾಗಿದೆ. ಕಷ್ಟದ ಕಾಲದಲ್ಲೂ ತನ್ನ ಶಿಷ್ಯನಂತಿರುವ ಧನ್ವೀರ್ ಕೆರಿಯರ್ ಬಗ್ಗೆ ದರ್ಶನ್ ಕಾಳಜಿ ವಹಿಸಿದ್ದು ಅಭಿಮಾನಿಗಳ ಗಮನ ಸೆಳೆದಿದೆ.

ಸುಮಾರು ಹೊತ್ತು ನಡೆದ ಮಾತುಕತೆಯಲ್ಲಿ ದರ್ಶನ್ ಧೈರ್ಯವಾಗಿರುವಂತೆ ಧನ್ವೀರ್‌ಗೆ ಹೇಳಿದ್ದಾರಂತೆ. ಸಿನಿಮಾ ಬಗ್ಗೆ ಗಮನ ಹರಿಸು, ಕೆಲಸ ನಿಲ್ಲಿಸಬೇಡ ಅನ್ನೋ ಸಂದೇಶ ರವಾನಿಸಿದ್ದಾರೆ. ಇತ್ತ ಧನ್ವೀರ್ ಕೂಡ ದರ್ಶನ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿ, ಆದಷ್ಟು ಬೇಗ ಹೊರಬನ್ನಿ ಎಂದು ಹಾರೈಸಿ ಬಂದಿದ್ದಾರೆ.

ಈ ಭೇಟಿಯ ನಂತರ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ಧನ್ವೀರ್ ಬೆಂಬಲಕ್ಕೆ ನಿಂತಿದ್ದಾರೆ. "ಇವನಪ್ಪಾ ಅಸಲಿ ಅಭಿಮಾನಿ", "ಕಷ್ಟದಲ್ಲಿ ಜೊತೆಗಿರುವವನೇ ಗೆಳೆಯ" ಅಂತ ಕಮೆಂಟ್ ಮಾಡ್ತಿದ್ದಾರೆ. ಚಿತ್ರರಂಗದ ಇತರ ನಟರಿಗೂ ಧನ್ವೀರ್ ನಡೆ ಒಂದು ಪಾಠದಂತಿದೆ ಎಂಬ ಚರ್ಚೆ ಶುರುವಾಗಿದೆ.

ಒಟ್ಟಿನಲ್ಲಿ, ಪರಪ್ಪನ ಅಗ್ರಹಾರದ ಗೋಡೆಗಳ ಮಧ್ಯೆ ದರ್ಶನ್ ಒಂಟಿಯಾಗಿದ್ದರೂ, ಹೊರಗಡೆ ಅವರಿಗಾಗಿ ಮಿಡಿಯುವ ಕೆಲವು ಜೀವಗಳಿವೆ ಅನ್ನೋದಕ್ಕೆ ಧನ್ವೀರ್ ಭೇಟಿಯೇ ಸಾಕ್ಷಿ. ದರ್ಶನ್ ಅವರ ಈ ಸಿನಿಮಾ ಕಾಳಜಿ ಮತ್ತು ಧನ್ವೀರ್ ಅವರ ಅಚಲ ಸ್ನೇಹ ಎಲ್ಲಿಗೆ ತಲುಪುತ್ತೆ ಅಂತ ಕಾದು ನೋಡಬೇಕು. 

Latest News