Apr 3, 2026 Languages : ಕನ್ನಡ | English

ಪರಪ್ಪನ ಅಗ್ರಹಾರದಿಂದಲೇ ಮೀಡಿಯಾ ವಿರುದ್ಧ 'ಡಿ-ಬಾಸ್' ಅಸ್ತ್ರ - ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್!! ಕಾರಣವೇನು?

ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ ಮೇಲೆ ಅಲ್ಲಿ ಒಂದಲ್ಲ ಒಂದು ಸುದ್ದಿ ಇದ್ದೇ ಇರುತ್ತೆ. ಮಾಧ್ಯಮಗಳ ಜೊತೆ ದರ್ಶನ್ ಅವರಿಗೆ ಮೊದಲಿನಿಂದಲೂ ಒಂದು ರೀತಿಯ 'ಲವ್ ಆಂಡ್ ಹೇಟ್' ಸಂಬಂಧ. ಅಂದ್ರೆ, ಕೆಲವೊಮ್ಮೆ ಇಬ್ಬರ ನಡುವೆ ಜಗಳವಾಗುತ್ತೆ, ಇನ್ನೊಮ್ಮೆ ಎಲ್ಲವೂ ಸರಿಯಾಗುತ್ತೆ. ಯಾರು ಸರಿ, ಯಾರು ತಪ್ಪು ಅಂತ ನಿರ್ಧಾರ ಮಾಡೋದು ಕಷ್ಟವಾದ್ರೂ, ಒಂದು ಸತ್ಯ ಏನಂದ್ರೆ ಕರ್ನಾಟಕದಲ್ಲಿ ದರ್ಶನ್ ಅವರೆಂದರೆ ಚಾನೆಲ್‌ಗಳಿಗೆ ಸಕ್ಕತ್ ಟಿ.ಆರ್.ಪಿ (TRP) ಕೊಡುವ ಮೆಟೀರಿಯಲ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ವಿಷಯ ದರ್ಶನ್ ಅವರಿಗೂ ಚೆನ್ನಾಗಿ ಗೊತ್ತು.

ಪರಪ್ಪನ ಅಗ್ರಹಾರದಿಂದ ದರ್ಶನ್ ಹೋರಾಟ; | Photo Credit: https://timesofindia.india
ಪರಪ್ಪನ ಅಗ್ರಹಾರದಿಂದ ದರ್ಶನ್ ಹೋರಾಟ; | Photo Credit: https://timesofindia.india

ಸದ್ಯ ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್, ಈಗ ಅಲ್ಲಿಂದಲೇ ಮಾಧ್ಯಮಗಳ ವಿರುದ್ಧ ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಹೌದು, ಈಗಿನ ಕಾಲ ಬದಲಾಗಿದೆ. ಟಿವಿಯಲ್ಲಿ ಬರೋ ಬ್ರೇಕಿಂಗ್ ನ್ಯೂಸ್‌ಗಳು ಮಳೆಗಿಂತ ವೇಗವಾಗಿ ಜನರ ಮನೆ ತಲುಪುತ್ತಿವೆ. ಆದರೆ, ಕೋರ್ಟ್‌ನಲ್ಲಿ ವಿಚಾರಣೆ ನಡೆಯುವ ಮುನ್ನವೇ ಟಿವಿ ಚಾನೆಲ್‌ಗಳಲ್ಲಿ 'ಮೀಡಿಯಾ ಟ್ರಯಲ್' ನಡೆಯುತ್ತಿದೆ ಅನ್ನೋದು ದರ್ಶನ್ ಅವರ ಈಗಿನ ಅಸಮಾಧಾನ. ಇದೇ ವಿಚಾರಕ್ಕೆ ಅವರು ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ದರ್ಶನ್ ಅವರ ವಾದದ ಪ್ರಕಾರ, ರೇಣುಕಾಸ್ವಾಮಿ ಪ್ರಕರಣದ ವಿವರಗಳನ್ನು ಪ್ರಸಾರ ಮಾಡಬಾರದು ಅಂತ ಕೋರ್ಟ್ ಮೊದಲೇ ನಿರ್ಬಂಧ ಹೇರಿತ್ತು. ಆದರೂ ಸುದ್ದಿ ವಾಹಿನಿಗಳು ಈ ಆದೇಶವನ್ನು ಗಾಳಿಗೆ ತೂರಿ ಕೇಸಿನ ವಿವರಗಳನ್ನು ಪ್ರಸಾರ ಮಾಡುತ್ತಿವೆ. ಅಷ್ಟೇ ಅಲ್ಲ, ಗ್ರಾಫಿಕ್ಸ್ ಮತ್ತು ಎಐ (AI) ತಂತ್ರಜ್ಞಾನ ಬಳಸಿ ಕೊ*ಲೆ ನಡೆದ ದೃಶ್ಯಗಳನ್ನು ಮರುಸೃಷ್ಟಿ ಮಾಡುತ್ತಿವೆ. ಇದು ಕೋರ್ಟ್ ನೀಡಿರುವ ಪ್ರತಿಬಂಧಕಾದೇಶದ ಸ್ಪಷ್ಟ ಉಲ್ಲಂಘನೆ ಅನ್ನೋದು ದರ್ಶನ್ ಅವರ ದೂರು.

ಇಲ್ಲಿ ಕೇವಲ ಮೀಡಿಯಾ ಮಾತ್ರವಲ್ಲ, ದರ್ಶನ್ ಅವರು ಕೇಂದ್ರ ಸರ್ಕಾರದ ಮೇಲೂ ಅಸಮಾಧಾನ ಹೊರಹಾಕಿದ್ದಾರೆ. ಈ ವರ್ಷದ (2026) ಜನವರಿ 16ರಂದೇ ಸುಮಾರು 1000ಕ್ಕೂ ಹೆಚ್ಚು ಯೂಟ್ಯೂಬ್ ಲಿಂಕ್‌ಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ನೀಡಲಾಗಿತ್ತು. "ಈ ಲಿಂಕ್‌ಗಳಲ್ಲಿ ಕಾನೂನು ಉಲ್ಲಂಘನೆಯಾಗಿದೆ, ಇವುಗಳನ್ನು ತೆಗೆದುಹಾಕಿ" ಎಂದು ದರ್ಶನ್ ಮನವಿ ಮಾಡಿದ್ದರು. ಆದರೆ, ಇಲ್ಲಿಯವರೆಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. "ನಿಯಮಗಳು ಉಲ್ಲಂಘನೆಯಾದರೂ ಸರ್ಕಾರ ಯಾಕೆ ಸುಮ್ಮನಿದೆ?" ಎಂದು ದರ್ಶನ್ ತಮ್ಮ ಅರ್ಜಿಯಲ್ಲಿ ಪ್ರಶ್ನೆ ಮಾಡಿದ್ದಾರೆ.

ಸಂವಿಧಾನದ 14 ಮತ್ತು 21ನೇ ವಿಧಿಯ ಪ್ರಕಾರ ಪ್ರತಿಯೊಬ್ಬ ಆರೋಪಿಗೂ ನ್ಯಾಯಯುತ ವಿಚಾರಣೆಯ ಹಕ್ಕಿದೆ. ಆದರೆ ಮಾಧ್ಯಮಗಳು ಪತ್ರಿಕೋದ್ಯಮದ ಹೆಸರಿನಲ್ಲಿ ಮೊದಲೇ ತೀರ್ಪು ನೀಡುವಂತೆ ವರ್ತಿಸುತ್ತಿವೆ. ಇದು ನನ್ನ ವೈಯಕ್ತಿಕ ಘನತೆಗೆ ಮತ್ತು ಕಾನೂನು ಪ್ರಕ್ರಿಯೆಗೆ ಧಕ್ಕೆ ತರುತ್ತಿದೆ ಎಂದು ದರ್ಶನ್ ಅವರು ದೂರಿದ್ದಾರೆ. ಆಕ್ಷೇಪಾರ್ಹವಾದ ಲಿಂಕ್‌ಗಳನ್ನು ಫೇಸ್‌ಬುಕ್, ಮೆಟಾ ಮತ್ತು ಯೂಟ್ಯೂಬ್‌ನಿಂದ ತೆರವುಗೊಳಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಹೈಕೋರ್ಟ್‌ನಲ್ಲಿ ಕೋರಿದ್ದಾರೆ.

ದರ್ಶನ್ ಸಲ್ಲಿಸಿರುವ ಈ ಅರ್ಜಿಯು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಒಂದು ಪ್ರಶ್ನೆ ಕೇಳಿದೆ—"ಈ ಬಗ್ಗೆ ನಿಮ್ಮ ನಿಲುವೇನು?". ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರದ ಪರ ವಕೀಲರು, ಮಾಧ್ಯಮಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು ಎಂಬುದನ್ನು ಸೋಮವಾರದೊಳಗೆ ತಿಳಿಸುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ಹೈಕೋರ್ಟ್ ಈ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿದೆ.

ಮಾಧ್ಯಮಗಳಿಗೆ ಸುದ್ದಿ ನೀಡುವ ಹಕ್ಕಿದೆ ನಿಜ, ಆದರೆ ನ್ಯಾಯಾಲಯದ ಆದೇಶಗಳನ್ನು ಮೀರಿ ಕೆಲಸ ಮಾಡುವುದು ಎಷ್ಟು ಸರಿ? ಇನ್ನೊಂದೆಡೆ, ಆರೋಪಿಯಾಗಿರುವ ವ್ಯಕ್ತಿಗೂ ತನ್ನ ಹಕ್ಕುಗಳನ್ನು ಕಾಪಾಡಿಕೊಳ್ಳುವ ಅವಕಾಶವಿದೆ. ಪರಪ್ಪನ ಅಗ್ರಹಾರದಿಂದ ದರ್ಶನ್ ಅವರು ಶುರು ಮಾಡಿರುವ ಈ ಹೋರಾಟ ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದನ್ನ ಏಪ್ರಿಲ್ 6ರವರೆಗೆ ಕಾದು ನೋಡಬೇಕು.

Latest News