ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 'ಕಲಾ ಸಾಮ್ರಾಟ್' ಎಂದೇ ಖ್ಯಾತರಾದ ನಿರ್ದೇಶಕ ಎಸ್. ನಾರಾಯಣ್ ಅವರು ಸೃಷ್ಟಿಸಿದ ಅದ್ಭುತಗಳಲ್ಲಿ ‘ಚೆಲುವಿನ ಚಿತ್ತಾರ’ ಸಿನಿಮಾ ಅತ್ಯಂತ ಪ್ರಮುಖವಾದುದು. 2007ರಲ್ಲಿ ತೆರೆಕಂಡ ಈ ಚಿತ್ರವು ಕೇವಲ ಒಂದು ಪ್ರೇಮಕಥೆಯಾಗಿರದೆ.
ಅಂದಿನ ಕಾಲದ ಯುವ ಸಮುದಾಯದ ಹೃದಯ ಬಡಿತವಾಗಿತ್ತು. ಇತ್ತೀಚೆಗೆ ಖಾಸಗಿ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಎಸ್. ನಾರಾಯಣ್ ಅವರು ಈ ಚಿತ್ರದ ಕುರಿತು ಯಾರಿಗೂ ತಿಳಿಯದ ಒಂದು ಆಸಕ್ತಿದಾಯಕ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಇಡೀ ಸಿನಿಮಾವನ್ನು ಕೇವಲ 24 ದಿನಗಳ ಅಲ್ಪ ಅವಧಿಯಲ್ಲಿ ಚಿತ್ರೀಕರಿಸಲಾಗಿತ್ತು ಎಂಬುದು ಆ ಅಚ್ಚರಿಯ ಸಂಗತಿ.
ಸಾಮಾನ್ಯವಾಗಿ ಒಂದು ಸಿನಿಮಾ ಪೂರ್ಣಗೊಳ್ಳಲು ತಿಂಗಳುಗಟ್ಟಲೆ ಸಮಯ ಬೇಕಾಗುತ್ತದೆ. ಆದರೆ, ಕೇವಲ 24 ದಿನಗಳಲ್ಲಿ ಶೂಟಿಂಗ್ ಮುಗಿಸಿ, ಆ ಕಾಲದಲ್ಲೇ ಸುಮಾರು 30 ಕೋಟಿ ರೂಪಾಯಿ ಗಳಿಕೆ ಮಾಡಿದ್ದು ಒಂದು ದಾಖಲೆಯೇ ಸರಿ. ಈ ಚಿತ್ರವು ಚಿತ್ರಮಂದಿರಗಳಲ್ಲಿ ಸತತವಾಗಿ 175ಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಂಡು ಇತಿಹಾಸ ನಿರ್ಮಿಸಿತ್ತು.
ತಮಿಳಿನ ಸೂಪರ್ ಹಿಟ್ ಸಿನಿಮಾ ‘ಕಾದಲ್’ ಚಿತ್ರದ ರಿಮೇಕ್ ಆಗಿದ್ದರೂ, ಎಸ್. ನಾರಾಯಣ್ ಅವರು ಇದನ್ನು ಕನ್ನಡದ ಸೊಗಡಿಗೆ ತಕ್ಕಂತೆ ಬಹಳ ಅಚ್ಚುಕಟ್ಟಾಗಿ ಅಳವಡಿಸಿದ್ದರು. ಈ ಚಿತ್ರವು ಗ್ಯಾರೇಜ್‌ನಲ್ಲಿ ಕೆಲಸ ಮಾಡುವ 'ಮಾದೇಶ' ಮತ್ತು ಎಂಟನೇ ತರಗತಿ ಓದುವ ಶಾಲಾ ಬಾಲಕಿ 'ಐಶ್ವರ್ಯಾ' ಎಂಬ ಇಬ್ಬರು ಮುಗ್ಧ ವ್ಯಕ್ತಿಗಳ ನಡುವಿನ ಪ್ರೇಮಕಥೆಯನ್ನು ಹೊಂದಿತ್ತು.
ಚಿತ್ರದ ನಾಯಕನಾಗಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಾಯಕಿಯಾಗಿ ಅಮೂಲ್ಯ ಅವರು ಮಾದೇಶ ಹಾಗೂ ಐಶ್ವರ್ಯಾ ಪಾತ್ರಗಳಿಗೆ ಜೀವ ತುಂಬಿದ್ದರು. ಇವರಿಬ್ಬರ ಕೆಮಿಸ್ಟ್ರಿ ಮತ್ತು ಅಮೂಲ್ಯ ಅವರ ಮುಗ್ಧ ನಟನೆ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾದ ಊರ್ವಿ ಮತ್ತು ಪ್ರೀತಮ್ ಅವರು ಈ ಜೋಡಿಯ ನಟನೆಯನ್ನು ಮರುಸೃಷ್ಟಿ ಮಾಡಿದಾಗ, ನಿರ್ದೇಶಕರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಮನೋಮೂರ್ತಿ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಆರು ಹಾಡುಗಳು ಇಂದಿಗೂ ಕೂಡ ಪ್ರತಿಯೊಬ್ಬ ಕನ್ನಡಿಗರ ಮೊಬೈಲ್ ಪ್ಲೇ-ಲಿಸ್ಟ್‌ನಲ್ಲಿವೆ. 'ಉಲ್ಲಾಸದ ಈ ಹೂ ಮಳೆ'ಯಂತಹ ಹಾಡುಗಳು ಇಂದಿಗೂ ಟ್ರೆಂಡಿಂಗ್‌ನಲ್ಲಿರುವುದು ಈ ಚಿತ್ರದ ಜನಪ್ರಿಯತೆಗೆ ಸಾಕ್ಷಿ.
ಚಿತ್ರದ ಕಥೆಯು ಕೇವಲ ಪ್ರೀತಿಯನ್ನು ಮಾತ್ರವಲ್ಲದೆ, ಆ ಪ್ರೀತಿ ತಂದೊಡ್ಡುವ ಭೀಕರ ಪರಿಣಾಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಮನೆಯವರಿಂದ ವಿರೋಧ ಎದುರಿಸಿ ಓಡಿ ಹೋಗಿ ಮದುವೆಯಾಗುವ ಈ ಜೋಡಿ, ಕೊನೆಗೆ ಪೋಷಕರ ಕೈಗೆ ಸಿಕ್ಕಿಬಿದ್ದಾಗ ನಡೆಯುವ ಘಟನೆಗಳು ಕರುಳು ಹಿಂಡುವಂತಿವೆ.
ಅದರಲ್ಲೂ ಕ್ಲೈಮ್ಯಾಕ್ಸ್ ಹಂತದಲ್ಲಿ ಮಾದೇಶ ತನ್ನ ಪ್ರೇಯಸಿಯನ್ನು ಕಳೆದುಕೊಂಡು ಹುಚ್ಚನಾಗುವ ದೃಶ್ಯವನ್ನು ನೋಡಿ ಕಣ್ಣೀರು ಹಾಕದ ಪ್ರೇಕ್ಷಕರೇ ಇಲ್ಲ ಎನ್ನಬಹುದು. ಸಾಮಾಜಿಕ ಕಳಕಳಿ ಮತ್ತು ಪ್ರೇಮದ ತೀವ್ರತೆಯನ್ನು ಸಮರ್ಥವಾಗಿ ಕಟ್ಟಿಕೊಟ್ಟ ಈ ಸಿನಿಮಾ, 24 ದಿನಗಳ ಶ್ರಮಕ್ಕೆ ಸಿಕ್ಕ ಅತಿದೊಡ್ಡ ಗೌರವವಾಗಿದೆ. ಇಂದಿಗೂ ಕನ್ನಡದ ಬೆಸ್ಟ್ ರೊಮ್ಯಾಂಟಿಕ್ ಸಿನಿಮಾಗಳ ಪಟ್ಟಿಯಲ್ಲಿ ‘ಚೆಲುವಿನ ಚಿತ್ತಾರ’ ಮೊದಲ ಸಾಲಿನಲ್ಲಿ ನಿಲ್ಲುತ್ತದೆ.