ಸಾಂಸ್ಕೃತಿಕ ನಗರಿ ಮೈಸೂರಿನ ರೈಲ್ವೆ ಪ್ರಯಾಣಿಕರಿಗೆ ಇಲ್ಲಿದೆ ಒಂದು ಸೂಪರ್ ಸುದ್ದಿ, ಇನ್ನು ಮುಂದೆ ಮೈಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಓಡಾಡಲಿವೆ. ಯಾಕೆಂದರೆ, ಮೈಸೂರಿನಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ವಂದೇ ಭಾರತ್ ರೈಲು ಡಿಪೋ ನಿರ್ಮಾಣವಾಗುತ್ತಿದೆ.
ಈ ಬಗ್ಗೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ (DRM) ಮುದಿತ್ ಮಿತ್ತಲ್ ಅವರು ಖುಷಿಯ ವಿಚಾರ ಹಂಚಿಕೊಂಡಿದ್ದಾರೆ.
ಏನಿದು 400 ಕೋಟಿ ಪ್ಲಾನ್?
ಮೈಸೂರಿನಲ್ಲಿ ಒಂದು ಹೊಸ ಗೂಡ್ಸ್ ಟರ್ಮಿನಲ್ ನಿರ್ಮಾಣವಾಗುತ್ತಿದ್ದು, ಅಲ್ಲಿಯೇ ಈ ಅತ್ಯಾಧುನಿಕ ಡಿಪೋವನ್ನು ಕೂಡ ಸ್ಥಾಪಿಸಲಾಗುತ್ತದೆ. ವಂದೇ ಭಾರತ್ ರೈಲುಗಳು ಅಂದ್ರೆ ಅವು ಸಖತ್ ಅಡ್ವಾನ್ಸ್ಡ್ ತಂತ್ರಜ್ಞಾನ ಹೊಂದಿರುತ್ತವೆ. ಅವುಗಳ ರಿಪೇರಿ, ಕ್ಲೀನಿಂಗ್ ಮತ್ತು ದಿನನಿತ್ಯದ ನಿರ್ವಹಣೆಗೆ ಒಂದು ವಿಶೇಷ ಡಿಪೋ ಬೇಕೇ ಬೇಕು.
ಇಲ್ಲಿಯವರೆಗೆ ಇಂತಹ ವ್ಯವಸ್ಥೆ ಮೈಸೂರಿನಲ್ಲಿ ಇರಲಿಲ್ಲ. ಈಗ 400 ಕೋಟಿ ರೂಪಾಯಿ ಹಾಕಿ ಈ ಡಿಪೋ ಕಟ್ಟುವುದರಿಂದ, ಇನ್ನು ಮುಂದೆ ಮೈಸೂರಿನಲ್ಲೇ ಈ ರೈಲುಗಳ 'ಸರ್ವಿಸಿಂಗ್' ನಡೆಯಲಿದೆ. ಇದರ ದೊಡ್ಡ ಲಾಭ ಅಂದ್ರೆ, ಮೈಸೂರಿನಿಂದಲೇ ಹೆಚ್ಚಿನ ವಂದೇ ಭಾರತ್ ರೈಲುಗಳನ್ನು ಸ್ಟಾರ್ಟ್ ಮಾಡಬಹುದು ಮತ್ತು ನಿಲ್ಲಿಸಬಹುದು.
2 ವರ್ಷದಲ್ಲಿ ಕಂಪ್ಲೀಟ್!
ಈ ಡಿಪೋ ಮತ್ತು ಮೈಸೂರು ಯಾರ್ಡ್ ಕೆಲಸಗಳು ಸದ್ಯ ಫುಲ್ ಜೋರಾಗಿ ನಡೀತಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಕೆಲಸ ಪೂರ್ತಿಯಾಗುವ ಗುರಿ ಇದೆ. ಒಮ್ಮೆ ಈ ಡಿಪೋ ರೆಡಿಯಾಯ್ತು ಅಂದ್ರೆ, ಮೈಸೂರಿನಿಂದ ಬೆಂಗಳೂರು ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳ ಪ್ರಮುಖ ನಗರಗಳಿಗೂ ವಂದೇ ಭಾರತ್ ರೈಲುಗಳು ಓಡೋದು ಗ್ಯಾರಂಟಿ.
ರೈಲ್ವೆ ಇಲಾಖೆಗೆ ಹರಿದು ಬಂದ ಹಣ!
ಮತ್ತೊಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ, 2025-26ನೇ ಸಾಲಿನಲ್ಲಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗ ಸಖತ್ ಲಾಭ ಮಾಡಿದೆ.
ಪ್ರಯಾಣಿಕರ ಟಿಕೆಟ್‌ನಿಂದ: 449.13 ಕೋಟಿ ರೂ. ಆದಾಯ ಬಂದಿದೆ.
ಟಿಕೆಟ್ ಇಲ್ಲದೆ ಸಿಕ್ಕಿಬಿದ್ದವರಿಂದ: ದಂಡದ ರೂಪದಲ್ಲೇ 9.75 ಕೋಟಿ ರೂ. ಕಲೆಕ್ಟ್ ಆಗಿದೆ! (ಹಾಗಾಗಿ ಟಿಕೆಟ್ ತಗೊಳ್ಳೋದನ್ನ ಮರಿಬೇಡಿ).
ಪಾರ್ಕಿಂಗ್ ಮತ್ತು ಜಾಹೀರಾತು: ಪಾರ್ಕಿಂಗ್‌ನಿಂದ 4.02 ಕೋಟಿ ಮತ್ತು ಅಡ್ವರ್ಟೈಸ್‌ಮೆಂಟ್‌ನಿಂದ 3.17 ಕೋಟಿ ರೂ. ಆದಾಯ ಬಂದಿದೆ.
ಬೆಂಗಳೂರು ವಿಭಾಗದಲ್ಲೂ ಭರ್ಜರಿ ಬದಲಾವಣೆ
ಮೈಸೂರು ಮಾತ್ರವಲ್ಲ, ಬೆಂಗಳೂರು ರೈಲ್ವೆ ವಿಭಾಗದಲ್ಲೂ ದೊಡ್ಡ ಮಟ್ಟದ ಸುಧಾರಣೆಗಳಾಗಿವೆ ಎಂದು ಡಿಆರ್‌ಎಂ ಅಶುತೋಷ್ ಕುಮಾರ್‌ಸಿಂಗ್ ಹೇಳಿದ್ದಾರೆ.
ಸ್ಪೀಡ್ ಹೆಚ್ಚಳ: ಸುಮಾರು 106 ರೈಲುಗಳ ವೇಗವನ್ನು ಹೆಚ್ಚಿಸಲಾಗಿದೆ. ಇದರಿಂದ ನೀವು ಮುಂಚೆಗಿಂತ ಬೇಗ ನಿಮ್ಮ ಊರು ತಲುಪಬಹುದು.
ಡೀಸೆಲ್ ಬದಲಿಗೆ ಕರೆಂಟ್: 14 ರೈಲುಗಳನ್ನು ಡೀಸೆಲ್‌ನಿಂದ ಎಲೆಕ್ಟ್ರಿಕ್‌ಗೆ ಬದಲಿಸಲಾಗಿದೆ. ಇದರಿಂದ ರೈಲ್ವೆ ಇಲಾಖೆಗೆ ವರ್ಷಕ್ಕೆ 43.73 ಕೋಟಿ ರೂ. ಇಂಧನ ಖರ್ಚು ಉಳಿತಾಯವಾಗಿದೆಯಂತೆ!
ಹೊಸ ಹಳಿಗಳು: ತುಮಕೂರು ಭಾಗದಲ್ಲಿ 24 ಕಿ.ಮೀ ಹೊಸ ರೈಲು ಮಾರ್ಗ ಸಿದ್ಧವಾಗಿದೆ. ಹಾಗೆಯೇ ಬೆಂಗಳೂರು ಕಂಟೋನ್ಮೆಂಟ್ ಮತ್ತು ಬೈಯಪ್ಪನಹಳ್ಳಿ ನಡುವೆ 3ನೇ ಮತ್ತು 4ನೇ ರೈಲು ಹಳಿಗಳ ಕೆಲಸ ಮುಗಿದು ರೈಲು ಸಂಚಾರ ಶುರುವಾಗಿದೆ.
ಕರ್ನಾಟಕದ ರೈಲ್ವೆ ವ್ಯವಸ್ಥೆ ಈಗ 'ವಂದೇ ಭಾರತ್' ವೇಗದಲ್ಲಿ ಓಡುತ್ತಿದೆ. ಮೈಸೂರಿನಲ್ಲಿ ಡಿಪೋ ನಿರ್ಮಾಣವಾದರೆ ಟೂರಿಸಂ ಕೂಡ ಇನ್ನು ಹೆಚ್ಚಾಗೋದ್ರಲ್ಲಿ ಸಂಶಯವೇ ಇಲ್ಲ.