Apr 11, 2026 Languages : ಕನ್ನಡ | English

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ - ಟಿಕೆಟ್ ದರ ಮತ್ತು ನಿಲ್ದಾಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ!!

ಬೆಂಗಳೂರಿನಿಂದ ಮುಂಬೈಗೆ ಹೋಗುವವರಿಗೆ ಇನ್ನು ಮುಂದೆ ಜರ್ನಿ ಮತ್ತಷ್ಟು ಸಲೀಸಾಗಲಿದೆ. ದೀರ್ಘಕಾಲದ ಬೇಡಿಕೆಯಾಗಿದ್ದ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ರೈಲ್ವೆ ಇಲಾಖೆ ಈಗ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದೆ. ಈ ಬಗ್ಗೆ ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸದ ಪಿ.ಸಿ. ಮೋಹನ್ ಅವರಿಗೆ ಪತ್ರ ಬರೆದು ಖಚಿತಪಡಿಸಿದ್ದಾರೆ.

ಬೆಂಗಳೂರಿನಿಂದ ಮುಂಬೈಗೆ ಬರ್ತಿದೆ ಹೈಟೆಕ್ ಸ್ಲೀಪರ್ ರೈಲು
ಬೆಂಗಳೂರಿನಿಂದ ಮುಂಬೈಗೆ ಬರ್ತಿದೆ ಹೈಟೆಕ್ ಸ್ಲೀಪರ್ ರೈಲು

ಪ್ರಸ್ತುತ ಬೆಂಗಳೂರು ಮತ್ತು ಮುಂಬೈ ನಡುವೆ ಸಂಚರಿಸುವ ಸಾಮಾನ್ಯ ರೈಲುಗಳು ಗುರಿ ತಲುಪಲು ಸುಮಾರು 24 ರಿಂದ 30 ಗಂಟೆಗಳ ಸುದೀರ್ಘ ಸಮಯ ತೆಗೆದುಕೊಳ್ಳುತ್ತವೆ. ಇನ್ನು ಖಾಸಗಿ ಬಸ್‌ಗಳನ್ನೇ ಅವಲಂಬಿಸಿದರೆ ಕನಿಷ್ಠ 16 ರಿಂದ 18 ಗಂಟೆ ಬೇಕು. ಆದರೆ ಹೊಸದಾಗಿ ಬರಲಿರುವ ಈ ವಂದೇ ಭಾರತ್ ಸ್ಲೀಪರ್ ರೈಲು ಕೇವಲ 13 ರಿಂದ 15 ಗಂಟೆಗಳಲ್ಲಿ ನಿಮ್ಮನ್ನು ಮುಂಬೈಗೆ ತಲುಪಿಸಲಿದೆ! ಅಂದರೆ ಬಸ್‌ಗಿಂತಲೂ ವೇಗವಾಗಿ, ವಿಮಾನದಂತಹ ಸೌಲಭ್ಯದೊಂದಿಗೆ ನೀವು ಪ್ರಯಾಣಿಸಬಹುದು.

ಸಂಸದ ಪಿ.ಸಿ. ಮೋಹನ್ ಅವರ ಪ್ರಯತ್ನ

ಬೆಂಗಳೂರು ಕೇಂದ್ರ ಸಂಸದರಾದ ಪಿ.ಸಿ. ಮೋಹನ್ ಅವರು ಈ ರೈಲಿಗಾಗಿ ರೈಲ್ವೆ ಇಲಾಖೆಗೆ ನಿರಂತರವಾಗಿ ಒತ್ತಾಯ ಮಾಡುತ್ತಿದ್ದರು. ಕಳೆದ ಡಿಸೆಂಬರ್ 2 ರಂದು ನಡೆದ ನೈಋತ್ಯ ರೈಲ್ವೆಯ ಸ್ಥಾಯಿ ಸಮಿತಿ ಸಭೆಯಲ್ಲಿಯೂ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದರು. "ಬೆಂಗಳೂರಿನಿಂದ ಮುಂಬೈಗೆ ನಿತ್ಯ ಸಾವಿರಾರು ಜನ ಹೋಗುತ್ತಾರೆ, ಅವರಿಗಾಗಿ ಬಸ್‌ಗಿಂತ ವೇಗವಾದ ರೈಲು ಬೇಕು" ಎಂಬ ಅವರ ಮನವಿಗೆ ಕೇಂದ್ರ ಸರ್ಕಾರ ಈಗ ಸ್ಪಂದಿಸಿದೆ.

ರೈಲಿನ ಹಾದಿ ಮತ್ತು ಸೌಲಭ್ಯಗಳು

ಈ ರೈಲು ಬೆಂಗಳೂರಿನ ಕೆಎಸ್‌ಆರ್ (ಮೆಜೆಸ್ಟಿಕ್) ನಿಲ್ದಾಣದಿಂದ ಹೊರಟು ಮುಂಬೈನ ಪ್ರಸಿದ್ಧ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ವರೆಗೆ ಸಂಚರಿಸಲಿದೆ. ಇದು ಸ್ಲೀಪರ್ ಆವೃತ್ತಿಯಾದ್ದರಿಂದ ರಾತ್ರಿ ಹೊತ್ತು ಆರಾಮವಾಗಿ ಮಲಗಿ ಪ್ರಯಾಣಿಸಬಹುದು. ವಂದೇ ಭಾರತ್ ರೈಲಿನಲ್ಲಿದ್ದಂತೆ ಇಲ್ಲಿಯೂ:

  • ಅತಿ ವೇಗದ ಚಲನೆ.
  • ಆಧುನಿಕ ವಿನ್ಯಾಸದ ಸೀಟುಗಳು ಮತ್ತು ಬರ್ತ್‌ಗಳು.
  • ಸ್ವಯಂಚಾಲಿತ ಬಾಗಿಲುಗಳು ಮತ್ತು ಅತ್ಯುತ್ತಮ ಆಹಾರ ವ್ಯವಸ್ಥೆ ಇರಲಿದೆ.
  • ಪ್ರಯಾಣ ಸಮಯಕ್ಕೆ ಬೀಳಲಿದೆ ಕತ್ತರಿ

ಸದ್ಯದ ಲೆಕ್ಕಾಚಾರದ ಪ್ರಕಾರ, ಈ ರೈಲು ಆರಂಭವಾದರೆ ಪ್ರಯಾಣದ ಸಮಯದಲ್ಲಿ ಸುಮಾರು 10 ರಿಂದ 12 ಗಂಟೆಗಳಷ್ಟು ಉಳಿತಾಯವಾಗಲಿದೆ. ಮುಂಬೈ ಮಾತ್ರವಲ್ಲದೆ ದೆಹಲಿ ಮತ್ತು ಸೂರತ್ ಮಾರ್ಗಗಳಿಗೂ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ತರಲು ಇಲಾಖೆ ಪ್ಲಾನ್ ಮಾಡಿದೆ.

ವ್ಯಾಪಾರ-ವಹಿವಾಟು ಮತ್ತು ಪ್ರವಾಸಕ್ಕೆ ಬೆಂಗಳೂರು-ಮುಂಬೈ ನಡುವೆ ಓಡಾಡುವವರಿಗೆ ಈ ಹೈಟೆಕ್ ರೈಲು ವರದಾನವಾಗಲಿದೆ. ಇನ್ನೇನು ಕೆಲವೇ ತಿಂಗಳುಗಳಲ್ಲಿ ಈ ರೈಲು ಹಳಿಯ ಮೇಲೆ ಓಡಲಿದ್ದು, ಪ್ರಯಾಣಿಕರಲ್ಲಿ ಹೊಸ ಸಂಚಲನ ಮೂಡಿಸಿದೆ.