ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ನಿರಾಶದಾಯಕ ಪ್ರದರ್ಶನ ನೀಡುತ್ತಿದೆ. ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋಲು ಕಂಡ ನಂತರ, ಅಭಿಮಾನಿಗಳು ಮತ್ತೆ ವಿರಾಟ್ ಕೊಹ್ಲಿ ಅವರು ಟೆಸ್ಟ್ ತಂಡಕ್ಕೆ ವಾಪಸ್ ಬರಬೇಕು ಎಂದು ಕೇಳುತ್ತಿದ್ದಾರೆ. ಕೊಹ್ಲಿ ನಾಯಕತ್ವದಲ್ಲೇ ಭಾರತ ಅದ್ಭುತ ಗೆಲುವುಗಳನ್ನು ಸಾಧಿಸಿತ್ತು ಎಂಬ ನೆನಪನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಮೊದಲ ಸಲ ಅಧಿಕೃತ ಪ್ರತಿಕ್ರಿಯೆ ನೀಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ತವರಿನಲ್ಲಿ ಹುಲಿಯಲ್ಲ, ಇಲಿಯಾಗಿದೆ ಎಂಬ ಟೀಕೆಗಳು ಕೆಲ ಕ್ರಿಕೆಟ್ ಪ್ರೇಮಿಗಳಿಂದ ಕೇಳಿಬರುತ್ತಿವೆ. ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗಳಲ್ಲಿ ವೈಟ್‌ವಾಶ್ ಆಗಿರುವುದು ತಂಡದ ಸ್ಥಿತಿಯನ್ನು ಸಂಕಷ್ಟಕ್ಕೆ ದೂಡಿದೆ ಎನ್ನಬಹುದು. ಗಂಭೀರ್ ಕೋಚಿಂಗ್, ನಾಯಕತ್ವ ಬದಲಾವಣೆ ಹಾಗೂ ಹಿರಿಯ ಆಟಗಾರರ ನಿವೃತ್ತಿ ಸದ್ಯ ತಂಡದ ಶಕ್ತಿ ಕುಂದಿಸಿದೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ ಅವರು ನಾಯಕತ್ವ ವಹಿಸಿಕೊಂಡಾಗಿನಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಮಿಂಚಿತ್ತು. 7ನೇ ಸ್ಥಾನದಲ್ಲಿದ್ದ ತಂಡವನ್ನು ಅವರು ಅಗ್ರಸ್ಥಾನಕ್ಕೆ ತಂದರು. ಬೌಲಿಂಗ್ ವಿಭಾಗವನ್ನೇ ಹುಲಿಗಳಂತೆ ಬದಲಾಯಿಸಿ, ತಂಡಕ್ಕೆ ಹೊಸ ಶಕ್ತಿ ತುಂಬಿದರು. ಐಸಿಸಿ ಟ್ರೋಫಿ ಗೆಲ್ಲದಿದ್ದರೂ, ಕೊಹ್ಲಿ ಭಾರತದ ಶ್ರೇಷ್ಠ ಟೆಸ್ಟ್ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಟೀಂ ಇಂಡಿಯಾದ ಸರಣಿ ಸೋಲಿನ ಹಿನ್ನೆಲೆಯಲ್ಲಿ, ವಿರಾಟ್ ಕೊಹ್ಲಿ ನಿವೃತ್ತಿ ನಿರ್ಧಾರ ಹಿಂಪಡೆಯುವಂತೆ ಬಿಸಿಸಿಐ ಮನವೊಲಿಸುತ್ತಿದೆ ಎಂಬ ವರದಿಗಳು ಹರಿದಾಡುತ್ತಿದ್ದವು. ಆದರೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟನೆ ನೀಡಿದ್ದು: “ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ವಾಪಸ್ ಪಡೆಯಲು ಬಿಸಿಸಿಐ ಮನವೊಲಿಸುತ್ತಿದೆ ಎನ್ನುವುದು ಆಧಾರರಹಿತ ಗಾಳಿ ಸುದ್ದಿ. ಈ ಕುರಿತಂತೆ ಕೊಹ್ಲಿ ಜತೆ ಯಾವುದೇ ಮಾತುಕತೆ ನಡೆದಿಲ್ಲ.”
ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದಾಗಿ, ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವುದು ಕಷ್ಟವಾಗಿದೆ. ಮುಂದಿನ ಪಂದ್ಯಗಳಲ್ಲಿ ಕನಿಷ್ಠ ಏಳು ಗೆಲುವುಗಳನ್ನು ಸಾಧಿಸಲೇಬೇಕು. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳನ್ನು ಈ ತಂಡದಿಂದ ಗೆಲ್ಲುವುದು ಕಷ್ಟ ಎನ್ನುತ್ತಾರೆ ಅಭಿಮಾನಿಗಳು.