ರಾಜ್ಯಾದ್ಯಂತ ಮುಗಿಲು ಮುಟ್ಟಿದ RCB ಗೆಲುವಿನ ಸಂಭ್ರಮ - ದಾವಣಗೆರೆಯಲ್ಲಿ ಫ್ಯಾನ್ಸ್ ದಾರಿ ಬಿಟ್ಟರೆ, ಮಂಡ್ಯದಲ್ಲಿ ಲಾಠಿ ಚಾರ್ಜ್!!

ಆರ್‌ಸಿಬಿ ಐಪಿಎಲ್ 2026ರ ಕಪ್ ಗೆದ್ದು ಇತಿಹಾಸ ಸೃಷ್ಟಿಸ್ತಿದ್ದಂತೆ ಇಡೀ ಕರ್ನಾಟಕವೇ ನಿದ್ದೆಗೆಟ್ಟಿದೆ. ಹಳ್ಳಿ-ದಿಲ್ಲಿ ಅನ್ನೋ ಹಾಗಿಲ್ಲ, ರಾಜ್ಯದ ಮೂಲೆ ಮೂಲೆಯಲ್ಲೂ ಆರ್‌ಸಿಬಿ ಫ್ಯಾನ್ಸ್ ರಸ್ತೆಗಿಳಿದು ಅಕ್ಷರಶಃ ಧೂಳೆಬ್ಬಿಸಿದ್ದಾರೆ. ಪಟಾಕಿ ಸೌಂಡು, ಡಿಜೆ ಹಾಡುಗಳು, 'ಆರ್‌ಸಿಬಿ ಆರ್‌ಸಿಬಿ' ಅನ್ನೋ ಜೈಕಾರಗಳ ಮಧ್ಯೆ ಇಡೀ ರಾತ್ರಿ ಕರ್ನಾಟಕವೇ ರೆಡ್ ಅಂಡ್ ಗೋಲ್ಡ್ ಮಯವಾಗಿತ್ತು. ಸಿಲಿಕಾನ್ ಸಿಟಿಯಿಂದ ಹಿಡಿದು ಕಾಫಿನಾಡು, ಗಂಡುಮೆಟ್ಟಿದ ನಾಡಿನವರೆಗೆ ಎಲ್ಲೆಲ್ಲಿ ಹೇಗೆಲ್ಲಾ ಸಂಭ್ರಮ ನಡೀತು ಅಂತ ನೀವೇ ನೋಡಿ.

ಆರ್‌ಸಿಬಿ ಗೆಲುವಿಗೆ ಇಡೀ ಕರ್ನಾಟಕವೇ ನಿದ್ದೆಗೆಟ್ಟ ರಾತ್ರಿ
ಆರ್‌ಸಿಬಿ ಗೆಲುವಿಗೆ ಇಡೀ ಕರ್ನಾಟಕವೇ ನಿದ್ದೆಗೆಟ್ಟ ರಾತ್ರಿ

ಸಿಲಿಕಾನ್ ಸಿಟಿಯಲ್ಲಿ ಹಬ್ಬದ ವಾತಾವರಣ!

ಬೆಂಗಳೂರಿನಲ್ಲಂತೂ ಮ್ಯಾಚ್ ಮುಗೀತಿದ್ದಂತೆ ಜನ ಸಾಗರವೇ ರಸ್ತೆಗಿಳಿಯಿತು. ಎಂ.ಜಿ.ರೋಡ್, ಬ್ರಿಗೇಡ್ ರಸ್ತೆ, ಇಂದಿರಾನಗರ, ಮಲ್ಲೇಶ್ವರಂ ಸೇರಿದಂತೆ ಸಿಟಿಯ ಪ್ರಮುಖ ಏರಿಯಾಗಳಲ್ಲಿ ಟ್ರಾಫಿಕ್ ಜಾಮ್ ಆಗೋ ರೇಂಜ್‌ಗೆ ಫ್ಯಾನ್ಸ್ ಜಮಾಯಿಸಿದ್ರು. ತಂಡದ ಧ್ವಜ ಹಿಡಿದು ಬೈಕ್‌ಗಳಲ್ಲಿ ರೌಂಡ್ಸ್ ಹೊಡೆಯುತ್ತಾ, ಡೋಲು ಬಾರಿಸಿ ಕುಣಿದು ಕುಪ್ಪಳಿಸಿದ್ರು.

ದಾವಣಗೆರೆ ಹುಡುಗರ ‘ರಿಯಲ್’ ರಾಯಲ್ ಆಟ: ಎಲ್ಲರ ಮೆಚ್ಚುಗೆ!

ಇಷ್ಟೆಲ್ಲಾ ಸಂಭ್ರಮದ ನಡುವೆ ದಾವಣಗೆರೆಯಲ್ಲಿ ಒಂದು ಎಮೋಷನಲ್ ಮತ್ತು ಹೆಮ್ಮೆ ಪಡುವಂತ ಘಟನೆ ನಡೆದಿದೆ. ದಾವಣಗೆರೆಯ ಚೇತನಾ ಹೋಟೆಲ್ ರಸ್ತೆಯಲ್ಲಿ ನೂರಾರು ಫ್ಯಾನ್ಸ್ ಫುಲ್ ಜೋಶ್‌ನಲ್ಲಿ ಡ್ಯಾನ್ಸ್ ಮಾಡ್ತಾ ವಿಜಯೋತ್ಸವ ಆಚರಿಸುತ್ತಿದ್ದರು. ಇದೇ ವೇಳೆ ಅಲ್ಲಿಗೆ ಒಂದು ಆ್ಯಂಬುಲೆನ್ಸ್ ಬಂತು. ಅಷ್ಟೊಂದು ಕ್ರೌಡ್ ಇದ್ದರೂ, ಆ್ಯಂಬುಲೆನ್ಸ್ ಸೈರನ್ ಕೇಳಿದ ತಕ್ಷಣ ಫ್ಯಾನ್ಸ್ ಕ್ಷಣಾರ್ಧದಲ್ಲಿ ಸೈಡಿಗೆ ಸರಿದು ದಾರಿ ಮಾಡಿಕೊಟ್ಟಿದ್ದಾರೆ. ಸಂಭ್ರಮದ ಅಮಲಿನಲ್ಲೂ ತುರ್ತು ಸೇವೆಗೆ ಬೆಲೆ ಕೊಟ್ಟ ದಾವಣಗೆರೆ ಹುಡುಗರ ಈ ನಡೆಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮೆಚ್ಚುಗೆ ವ್ಯಕ್ತವಾಗ್ತಿದೆ.

ಮಂಡ್ಯ ಹಾಗೂ ಶಿವಮೊಗ್ಗದಲ್ಲಿ ಲಾಠಿ ರುಚಿ!

ಆರ್‌ಸಿಬಿ ಗೆಲುವು ಮಂಡ್ಯದಲ್ಲಿ ಭಾರೀ ಹೈಡ್ರಾಮಾಗೆ ಕಾರಣವಾಯಿತು. ಮಂಡ್ಯ ನಗರದ ಸಂಜಯ ವೃತ್ತದಲ್ಲಿ ನೂರಾರು ಅಭಿಮಾನಿಗಳು ಜಮಾಯಿಸಿ ಜೋರಾಗಿ ಘೋಷಣೆ ಕೂಗುತ್ತಾ ಕುಣಿತಾ ಇದ್ರು. ಆದ್ರೆ, ಜನಜಂಗುಳಿ ಮಿತಿಮೀರಿದಾಗ ಪರಿಸ್ಥಿತಿಯನ್ನು ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯ್ತು. ಮಾತು ಕೇಳದ ಕೆಲವು ಗ್ಯಾಂಗ್‌ಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಗಿ ಬಂತು.

ಇದೇ ಸೀನ್ ಶಿವಮೊಗ್ಗದಲ್ಲೂ ರಿಪೀಟ್ ಆಯ್ತು. ಶಿವಮೊಗ್ಗದ ಗೋಪಿ ವೃತ್ತದಲ್ಲಿ ಸಾವಿರಾರು ಅಭಿಮಾನಿಗಳು ಸೇರಿದ್ರು. ಪೊಲೀಸರು ಗುಂಪು ಸೇರಬೇಡಿ ಅಂತ ವಾರ್ನಿಂಗ್ ಕೊಟ್ಟರೂ ಜನ ಕದಲಿಲ್ಲ. ಕೊನೆಗೆ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಬೇಕಾಯಿತು.

ಉತ್ತರ ಕರ್ನಾಟಕದಲ್ಲಿ ಕೇಕೆ-ಸಿಳ್ಳೆ ಅಬ್ಬರ

ಧಾರವಾಡ: ಕೆಸಿಡಿ ಮೈದಾನದಲ್ಲಿ ಸೇರಿದ ಯುವಕರ ದಂಡು ಪಟಾಕಿ ಸಿಡಿಸಿ, ಕೇಕೆ ಹಾಕಿ ಇಡೀ ಮೈದಾನವನ್ನು ಆರ್‌ಸಿಬಿ ಮಯ ಮಾಡಿದ್ರು.

ವಿಜಯಪುರ: ನಗರದ ಎಂ.ಜಿ ವೃತ್ತ ಮತ್ತು ಸಿದ್ದೇಶ್ವರ ದೇವಸ್ಥಾನದ ಹತ್ತಿರ ಯುವಕ-ಯುವತಿಯರು ಭರ್ಜರಿಯಾಗಿ ಸಂಭ್ರಮಿಸಿದ್ರು. ಕಾರು, ಬೈಕ್‌ಗಳ ಮೇಲೆ ನಿಂತು, ಕಾರಿನ ಡಿಜೆ ಸೌಂಡ್‌ಗೆ ಸ್ಟೆಪ್ಸ್ ಹಾಕುತ್ತಾ "ಈ ಸಲವೂ ಕಪ್ ನಮ್ದೇ" ಅಂತ ರೇಗಿಸಿದ್ರು. ಮುಂಜಾಗ್ರತಾ ಕ್ರಮವಾಗಿ ಇಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಇತ್ತು.

ಬಾಗಲಕೋಟೆ: ಬಾಗಲಕೋಟೆ ನಗರ ಮಾತ್ರವಲ್ಲದೆ ಲೋಕಾಪುರ, ತೇರದಾಳದಲ್ಲೂ ರಸ್ತೆಗಳಲ್ಲೇ ಪಟಾಕಿ ಹಬ್ಬ ಶುರುವಾಗಿತ್ತು. ಆರ್‌ಸಿಬಿ ಜಯಘೋಷ ನಗರದ ತುಂಬೆಲ್ಲಾ ಮೊಳಗುತ್ತಿತ್ತು.

ಮೈಸೂರು, ಬಳ್ಳಾರಿ, ಚಿಕ್ಕಮಗಳೂರು ಮತ್ತು ಬೀದರ್‌ನಲ್ಲೂ ಜೋಶ್!

ಮೈಸೂರು: ಸಾಂಸ್ಕೃತಿಕ ನಗರಿಯ 'ಪೆಗ್ಸ್ & ಕೆಗ್ಸ್' ಪಬ್‌ನಲ್ಲಿ ಮ್ಯಾಚ್ ನೋಡ್ತಿದ್ದ ಫ್ಯಾನ್ಸ್ ಆರ್‌ಸಿಬಿ ಗೆಲ್ಲುತ್ತಿದ್ದಂತೆ ಜೈಕಾರ ಹಾಕಿ ಸಂಭ್ರಮದ ಕಣ್ಣೀರು ಹಾಕಿದ್ರು.

ಬಳ್ಳಾರಿ: ರಾಯಲ್ ಸರ್ಕಲ್‌ನಲ್ಲಿ ನೂರಾರು ಬೈಕ್‌ಗಳು ಲೈನ್ ಅಪ್ ಆಗಿದ್ದವು. ಫ್ಯಾನ್ಸ್ ಜೋಶ್ ಎಷ್ಟು ಜೋರಾಗಿತ್ತೆಂದರೆ, ಆ ರಸ್ತೆಯಲ್ಲಿ ಬಂದ ಲಾರಿಯೊಂದರ ಮುಂದೆ ನಿಂತು ಅಭಿಮಾನಿಗಳು ಕುಣಿದು ಎಂಜಾಯ್ ಮಾಡಿದ್ರು.

ಚಿಕ್ಕಮಗಳೂರು: ಕಾಫಿನಾಡಿನ ಹನುಮಂತಪ್ಪ ವೃತ್ತದಲ್ಲಿ ನೂರಾರು ಫ್ಯಾನ್ಸ್ ಒಟ್ಟಿಗೆ ಸೇರಿ ಪಟಾಕಿ ಸಿಡಿಸಿ ಹಬ್ಬ ಆಚರಿಸಿದ್ರು.

ಬೀದರ್: ಗಡಿ ಜಿಲ್ಲೆ ಬೀದರ್‌ನ ಅಂಬೇಡ್ಕರ್ ವೃತ್ತದಲ್ಲಿ ಫ್ಯಾನ್ಸ್ 'ಕಿಂಗ್ ಕೊಹ್ಲಿ.. ಆರ್‌ಸಿಬಿ' ಅಂತ ಘೋಷಣೆ ಕೂಗಿ, ಒಬ್ಬರಿಗೊಬ್ಬರು ಹಗ್ ಮಾಡಿ ಕಂಗ್ರಾಟ್ಸ್ ಹೇಳ್ತಾ ಗೆಲುವನ್ನು ಎಂಜಾಯ್ ಮಾಡಿದ್ರು.

ಒಟ್ಟಿನಲ್ಲಿ ಆರ್‌ಸಿಬಿ ಸತತ ಎರಡನೇ ಬಾರಿ ಕಪ್ ಗೆದ್ದಿರೋದು ಕರ್ನಾಟಕದ ಜನತೆಗೆ ದೊಡ್ಡ ಹಬ್ಬದ ಉಡುಗೊರೆಯಂತಾಗಿದೆ.

Latest News