ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 19ನೇ ಆವೃತ್ತಿಯ ಐಪಿಎಲ್ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿರುವ ಆರ್‌ಸಿಬಿ ಅಭಿಮಾನಿಗಳಿಗೆ ಈ ಬಾರಿ ಟಿಕೆಟ್ ದರಗಳು ಭಾರೀ ಶಾಕ್ ನೀಡಿವೆ. ಈ ಹಿಂದಿನ ಎಲ್ಲಾ ಆವೃತ್ತಿಗಳಿಗಿಂತಲೂ ಈ ಬಾರಿ ಟಿಕೆಟ್ ಬೆಲೆ ಗಗನಕ್ಕೇರಿದ್ದು, ಕನಿಷ್ಠ ದರವೇ ₹3750 ರಿಂದ ಆರಂಭವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗಾಗಲೇ ಚಾಂಪಿಯನ್ ಪಟ್ಟ ಅಲಂಕರಿಸಿರುವುದರಿಂದ, ಹಾಲಿ ಚಾಂಪಿಯನ್ನರ ಆಟವನ್ನು ತವರಿನಲ್ಲಿ ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಫ್ರಾಂಚೈಸಿ, ಟಿಕೆಟ್ ದರಗಳನ್ನು ಹಿಂದೆಂದಿಗಿಂತಲೂ ದುಬಾರಿ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಡೈನಾಮಿಕ್ ಪ್ರೈಸಿಂಗ್: ಬೇಡಿಕೆಗೆ ತಕ್ಕಂತೆ ಹೆಚ್ಚಾಗಲಿದೆ ಬೆಲೆ
ಈ ಬಾರಿಯ ವಿಶೇಷವೆಂದರೆ ವಿಮಾನ ಟಿಕೆಟ್ ಬುಕಿಂಗ್ ಮಾದರಿಯಲ್ಲೇ 'ಡೈನಾಮಿಕ್ ಪ್ರೈಸಿಂಗ್' ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆ. ಇದರರ್ಥ ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚಾದಂತೆ ಅವುಗಳ ಬೆಲೆಯೂ ಕ್ಷಣಕ್ಷಣಕ್ಕೂ ಏರಿಕೆಯಾಗಲಿದೆ. ಉದಾಹರಣೆಗೆ, ₹3750 ರ ಮೂಲ ಬೆಲೆಯ ಟಿಕೆಟ್ ಬೇಡಿಕೆಯ ಆಧಾರದ ಮೇಲೆ ₹4875 ರವರೆಗೂ ತಲುಪಬಹುದು. ಇನ್ನು ಅತ್ಯಂತ ಐಷಾರಾಮಿ ಸ್ಟ್ಯಾಂಡ್‌ನ ಟಿಕೆಟ್ ದರ ₹47,000 ಎಂದು ನಿಗದಿಯಾಗಿದ್ದರೂ, ಪಂದ್ಯದ ದಿನ ಹತ್ತಿರವಾದಂತೆ ಅಥವಾ ಬೇಡಿಕೆ ಹೆಚ್ಚಾದಂತೆ ಅದು ಬರೋಬ್ಬರಿ ₹65,800 ರವರೆಗೂ ಏರಿಕೆಯಾಗುವ ಸಾಧ್ಯತೆಯಿದೆ. ವಿವಿಧ ಸ್ಟ್ಯಾಂಡ್‌ಗಳಿಗೆ ₹6000, ₹12000, ₹15000 ಮತ್ತು ₹25,000 ಗಳಂತೆ ದರಗಳನ್ನು ನಿಗದಿಪಡಿಸಲಾಗಿದೆ.
ಈ ಬಾರಿಯ ಐಪಿಎಲ್‌ನ ಉದ್ಘಾಟನಾ ಪಂದ್ಯವು ಬೆಂಗಳೂರಿನಲ್ಲೇ ನಡೆಯುತ್ತಿರುವುದು ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಮಾರ್ಚ್ 28 ರಂದು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ನಂತರ ಏಪ್ರಿಲ್ 5 ರಂದು ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಎರಡನೇ ಪಂದ್ಯ ನಡೆಯಲಿದೆ. ಚಾಂಪಿಯನ್ ತಂಡವಾಗಿ ಕಣಕ್ಕಿಳಿಯುತ್ತಿರುವ ಆರ್‌ಸಿಬಿ ಪಂದ್ಯಗಳ ಎಲ್ಲಾ ಟಿಕೆಟ್‌ಗಳು ಕೇವಲ ಕೆಲವು ನಿಮಿಷಗಳಲ್ಲೇ ಮಾರಾಟವಾಗುವ ನಿರೀಕ್ಷೆಯಿದೆ. ಈ ಪಂದ್ಯಗಳು ಹೈ-ವೋಲ್ಟೇಜ್ ಪಂದ್ಯಗಳಾಗಿರುವುದರಿಂದ ಅಭಿಮಾನಿಗಳು ಎಷ್ಟೇ ಹಣ ನೀಡಿಯಾದರೂ ಟಿಕೆಟ್ ಖರೀದಿಸಲು ಸಜ್ಜಾಗಿದ್ದಾರೆ.
ಟಿಕೆಟ್ ಖರೀದಿ ಹೇಗೆ?
ಟಿಕೆಟ್ ದಂಧೆ ಮತ್ತು ವಂಚನೆಗಳನ್ನು ತಡೆಯಲು ಆರ್‌ಸಿಬಿ ಫ್ರಾಂಚೈಸಿ ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಟಿಕೆಟ್‌ಗಳು ಕೇವಲ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್ ಮತ್ತು ಅವರ ಮೊಬೈಲ್ ಆ್ಯಪ್‌ನಲ್ಲಿ ಮಾತ್ರ ಲಭ್ಯವಿರುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ. ಅಭಿಮಾನಿಗಳು ಬೇರೆ ಯಾವುದೇ ಅನಧಿಕೃತ ಮೂಲಗಳಿಂದ ಅಥವಾ ಬ್ಲ್ಯಾಕ್‌ನಲ್ಲಿ ಟಿಕೆಟ್ ಖರೀದಿಸಿ ಮೋಸ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಒಟ್ಟಾರೆಯಾಗಿ, ಈ ಬಾರಿ ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಪಂದ್ಯ ನೋಡುವುದು ಸಾಮಾನ್ಯರಿಗಿಂತ ಶ್ರೀಮಂತರಿಗೆ ಹೆಚ್ಚು ಸುಲಭವಾಗಲಿದೆ ಎಂಬ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.