ಟೆನಿಸ್ ಕೋರ್ಟ್‌ನಲ್ಲಿ ಕೆಲವರು ಆಟ ಆಡಿದರೆ, ಇನ್ನು ಕೆಲವರು ಅಲ್ಲಿ ಯುದ್ಧವನ್ನೇ ಮಾಡುತ್ತಾರೆ. ಕೈಯಲ್ಲಿ ರಾಕೆಟ್ ಹಿಡಿದು, ಮೈತುಂಬಾ ಬೆವರು ಸುರಿಸುತ್ತಾ, ಎದುರಾಳಿ ಎಷ್ಟೇ ಬಲಿಷ್ಠನಾಗಿದ್ದರೂ ಸಿಂಹದಂತೆ ಗರ್ಜಿಸುವ ಆ ಕಣ್ಣುಗಳು, ಮಣಿಯದ ಆ ಮಣಿಕಟ್ಟು... ಹೌದು, ನಾವು ಮಾತನಾಡುತ್ತಿರುವುದು ಟೆನಿಸ್ ಜಗತ್ತಿನ ಎವರ್‌ಗ್ರೀನ್ ಹೀರೋ, ಸ್ಪೇನ್ ದೇಶದ ಮಟಾಡೋರ್ ರಫೆಲ್ ನಡಾಲ್ ಬಗ್ಗೆ.
ಕೇವಲ ಗೆಲುವುಗಳಷ್ಟೇ ಒಬ್ಬ ಆಟಗಾರನನ್ನು 'ಮಹಾನ್' ಮಾಡುವುದಿಲ್ಲ, ಆತ ಬಿದ್ದಾಗಲೆಲ್ಲಾ ಹೇಗೆ ಎದ್ದು ಬಂದ ಎನ್ನುವುದು ಆತನನ್ನು ದಂತಕಥೆಯನ್ನಾಗಿ ಮಾಡುತ್ತದೆ. ರಫೆಲ್ ನಡಾಲ್ ಕ್ರೀಡಾಲೋಕದ ಅದೊಂದು ಅದ್ಭುತ ಶಕ್ತಿ. ಇವತ್ತಿಗೂ ಸೋತು ಸುಣ್ಣವಾಗಿ ಸೈಲೆಂಟಾಗಿ ಕೂತಿರುವ ಎಷ್ಟೋ ಜನ ಯುವಕರಿಗೆ ನಡಾಲ್ ಅವರ ಹಳೆಯ ಪಂದ್ಯಗಳ ವಿಡಿಯೋಗಳು ಮತ್ತು ಅವರ ಲೈಫ್ ಸ್ಟೋರಿ ನರನಾಡಿಗಳಲ್ಲಿ ರಕ್ತ ಕುದಿಯುವಂತೆ ಮಾಡುತ್ತವೆ. ಶೂನ್ಯದಿಂದ ಜಗತ್ತನ್ನು ಗೆದ್ದ ಈ ದೀಪದ ಹುಡುಗನ ಕಥೆ ಇಲ್ಲಿದೆ.
ಕೆಂಪು ಮಣ್ಣಿನ ಸಾಮ್ರಾಜ್ಯದ ಏಕೈಕ 'ಚಕ್ರವರ್ತಿ';
1986ರ ಜೂನ್ 3ರಂದು ಸ್ಪೇನ್‌ನ ಮಯೋರ್ಕಾ ದ್ವೀಪದಲ್ಲಿ ಹುಟ್ಟಿದ ನಡಾಲ್ ಅವರಿಗೆ ಬಾಲ್ಯದಲ್ಲೇ ಟೆನಿಸ್ ಜೊತೆ ದೋಸ್ತಿಯಾಗಿತ್ತು. ಅದಕ್ಕೆ ಮುಖ್ಯ ಕಾರಣ ಅವರ ಮಾವ ಟೋನಿ ನಡಾಲ್. ಕೋಚ್ ಆಗಿದ್ದ ಮಾವನ ಕಠಿಣ ತರಬೇತಿ ರಫೆಲ್ ಅವರ ಆಟವನ್ನು ವಜ್ರದಂತೆ ಹೊಳೆಯುವಂತೆ ಮಾಡಿತು.
2005 ರಲ್ಲಿ ಕೇವಲ 19 ವರ್ಷದ ಪೋರನಾಗಿ ಫ್ರೆಂಚ್ ಓಪನ್ ಅಖಾಡಕ್ಕೆ ಇಳಿದಾಗ ಇಡೀ ಜಗತ್ತೇ ಇವರ ರುದ್ರಾವತಾರ ನೋಡಿ ಶಾಕ್ ಆಗಿತ್ತು. ಅಲ್ಲಿಂದ ಶುರುವಾದ ಇವರ ದಿಗ್ವಿಜಯದ ಓಟ ಒಟ್ಟು 22 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳವರೆಗೆ ತಂದು ನಿಲ್ಲಿಸಿತು. ರೋಲಂಡ್ ಗ್ಯಾರೋಸ್‌ನ ಕೆಂಪು ಮಣ್ಣಿನ ಅಂಕಣದಲ್ಲಂತೂ ಇವರದ್ದು ಅಪ್ರತಿಮ ಸಾಮ್ರಾಜ್ಯ. ಅದಕ್ಕೇ ಇವರನ್ನು ಜಗತ್ತು ಪ್ರೀತಿಯಿಂದ 'ಕಿಂಗ್ ಆಫ್ ಕ್ಲೇ' ಎಂದು ಕರೆಯುತ್ತದೆ. ಇನ್ನು ರೋಜರ್ ಫೆಡರರ್ ಹಾಗೂ ನೋವಾಕ್ ಜೊಕೊವಿಚ್ ಜೊತೆಗಿನ ಇವರ ಮುಖಾಮುಖಿ ಪಂದ್ಯಗಳಂತೂ ಟೆನಿಸ್ ಇತಿಹಾಸದ ಸುವರ್ಣ ಕಾಲ ಎನ್ನಬಹುದು.
ಗಾಯಗಳ ಕಣ್ಣೀರನ್ನು ಗೆಲುವಿನ ನಗೆಯಾಗಿಸಿದ ಫೀನಿಕ್ಸ್ ಹಕ್ಕಿ;
ನಡಾಲ್ ಅವರ ಇಡೀ ವೃತ್ತಿಜೀವನವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ಟ್ರೋಫಿಗಳಿಗಿಂತ ಹೆಚ್ಚಾಗಿ ಗಾಯಗಳ ನೋವೇ ಎದ್ದು ಕಾಣುತ್ತದೆ. ಮೊಣಕಾಲು ನೋವು, ಪಾದದ ದೀರ್ಘಕಾಲದ ಸಮಸ್ಯೆಗಳಿಂದಾಗಿ ನಡಾಲ್ ವೃತ್ತಿಜೀವನವೇ ಮುಗಿದುಹೋಯಿತು ಎಂದು ವೈದ್ಯರೇ ಕೈಚೆಲ್ಲಿದ ಉದಾಹರಣೆಗಳಿವೆ. ಹಲವು ತಿಂಗಳುಗಳ ಕಾಲ ಆಸ್ಪತ್ರೆ, ಬೆಡ್ ರೆಸ್ಟ್‌ನಲ್ಲೇ ಕಳೆಯಬೇಕಾಗಿ ಬಂದಾಗಲೂ ನಡಾಲ್ ಧೃತಿಗೆಡಲಿಲ್ಲ.
ವಿಮರ್ಶಕರು "ನಡಾಲ್ ಯುಗ ಮುಗಿಯಿತು" ಎಂದು ಬರೆದಾಗಲೆಲ್ಲಾ, ಇವರು ಕೋರ್ಟ್‌ಗೆ ಮರಳಿ ಬಂದು ಟ್ರೋಫಿ ಗೆಲ್ಲುವ ಮೂಲಕವೇ ಉತ್ತರ ನೀಡುತ್ತಿದ್ದರು. ನೋವನ್ನು ನುಂಗಿ ಜಯಶಾಲಿಯಾಗುವ ಇವರ ಈ ಗುಣವೇ ಇವರನ್ನು ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ದೇವರನ್ನಾಗಿ ಮಾಡಿತು.
ಕೋರ್ಟ್ ಆಚೆಯೂ ಹೀರೋಗಿರಿ - ಯಶಸ್ವಿ ಬಿಸಿನೆಸ್ ಹಾಗೂ ಸರಳ ಬದುಕು
ರಫೆಲ್ ನಡಾಲ್ ಕೇವಲ ಕೋರ್ಟ್ ಒಳಗಷ್ಟೇ ಅಲ್ಲ, ಹೊರಗೂ ಒಬ್ಬ ಸಕ್ಸಸ್‌ಫುಲ್ ಹೀರೊ. ಅವರು ಆರಂಭಿಸಿರುವ 'ರಫೆಲ್ ನಡಾಲ್ ಅಕಾಡೆಮಿ' ಇವತ್ತು ಜಾಗತಿಕ ಮಟ್ಟದಲ್ಲಿ ಸಾವಿರಾರು ಯುವ ಪ್ರತಿಭೆಗಳನ್ನು ಬೆಳೆಸುತ್ತಿದೆ. ಇದರ ಜೊತೆಗೆ ಹೋಟೆಲ್ ಉದ್ಯಮ, ದೊಡ್ಡ ಬ್ರ್ಯಾಂಡ್‌ಗಳ ಸಹಭಾಗಿತ್ವ ಮತ್ತು ತಮ್ಮ ಚಾರಿಟಿ ಫೌಂಡೇಶನ್ ಮೂಲಕ ಅಸಹಾಯಕ ಮಕ್ಕಳಿಗೆ ನೆರವಾಗುತ್ತಿದ್ದಾರೆ.
ಜಗತ್ತಿನ ಅತ್ಯಂತ ಶ್ರೀಮಂತ ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದರೂ, ತಮ್ಮ ಬಾಲ್ಯದ ಗೆಳತಿ ಮಾರಿಯಾ ಫ್ರಾನ್ಸಿಸ್ಕಾ ಪೆರೆಲ್ಲೊ ಅವರ ಜೊತೆ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಅತ್ಯಂತ ಸರಳವಾಗಿ ಬದುಕುತ್ತಿದ್ದಾರೆ. ಈ ವಿನಯವೇ ಇವರ ಬಿಗ್ ಪ್ಲಸ್ ಪಾಯಿಂಟ್.
ಸ್ಪೂರ್ತಿಯ ಮಾತು - ಪ್ರಸ್ತುತ ಟೆನಿಸ್ ಆಟದಿಂದ ನಿವೃತ್ತಿ ಪಡೆದಿರುವ ನಡಾಲ್, ತಮ್ಮ ಮುಂದಿನ ಜೀವನವನ್ನು ಯುವ ಪೀಳಿಗೆಯ ಮಾರ್ಗದರ್ಶನಕ್ಕೆ ಮುಡಿಪಾಗಿಟ್ಟಿದ್ದಾರೆ. ರಫೆಲ್ ನಡಾಲ್ ನಮಗೆ ಕಲಿಸಿಕೊಡುವುದು ಒಂದೇ—"ಪರಿಸ್ಥಿತಿ ಎಷ್ಟೇ ಕಠಿಣವಾಗಿರಲಿ, ದೇಹದಲ್ಲಿ ಎಷ್ಟೇ ನೋವಿರಲಿ, ಕೊನೆಯ ಸೆಕೆಂಡ್ ವರೆಗೂ ಹೋರಾಡುವುದನ್ನು ನಿಲ್ಲಿಸಬೇಡಿ." ಜೀವನದಲ್ಲಿ ಸೋತು ಇನ್ನು ಮುಗಿಯಿತು ಅಂದುಕೊಳ್ಳುವ ಪ್ರತಿಯೊಬ್ಬರಿಗೂ ನಡಾಲ್ ಎಂಬ ಹೆಸರು ಒಂದು ಹೊಸ ಭರವಸೆ, ಒಂದು ಹೊಸ ಕಿಚ್ಚು!