Mar 26, 2026 Languages : ಕನ್ನಡ | English

ಆಲ್‌ರೌಂಡರ್‌ ಗಳಿಗೆ ಕುತ್ತು ತರುತ್ತಾ ಈ ಐಪಿಎಲ್ ನಿಯಮ? ರೋಹಿತ್ ಮಾತಿಗೆ ಈ ನಿಯಮ ಬೇಡವೇ ಬೇಡ ಎಂದ ಆಟಗಾರರು!!

ಐಪಿಎಲ್ ಅಂದ್ರೆ ಬರೀ ಸಿಕ್ಸರ್, ಬೌಂಡರಿ ಮಾತ್ರವಲ್ಲ, ಅಲ್ಲಿನ ವಿಚಿತ್ರ ನಿಯಮಗಳೂ ಕೂಡ ಅಷ್ಟೇ ಸೌಂಡ್ ಮಾಡುತ್ತವೆ. ಕಳೆದ ಕೆಲವು ಸೀಸನ್‌ಗಳಿಂದ ಐಪಿಎಲ್‌ನಲ್ಲಿ ಜಾರಿಯಲ್ಲಿರೋ 'ಇಂಪ್ಯಾಕ್ಟ್ ಪ್ಲೇಯರ್' (Impact Player) ನಿಯಮದ ಬಗ್ಗೆ ಈಗ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಟೀಮ್ ಇಂಡಿಯಾದ ದಿಗ್ಗಜ ರೋಹಿತ್ ಶರ್ಮಾ ಅವರಂತೆಯೇ ಈಗ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಕೂಡ ಈ ರೂಲ್ಸ್ ವಿರುದ್ಧ ಬ್ಯಾಟ್ ಬೀಸಿದ್ದಾರೆ. ಈ ನಿಯಮ ಇರಬೇಕಾ ಅಥವಾ ಬೇಡವಾ ಅನ್ನೋ ಗೊಂದಲಕ್ಕೆ ಈಗ ಬಿಸಿಸಿಐ ಒಂದು ಉತ್ತರ ಕೊಡೋಕೆ ರೆಡಿಯಾಗಿದೆ.

ಆಲ್‌ರೌಂಡರ್‌ಗಳ ಭವಿಷ್ಯಕ್ಕೆ ಕುತ್ತು – ಕ್ರಿಕೆಟ್ ತಜ್ಞರ ಎಚ್ಚರಿಕೆ!! | Photo Credit: https://www.indiatoday.in
ಆಲ್‌ರೌಂಡರ್‌ಗಳ ಭವಿಷ್ಯಕ್ಕೆ ಕುತ್ತು – ಕ್ರಿಕೆಟ್ ತಜ್ಞರ ಎಚ್ಚರಿಕೆ!! | Photo Credit: https://www.indiatoday.in

2023ರಲ್ಲಿ ಬಿಸಿಸಿಐ ಈ ನಿಯಮವನ್ನ ಜಾರಿಗೆ ತಂದಿತ್ತು. ಇದರ ಪ್ರಕಾರ, ಪಂದ್ಯದ ಮಧ್ಯದಲ್ಲಿ ಒಬ್ಬ ಆಟಗಾರನನ್ನ ಬದಲಿಸಿ ಮತ್ತೊಬ್ಬ ಸ್ಪೆಷಲಿಸ್ಟ್ ಬ್ಯಾಟರ್ ಅಥವಾ ಬೌಲರ್‌ನನ್ನ ತರಬಹುದು. ನೋಡುಗರಿಗೆ ಇದು ಮಜಾ ಕೊಡಬಹುದು, ಆದ್ರೆ ಆಟಗಾರರಿಗೆ ಮಾತ್ರ ಇದು ನುಂಗಲಾರದ ತುತ್ತಾಗಿದೆ. ಇತ್ತೀಚೆಗೆ ನಡೆದ 10 ಐಪಿಎಲ್ ತಂಡಗಳ ನಾಯಕರ ಸಭೆಯಲ್ಲಿ ಹೆಚ್ಚಿನವರು ಈ ನಿಯಮದ ಬಗ್ಗೆ ಮುನಿಸು ವ್ಯಕ್ತಪಡಿಸಿದ್ದಾರೆ. ಇದರಿಂದ ಆಟದ ನೈಜ ಸೌಂದರ್ಯವೇ ಹಾಳಾಗ್ತಿದೆ ಅನ್ನೋದು ಅವರ ಕಂಪ್ಲೇಂಟ್.

ರೋಹಿತ್ ಶರ್ಮಾ ಅವರು ಮೊದಲಿನಿಂದಲೂ ಈ ನಿಯಮ ಭಾರತೀಯ ಕ್ರಿಕೆಟ್‌ಗೆ ಶಾಪ ಅಂತಲೇ ಹೇಳ್ತಿದ್ದಾರೆ. ಈಗ ಅಕ್ಷರ್ ಪಟೇಲ್ ಕೂಡ ಧ್ವನಿಗೂಡಿಸಿದ್ದಾರೆ. ಅಕ್ಷರ್ ಹೇಳೋ ಪ್ರಕಾರ, "ನಾನು ಒಬ್ಬ ಆಲ್‌ರೌಂಡರ್ ಆಗಿರೋದ್ರಿಂದ ನನಗೆ ಈ ರೂಲ್ಸ್ ಕಿಂಚಿತ್ತೂ ಇಷ್ಟವಿಲ್ಲ. ಮೊದಲೆಲ್ಲಾ ತಂಡದಲ್ಲಿ ಆಲ್‌ರೌಂಡರ್‌ಗಳಿಗೆ ಬಹಳ ಡಿಮ್ಯಾಂಡ್ ಇತ್ತು. ಆದ್ರೆ ಈ ಇಂಪ್ಯಾಕ್ಟ್ ಪ್ಲೇಯರ್ ಬಂದ್ಮೇಲೆ ಟೀಮ್ ಮ್ಯಾನೇಜ್‌ಮೆಂಟ್ ಒಬ್ಬ ಎಕ್ಸ್‌ಟ್ರಾ ಬ್ಯಾಟ್ಸ್‌ಮನ್ ಅಥವಾ ಬೌಲರ್‌ನನ್ನೇ ನಂಬಿಕೊಂಡಿದೆ. ಇದರಿಂದ ನಮ್ಮಂತ ಆಲ್‌ರೌಂಡರ್‌ಗಳ ಅವಶ್ಯಕತೆಯೇ ಇಲ್ಲದಂತಾಗಿದೆ" ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಆಲ್‌ರೌಂಡರ್‌ಗಳು ಬೆಳೆಯೋಕೆ ಈ ರೂಲ್ ಅಡ್ಡಿಯಾಗಿದೆ.

ಬಿಸಿಸಿಐ ಈ ನಿಯಮವನ್ನ 2027ರವರೆಗೆ ವಿಸ್ತರಿಸಿದೆ. ಆದ್ರೆ ಆಟಗಾರರ ಮತ್ತು ನಾಯಕರ ಒತ್ತಡ ಹೆಚ್ಚಿರೋದ್ರಿಂದ ಬಿಸಿಸಿಐ ಈಗ ಮರುಪರಿಶೀಲನೆ (Review) ಮಾಡೋಕೆ ಒಪ್ಪಿಕೊಂಡಿದೆ. ಆದ್ರೆ ಒಂದು ಟ್ವಿಸ್ಟ್ ಇದೆ—ಬಿಸಿಸಿಐ ಪ್ರಕಾರ, ಈ ನಿಯಮದ ಬಗ್ಗೆ ಯಾವುದೇ ಬದಲಾವಣೆ ಮಾಡಿದ್ರೂ ಅದು 2027ರ ಸೀಸನ್ ನಂತರವೇ ಸಾಧ್ಯ. ಸದ್ಯಕ್ಕೆ ಈಗಿರೋ ರೂಲ್ಸ್ ಅನ್ನೇ ಪಾಲಿಸಬೇಕು ಅಂತ ಬಿಸಿಸಿಐ ನಾಯಕರಿಗೆ ಖಡಕ್ ಆಗಿ ತಿಳಿಸಿದೆ. ಅಂದ್ರೆ, 2026ರ ಐಪಿಎಲ್‌ನಲ್ಲೂ ನಮಗೆ ಈ ಇಂಪ್ಯಾಕ್ಟ್ ಪ್ಲೇಯರ್ ದರ್ಶನ ಸಿಗೋದು ಪಕ್ಕಾ.

ಕ್ರಿಕೆಟ್ ತಜ್ಞರ ಪ್ರಕಾರ, ಇಂಪ್ಯಾಕ್ಟ್ ಪ್ಲೇಯರ್ ರೂಲ್‌ನಿಂದಾಗಿ ಭಾರತಕ್ಕೆ ಮುಂದಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಅಥವಾ ರವೀಂದ್ರ ಜಡೇಜಾ ಅವರಂತಹ ಗುಣಮಟ್ಟದ ಆಲ್‌ರೌಂಡರ್‌ಗಳು ಸಿಗೋದು ಕಷ್ಟವಾಗಬಹುದು. ಯಾಕಂದ್ರೆ ಡೊಮೆಸ್ಟಿಕ್ ಕ್ರಿಕೆಟ್‌ನಲ್ಲೂ ಇದೇ ರೂಲ್ಸ್ ಫಾಲೋ ಮಾಡಿದ್ರೆ, ಆಟಗಾರರು ಕೇವಲ ಒಂದು ಕೌಶಲ್ಯಕ್ಕೆ ಸೀಮಿತವಾಗಿಬಿಡ್ತಾರೆ. ಬಿಸಿಸಿಐಗೆ ಈ ರೂಲ್ಸ್‌ನಿಂದ ಬರೋ ಎಂಟರ್‌ಟೈನ್‌ಮೆಂಟ್ ಮುಖ್ಯವೋ ಅಥವಾ ಭಾರತೀಯ ಕ್ರಿಕೆಟ್‌ನ ಭವಿಷ್ಯ ಮುಖ್ಯವೋ ಅನ್ನೋದನ್ನ ಕಾಲವೇ ನಿರ್ಧರಿಸಬೇಕು. ಸದ್ಯಕ್ಕಂತೂ ರೋಹಿತ್ ಮತ್ತು ಅಕ್ಷರ್ ವಾದಕ್ಕೆ ಫ್ಯಾನ್ಸ್ ಸಪೋರ್ಟ್ ಫುಲ್ ಸಿಗ್ತಿದೆ.