May 9, 2026 Languages : ಕನ್ನಡ | English

ಐಪಿಎಲ್ ಆಟಗಾರರಿಗೆ ಬಿಸಿಸಿಐ 'ಹನಿಟ್ರ್ಯಾಪ್' ವಾರ್ನಿಂಗ್ - ಹೋಟೆಲ್ ರೂಮ್‌ಗಳಿಗೆ ಈಗ ಅನಿರೀಕ್ಷಿತ ಎಂಟ್ರಿ!!

ಬೆಂಗಳೂರು: ಐಪಿಎಲ್ ಅಂದ್ರೆ ಅಲ್ಲಿ ಬರೀ ಬೌಂಡರಿ, ಸಿಕ್ಸರ್‌ಗಳ ಅಬ್ಬರ ಮಾತ್ರ ಇರಲ್ಲ, ಅದರ ಜೊತೆಗೇ ವಿವಾದಗಳೂ ಸುತ್ತುತ್ತಿರುತ್ತವೆ. ಅದರಲ್ಲೂ ಈ ಬಾರಿ ಆಟಗಾರರನ್ನು ಲೈಂಗಿಕ ಹಗರಣಗಳಲ್ಲಿ ಸಿಲುಕಿಸುವ ಅಥವಾ ಮ್ಯಾಚ್ ಫಿಕ್ಸಿಂಗ್‌ಗಾಗಿ ಬಳಸಿಕೊಳ್ಳುವ 'ಹನಿಟ್ರ್ಯಾಪ್' ಭೀತಿ ಎದುರಾಗಿದೆ. ಇದನ್ನು ತಡೆಯಲು ಬಿಸಿಸಿಐ ಈಗ ಫೀಲ್ಡಿಗಿಳಿದಿದ್ದು, ಆಟಗಾರರ ಶಿಸ್ತಿನ ವಿಷಯದಲ್ಲಿ 'ಜೀರೋ ಟಾಲರೆನ್ಸ್' ನೀತಿ ಅನುಸರಿಸಲು ಮುಂದಾಗಿದೆ.

ಮ್ಯಾಚ್ ಫಿಕ್ಸಿಂಗ್ ತಡೆಯಲು ಬಿಸಿಸಿಐ ಹೊಸ ಪ್ಲಾನ್;
ಮ್ಯಾಚ್ ಫಿಕ್ಸಿಂಗ್ ತಡೆಯಲು ಬಿಸಿಸಿಐ ಹೊಸ ಪ್ಲಾನ್;

ರೂಮ್‌ಗಳಿಗೆ ದಿಢೀರ್ ಚೆಕಿಂಗ್!

ಈ ಬಾರಿ ಬಿಸಿಸಿಐ ಕೇವಲ ಎಚ್ಚರಿಕೆ ನೀಡಿ ಸುಮ್ಮನಾಗಿಲ್ಲ. ಆಟಗಾರರು ಹೋಟೆಲ್ ರೂಮ್‌ಗಳಲ್ಲಿ ಏನು ಮಾಡುತ್ತಿದ್ದಾರೆ? ಯಾರನ್ನು ಭೇಟಿಯಾಗುತ್ತಿದ್ದಾರೆ? ಎಂಬುದನ್ನು ಪರೀಕ್ಷಿಸಲು ಒಂದು ವಿಶೇಷ ಕಾರ್ಯಪಡೆಯನ್ನು (Task Force) ರಚಿಸಿದೆ. ಈ ತಂಡದ ಸದಸ್ಯರು ಯಾವುದೇ ಸಮಯದಲ್ಲಿ, ಯಾರಿಗೂ ಹೇಳದೆ ಕೇಳದೆ ಆಟಗಾರರ ಹೋಟೆಲ್ ಕೊಠಡಿಗಳಿಗೆ ನುಗ್ಗಿ ತಪಾಸಣೆ ನಡೆಸಲಿದ್ದಾರೆ! ಒಂದು ವೇಳೆ ರೂಮ್‌ನಲ್ಲಿ ಯಾರಾದರೂ ಅನಧಿಕೃತ ವ್ಯಕ್ತಿಗಳು ಕಂಡುಬಂದರೆ, ಆ ಆಟಗಾರ ಅಥವಾ ಅಧಿಕಾರಿಯ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸುವುದು ಗ್ಯಾರಂಟಿ.

ಗೆಸ್ಟ್ ಬರಬೇಕಂದ್ರೆ ಪರ್ಮಿಷನ್ ಬೇಕೇ ಬೇಕು

ಹೊರಗಿನವರು ಯಾರೇ ಇರಲಿ, ಅವರು ಆಟಗಾರರಿಗೆ ಎಷ್ಟೇ ಹತ್ತಿರದವರಾಗಿದ್ದರೂ ಸರಿಯೇ, ಟೀಮ್ ಮ್ಯಾನೇಜರ್ ಅನುಮತಿಯಿಲ್ಲದೆ ಹೋಟೆಲ್ ರೂಮ್ ಪ್ರವೇಶಿಸುವಂತಿಲ್ಲ. ಆಟಗಾರರು ಅಥವಾ ಸಿಬ್ಬಂದಿ ಹೋಟೆಲ್ ಬಿಟ್ಟು ಹೊರಗಡೆ ಎಲ್ಲಾದರೂ ಹೋಗಬೇಕೆಂದರೂ, ಅಲ್ಲಿರುವ ಸೆಕ್ಯೂರಿಟಿ ಅಧಿಕಾರಿ ಅಥವಾ ಟೆಗ್ರಿಟಿ ಆಫೀಸರ್‌ಗೆ (TIO) ಮುಂಚಿತವಾಗಿ ತಿಳಿಸಿ ಪರ್ಮಿಷನ್ ಪಡೆಯಲೇಬೇಕು.

ಬಿಸಿಸಿಐ ಈ ಮೂಲಕ ಆಟಗಾರರನ್ನು ಹೊರಗಿನ ಜಗತ್ತಿನ ಕೆಟ್ಟ ಪ್ರಭಾವಗಳಿಂದ ಅಥವಾ ಆಮಿಷಗಳಿಂದ ದೂರವಿಡಲು ಪ್ಲಾನ್ ಮಾಡಿದೆ.

ಮಾಲೀಕರಿಗೂ ಬಂತು ವಾರ್ನಿಂಗ್!

ಈ ಬಾರಿ ಬಿಸಿಸಿಐ ತಂಡದ ಮಾಲೀಕರಿಗೂ ಒಂದು ಮುಖ್ಯ ಸೂಚನೆ ನೀಡಿದೆ. ಪಂದ್ಯ ನಡೆಯುವ ಸಮಯದಲ್ಲಿ ಡಗೌಟ್‌ನಲ್ಲಿರುವ ಆಟಗಾರರ ಜೊತೆ ಅಥವಾ ತಂಡದ ಮ್ಯಾನೇಜರ್‌ಗಳ ಜೊತೆ ಮಾಲೀಕರು ಅನಗತ್ಯವಾಗಿ ಸಂವಹನ ನಡೆಸುವಂತಿಲ್ಲ. ಮೈದಾನದಲ್ಲಿ ಕೇವಲ ಕ್ರಿಕೆಟ್ ಮಾತ್ರ ನಡೆಯಬೇಕು, ಅಲ್ಲಿ ಯಾವುದೇ ರೀತಿಯ ಹೊರಗಿನ ಹಸ್ತಕ್ಷೇಪ ಇರಬಾರದು ಎಂಬುದು ಬಿಸಿಸಿಐ ಉದ್ದೇಶ.

ರೂಲ್ಸ್ ಹೀಗಿದೆ:

ವರದಿ ಮಾಡುವುದು ಕಡ್ಡಾಯ - ರೂಮ್ ಚೆಕಿಂಗ್ ವೇಳೆ ಏನಾದರೂ ನಿಯಮ ಉಲ್ಲಂಘನೆ ಕಂಡರೆ, ಅದನ್ನು ತಕ್ಷಣವೇ ಐಪಿಎಲ್ ಆಪರೇಷನ್ ತಂಡಕ್ಕೆ ವರದಿ ಮಾಡಬೇಕು.

ಕಠಿಣ ಶಿಕ್ಷೆ - ಹನಿಟ್ರ್ಯಾಪ್ ಅಥವಾ ಲೈಂಗಿಕ ದುರ್ನಡತೆ ಆರೋಪ ಸಾಬೀತಾದರೆ ಆಟಗಾರರ ಕೆರಿಯರ್ ಮೇಲೆ ದೊಡ್ಡ ಪೆಟ್ಟು ಬೀಳಲಿದೆ.

ಸಮಗ್ರತೆ ಕಾಪಾಡುವುದು - ಐಪಿಎಲ್ ಎಂಬ ದೊಡ್ಡ ಬ್ರ್ಯಾಂಡ್‌ನ ಹೆಸರಿಗೆ ಮಸಿ ಬಳಿಯದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಬಿಸಿಸಿಐ ನೆನಪಿಸಿದೆ.

ಕ್ರಿಕೆಟ್ ಕೇವಲ ಆಟವಲ್ಲ!

ಐಪಿಎಲ್ ಅಂದ್ರೆ ಕೋಟಿ ಕೋಟಿ ಹಣ ಹರಿಯುವ ಜಾಗ. ಇಲ್ಲಿ ಆಟಗಾರರನ್ನು ದಾರಿ ತಪ್ಪಿಸಲು ನೂರಾರು ಜಾಲಗಳು ಹೊಂಚು ಹಾಕುತ್ತಿರುತ್ತವೆ. ಇಂತಹ ಸಮಯದಲ್ಲಿ ಬಿಸಿಸಿಐ ಕೈಗೊಂಡಿರುವ ಈ ಕಠಿಣ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ. ಆಟಗಾರರು ಮೈದಾನದಲ್ಲಿ ಹೇಗೆ ಶಿಸ್ತಿನಿಂದ ಇರುತ್ತಾರೋ, ಹೋಟೆಲ್ ರೂಮ್‌ನಲ್ಲೂ ಅಷ್ಟೇ ಶಿಸ್ತಿನಿಂದ ಇರಬೇಕು.

ನಮ್ಮ ಕ್ರಿಕೆಟ್ ಹೀರೊಗಳು ಕೇವಲ ಬ್ಯಾಟ್-ಬಾಲ್ ಹಿಡಿದು ಗೆಲ್ಲೋದಲ್ಲ, ಇಂತಹ ಕೆಟ್ಟ ಆಮಿಷಗಳನ್ನು ಮೆಟ್ಟಿ ನಿಂತು ಜನರ ವಿಶ್ವಾಸವನ್ನೂ ಗೆಲ್ಲಬೇಕು. ಈ ಬಾರಿ ಬಿಸಿಸಿಐನ ಈ 'ಹದ್ದಿನ ಕಣ್ಣು' ತಂಡಗಳನ್ನು ಮತ್ತು ಆಟಗಾರರನ್ನು ಎಷ್ಟು ಕಾಪಾಡುತ್ತದೆ ಅನ್ನೋದನ್ನ ಕಾದು ನೋಡೋಣ. 

Latest News