Apr 17, 2026 Languages : ಕನ್ನಡ | English

ಶೋಯೆಬ್ ಮಲಿಕ್ ರೆಕಾರ್ಡ್ ಬ್ರೇಕ್ ಮಾಡಿದ ವಿರಾಟ್ - ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ಈಗ ಎಷ್ಟನೇ ಸ್ಥಾನ!!

ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ (ಅಜೇಯ 69) ಮತ್ತು ದೇವದತ್ ಪಡಿಕ್ಕಲ್ ಬೆಂಬಲ ನೀಡಿದರು. ಈ ಗೆಲುವಿನೊಂದಿಗೆ ಆರ್‌ಸಿಬಿ ಈ ಸೀಸನ್ ಅನ್ನು ಗೆಲುವಿನೊಂದಿಗೆ ಬರಮಾಡಿಕೊಂಡಿದೆ.

ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಸೃಷ್ಟಿಸಿದ ಆ ಅಪರೂಪದ ದಾಖಲೆ
ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಸೃಷ್ಟಿಸಿದ ಆ ಅಪರೂಪದ ದಾಖಲೆ

ದಾಖಲೆಗಳ ಸರದಾರ ವಿರಾಟ್ ಕೊಹ್ಲಿ!

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ ರನ್ ಗಳಿಸಲಿಲ್ಲ, ಬದಲಿಗೆ ಹೊಸ ಇತಿಹಾಸವನ್ನೇ ಬರೆದರು.

ಚೇಸಿಂಗ್ ಕಿಂಗ್: ಐಪಿಎಲ್ ಇತಿಹಾಸದಲ್ಲೇ ರನ್ ಚೇಸ್ ಮಾಡುವಾಗ 4,000 ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು.

ಒಂದೇ ತಂಡ, 19 ವರ್ಷ: ಐಪಿಎಲ್ ಶುರುವಾದಾಗಿನಿಂದ ಅಂದ್ರೆ ಎಲ್ಲಾ 19 ಸೀಸನ್ ಅನ್ನೂ ಒಂದೇ ಫ್ರಾಂಚೈಸಿ (ಆರ್‌ಸಿಬಿ) ಪರ ಆಡಿದ ಏಕೈಕ ಆಟಗಾರ ಎಂಬ ದಾಖಲೆ ಈಗ ಕೊಹ್ಲಿ ಹೆಸರಲ್ಲಿದೆ.

ಶೋಯೆಬ್ ಮಲಿಕ್ ರೆಕಾರ್ಡ್ ಬ್ರೇಕ್: ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಪಾಕಿಸ್ತಾನದ ಶೋಯೆಬ್ ಮಲಿಕ್ ಅವರನ್ನು ಹಿಂದಿಕ್ಕಿ ಕೊಹ್ಲಿ ಈಗ 6ನೇ ಸ್ಥಾನಕ್ಕೇರಿದ್ದಾರೆ.

11 ಅಭಿಮಾನಿಗಳಿಗೆ ಭಾವಪೂರ್ಣ ವಿದಾಯ

ಈ ಬಾರಿಯ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ರದ್ದುಗೊಳಿಸಿತ್ತು. ಅದಕ್ಕೆ ಕಾರಣ ಕಳೆದ ವರ್ಷ ಆರ್‌ಸಿಬಿ ಚಾಂಪಿಯನ್ ಆದಾಗ ನಡೆದ ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಕಾಲ್ತುಳಿತ. ಆ ದುರ್ಘಟನೆಯಲ್ಲಿ 11 ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಅವರಿಗೆ ಗೌರವ ಸಲ್ಲಿಸಲು ಈ ಬಾರಿ ಪಂದ್ಯಕ್ಕೂ ಮುನ್ನ ಆಟಗಾರರು ಮತ್ತು ಅಧಿಕಾರಿಗಳು ಒಂದು ನಿಮಿಷ ಮೌನಾಚರಣೆ ಮಾಡಿದರು.

ವಿಶೇಷ ಅಂದ್ರೆ, ಆ 11 ಹುತಾತ್ಮ ಅಭಿಮಾನಿಗಳ ನೆನಪಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಆಸನಗಳನ್ನು (Seats) ಮೀಸಲಿಡಲಾಗಿದೆ. ಮುಂದೆ ಇಲ್ಲಿ ನಡೆಯುವ ಯಾವುದೇ ಪಂದ್ಯಗಳಲ್ಲಿ ಈ ಸೀಟುಗಳನ್ನು ಯಾರಿಗೂ ನೀಡದೆ ಖಾಲಿ ಬಿಡಲಾಗುವುದು. ಜೊತೆಗೆ ಆರ್‌ಸಿಬಿ ಆಟಗಾರರು ಅಭ್ಯಾಸದ ವೇಳೆ 11ನೇ ನಂಬರ್‌ನ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದು ಎಲ್ಲರ ಗಮನ ಸೆಳೆಯಿತು. ಸ್ಟೇಡಿಯಂನ ಪ್ರವೇಶದ್ವಾರದ ಬಳಿ ಸ್ಮರಣಾರ್ಥ ಫಲಕವನ್ನೂ ಕೂಡ ಗೃಹ ಸಚಿವ ಜಿ. ಪರಮೇಶ್ವರ ಮತ್ತು ವೆಂಕಟೇಶ್ ಪ್ರಸಾದ್ ಅನಾವರಣಗೊಳಿಸಿದರು.

ಪಂದ್ಯದ ಹೈಲೈಟ್ಸ್

ಸನ್ ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಿ 201 ರನ್ ಗಳಿಸಿತ್ತು. ಆದರೆ ಚೇಸಿಂಗ್‌ಗೆ ಇಳಿದ ಕೊಹ್ಲಿ ಮೂಡ್ ಬೇರೆಯೇ ಇತ್ತು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್, ಫೋರ್ ಬಾರಿಸಿದ ಕೊಹ್ಲಿ ಪಂದ್ಯವನ್ನು ಸುಲಭವಾಗಿ ಗೆಲ್ಲಿಸಿಕೊಟ್ಟರು.

ಈ ಬಾರಿಯ ಐಪಿಎಲ್ ಆರ್‌ಸಿಬಿ ಫ್ಯಾನ್ಸ್‌ಗೆ ಡಬಲ್ ಖುಷಿ ನೀಡಿದೆ. ಒಂದೆಡೆ ಕೊಹ್ಲಿ ಫಾರ್ಮ್, ಮತ್ತೊಂದೆಡೆ ಹೋದ ವರ್ಷದ ಚಾಂಪಿಯನ್ ಪಟ್ಟದ ಸಂಭ್ರಮದ ಮುಂದುವರಿಕೆ. ಈ ವರ್ಷವೂ ಆರ್‌ಸಿಬಿ ಕಪ್ ಗೆಲ್ಲಲಿ ಅನ್ನೋದೇ ಎಲ್ಲರ ಹಾರೈಕೆ.

Latest News