ಐಪಿಎಲ್ ಅಂಗಳದಲ್ಲಿ ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ, ಮುಂಬೈ ತಂಡ ಮತ್ತೆ ಮುಗ್ಗರಿಸಿದೆ. ಏಪ್ರಿಲ್ 23ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಹಣಾಹಣಿಯಲ್ಲಿ ಸಿಎಸ್‌ಕೆ ತಂಡ 103 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಆದರೆ, ಪಂದ್ಯದ ರಿಸಲ್ಟ್‌ಗಿಂತ ಹೆಚ್ಚಾಗಿ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ ಮತ್ತು ಮೈದಾನದ ವರ್ತನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 207 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಸಿಎಸ್‌ಕೆ ಪರ ಅಬ್ಬರಿಸಿದ ಸಂಜು ಸ್ಯಾಮ್ಸನ್ ಕೇವಲ 101 ರನ್‌ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಆಸರೆಯಾದರು. ಇವರ ಬ್ಯಾಟಿಂಗ್ ವೈಖರಿ ವಾಂಖೆಡೆಯ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
Bro your idol Sachin Tendulkar led the Mumbai Indians for four seasons but they didn’t win any trophies. https://t.co/LoMsSa7MJ4
— Gagan🇮🇳 (@1no_aalsi_) April 24, 2026
ಪ್ಲಾಪ್ ಆದ ಪಾಂಡ್ಯ, ಮುಂಬೈ ಕಂಗಾಲು!
208 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕಾರ್ಡ್ ತರಗೆಲೆಯಂತೆ ಉದುರಿತು. ಅಂತಿಮವಾಗಿ 19 ಓವರ್‌ಗಳಲ್ಲಿ ಕೇವಲ 104 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮುಂಬೈ ಹೀನಾಯ ಸೋಲು ಅನುಭವಿಸಿತು. ಚೆನ್ನೈ ಪರ ಅಕೀಲ್ ಹೊಸೈನ್ ಕೇವಲ 17 ರನ್ ನೀಡಿ 4 ವಿಕೆಟ್ ಕಿತ್ತು ಮುಂಬೈ ಬೆನ್ನೆಲುಬು ಮುರಿದರು.
ನಾಯಕ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನವಂತೂ ಅತ್ಯಂತ ಕಳಪೆಯಾಗಿತ್ತು. ಬ್ಯಾಟಿಂಗ್‌ನಲ್ಲಿ ಕೇವಲ 1 ರನ್ ಗಳಿಸಿದ ಅವರು, ಬೌಲಿಂಗ್‌ನಲ್ಲಿ ಕೇವಲ 2 ಓವರ್‌ಗಳಿಗೆ 38 ರನ್ ಬಿಟ್ಟುಕೊಟ್ಟರು. ಇದು ಮುಂಬೈ ಪಾಲಿಗೆ ದೊಡ್ಡ ಹೊಡೆತ ನೀಡಿತು. 7 ಪಂದ್ಯಗಳಲ್ಲಿ ಇದು ಮುಂಬೈಗೆ 5ನೇ ಸೋಲಾಗಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ತಂಡ 8ನೇ ಸ್ಥಾನಕ್ಕೆ ಕುಸಿದಿದೆ.
ಹಾರ್ದಿಕ್ ವರ್ತನೆ ಮತ್ತು ಫ್ಯಾನ್ಸ್ ಆಕ್ರೋಶ
ಪಂದ್ಯದ ನಡುವೆ ಹಾರ್ದಿಕ್ ಪಾಂಡ್ಯ ಗ್ಯಾಲರಿಯಲ್ಲಿದ್ದ ಮಹಿಕಾ ಶರ್ಮಾ ಮತ್ತು ಮಗ ಅಗಸ್ತ್ಯ ಅವರಿಗೆ 'ಹಾರ್ಟ್ ಸೈನ್' (ಹೃದಯದ ಗುರುತು) ತೋರಿಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ತಂಡ ಹೀನಾಯವಾಗಿ ಸೋಲುತ್ತಿರುವಾಗ ಇಂತಹ ವರ್ತನೆ ಅಗತ್ಯವಿತ್ತೇ ಎಂದು ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದನ್ನೇ ಇನ್ನು ಜೀರ್ಣಿಸಿಕೊಳ್ಳದ ಫ್ಯಾನ್ಸ್, ಈಗ "ರೋಹಿತ್ ಅವರನ್ನೇ ಮತ್ತೆ ಕ್ಯಾಪ್ಟನ್ ಮಾಡಿ" ಎಂದು ಘೋಷಣೆ ಕೂಗುತ್ತಿದ್ದಾರೆ.
ಅಶ್ವಿನ್ ಕೊಟ್ಟ ಸಾಫ್ಟ್ ಟಚ್
ಈ ನಡುವೆ, ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ಪಾಂಡ್ಯ ಪರವಾಗಿ ಮಾತನಾಡಿದ್ದಾರೆ. "ಐದು ಬಾರಿ ಕಪ್ ಗೆದ್ದ ಕ್ಯಾಪ್ಟನ್ (ರೋಹಿತ್) ಬದಲಿಗೆ ಮತ್ತೊಬ್ಬರು ಬಂದಾಗ ಆ ಒತ್ತಡ ನಿಭಾಯಿಸುವುದು ಕಷ್ಟ. ಸೋಲಿಗೆ ಒಬ್ಬರನ್ನೇ ದೂಷಿಸುವುದು ಸರಿಯಲ್ಲ, ತಂಡದ ಎಲ್ಲರೂ ಜವಾಬ್ದಾರಿ ಹಂಚಿಕೊಳ್ಳಬೇಕು" ಎಂದು ಹೇಳುವ ಮೂಲಕ ಪಾಂಡ್ಯ ಬೆನ್ನಿಗೆ ನಿಂತಿದ್ದಾರೆ.
ಮುಂಬೈ ಇಂಡಿಯನ್ಸ್ ಪಾಲಿಗೆ ಇದು ಕರಾಳ ದಿನಗಳೆಂದೇ ಹೇಳಬಹುದು. ಹಾರ್ದಿಕ್ ತನ್ನ ಫಾರ್ಮ್ ಮತ್ತು ನಾಯಕತ್ವ ಎರಡನ್ನೂ ಸರಿಪಡಿಸಿಕೊಳ್ಳದಿದ್ದರೆ, ಮುಂಬೈ ಪ್ಲೇ-ಆಫ್ ಕನಸು ನುಚ್ಚುನೂರಾಗುವುದು ಗ್ಯಾರಂಟಿ.