ರಿಷಭ್ ಪಂತ್ 8 ವರ್ಷಗಳ ಹಳೆಯ ದಾಖಲೆ ಮುರಿದ ಹೈದರಾಬಾದ್ ಆಟಗಾರ - ಇದು ಅತಿ ಅಪರೂಪದ ದಾಖಲೆ!!

ಐಪಿಎಲ್ 2026ರ ಕಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬಿಗ್ ಹಿಟ್ಟರ್ ಹೆನ್ರಿಚ್ ಕ್ಲಾಸೆನ್ ಸೃಷ್ಟಿಸುತ್ತಿರುವ ದೂಳೂ ಅಷ್ಟಿಷ್ಟಲ್ಲ! ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಹೈ-ವೋಲ್ಟೇಜ್ ಪಂದ್ಯದಲ್ಲಿ ಹೈದರಾಬಾದ್ ತಂಡ 55 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಜೊತೆಜೊತೆಗೇ ಮಿಡಲ್ ಆರ್ಡರ್ ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡದ ಅತ್ಯಂತ ಅಪರೂಪದ ಮತ್ತು ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.

ರಿಷಭ್ ಪಂತ್ ರೆಕಾರ್ಡ್ ಉಡೀಸ್; | Photo Credit: JIO-HOTSTAR
ರಿಷಭ್ ಪಂತ್ ರೆಕಾರ್ಡ್ ಉಡೀಸ್; | Photo Credit: JIO-HOTSTAR

ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ವರ್ಷಗಳಿಂದ ಕಾಯ್ದುಕೊಂಡಿದ್ದ ಐತಿಹಾಸಿಕ ರೆಕಾರ್ಡ್ ಒಂದನ್ನು ಕ್ಲಾಸೆನ್ ಈ ಪಂದ್ಯದಲ್ಲಿ ಧೂಳೀಪಟ ಮಾಡಿದ್ದಾರೆ. ಹೈದರಾಬಾದ್‌ನ ಬಿಗ್ ಹಿಟ್ಟರ್ ಅಬ್ಬರಕ್ಕೆ ಆರ್‌ಸಿಬಿ ಬೌಲರ್‌ಗಳು ತತ್ತರಿಸಿಹೋದರೆ, ಇತ್ತ ಕ್ರಿಕೆಟ್ ಲೋಕ ಕ್ಲಾಸೆನ್ ಬ್ಯಾಟಿಂಗ್ ಕ್ರೇಜ್‌ಗೆ ಫಿದಾ ಆಗಿದೆ.

ಹೈದರಾಬಾದ್ ಅಂಗಳದಲ್ಲಿ ಕ್ಲಾಸೆನ್ ಸಿಡಿಲಬ್ಬರದ ಬ್ಯಾಟಿಂಗ್!

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಎಂದಿನಂತೆ ಕ್ಲಾಸೆನ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಆಗಮಿಸಿದರು. ಮೈದಾನಕ್ಕೆ ಬರುತ್ತಿದ್ದಂತೆಯೇ ಆರ್‌ಸಿಬಿ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಅವರು ಸಿಕ್ಸರ್‌ಗಳ ಮಳೆ ಹರಿಸಿದರು.

ಕೇವಲ 24 ಎಸೆತಗಳನ್ನು ಎದುರಿಸಿದ ಕ್ಲಾಸೆನ್ 2 ಫೋರ್ ಹಾಗೂ ಬರೋಬ್ಬರಿ 5 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 51 ರನ್‌ ಚಚ್ಚಿ ಔಟಾದರು. ಅವರ ಈ ಬಿರುಸಿನ ಅರ್ಧಶತಕದ ನೆರವಿನಿಂದಲೇ ಸನ್‌ರೈಸರ್ಸ್ ಹೈದರಾಬಾದ್ ತಂಡ ಬೆಂಗಳೂರು ವಿರುದ್ಧ 256 ರನ್‌ಗಳ ಬೃಹತ್ ಟಾರ್ಗೆಟ್ ನೀಡಲು ಸಾಧ್ಯವಾಯಿತು. ಈ ಬೆಟ್ಟದಂತಹ ಮೊತ್ತವನ್ನು ಚೇಸ್ ಮಾಡಲಾಗದೆ ಆರ್‌ಸಿಬಿ ಕೊನೆಗೆ 55 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ರಿಷಭ್ ಪಂತ್ ಅವರ 8 ವರ್ಷಗಳ ಹಳೆಯ ದಾಖಲೆ ಉಡೀಸ್!

ಈ ಪಂದ್ಯದಲ್ಲಿ ಕೇವಲ ಹಾಫ್ ಸೆಂಚುರಿ ಹೊಡೆದಿದ್ದಷ್ಟೇ ಅಲ್ಲ, ಕ್ಲಾಸೆನ್ ಐಪಿಎಲ್ ಇತಿಹಾಸದ ಪುಟಗಳನ್ನೇ ತಿರುವಿಹಾಕಿದ್ದಾರೆ. ಸದ್ಯ ನಡೀತಿರೋ 2026ರ ಐಪಿಎಲ್ ಸೀಸನ್‌ನಲ್ಲಿ ಹೆನ್ರಿಚ್ ಕ್ಲಾಸೆನ್ ಬ್ಯಾಟಿಂಗ್‌ನಲ್ಲಿ ಜಬರ್ದಸ್ತ್ ಫಾರ್ಮ್‌ನಲ್ಲಿದ್ದು, ಈಗಾಗಲೇ 600ಕ್ಕೂ ಹೆಚ್ಚು ರನ್‌ಗಳನ್ನು ಕೊಳ್ಳೆಹೊಡೆದಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಮಧ್ಯಮ ಕ್ರಮಾಂಕದಲ್ಲಿ, ಅಂದರೆ ನಿಖರವಾಗಿ 4ನೇ ಕ್ರಮಾಂಕದಲ್ಲಿ (Number 4) ಬ್ಯಾಟಿಂಗ್‌ಗೆ ಬಂದು ಒಂದೇ ಸೀಸನ್‌ನಲ್ಲಿ 600 ಪ್ಲಸ್ ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಈಗ ಕ್ಲಾಸೆನ್ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ, 2018ರ ಐಪಿಎಲ್ ಸೀಸನ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಪರ ಆಡಿದ್ದ ರಿಷಭ್ ಪಂತ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಒಟ್ಟು 579 ರನ್ ಗಳಿಸಿದ್ದರು. ಕಳೆದ 8 ವರ್ಷಗಳಿಂದ ಈ ದಾಖಲೆ ಯಾರ ಕೈಗೂ ಸಿಗದೆ ಪಂತ್ ಹೆಸರಲ್ಲೇ ಭದ್ರವಾಗಿತ್ತು. ಆದರೆ ಈಗ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕ್ಲಾಸೆನ್ 51 ರನ್ ಬಾರಿಸುತ್ತಿದ್ದಂತೆಯೇ ಪಂತ್ ಅವರ 579 ರನ್‌ಗಳ ರೆಕಾರ್ಡ್ ಬ್ರೇಕ್ ಆಗಿದೆ.

ಮಿಡಲ್ ಆರ್ಡರ್‌ನ ಅನ್-ಕ್ರೌಂಡ್ ಕಿಂಗ್ ಕ್ಲಾಸೆನ್!

ಸಾಮಾನ್ಯವಾಗಿ ಐಪಿಎಲ್‌ನಲ್ಲಿ ಓಪನರ್‌ಗಳು ಅಥವಾ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಇರುತ್ತಾರೆ. ಯಾಕಂದ್ರೆ ಅವರಿಗೆ ಪವರ್‌ಪ್ಲೇ ಲಾಭ ಇರುತ್ತೆ ಮತ್ತು ಪೂರ್ತಿ 20 ಓವರ್ ಆಡೋ ಅವಕಾಶ ಸಿಗುತ್ತೆ. ಆದರೆ 4ನೇ ಕ್ರಮಾಂಕದಲ್ಲಿ ಬಂದು, ಕಮ್ಮಿ ಬಾಲ್‌ಗಳನ್ನು ಎದುರಿಸಿ 600ಕ್ಕೂ ಹೆಚ್ಚು ರನ್ ಚಚ್ಚುವುದು ಸಾಮಾನ್ಯದ ಮಾತಲ್ಲ.

ಕ್ಲಾಸೆನ್ ಈ ಬಾರಿ ಹೈದರಾಬಾದ್ ತಂಡದ ಬೆನ್ನೆಲುಬಾಗಿ ನಿಂತಿದ್ದಾರೆ. ಸಿಕ್ಸರ್ ಹೊಡೆಯುವುದನ್ನೇ ಕರಗತ ಮಾಡಿಕೊಂಡಿರುವ ಈ ಸೌತ್ ಆಫ್ರಿಕಾ ಬ್ಯಾಟ್ಸ್‌ಮನ್, ಸ್ಪಿನ್ ಮತ್ತು ಫಾಸ್ಟ್ ಬೌಲಿಂಗ್ ಎರಡನ್ನೂ ಧೂಳೀಪಟ ಮಾಡುತ್ತಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದ ಗೆಲುವು ಮತ್ತು ಕ್ಲಾಸೆನ್ ಅವರ ಈ ಹೈಟೆಕ್ ದಾಖಲೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗ್ತಿದೆ. ಮುಂಬರುವ ಪಂದ್ಯಗಳಲ್ಲೂ ಈ ಬಿಗ್ ಹಿಟ್ಟರ್ ಇದೇ ರೀತಿ ಅಬ್ಬರಿಸಿದರೆ ಹೈದರಾಬಾದ್ ತಂಡವನ್ನು ತಡೆಯುವುದು ಯಾರ ಕೈಯಲ್ಲೂ ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಕ್ರಿಕೆಟ್ ಪಂಡಿತರು. 

Latest News