ಕ್ರಿಕೆಟ್ ಎಂದರೆ ಕೇವಲ ಶ್ರೀಮಂತರ ಆಟವಲ್ಲ, ಪ್ರತಿಭೆ ಮತ್ತು ಪರಿಶ್ರಮವಿದ್ದರೆ ಸಾಮಾನ್ಯ ಕುಟುಂಬದಿಂದ ಬಂದವರೂ ದೇಶವನ್ನು ಪ್ರತಿನಿಧಿಸಬಹುದು ಎಂಬುದಕ್ಕೆ ಅರ್ಜುನ್ ರಜಪೂತ್ ಅವರ ಕಥೆಯೇ ಸಾಕ್ಷಿ. ಒಂದು ಕಾಲದಲ್ಲಿ ಜಲಂಧರ್ನ ಬೀದಿಗಳಲ್ಲಿ ಚೋಲೆ-ಕುಲ್ಚೆ ಮಾರಾಟ ಮಾಡಿ ಕುಟುಂಬವನ್ನು ಸಾಕುತ್ತಿದ್ದ ತಂದೆ ಹೋತಿ ರಾಮ್ ರಜಪೂತ್, ಭಾರತದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಅಪ್ಪಟ ಅಭಿಮಾನಿ. ಇಂದು ಅದೇ ತಂದೆಯ ಮಗ ಅರ್ಜುನ್ ರಜಪೂತ್, ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಜೊತೆ ಭಾರತ ಅಂಡರ್-19 ತಂಡದಲ್ಲಿ ಆಡುತ್ತಿರುವುದು ವಿಶೇಷವಾಗಿದೆ.
ತಂದೆಯ ಕನಸು ನನಸಾಗಿಸಿದ ಮಗ!
ಹೋತಿ ರಾಮ್ ಅವರಿಗೆ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಇತ್ತು. ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಆಟವನ್ನು ನೋಡುವುದೆಂದರೆ ಅವರಿಗೆ ಬಹಳ ಇಷ್ಟ. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಬಾಲ್ಯದಿಂದಲೇ ದುಡಿದು ಕುಟುಂಬಕ್ಕೆ ನೆರವಾಗಬೇಕಾಗಿದ್ದ ಕಾರಣ, ತಾವು ಕ್ರಿಕೆಟಿಗನಾಗುವ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಜಲಂಧರ್ನ ರಾಮ್ ನಗರ ಪ್ರದೇಶದಲ್ಲಿ ರಸ್ತೆ ಬದಿಯ ಗಾಡಿಯಲ್ಲಿ ಚೋಲೆ-ಕುಲ್ಚೆ ಮಾರಾಟ ಮಾಡುತ್ತಾ ಅವರು ಜೀವನ ಸಾಗಿಸುತ್ತಿದ್ದರು. ಕೆಲಸ ಮುಗಿದ ನಂತರ ಸಮಯ ಸಿಕ್ಕಾಗ ಕ್ರಿಕೆಟ್ ಆಡುತ್ತಿದ್ದರು. ಆದರೆ ತಮ್ಮ ಮಕ್ಕಳಾದರೂ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದರು.
2015ರಲ್ಲಿ ಆರಂಭವಾಯಿತು ಅರ್ಜುನ್ ಕ್ರಿಕೆಟ್ ಪಯಣ
ಅರ್ಜುನ್ ಅವರ ಕ್ರಿಕೆಟ್ ಪಯಣ 2015ರಲ್ಲಿ ಆರಂಭವಾಯಿತು. ಆಗ ಅವರಿಗೆ ಸುಮಾರು ಎಂಟು ವರ್ಷ ವಯಸ್ಸು. ಅವರ ಅಣ್ಣ ಕರಣ್ ಕೂಡ ಕ್ರಿಕೆಟ್ ಆಡುತ್ತಿದ್ದರು. ಅಣ್ಣನ ಆಟದಿಂದ ಪ್ರೇರಣೆ ಪಡೆದ ಅರ್ಜುನ್ ಕ್ರಿಕೆಟ್ನಲ್ಲಿ ಆಸಕ್ತಿ ಬೆಳೆಸಿಕೊಂಡರು.
ತಂದೆ ಅವರನ್ನು ಜಲಂಧರ್ನ ಹರ್ಭಜನ್ ಸಿಂಗ್ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ಗೆ ಸೇರಿಸಿದರು. ಅಲ್ಲಿ ತರಬೇತುದಾರ ವಿಕ್ರಮ್ ಸಿಧು ಅವರ ಮಾರ್ಗದರ್ಶನದಲ್ಲಿ ಅರ್ಜುನ್ ಆಟವನ್ನು ಸುಧಾರಿಸಿಕೊಂಡರು. ಆರಂಭದಲ್ಲಿ ಅರ್ಜುನ್ ಪ್ರತಿದಿನ ಅಭ್ಯಾಸಕ್ಕೆ ಬರುತ್ತಿದ್ದರು. ಆದರೆ ಒಂದು ಹಂತದಲ್ಲಿ ಅವರು ತರಬೇತಿಗೆ ಬರುವುದನ್ನೇ ನಿಲ್ಲಿಸಿದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಮತ್ತು ತರಬೇತಿ ಶುಲ್ಕದ ಸಮಸ್ಯೆಯಿಂದ ಅವರು ಅಭ್ಯಾಸದಿಂದ ದೂರವಾಗಿರಬಹುದು ಎಂದು ಕೋಚ್ ಅರಿತುಕೊಂಡರು.
ಶುಲ್ಕವಿಲ್ಲದೆ ತರಬೇತಿ ನೀಡಿದ ಕೋಚ್!
ಅರ್ಜುನ್ನ ಪ್ರತಿಭೆಯನ್ನು ಗುರುತಿಸಿದ್ದ ಕೋಚ್ ವಿಕ್ರಮ್ ಸಿಧು, ಅವರಿಂದ ತರಬೇತಿ ಶುಲ್ಕ ಪಡೆಯದಿರಲು ನಿರ್ಧರಿಸಿದರು. ಅಷ್ಟೇ ಅಲ್ಲದೆ, ಅರ್ಜುನ್ ಓದುತ್ತಿದ್ದ ಶಾಲೆಯ ಶುಲ್ಕವನ್ನೂ ಮನ್ನಾ ಮಾಡಿಸುವಲ್ಲಿ ಸಹಾಯ ಮಾಡಿದರು. ವರ್ಷಕ್ಕೆ ಸುಮಾರು 6ರಿಂದ 7 ಲಕ್ಷ ರೂಪಾಯಿ ಶುಲ್ಕವಿದ್ದ ಐವಿ ವರ್ಲ್ಡ್ ಶಾಲೆಯಲ್ಲಿ ಅರ್ಜುನ್ಗೆ ಶುಲ್ಕ ವಿನಾಯಿತಿ ದೊರೆಯುವಂತೆ ವ್ಯವಸ್ಥೆ ಮಾಡಿದರು.
ಕುಟುಂಬದ ಆರ್ಥಿಕ ಸಮಸ್ಯೆಗಳ ನಡುವೆಯೂ ಅರ್ಜುನ್ ಕ್ರಿಕೆಟ್ ಮತ್ತು ಶಿಕ್ಷಣ ಎರಡನ್ನೂ ಮುಂದುವರಿಸಲು ಈ ನೆರವು ಮಹತ್ವದ್ದಾಯಿತು.
ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾದ ಅರ್ಜುನ್
ಅರ್ಜುನ್ ಅವರ ಪರಿಶ್ರಮಕ್ಕೆ ತಕ್ಕ ಫಲ ದೊರೆಯಿತು. 2026ರ ಜುಲೈನಲ್ಲಿ ಶ್ರೀಲಂಕಾ ಪ್ರವಾಸದ ಮೂಲಕ ಭಾರತ ಅಂಡರ್-19 ತಂಡಕ್ಕೆ ಪದಾರ್ಪಣೆ ಮಾಡಿದರು. ನಂತರ ಅಂಡರ್-19 ಏಷ್ಯಾಕಪ್ ತಂಡದಲ್ಲಿಯೂ ಸ್ಥಾನ ಪಡೆದರು.
ನವೆಂಬರ್ 8ರಂದು ಒಮಾನ್ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ ಪಂದ್ಯದಲ್ಲಿ ಅರ್ಜುನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.
- ಆಡಿದ ಎಸೆತಗಳು - 85
- ಗಳಿಸಿದ ರನ್ - 107
- ಬೌಂಡರಿಗಳು - 11
- ಸಿಕ್ಸರ್ಗಳು - 5
- ಸ್ಟ್ರೈಕ್ ರೇಟ್ - 125.88
ಭಾರತದ ಆರಂಭಿಕ ಆಟಗಾರರು ಬೇಗನೆ ವಿಕೆಟ್ ಕಳೆದುಕೊಂಡಾಗ ಅರ್ಜುನ್ ತಂಡಕ್ಕೆ ಆಸರೆಯಾದರು. ಅವರ ಶತಕದ ನೆರವಿನಿಂದ ಭಾರತ 208 ರನ್ ಗಳಿಸಿತು. ಆದರೆ ಪಾಕಿಸ್ತಾನ 48.1 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಪಂದ್ಯದಲ್ಲಿ ಭಾರತ 3 ವಿಕೆಟ್ಗಳಿಂದ ಸೋಲು ಕಂಡಿತು.
ಸೆಹ್ವಾಗ್ ಪುತ್ರನೊಂದಿಗೆ ಒಂದೇ ತಂಡದಲ್ಲಿ!
ಈ ಕಥೆಯ ಮತ್ತೊಂದು ವಿಶೇಷವೆಂದರೆ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಕೂಡ ಭಾರತ ಅಂಡರ್-19 ತಂಡದಲ್ಲಿದ್ದಾರೆ. ಸೆಹ್ವಾಗ್ ಅವರ ಬ್ಯಾಟಿಂಗ್ ಅಭಿಮಾನಿಯಾಗಿದ್ದ ಹೋತಿ ರಾಮ್ ಅವರ ಮಗ ಇಂದು ಸೆಹ್ವಾಗ್ ಪುತ್ರನೊಂದಿಗೆ ಒಂದೇ ತಂಡದಲ್ಲಿ ಆಡುತ್ತಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸಂಗತಿಯಾಗಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆರ್ಯವೀರ್ 40 ಎಸೆತಗಳಲ್ಲಿ 22 ರನ್ ಗಳಿಸಿದ್ದರು. ಹೀಗೆ ಇಬ್ಬರೂ ಯುವ ಆಟಗಾರರು ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಬೀದಿ ಬದಿಯ ಗಾಡಿಯಿಂದ ಸ್ವಂತ ಬೇಕರಿವರೆಗೆ!
ಹೋತಿ ರಾಮ್ ಅವರ ಜೀವನದಲ್ಲೂ ಬದಲಾವಣೆಯಾಗಿದೆ. ಹಲವು ವರ್ಷಗಳ ಕಾಲ ರಸ್ತೆ ಬದಿಯಲ್ಲಿ ಕುಲ್ಚೆ ಮಾರಾಟ ಮಾಡುತ್ತಿದ್ದ ಅವರು ಈಗ ತಮ್ಮದೇ ಕುಲ್ಚೆ ಬೇಕರಿಯನ್ನು ನಡೆಸುತ್ತಿದ್ದಾರೆ. ಅಲ್ಲಿ ಹಲವರು ಕೆಲಸ ಮಾಡುತ್ತಿದ್ದಾರೆ.
ಅವರ ಹಿರಿಯ ಮಗ ಕರಣ್ ಕೂಡ ಕುಟುಂಬದ ಜವಾಬ್ದಾರಿಗಾಗಿ ಕ್ರಿಕೆಟ್ನಿಂದ ದೂರವಾಗಿ ಬೇಕರಿ ವ್ಯವಹಾರದಲ್ಲಿ ನೆರವಾಗುತ್ತಿದ್ದಾರೆ. ಮಗಳು ಕಿರಣ್ ಟೆನಿಸ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದಾರೆ.
ತಾವು ಕ್ರಿಕೆಟಿಗನಾಗಲು ಸಾಧ್ಯವಾಗದಿದ್ದರೂ ಮಕ್ಕಳ ಕನಸುಗಳಿಗೆ ಅಡ್ಡಿಯಾಗಬಾರದು ಎಂಬ ಹೋತಿ ರಾಮ್ ಅವರ ನಿರ್ಧಾರ ಇಂದು ಫಲ ನೀಡಿದೆ. ಮಗ ಭಾರತ ತಂಡದ ಜೆರ್ಸಿ ಧರಿಸುವುದನ್ನು ನೋಡುವುದೇ ಅವರಿಗೆ ದೊಡ್ಡ ಸಂತೋಷವಾಗಿದೆ. ಅರ್ಜುನ್ ಒಂದು ದಿನ ಹಿರಿಯರ ಭಾರತ ತಂಡಕ್ಕೂ ಆಯ್ಕೆಯಾಗಿ ವಿಶ್ವಕಪ್ ಗೆಲ್ಲಬೇಕು ಎಂಬುದು ಅವರ ತಂದೆಯ ಆಸೆ.
Comments