Mar 31, 2026 Languages : ಕನ್ನಡ | English

ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ 'ಥಾಯ್ ಕಿಳವಿ' ಈಗ ಓಟಿಟಿಗೆ - ಕನ್ನಡದಲ್ಲೂ ಸಿಗಲಿದೆ ರಾಧಿಕಾ ಶರತ್‌ಕುಮಾರ್ ಘಾಟಿ ಅವತಾರ!!

ಇತ್ತೀಚಿನ ದಿನಗಳಲ್ಲಿ ಸಿನಿರಸಿಕರು ಕೇವಲ ದೊಡ್ಡ ಬಜೆಟ್, ಸ್ಟಾರ್ ನಟರು ಅಥವಾ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಕೇಳ್ತಾರೆ ಅಂದುಕೊಂಡ್ರೆ ಅದು ತಪ್ಪು. ಕಥೆ ಚೆನ್ನಾಗಿದ್ದರೆ, ಹಳ್ಳಿ ಸೊಗಡಿನ ಮಣ್ಣಿನ ವಾಸನೆ ಇದ್ದರೆ ಸಾಕು, ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡ್ತಾರೆ ಅನ್ನೋದಕ್ಕೆ ತಮಿಳಿನ 'ಥಾಯ್ ಕಿಳವಿ' (Thaai Kizhavi) ಚಿತ್ರವೇ ದೊಡ್ಡ ಸಾಕ್ಷಿ. ಕೇವಲ 8 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ, ಬರೋಬ್ಬರಿ 80 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿದೆ. ಈಗ ಈ ಸಿನಿಮಾ ಓಟಿಟಿ ಪ್ರವೇಶಕ್ಕೆ ಸಜ್ಜಾಗಿದೆ.

‘ಥಾಯ್ ಕಿಳವಿ’ ಈಗ ಕನ್ನಡದಲ್ಲೂ – ಮೊಬೈಲ್‌ನಲ್ಲಿ ಮಜಾ!! | Photo Credit: newsx and https://www.instagram.com/jiohotstartamil/#
‘ಥಾಯ್ ಕಿಳವಿ’ ಈಗ ಕನ್ನಡದಲ್ಲೂ – ಮೊಬೈಲ್‌ನಲ್ಲಿ ಮಜಾ!! | Photo Credit: newsx and https://www.instagram.com/jiohotstartamil/#

ಸ್ಟಾರ್ ನಟರಿಲ್ಲದಿದ್ದರೂ ಗೆದ್ದ ಸಿನಿಮಾ

ಯಾವುದೇ ದೊಡ್ಡ ಹೀರೋಗಳಿಲ್ಲದಿದ್ದರೂ, ಕೇವಲ ಕಥೆ ಮತ್ತು ನಟನೆಯ ಬಲದಿಂದ ಒಂದು ಸಿನಿಮಾ 5ನೇ ವಾರವೂ 150ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣ್ತಿದೆ ಅಂದ್ರೆ ಸುಮ್ಮನೆ ಅಲ್ಲ. ನಟ ಶಿವಕಾರ್ತಿಕೇಯನ್ ನಿರ್ಮಾಣದ ಈ ಚಿತ್ರವನ್ನು ಶಿವಕುಮಾರ್ ಮುರುಗೇಶನ್ ಅದ್ಭುತವಾಗಿ ನಿರ್ದೇಶಿಸಿದ್ದಾರೆ. ಫೆಬ್ರವರಿ 27ಕ್ಕೆ ರಿಲೀಸ್ ಆಗಿದ್ದ ಈ ಸಿನಿಮಾ ತಮಿಳು ಚಿತ್ರರಂಗದ ಈ ವರ್ಷದ ಮೊದಲ ದೊಡ್ಡ ಹಿಟ್ ಎನಿಸಿಕೊಂಡಿದೆ. ವಿಶೇಷ ಅಂದ್ರೆ, ಈ ಚಿತ್ರದ ಗೆಲುವು ಸ್ಟಾರ್ ನಟರಿಗೂ ಒಂದು ಕ್ಷಣ ಆಶ್ಚರ್ಯ ತಂದಿದೆ.

ರಾಧಿಕಾ ಶರತ್‌ಕುಮಾರ್ ಅವರ ಪವರ್‌ಫುಲ್ ಆಕ್ಟಿಂಗ್ 

ಒಂದ್ಕಾಲದಲ್ಲಿ ದಕ್ಷಿಣ ಭಾರತದ ಟಾಪ್ ಹೀರೋಯಿನ್ ಆಗಿದ್ದ ರಾಧಿಕಾ ಶರತ್‌ಕುಮಾರ್, ಈ ಚಿತ್ರದಲ್ಲಿ 'ಥಾಯ್ ಕಿಳವಿ'ಯಾಗಿ ಅಬ್ಬರಿಸಿದ್ದಾರೆ. ವಯಸ್ಸಾದ ಮುದುಕಿಯ ಪಾತ್ರಕ್ಕಾಗಿ ಅವರು ಹಾಕಿಕೊಂಡಿರುವ ಪ್ರಾಸ್ಥೆಟಿಕ್ ಮೇಕಪ್ ಮತ್ತು ಅವರ ಬಾಡಿ ಲಾಂಗ್ವೇಜ್ ನೋಡುಗರಿಗೆ ಫಿದಾ ಮಾಡಿದೆ. ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಈ ಚಿತ್ರದಲ್ಲಿ ಬಹಳ ಅರ್ಥಪೂರ್ಣವಾಗಿ ಚರ್ಚಿಸಲಾಗಿದೆ. ರಾಧಿಕಾ ಅವರ ವೃತ್ತಿಜೀವನದಲ್ಲೇ ಇದೊಂದು ಮೈಲಿಗಲ್ಲು ಎನ್ನಬಹುದಾದ ಪಾತ್ರ.

ಏನಿದು 'ಥಾಯ್ ಕಿಳವಿ' ಕಥೆ?

 ಈ ಚಿತ್ರದ ಕಥೆ ತುಂಬಾ ಸಿಂಪಲ್ ಆದರೂ ಎಮೋಷನಲ್ ಆಗಿದೆ. ಹಳ್ಳಿಯೊಂದರಲ್ಲಿ ಪವುನುತಾಯಿ (ರಾಧಿಕಾ) ಎಂಬ ಹಿರಿಯ ಜೀವ ಇರುತ್ತಾಳೆ. ಆಕೆ ತುಂಬಾನೇ ಘಾಟಿ ಮತ್ತು ಖಡಕ್ ಸ್ವಭಾವದವಳು. ಇಡೀ ಊರಿನವರಿಗೆ ಸಾಲ ಕೊಟ್ಟು ಬಡ್ಡಿ ಎಣಿಸುತ್ತಾ, ತನ್ನದೇ ದರ್ಬಾರ್ ನಡೆಸುತ್ತಿರುತ್ತಾಳೆ. ಆಕೆಯನ್ನು ಕಂಡರೆ ಊರಿನ ಜನಕ್ಕೆ ಒಂದು ರೀತಿಯ ನಡುಕ. ಆದರೆ, ಹಠಾತ್ತನೆ ಒಂದು ದಿನ ಆಕೆಗೆ ಪಾರ್ಶ್ವವಾಯು (Paralysis) ತಗುಲಿ ಹಾಸಿಗೆ ಹಿಡಿಯುತ್ತಾಳೆ. ಅಲ್ಲಿಂದ ಕಥೆ ಹೊಸ ತಿರುವು ಪಡೆಯುತ್ತದೆ. ಆಕೆ ಹಾಸಿಗೆ ಹಿಡಿದ ಮೇಲೆ ಊರಿನ ಜನರ ವರ್ತನೆ ಹೇಗಿರುತ್ತೆ? ಅವಳನ್ನು ಗುಣಪಡಿಸಲು ಮಕ್ಕಳು ಪಡುವ ಪಾಡು ಏನು? ಎಂಬುದೇ ಈ ಚಿತ್ರದ ಸಾರಾಂಶ.

ಓಟಿಟಿ ರಿಲೀಸ್ ಯಾವಾಗ? ಎಲ್ಲಿದೆ?

ಸಿನಿಮಾ ಮಂದಿರದಲ್ಲಿ ಮಿಸ್ ಮಾಡಿಕೊಂಡವರಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ. ಏಪ್ರಿಲ್ 10ರಂದು ಜಿಯೋ ಹಾಟ್‌ಸ್ಟರ್‌ (Jio Hotstar) ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಇಲ್ಲಿನ ವಿಶೇಷ ಅಂದ್ರೆ, ಇದು ಕೇವಲ ತಮಿಳಿಗೆ ಸೀಮಿತವಾಗಿಲ್ಲ. ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಹಳ್ಳಿ ಸೊಗಡಿನ ಕಾಮಿಡಿ ಮತ್ತು ಎಮೋಷನಲ್ ಡ್ರಾಮಾ ಇಷ್ಟಪಡುವ ಕನ್ನಡಿಗರಿಗೆ ಇದೊಂದು ಬೆಸ್ಟ್ ಸಿನಿಮಾ ಆಗೋದ್ರಲ್ಲಿ ಸಂಶಯವಿಲ್ಲ.

ತಾಂತ್ರಿಕವಾಗಿ ಸಿನಿಮಾ ಹೇಗಿದೆ?

ಚಿತ್ರದಲ್ಲಿ ರಾಧಿಕಾ ಅವರ ಜೊತೆಗೆ ಸಿಂಗಪುಲಿ, ಬಾಲ ಶರವಣನ್ ಅವರ ಕಾಮಿಡಿ ಸಖತ್ ವರ್ಕ್ ಆಗಿದೆ. ವಿವೇಕ್ ವಿಜಯ್ ಕುಮಾರ್ ಅವರ ಛಾಯಾಗ್ರಹಣ ಹಳ್ಳಿಯ ಸೌಂದರ್ಯವನ್ನು ಚೆನ್ನಾಗಿ ಸೆರೆಹಿಡಿದಿದೆ. ನಿವಾಸ್ ಪ್ರಸನ್ನ ಅವರ ಸಂಗೀತ ಚಿತ್ರದ ಎಮೋಷನಲ್ ದೃಶ್ಯಗಳಿಗೆ ಜೀವ ತುಂಬಿದೆ. ವಿಮರ್ಶಕರಿಂದಲೂ ಭರ್ಜರಿ ರೇಟಿಂಗ್ ಪಡೆದಿರುವ ಈ ಸಿನಿಮಾ, ಓಟಿಟಿಯಲ್ಲಿ ಮತ್ತಷ್ಟು ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ. ಒಳ್ಳೆ ಸಿನಿಮಾ ಕೊಟ್ಟರೆ ಪ್ರೇಕ್ಷಕರು ಕೈಬಿಡಲ್ಲ ಅನ್ನೋದಕ್ಕೆ 'ಥಾಯ್ ಕಿಳವಿ' ಒಂದು ಸ್ಫೂರ್ತಿ. ನೀವು ಕೂಡ ಒಂದು ಒಳ್ಳೆಯ ಫ್ಯಾಮಿಲಿ ಎಂಟರ್‌ಟೈನರ್ ಹುಡುಕುತ್ತಿದ್ದರೆ, ಏಪ್ರಿಲ್ 10ಕ್ಕೆ ಜಿಯೋ ಹಾಟ್‌ಸ್ಟರ್‌ನಲ್ಲಿ ಈ ಸಿನಿಮಾ ನೋಡಲು ರೆಡಿಯಾಗಿ.

Latest News